ಗುರುವಾರ, ಡಿಸೆಂಬರ್ 9, 2010

ರಾತ್ರಿಯ ಕತ್ತಲಿನಲ್ಲಿ ಅಮ್ಮನ ಆಕ್ರಂದನ

ನಾನಾಗ ೮ನೇ ತರಗತಿಯಲ್ಲಿ ಓದುತ್ತಿದ್ದೆ, ನನ್ನ ಅಣ್ಣ ೧೦ನೇ ತರಗತಿ ಹಾಗು ನನ್ನ ಅಕ್ಕ ೯ನೇ ತರಗತಿಯಲ್ಲಿ ಇದ್ದರು.ನನ್ನ ಅಣ್ಣ ಓದಿನಲ್ಲಿ ಅಷ್ಟೇನೂ ಬುದ್ಧಿವಂತನಲ್ಲದಿದ್ದರೂ ಪೂರ್ತಿ ದಡ್ಡನಂತೂ ಆಗಿರಲಿಲ್ಲ. ಅವನಿಗೆ ಕಷ್ಟದ ವಿಷಯಗಳೆಂದರೆ ಗಣಿತ ಹಾಗು ಇಂಗ್ಲೀಷ್. ಕನ್ನಡದಲ್ಲಿ ವಾದ,ವಿತಂಡ ವಾದಗಳಲ್ಲಿ ಒಳ್ಳೆಯ ಜ್ಘ್ಯಾನವಿತೆಂಬುದು ನನ್ನ ಅಭಿಪ್ರಾಯ. ಅವನಿಗೆ ಮತ್ತೊಂದು ಇಷ್ಟವಾದುದೆಂದರೆ ಚೆನ್ನಾಗಿ ನಿದ್ದೆಮಾಡುವುದು. ಎಷ್ಟೇ ಸಮಯದಲ್ಲಿ ನಿದ್ದೆ ಮಾಡಬೇಕೆಂದರೂ ನಿದ್ದೆ ಮಾಡುವ ತಾಕತ್ತು ಅವನಿಗಿತ್ತು. ಅದು ಈಗಲೂ ಮುಂದುವರೆದಿದೆ. ಮೊದಲನೇ ಸಲವೇ ಪರೀಕ್ಷೆಯಲ್ಲಿ ಪಾಸಾಗಬೇಕೆಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿರುತ್ತದೆ. ಅದೇ ರೀತಿ ನನ್ನ ತಂದೆ-ತಾಯಿಯ ಕನಸೂ ನನ್ನ ಅಣ್ಣ ಪರೀಕ್ಷೆಯಲ್ಲಿ ಪಾಸಾಗುವುದೇ ಆಗಿತ್ತು.ಅದಕ್ಕಾಗಿಯೇ ಮನೆಪಾಠಕ್ಕೆ ಹಾಕಲಾಗಿತ್ತು.ತಂದೆ-ತಾಯಿಯ ಪ್ರಯತ್ನ ಎಷ್ಟಾದರೂ ಅವನ ಪ್ರಯತ್ನವಂತೂ ಇರಲಿಲ್ಲ. ಅವನಿಗೆ ಪರೀಕ್ಷೆಯೆಂದರೆ ಭಯಲಿರಲಿಲ್ಲ ನಿಜ ಆದರೆ ಓದಿನ ಬಗ್ಗೆ ಗಮನವಿರಲಿಲ್ಲ. ಅದನ್ನು ಮನದಟ್ಟು ಮಾಡಿಸುವ ಗುರು ತಾನೆ ಎಲ್ಲರೂ ಹುಡುಕುವುದು! ಆ ಸಮಯದಲ್ಲಿ ಅಂತಹ ಗುರು ಅವನಿಗೆ ಸಿಗಲೇಯಿಲ್ಲ. ಹೀಗಾಗಿ ಅವನಿಗೆ ಏನು ತೊಂದರೆಯಾಗುತ್ತಿದೆ ಅನ್ನುವುದು ಯಾರಿಗೂ ತಿಳಿಯಲಿಲ್ಲ ಅಥವಾ ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಯಾವುದೂ ಇರಲಿಲ್ಲವೆನ್ನಬೇಕು. ಹಾಗೆ ಅಜ್ಜ್ಯಾನದಿಂದ ಅವನ ಚರ್ಯೆಯಿಂದ ತಿಳಿಯುವ ವ್ಯವಧಾನವೂ ಯಾರಿಗೂ ಇರಲಿಲ್ಲವೋ ಏನೋ? ನನಗೆ ಅಷ್ಟಾಗಿ ಗೊತ್ತಿಲ್ಲ, ಆ ವಯಸಿನಲ್ಲಿ ಅದನ್ನು ಯೋಚಿಸುವ ಬುದ್ಧಿಯೊ ನನ್ನದಾಗಿರಲಿಲ್ಲ. ಆ ವಯಸ್ಸಿನಲ್ಲಿ ನಮ್ಮ ಬಗ್ಗೆ ಇರುವ ಖಾಳಜಿ ಬೇರೆಯವರ ಬಗ್ಗೆ ಇರೋದಿಲ್ಲ ಅಲ್ಲವೇ!. ಅವನು ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ, ಮನೆಯಿಂದ ಯಾವಾಗಲೂ ಹೊರಗೇ ಇರುತ್ತಿದ್ದ. ಅವನು ಯಾವಾಗ ಓದುತ್ತಿದ್ದ,ಬರೆಯುತ್ತಿದ್ದ ಅನ್ನೋದೇ ನನಗೆ ಗೊತ್ತೇ ಆಗ್ತಾ ಇರ್ಲಿಲ್ಲ.
ಪರೀಕ್ಷೆಯ ದಿನ ಬಂದೇ ಬಂತು, ಅವನಿಗಿಂತ ನನ್ನ ಅಮ್ಮನಿಗೇ ಆತಂಕ ಹೆಚ್ಚಾಗಿತ್ತು. ನನ್ನ ತಂದೆಗೆ ಪರೀಕ್ಷೆಯಲ್ಲಿ ಏನಾಗಬಹುದೆಂದು ಮೊದಲೇ ತಿಳಿದಿತ್ತು. ಪರೀಕ್ಷೆಯೆಲ್ಲಾ ಮುಗಿದ ಮೇಲೆ ಎಲ್ಲರಿಗೂ ಒಂದು ರಿತಿ ನಿರಾಳ. ಆದರೆ ಮುಂದೆ ಆಗಬಹುದಾದ್ದನ್ನು ಯಾರೂ ನಿರೀಕ್ಷಿಸಿರಲಿಲ್ಲ.
ಪರೀಕ್ಷೆಯಾದ ಮೇಲೆ ಫಲಿತಾಂಹದ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ ಹಾಗೇ ನನ್ನ ಮನೆಯಲ್ಲೂ ಅಣ್ಣನ ಫಲಿತಾಂಶದ ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು. ಅಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ಬೆಳಿಗ್ಗೆ ಅಣ್ಣನ ಮುಖ ನೋಡಿದ ನೆನಪು ನನಗಿಲ್ಲ, ಮಧ್ಯಾಹ್ನದವರೆಗೂ ಅವನ ಸುಳಿವು ಯಾರಿಗೂ ಇರಲಿಲ್ಲ. ನನ್ನ ತಂದೆ ಆಫೀಸಿನಿಂದ ಬೇಗನೆ ಅವನ ಫಲಿತಾಂಶದ ನಿರೀಕ್ಷೆಯಲ್ಲಿ ಕುತೂಹಲದಿಂದಲೇ ಬಂದಿದ್ದರು. ಅವನು ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಗಣಿತ ಹಾಗು ಇಂಗ್ಲೀಷ್ ವಿಷಯದಲ್ಲಿ ನಪಾಸಾಗಿದ್ದ. ನಮಗೆಲ್ಲಾ ಅವನು ನಪಾಸಾಗಿದ್ದು ಒಂದು ದುಃಖದ ವಿಷಯವಾದರೆ, ಅವನು ಮನೆಗೆ ಬಾರದೇ ಇದ್ದದ್ದು ಮತ್ತೊಂದು ಅಘಾತಕರ ವಿಷಯವೂ ಆಗಿತ್ತು. ಅವನು ತಂದೆ-ತಾಯಿಯಿಂದ ಬೈಗಳನ್ನು ತಪ್ಪಿಸಿಕೊಳ್ಳಲು ಮನೆ~ಊರನ್ನು ಬಿಟ್ಟು ಎಲ್ಲೋ ಹೋಗಿಬಿಟ್ಟಿದ್ದ. ತಂದೆ-ತಾಯಿಗಂತೂ ಯೋಚನೆ ಹತ್ತಿತು. ಎಲ್ಲಿ ಹೋದನೋ? ಎಲ್ಲಿ ಊಟ ಮಾಡ್ತಾನೋ? ಎಲ್ಲಿ ಮಲಗುವನೋ? ಎಂದು. ಜೊತೆಗೆ ಹುಡುಕುವ ಪ್ರಯತ್ನವನ್ನೂ ಮಾಡಬೇಕು.ಸುಳಿವು ಸಿಕ್ಕರೆ ಹುಡುಕುವುದು ಸುಲಭವಾಗುತ್ತಿತ್ತೇನೋ? ಅವನ ಗೆಳೆಯರಿಗೂ ಯಾವುದೇ ಸುಳಿವು ಇಲ್ಲದೇಯಿದ್ದದ್ದು ಹುಡುಕುವುದಕ್ಕೆ ಮತ್ತಷ್ಟು ಕಷ್ಟವಾಯಿತು.
೧೫ ದಿನಗಳು ಕಳೆದರೂ ಅವನ ಯಾವುದೇ ಸುಳಿವು ಇರಲಿಲ್ಲ. ಮನೆಯಲ್ಲಿ ತಂದೆ-ತಾಯಿ ಗೆ ಮನಸ್ಸಿಗೆ ನೆಮ್ಮದಿಯಿಲ್ಲದೇ ಕೊರಗಿ ಕೊರಗಿ ಸಣ್ಣಗಾಗಿದ್ದರು. ತಂದೆಯಂತೂ ಆಫೀಸಿನ ಕೆಲಸದ ಜೊತೆಗೆ ಅವನ ಹುಡುಕುವ ಪ್ರಯತ್ನವನ್ನೂ ಮಾಡುತ್ತಿದ್ದರು. ತಾಯಿಗಂತೂ ಯಾವಾಗಲೂ ಅವನದೇ ಚಿಂತೆ, ಊಟ,ನಿದ್ದೆ ಎಲ್ಲವೂ ಅವರಿಂದ ಮಾಯವಾಗಿತ್ತು. ಸದಾ ಅವನದೇ ಚಿಂತೆ, ರಾತ್ರಿ ಕತ್ತಲಿಲಲ್ಲಿ ಅವರ ನೋವು ಅಳುವಾಗಿ ಹೊರಬರುತ್ತಿತ್ತು. ಅಮ್ಮನ ಆ ಕನವರಿಕೆ, ಆಕ್ರಂದನ ಈಗಲೂ ನನಗೆ ಕಣ್ಣೀರು ತರಿಸುತ್ತದೆ. ಆ ಕತ್ತಲ ರಾತ್ರಿಯಲ್ಲಿ ನನಗೂ ನಿದ್ದೆ ಬಾರದೆ ದೇವರಲ್ಲಿ ಪ್ರಾರ್ಥಿಸಿತ್ತಿದ್ದೆ " ಓ! ದೇವರೆ, ನನ್ನ ಅಮ್ಮನ ನೋವನ್ನು ಪರಿಹರಿಸು. ಆ ನೋವನ್ನೆಲ್ಲಾ ನನಗೇ ಕೊಡು" ಎಂದು ಮತ್ತು ಹಾಗೇ ನಾನು ನಿರ್ದರಿಸಿದ್ದೆ ನನ್ನಿಂದ ಯಾವುದೇ ಕಾರಣಕ್ಕೂ ಅಮ್ಮನ ಕಣ್ಣಲ್ಲಿ ನೀರು ಬರುವುದಿಲ್ಲ, ಅಮ್ಮನನ್ನು ಸಂತೋಷದಿಂದ ನೋಡಿಕೊಳ್ಳುತ್ತೇನೆಂದು. ಆ ನಿಟ್ಟಿನಲ್ಲಿ ಈಗಲೂ ನನ್ನ ಪ್ರಯತ್ನ ಮುಂದುವರೆದಿದೆ.
ಕೊನೆಗೂ ಅವನ ಸುಳಿವು ಸಿಕ್ಕು ಅವನು ಮತ್ತೆ ಮನೆಗೆ ಬಂದ.ಅಮ್ಮ ಅಂದೇ ನಿರ್ಧರಿಸಿದ್ದರು ಪರೀಕ್ಷೆಯಲ್ಲಿ ತಾನೇ ಗುರುವಾಗಿ ದಡಮುಟ್ಟಿಸುವೆನೆಂದು. ಅದರಂತೆಯೇ ದಿನವೂ ಮನೆಯಲ್ಲೇ ಪಾಠ ಹೇಳಿದರು. ಅದೇ ವರ್ಷದಲ್ಲಿ ನನ್ನಣ್ಣ ಮತ್ತೆ ಪರೀಕ್ಷೆ ಬರೆದ. ಫಲಿತಾಂಶದ ದಿನಕ್ಕೆ ಒಂದೆರಡು ದಿನಗಳು ಮುಂಚೆಯೇ ಎಚ್ಚರಿಕೆ ವಹಿಸಿ ಅಣ್ಣನನ್ನು ಮನೆಯಿಂದ ಎಲ್ಲೂ ಹೊರಗೆ ಬಿಡುತ್ತಿರಲಿಲ್ಲ. ಫಲಿತಾಂಶದ ದಿನವಂತೂ ಅವನು ಅಕ್ಷರಹ ರೂಮಿನಲ್ಲಿ ಬಂಧಿಯಾಗಿದ್ದ. ಫಲಿತಾಂಶ " ಪಾಸಾಗಿದ್ದಾನೆ" ಎಂದು ತಿಳಿದಾಗ ಅಮ್ಮನ ಕಣ್ಣಲಿ ಆನಂದ ಭಾಷ್ಪ ಹರಿಯಿತು.
ಇವೆಲ್ಲಾ ನಡೆದು ಸುಮಾರು ೨೨ ವರ್ಷಗಳೆ ಕಳೆದರೂ ನನ್ನ ಮನದಲ್ಲಿ ಅಂದಿನ ಪ್ರತಿಯೊಂದು ಕ್ಷಣವೂ ಹಸಿರಾಗೇ ಇದೆ.ರಾತ್ರಿಯ ಕತ್ತಲಿನಲ್ಲಿ ಅಮ್ಮನ ಅಳು, ಆಕ್ರಂದನ ಇಂದಿಗೂ ನನ್ನನ್ನು ಹಿಂಸಿಸುತ್ತದೆ ,ಅಮ್ಮನಿಗಾಗಿ ಹಂಬಲಿಸುತ್ತದೆ.

ಶುಕ್ರವಾರ, ಡಿಸೆಂಬರ್ 3, 2010

ಗೆಳತಿಗೊಂದು ಪತ್ರ

ಗೆಳತಿ ಹೇಗಿದ್ದೀಯ? ಎಷ್ಟು ವರುಷಗಳಾಗಿ ಹೋಯಿತಲ್ಲವೇ ಭೇಟಿಯಾಗಿ?ಜೀವನದ ಒಂದೊಂದೇ ಮಜಲುಗಳನ್ನು ದಾಟಿದ್ದೇವೆ. ಜೀವನ ಎನ್ನುವ ಪಾಠಶಾಲೆಯಲ್ಲಿ ಹದವಾಗುತ್ತಿದ್ದೇವೆ ಎನಿಸುವುದಿಲ್ಲವೇ? ಮನಸ್ಸು ಅರಳಿ ಕಂಪನ್ನು ಬೀರುವ ಸಮಯ ಇದೇ ಅಲ್ಲವೇ!?. ಜೀವನದ ಜಂಜಡಗಳಲ್ಲಿ ಎಷ್ಟೋ ಮಧುರ ಕ್ಷಣಗಳು ನೆನಪಿಗೆ ಬಾರದೇ ಜಾರಿ ಹೋಗಿರುತ್ತದೆ, ಆ ನೆನಪೇ ಜೀವನದಲ್ಲಿ ಉಲ್ಲಾಸ ತರುತ್ತದೆ ಅನ್ನೋದು ನಿಜ ಹಾಗೂ ಸಹಜ ಕೂಡ. ಆ ಅನುಭವ ನಿನಗಾಗಿದೆಯೇ? ಸಂಸಾರದ ನಾಲ್ಕು ಗೋಡೆಗಳ ಮಧ್ಯೆ ಯಾಂತ್ರಿಕ ಬದುಕಿನಲ್ಲಿ ಕಳೆದುಹೋಗಬೇಡ. ಪ್ರಕೃತಿಯ ಸೌಂದರ್ಯವನ್ನು ಅನುಭವಿಸು. ಮನಸ್ಸು ಪೂರ್ಣಪ್ರಮಾಣದಲ್ಲಿ ಅರಳುವತ್ತ ನಿನ್ನ ಗಮನವಿರಲಿ. ನಿನ್ನ ಅನುಭವಗಳು ಹೊಸರೂಪ ಪಡೆಯಲಿ, ಅದು ನೊಂದವರ ಭಾಳಿನ ದಾರಿಧೀಪವಾಗುತ್ತೆ.ಇಷ್ಟೋಂದೆಲ್ಲಾ ನಿನಗೂ ತಿಳಿದಿದೆ ಆದರೆ ಚಿಪ್ಪಿನಿಂದ ಹೊರಬರದೆ ಇರೋ ಮುತ್ತಿನಂತೆ ನೀನೂ ಕೂಡ. ಆ ಸಂಕೋಲೆ ಅನ್ನುವಂತಹ ಪರಿಧಿಯನ್ನು ದಾಟಬೇಕು. ವಿಶಾಲವಾದ ಪ್ರಪಂಚ ನಿನಗಾಗಿ ಕಾದಿದೆ ಕಣ್ತೆರೆದು ನೋಡು ಬಾ ಗೆಳತಿ. ಏನೋ ಉದ್ದುದ್ದ ಬರೆಯುತ್ತಾನೆ, ಹೇಳೋ ಅಷ್ಟು ಜೀವನ ಸುಲಭವಲ್ಲ ಅಂತ ನನ್ನ ಮಾತುಗಳನ್ನು ನಿರ್ಲಕ್ಷಿಸಬೇಡ. ನಿನ್ನ ಮಾತುಗಳು ನಿಜವಾದರೂ ಪ್ರಾಣಿಗಳಂತೆ ಬಂದು ಹೋಗುವುದಕ್ಕಂತೂ ನಾವು ಮನುಷ್ಯರು ಇಲ್ಲಿಗೆ ಬಂದಿಲ್ಲ ಅಲ್ಲವೇ? ನಮ್ಮ ಹುಟ್ಟಿಗೆ ಕಾರಣ ಬಹಳಷ್ಟು ಇರಬಹುದು ಅದನ್ನು ತಿಳಿದು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆಯೇ ಹೊರತು ಬೇರೆಯವರು ನಮ್ಮನ್ನು ಉದ್ಧಾರ ಮಾಡುತ್ತಾರೆ ಅಂತ ಅವರಿಗಾಗಿ ಕಾಯುವುದು ಎಷ್ಟು ಸಮಂಜಸ ನೀನೇ ಹೇಳು ಗೆಳತಿ. ನನಗಾಗಿ ನೀನು ಕಾಯುವಂತೆ, ನಿನಗಾಗಿ ನಾನು ಕಾಯುವಂತೆ ಸಾರ್ಥಕತೆಗೆ ನಾವು ಕಾಯಬಾರದಲ್ಲವೇ? ನಮ್ಮ ಪ್ರಯತ್ನ ಮಾತ್ರ ನಿರಂತರವಾಗಿ ಸಾಗುತ್ತಲ್ಲೇ ಇರಬೇಕಲ್ಲವೇ? ನಿನ್ನ ನೆನೆಪೊಂದೇ ಸಾಕೆನಗೆ ನಗುನಗುತ್ತಾ ಈ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಲು ಆದರೆ ನೀನೇ ಹೀಗೆ ಕೈಕಟ್ಟಿ ಕುಳಿತು ಚಿಂತೆಗೆ ಬಿದ್ದರೆ ನನ್ನ ಸ್ಥಿತಿ ಏನಾಗಬೇಡ ನೀನೇ ಹೇಳು. ನೀನೆಷ್ಟು ಖುಷಿಯಾಗುದ್ದರೆ ಅದರ ಎರಡು ಪಟ್ಟು ಖುಷಿ ನನಗಿಲ್ಲಿ ಆಗುತ್ತೆ. ಆಕಾಶದಲ್ಲಿ ಚಂದ್ರ ನಕ್ಕರೆ ಹೇಗೆ ತಾವರೆಗಳು ನಕ್ಕು ಪರಿಮಳ ಸೂಸುವುದೋ ಹಾಗೇ ನೀನು ನನ್ನ ಚಂದ್ರಿಕೆ. ನಿನ್ನ ತುಟಿಯಂಚಿನ ನಗುವು ಎಂದೆಂದಿಗೂ ನನ್ನದೇ ಅಲ್ಲವೇ! ಅಮಾವಾಸ್ಯೆ ಎಂದೂ ಶಾಶ್ವತವಲ್ಲ, ಆ ಕತ್ತಲೇ ಕ್ಷಣಿಕ, ಕತ್ತಲು ಕಳೆದ ಮೇಲೆ ಬೆಳಕು ಚಿಗುರಲೇ ಬೇಕು. ನಿನ್ನ ಕತ್ತಲಿನಿಂದ ಹೊರಗೆ ಬಾ.. ನಿನಗಾಗಿ ಈ ಪ್ರಪಂಚ ಕಾಯುತ್ತಿದೆ, ಯಾರು ನಿನ್ನನ್ನು ಗುರುತಿಸದೇಯಿದ್ದರೂ ಚಿಂತೆಯಿಲ್ಲ ನಾನು ನಿನ್ನೊಂದಿಗೆ ಇದ್ದೇನೆ. ನಿನ್ನ ಏಳಿಗೆಯನ್ನು ನೋಡಿ ಸಂತೋಷಪಡುವವರಲ್ಲಿ ನಾನೇ ಮೊದಲಿಗ. ಬಾ ಗೆಳತಿ ಬಾ ನಿನಗಾಗಿ ಕಾಯುತ್ತಿರುವೆ.

ದೃಷ್ಟಿಕೋನ

ಒಮ್ಮೆ ಶ್ರೀಮಂತ ಕುಟುಂಬಕ್ಕೆ ಸೇರಿದ ತಂದೆ ತನ್ನ ಮಗನನ್ನು ಕರೆದುಕೊಂಡು ದೇಶದ ಹಳ್ಳಿ-ಹಳ್ಳಿಗಳನ್ನು ಸಂದರ್ಶಿಸಲು ಹೊರಟ. ಈ ದೇಶ ಸಂಚಾರದ ಮೊಲ ಉದ್ದೇಶ ಮಗನಿಗೆ ಬಡಜನರ ಸ್ಥಿತಿ-ಗತಿಗಳನ್ನು ಪರಿಚಯಿಸುವುದೇ ಆಗಿತ್ತು.

ತಂದೆ ಹಾಗು ಮಗ ಇಬ್ಬರೂ ಕೆಲವು ದಿನಗಳನ್ನು ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಬಡತನದ ಪ್ರತ್ಯಕ್ಷ ದರ್ಶನವನ್ನು ಪಡೆದರು. ದೇಶ ಸಂಚಾರದಿಂದ ಹಿಂತಿರುಗಿದ ಬಳಿಕ ತಂದೆ ಮಗನನ್ನು ಕುರಿತು " ಮಗು ದೇಶ ಸಂಚಾರ, ಬಡತನದ ದರ್ಶನ ಹೇಗಿತ್ತು?" ಮಗ ಉತ್ತರಿಸುತ್ತಾ "ತುಂಬಾ ಚೆನ್ನಾಗಿತ್ತು ತಂದೆಯೇ"ಎಂದ."ಬಡಜನರು ಹೇಗೆ ಜೀವಿಸುತ್ತಾರೆ ಎಂಬುದು ನಿನಗೆ ತಳಿಯಿತಲ್ಲವೇ?"ತಂದೆ ಮಗನನ್ನು ಮರು ಪ್ರಶ್ನಿಸಿದರು. " ಹೌದು" ಎಂದುತ್ತರಿಸಿದ ಮಗ. "ಮಗು ಹಾಗಾದರೆ ಈ ದೇಶ ಸಂಚಾರದಿಂದ ನಿನಗೆ ಏನು ಮನವರಿಕೆಯಾಯಿತು? ಹೇಳು" ತಂದೆ ಮಗನನ್ನು ಪ್ರಶ್ನಿಸಿದ. ಮಗ ಉತ್ತರವಾಗಿ " ತಂದೆಯೇ! ನಮ್ಮ ಬಳಿ ಒಂದೇ ಒಂದು ಸಾಕು ನಾಯಿಯಿದೆ ಆದರೆ ಅವರ ಬಳಿ ನಾಲ್ಕಕ್ಕಿಂತ ಹೆಚ್ಚು ನಾಯಿಗಳಿವೆ. ನಮ್ಮ ಬಳಿ ಆಮದಾದ ವಿದೇಶಿ ಕಂದೀಲುಗಳಿವೆ ಅದರೆ ಅವರ ಬಳಿ ಆಕಾಶದ ರಾತ್ರಿ ನಕ್ಷತ್ರಗಳು, ಹುಣ್ಣಿಮೆಯ ಚಂದ್ರನಿದ್ದಾನೆ. ನಮ್ಮ ಮನೆ ಹಾಗು ಉದ್ಯಾನವನಕ್ಕೆ ಸೀಮಿತವಾದ ತಡೆಗೋದೆಗಳಿವೆ ಆದರೆ ಅವರಿಗೆ ವಿಸ್ತಾರವಾದ ಭೂಮಿಯೇ ಇದೆ. ನಮ್ಮ ಬಳಿ ಚಿಕ್ಕದಾದ ಜಾಗವಿದೆ ವಾಸ್ತವ್ಯಕ್ಕೆ ಆದರೆ ಅವರ ಬಳಿ ಕಣ್ಣಿಗೆಟುಕದಷ್ಟು ಅಗಾಧವಾದ ಜಾಗವಿದೆ. ನಮ್ಮ ಬಳಿ ಅನೇಕ ಕೆಲಸಗಾರರು, ಸಹಾಯಕರಿದ್ದಾರೆ ಆದರೆ ಅವರೆಲ್ಲರೂ ಬೇರೆಯವರಿಗೆ ಸಹಾಯ ಮಾಡುತ್ತಾರೆ. ನಾವು ನಮ್ಮ ಆಹಾರ ಧಾನ್ಯಗಳನ್ನು ಹಣದಿಂದ ಕೊಂಡುಕೊಳ್ಳುತ್ತೇವೆ ಆದರೆ ಅವರು ತಮ್ಮ ಆಹಾರ ಧಾನ್ಯಗಳನ್ನು ಅವರೇ ಬೆಳೆದುಕೊಳ್ಳುತ್ತಾರೆ. ನಮ್ಮ ಆಸ್ತಿಯನ್ನು ರಕ್ಷಿಸಲು ದೊಡ್ಡ-ದೊಡ್ಡ ಗೋಡೆಗಳಿವೆ ಆದರೆ ಅವರಿಗೆ ಆತ್ಮೀಯ ಸ್ನೇಹಿತರಿದ್ದಾರೆ ರಕ್ಷಿಸಲು". ಮಗನ ಮಾತುಗಳನ್ನು ಆಲಿಸಿ ತಂದೆ ಸ್ತಂಭಿತನಾದ. ಮಗ ತನ್ನ ಮಾತುಗಳನ್ನು ಮುಂದುವರೆಸುತ್ತಾ " ತಂದೆಯೇ! ನಿನಗೆ ಧನ್ಯವಾದಗಳು ನನ್ನ ಕಣ್ಣುಗಳನ್ನು ತೆರೆಸಿದ್ದಕ್ಕೆ, ನಾವು ಎಷ್ಟು ಬಡವರೆಂದು ತೋರಿಸಿದ್ದಕ್ಕೆ" ಎಂದ.

ವಾವ್! ಎಂತಹ ಅದ್ಭುತ ದೃಷ್ಟಿಕೋನವಲ್ಲವೇ!. ನಮ್ಮ ಬಳಿಯಿರುವುದಕ್ಕೆ ನಾವು ಸಂತೋಷಪಡಬೇಕು, ಪರರ ಬಳಿ ಇರುವುದು ನಮ್ಮ ಬಳಿಯಿಲ್ಲವೆಂದು ದುಃಖಪಡುವುದು,ಕೊರಗುವುದು ಸಮಂಜಸವಲ್ಲ ಅಲ್ಲವೇ!

ಗುರುವಾರ, ಅಕ್ಟೋಬರ್ 28, 2010

-ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು-

ಉದ್ಧರೇದಾತ್ಮನಾ ಆತ್ಮಾನಂ ನಾತ್ಮಾನಂ ಅವಸಾದಯೇತ್\
ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ\\
" ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು, ನಮ್ಮನ್ನು ನಾವೇ ಅವನತಿಗೀಡು ಮಾಡಿಕೊಳ್ಳಬಾರದು.
ನಮ್ಮ ಉದ್ಧಾರವಾಗಲಿ,ಅವನತಿಯಾಗಲೀ ಇರುವುದು ನಮ್ಮ ಕೈಯಲ್ಲೇ. ನಮ್ಮ ಒಳಿತಿಗೋ,ಕೆಡುಕಿಗೋ
ಕಾರಣರಾಗಿ ನಾವೇ ನಮ್ಮ ಮಿತ್ರರೂ,ಶತೃಗಳೂ ಆಗಬಲ್ಲೆವು"
ವ್ಯಕ್ತಿ ವಿಕಸನದ ಸಾಧನೆಯ ಈ ಮೊಲ ತತ್ವವನ್ನು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಜಗತ್ತಿಗೆ ಸಾರಿದ್ದಾನೆ.
ಜಗತ್ತಿನ ಪ್ರತಿಯೊಬ್ಬರೂ "ಅಮೃತ ಪುತ್ರ"ರು ಎಂದು ವೇದ ಹೇಳುತ್ತದೆ. ಹಾಗೆಯೇ ಪ್ರತಿಯೊಬ್ಬರ ಆಂತರ್ಯದಲ್ಲೂ ಅಪಾರವಾದ ಶಕ್ತಿ ಸುಪ್ತವಾಗಿದೆ. ಆ ಸುಪ್ತಶಕ್ತಿಯನ್ನು ಪ್ರಯತ್ನಶೀಲತೆಯಿಂದ ಚಾಲನೆಗೆ ತರಬೇಕಾಗಿದೆ. ಆ ಪ್ರಯತ್ನದಲ್ಲಿ ಸೋಲಾದಾಗ ಅಥವಾ ಪ್ರಯತ್ನಶೀಲರಾಗದೇ ಹೋದಲ್ಲಿ ಆ ಅಪಾರವಾದ ಶಕ್ತಿ ಉಪಯೋಗಕ್ಕೆ ಬಾರದೇ ನಂದಿ ಹೋಗುತ್ತದೆ.ದೊಡ್ಡ ಹೆಸರಾಂತ ಸಂಸ್ಥೆಯಲ್ಲಿ ನೂರಾರು-ಸಾವಿರಾರು ಕೆಲಸಗಾರರು ಕೆಲಸ ಮಾಡುತ್ತಾರೆ, ಆದರೆ ಎಷ್ಟು ಜನ ತಮ್ಮ ಪಾಲಿನ ಕೆಲಸವನ್ನು ಮಹೋನ್ನತವಾಗಿ ಮಾಡುತ್ತಾರೆ? ಅಸಡ್ಡೆ, ಅನಾಸಕ್ತಿಯಿಂದ ಮಾಡುವ ಕೆಲಸದಿಂದ ಅಭಿವೃದ್ಧಿ ಸಾಧಿಸುವುದಾದರೂ ಹೇಗೆ? ಪ್ರಖ್ಯಾತ ಅಂತಾರಾಷ್ಟ್ರೀಯ ತರಭೇತುದಾರನಿಂದ ನಾನು ತರಭೇತಿ ಪಡೆದು ನಾನು ವಿಫಲನಾದರೆ ಅದಕ್ಕೆ ಕಾರಣ ನಾನೇ ಹೊರತು ನನ್ನ ತರಭೇತುದಾರನಲ್ಲ ಅಲ್ಲವೇ!. ಅಂದರೆ ನಮ್ಮ ಪ್ರಯತ್ನ ಹೇಗೋ ಹಾಗೇ ನಮ್ಮ ಅಭಿವೃದ್ಧಿಯೊ ಹಾಗೇ ಇರುತ್ತದೆ. ಗುರಿ ಸಾಧಿಸುವುದಕ್ಕೆ ಅಚಲ ಶ್ರದ್ಧೆಯ ಅವಶ್ಯಕತೆ ಬೇಕೇ ಬೇಕು. ನಮ್ಮ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೋ ನಮ್ಮ ಕೆಲಸ ಕಾರ್ಯಗಳೂ ಅಷ್ಟೇ ಗಟ್ಟಿಯಾಗಿರುತ್ತದೆ. ನಕಾರಾತ್ಮಕ ಧೋರಣೆ ಮನದಲ್ಲಿ ಸುಳಿಯಿತೆಂದರೆ, ನಮ್ಮ ಅಧಃಪತನ ಆರಂಭವಾದಂತೆಯೇ ಸರಿ. ಹಾಗೆ ನಮ್ಮ ಮನವನ್ನು ಸಕಾರಾತ್ಮಕ ಧೋರಣೆಯ ಚೌಕಟ್ಟಿನಲ್ಲಿ ವ್ಯವಸ್ಥಿತವಾಗಿಡುವ ಜವಾಬ್ದಾರಿ ವ್ಯಕ್ತಿಗತವಾದದ್ದೇ ಅಲ್ಲವೇ?. ಒಂದು ಮೊಟ್ಟೆಗೆ ನಾವು ಹೊರಗಿನಿಂದ ಶಕ್ತಿ ಪ್ರಯೋಗಿಸಿದರೆ ಅದರ ಸರ್ವನಾಶ ಶತಸಿದ್ಧ, ಅದೇ ಒಳಗಿನಿಂದ ಉಂಟಾಗುವ ಘರ್ಷಣೆಯ ಒತ್ತಡದ ಶಕ್ತಿ ಒಂದು ಜೀವದ ಹುಟ್ಟಿಗೆ ಕಾರಣವಾಗುತ್ತದೆ.ಅಂದರೆ ನಮ್ಮಲ್ಲಿ ಆವಿರ್ಭವಿಸುವ ಅಂತರಾತ್ಮದ ಶಕ್ತಿ ಅಪಾರವಾದುದು ಅದರಿಂದ ಲೋಕ ಉದ್ಧಾರವಾಗುತ್ತದೆ. ಅಂತಹ ಶಕ್ತಿ ಪ್ರತಿಯೊಬ್ಬರಲ್ಲಿಯೊ ಇದೆ. ಆದರೆ ಅದನ್ನು ಹೊರತೆಗೆಯಲು ನಮ್ಮ ಪ್ರಯತ್ನ ಪ್ರಾಮಾಣಿಕವಾಗಿರಬೇಕಷ್ಟೆ.
ಕೃಷ್ಣ ಬಯಸುತ್ತಾನೆ ನಾವು ಆತ್ಮಶಕ್ತಿಯ ಸಾಗರವಾಗಬೇಕು,ಅಂತಹ ಆತ್ಮಶಕ್ತಿಯಿಂದ ನಾವು ಏನನ್ನಾದರೂ ಸಾಧಿಸಬಹುದು ಅಥವಾ ಅದೇ ಆತ್ಮಶಕ್ತಿ ನಕಾರಾತ್ಮಕವಾಗಿದ್ದರೆ ಅದೇ ನಮ್ಮ ಕೆಡುಕಿಗೆ ದಾರಿಮಾಡಿಕೊಡುತ್ತದೆ. ಮಹಾಭಾರತದ ಪಾತ್ರಗಳಾದ ದುರ್ಯೋಧನ,ದುಶ್ಯಾಸನ ಹಾಗು ಕರ್ಣಗಳ ಪಾತ್ರಗಳಿಂದ ಕಲಿಯಬೇಕಾದಂತಹ ಪಾಠವೂ ಅದೇ ಅಲ್ಲವೇ?
ನಮ್ಮ ನಡೆ ಹೇಗಿದೆ? ಅದೇ ನಾವು ಪಯಣಿಸುವ ದಾರಿಯನ್ನು ತೋರಿಸುತ್ತದೆ. ಇದನ್ನೇ ಕೃಷ್ಣ ’ನಿನ್ನ ಉದ್ಧಾರವನ್ನು ನೀನೇ ಮಾಡಿಕೋ" ಎಂದು ಹೇಳಿರುವುದು. ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳೇ ಹೊರತು ಬೇರೆಯವರು ಖಂಡಿತ ಅಲ್ಲ. ನಮ್ಮ ಏಳಿಗೆಗೆ ಬೇರೆಯವರನ್ನು ಹೊಣೆಗಾರರನ್ನಾಗಿಸುವವರು ಹೇಡಿಗಳಲ್ಲದೇ ಮಾತೇನು ಆಗಿರಲು ಸಾಧ್ಯ. ಹೀಗಾಗಿ ನಾವು ನಡೆಯುತ್ತಿರುವ ದಾರಿಯನ್ನು ಅರಿಯೋಣ, ಅರಿವಿನ ದಾರಿದೀಪದಲ್ಲಿ ನಮ್ಮ ಏಳಿಗೆಯೊ ಅಡಗಿದೆ. ಬನ್ನಿ ನಮ್ಮ ನಾವು ಅರಿಯೋಣ, ನಮ್ಮ ಜೀವನದ ಶಿಲ್ಪಿಗಳು ನಾವೇ ಆಗೋಣ.

ಭಾನುವಾರ, ಅಕ್ಟೋಬರ್ 17, 2010

ಒಂದು ರೂಪಾಯಿ ಹೆಚ್ಚಿಗೆ ಸಂಪಾದಿಸಲು ಸಲಹೆ ಕೊಡಿ

ಇತ್ತೀಚೆಗೆ ಕಾರ್ಖಾನೆಯ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಒಂದು ನಮ್ಮ ಪ್ರಾಮಾಣಿಕ ಕೆಲಸಕ್ಕೆ ಸಂದಾಯವಾಗಬೇಕಾದ ಗೌರವ ಸಿಗದೇಯಿದ್ದರೆ ಯಾರಿಗೇ ಆಗಲಿ ನೋವು ಆಗುತ್ತೆ. ಅದರರ್ಥ ನಾವು ಮಾಡುತ್ತಿರುವ ಕೆಲಸ ಅಪ್ರಯೋಜಕವಾದುದು ಎನಿಸದೇಯಿರದು. ಅದರ ಜೊತೆಗೆ ಕಾರ್ಮಿಕ ಸಂಘಟನೆಯ ಅನೈತಿಕ ಕೆಲಸಗಳು ತಲೆಯಲ್ಲಿ ನೂರು ಚಿಂತೆಯನ್ನು ಬಿತ್ತಿ ನೆಮ್ಮದಿಯನ್ನು ಕೆಡಿಸಿತ್ತು. ನಮ್ಮ ಸಂಸ್ಥೆಯಲ್ಲಿ ಕಾರ್ಮಿಕ ಸಂಘಟನೆ ಅಸ್ಥಿತ್ವಕ್ಕೆ ಬಂದ ನಂತರ ಸಂಸ್ಥೆಯ ಉತ್ಪಾದಕತೆಯಲ್ಲಿ, ಕೆಲಸದ ನೈತಿಕತೆ,ಹಿರಿಯ ಅಧಿಕಾರಿಗಳ ಮೇಲಿನ ಗೌರವ,ಸಹೋಧ್ಯೊಗಿಗಳ ಗೌರವ ಪಾತಾಳಕ್ಕೆ ಇಳಿದಿತ್ತು. "ಕೆಲಸ ಮಾಡಿ" ಎಂದು ಹೇಳುವುದು ಅಪರಾಧವೇ ಆಗಿ ಹೋಗಿದೆ. ಈಗಂತೂ ಕೆಲಸ ಮಾಡಿ ಎಂದು ಹೇಳುವುದು ಕಷ್ಟದ ಕೆಲಸವೇ ಆಗಿದೆ." ಮಾಡೋದಿಲ್ಲ ಯಾರಿಗೆ ಹೇಳುಕೊಳ್ಳುವಿರೋ ಹೇಳಿಕೋ ಹೋಗಿ"ಎಂಬ ಪ್ರತ್ಯುತ್ತರ ಸಿದ್ಧವಾಗೇಯಿರುತ್ತೆ. ಇಂತಹ ನಕಾರಾತ್ಮಕ ವಾತಾವರಣದಲ್ಲಿ ಹೇಗೆ ಕೆಲಸ ಮಾಡುವುದು ನೀವೇ ಹೇಳಿ ಹಾಗು ಎಂತಹವರನ್ನೂ ದೃತಿಕೆಡಿಸುತ್ತದೆ.ಬೇರೆ ಕಡೆ ಕೆಲಸ ಹುಡುಕೋಣವೆಂದರೆ ಆರ್ಥಿಕ ಹಿಂಜರಿತದಿಂದ ಕೆಲಸದ ಅವಕಾಶಗಳು ಕಡಿಮೆಯಾಗಿದೆ.’ನಿಂತಲ್ಲಿ ನಿಲ್ಲಲಾಗುತ್ತಿಲ್ಲ,ಬೇರೆಡೆ ಜಾಗ ಸಿಗುತ್ತಿಲ್ಲ’ ಪರಿಸ್ಥಿತಿ ಹೀಗಿರುವಾಗ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದೆ. ದೇವರು ನನಗೊಂದು ಶಕ್ತಿ ಕೊಟ್ಟಿದಾನೆ ಅದೇನೆಂದರೆ ಕಾರ್ಖಾನೆಯ ಗೇಟು ದಾಟಿದ ನಂತರ ಅಲ್ಲಿನದ್ದೇನೂ ಮನಸ್ಸಿಗೆ ಬರೀದೇ ಇಲ್ಲ. ಅದೇನೇ ಇದ್ದರೂ ಮುಂದೆ ಏನು? ಎಂಬ ಪ್ರಶ್ನೆ ಮನಸ್ಸಿನಲ್ಲಿ ಹಸಿರಾಗೇ ಇರುತಿತ್ತು. ಕಾರ್ಮಿಕರೋ ಅವರ ಕೆಲಸದ ಬಗ್ಗೆ ಏನೂ ಕೇಳಬೇಡಿ ಆದರೆ ಅವರ ಬೇಡಿಕೆಗಳೇನೂ ಕಡಿಮೆಯಂತೂ ಇರಲಿಲ್ಲ ಹಿಮಾಲಯದೆತ್ತರಕ್ಕೆ ಅವು ಬೆಳೆದಿತ್ತು. ಎಲ್ಲರಿಗೂ ಕೆಲಸ ಮಾಡುವುದು ಬೇಕಿರಲಿಲ್ಲ ಆದರೆ ಕೈ ತುಂಬಾ ಹಣ ಮಾತ್ರ ಅಭಾದಿತವಾಗಿ ಬರಬೇಕೆಂದು ಬಯಸುತ್ತಿದ್ದಾರೆ. ಯಾರೋ ಹೀಗೆ ಮಾತನಾಡುತ್ತಾ ಹೇಳಿದ ಮಾತು " ಕಾರ್ಖಾನೆ ಬಾಗಿಲು ಹಾಕಿದರೆ ಸಂಸ್ಥೆಯವರು ಕಾರ್ಮಿಕರಿಗೆ ೧೫ ಲಕ್ಷ ಕೊಟ್ಟು ಕಳುಹಿಸುತ್ತಾರೆ" ಎಂದು. ಹರಿಹರ ದ ಕಿರ್ಲೋಸ್ಕರ್ ಸಂಸ್ಥೆ ಬಾಗಿಲುಹಾಕಿ ಹಲವು ವರುಷಗಳೇ ಕಳೆದಿದೆ, ಪರಿಹಾರ ಅನ್ನೋದು ಮಾತ್ರ ಮರೀಚಿಕೆ ಆಗಿರೋವಾಗ ನಮ್ಮ ಸಂಸ್ಥೆಯ ಕಾರ್ಮಿಕರ ಕನಸು ಹಗಲು ಕನಸೇ ಸರಿ ಎನಿಸಿತು.ಕೆಲವೇ ವರ್ಷಗಳ ಹಿಂದೆ ಕೆಲಸ ಕೊಟ್ಟರೆ ಸಾಕು ಅನ್ನೋ ಸ್ಥಿತಿಯಲ್ಲಿದ್ದವರು, ಪ್ರಾಮಾಣಿಕತೆಗೆ ಇವರೇ ದತ್ತುಪುತ್ರರೆನ್ನುವಂತೆ ಇದ್ದವರು ಇಂದು ’ಜಾಬ್ ಸೆಕ್ಯೋರಿಟಿ" ಅನ್ನೋದು ಬಂದ ಮೇಲೆ ಅಹಂಕಾರ, ದರ್ಪದಿಂದ ಹೊಟ್ಟೆಗೆ ಊಟ ಹಾಕಿ ಸಲಹಿದ ಸಂಸ್ಥೆಗೆ ಚೂರಿಹಾಕಲು ಸಿದ್ಧರಾಗಿದ್ದಾರೆ ಅನಿಸುತ್ತಿತ್ತು.
ತ್ರಿಶಂಕು ಸ್ಥಿತಿಯಲ್ಲಿರೋ ನನ್ನಂತಹ ಇಂಜನಿಯರುಗಳಿಗೆ ಇಂತಹ ವಾತಾವರಣ ಹೇಸಿಗೆ ತರಿಸುತ್ತದೆ. ಏಕೆಂದರೆ ಮೇಲಿನವರು ನಮ್ಮನ್ನೇ ಕೇಳುವುದು " ಕೆಲಸ ಏಕೆ ಆಗಿಲ್ಲ" ಅಂತ. ಆಡಳಿತ ವರ್ಗ ಹಾಗು ಕಾರ್ಮಿಕರ ನಡುವೆ ನಾವು ’ಸೇತುವೆ’ ಇದ್ದ ಹಾಗೆ. ಎರಡೂ ಕಡೆಯಿಂದ ತುಳಿಯಲ್ಪಡುವವರೂ ನಾವೇ!. ಆರಕ್ಕೇರಲಾಗದೆ ಮೊರಕ್ಕಿಳಿಯಲಾಗದೆ ತ್ರಿಶಂಕು ಸ್ಥಿತಿಯಲ್ಲಿ ಇರುವವರು ನಾವು. ಮೇಲಿನವರು ತಮ್ಮ ಅನುಕೂಲಗಳನ್ನು ತಾವು ನೋಡಿಕೊಳ್ಳುತ್ತಾರೆ. ಕೆಳಗಿನವರು ತಮಗೆ ಬೇಕಾಗಿರುವುದನ್ನು ’ಡಿಮ್ಯಾಂಡ್’ ಮಾಡಿ ಪಡೆದುಕೊಳ್ಳುತ್ತಾರೆ, ನಾವು ಮಧ್ಯದಲ್ಲಿರುವವರು ಮೇಲಿನವರ ಮರ್ಜಿಗಾಗಿ ಕೈಕಟ್ಟಿ ಕುಳಿತಿರಬೇಕು. ಅವರು ’ಕೊ’ ಅಂದಾಗ ಕೈ ಚಾಚಬೇಕು ಇಲ್ಲವೆಂದರೆ ಅದಕ್ಕಾಗಿ ಕಾಯಬೇಕು. ಮೇಲಿನವರು ಕೊಡುವ ಬಿಕ್ಷೆಗಾಗಿ ನಾವು ಕೈ ಚಾಚಬೇಕಾದಂತಹ ಹೀನಾಯ ಸ್ಥಿತಿ ನಮ್ಮದು. ಎಷ್ಟೋ ಬಾರಿ ನನಗೇ ಅನಿಸಿದೆ ನಾನೇ ಸರಿಯಿಲ್ಲವೋ?, ಇಲ್ಲ ನಾನು ಹೆಜ್ಜೆಯಿಡುವ ಕಡೆಯೇ ಸರಿಯಿಲ್ಲವೋ? ಎಂಬ ಅನುಮಾನ ಮನದಲ್ಲಿ ನೂರೆಂಟು ಬಾರಿ ಬಂದು ಹೋಗಿದೆ.
ಇಂತಹ ಪರಿಸ್ಥಿಯಲ್ಲೇ ಒಂದು ದಿನ ಮೊದಲನೇ ಪಾಳಿ ಮುಗಿಸಿ ಕಾರ್ಖಾನೆಯ ಬಸ್ಸಿನಲ್ಲಿ ೨-೪೦ ಕ್ಕೆ ಹೊರಟು ತಂಪಾಗಿ ಕಣ್ಣು ತುಂಬಾ ನಿದ್ದೆ ಮಾಡಿ ೩-೪೫ಕ್ಕೆ ಕತ್ರಗುಪ್ಪೆಯ ’ಬಾಟ ಶೋ ರೂಂ’ ಬಳಿ ಇಳಿದೆ. ನಾಲ್ಕು ರಸ್ತೆಗಳು ಕೊಡುವ ಸ್ಥಳವದು. ಎತ್ತರಕ್ಕೆ ಬೆಳೆದು ನಿಂತಿರುವ ಕಟ್ಟಡಗಳು,ಅಂಗಡಿ ಮುಂಗಟ್ಟುಗಳು ನನ್ನ ಮನದಲ್ಲಿ ನೂರು ಪ್ರಶ್ನೆಗಳನ್ನು ಹುಟ್ಟುಹಾಕಿತು. ಈ ಅಂಗಡಿಗಳೆಲ್ಲಾ ನಮ್ಮ ಹಣ ಖರ್ಚುಮಾಡಿಸುತ್ತವೇ ಹೊರತು ಯಾವುದೇ ಅಂಗಡಿಯಲ್ಲಿ ನಮಗೆ ಹಣ ಗಳಿಸುವ ಮಾರ್ಗ ತೋರಿಸುವ ಒಂದೇ ಒಂದು ಅಂಗಡಿಯೊ ಅಲ್ಲಿರಲಿಲ್ಲ. ನಾಳೆ ನಮ್ಮ ಕಾರ್ಖಾನೆಗೆ ಏನಾದರೂ ಬೀಗ ಹಾಕಿದರೆ ಏನು ಗತಿ? ಬೇರೆ ಕೆಲಸ ಹುಡುಕಿಕೊಳ್ಳಬಹುದು ಅದು ಬೇರೇ ವಿಷಯ. ಆದರೂ ಕೆಲಸ ಸಿಗುವವರೆಗೂ ಏನು ಮಾಡುವುದು? ಇಲ್ಲಿರುವ ಪ್ರತಿ ಅಂಗಡಿಗಳಲ್ಲೂ ನಮ್ಮ ಜೇಬಿನಲ್ಲಿರುವ ಹಣದ ಮೇಲೆ ಕಣ್ಣು, ಇಲ್ಲಿ ಖರ್ಚುಮಾಡುವುದಕ್ಕೆ ನೂರು ದಾರಿಗಳು ಸ್ಪಷ್ಟವಾಗಿದೆ ಆದರೆ ಹಣ ಗಳಿಸುವ ಒಂದೇ ಒಂದು ದಾರಿಯೊ ಇಲ್ಲಿ ಗೋಚರಿಸುತ್ತಿಲ್ಲ,ಗೋಚರಿಸಲಿಲ್ಲ. ಜೇಬಿನಲ್ಲಿರುವ ಹಣ ಅಲ್ಲಿರಲಾಗದೆ ತಕ ತಕ ಕುಣಿಯುತ್ತಿದೆ ಬೇರೆಯವರ ಕೈ ಸೇರಲು, ಎಷ್ಟಾದರೂ ಲಕ್ಷ್ಮೀ ಚಂಚಲೆಯಲ್ಲವೇ!. ನನ್ನ ಸಂಸ್ಥೆ ಬಾಗಿಲು ಹಾಕಿದರೆ ಅಕ್ಷರಶಹ ನಾನು ಓದಿದ್ದರೂ ಬೀದಿಯಲ್ಲಿ, ನಡು ದಾರಿಯಲ್ಲಿ ಜೀವನ ಸಾಗಿಸಲು ಒದ್ದಾಡಬೇಕಾದಂತಹ ಪರಿಸ್ಥಿತಿ ಬಂದೊದಗುತ್ತದೆ. ಇಂತಹ ಸಂದರ್ಭದಲ್ಲಿ ನಾನೊಬ್ಬನೇ ಅಲ್ಲ ಯಾರಾದರೂ ಹಣಗಳಿಸಲು ಒದ್ದಾಡುತ್ತಾರೆ ಹೀಗಾಗಿ ನಾವು ಎಷ್ಟೇ ಓದಿದ್ದರೂ ಆಗ ನಾವು ಮಾರ್ಕೆಟ್ ನಲ್ಲಿ ಹೆಬ್ಬೆಟ್ಟೇ ಅಲ್ಲವೇ? ಪ್ರಾಮಾಣಿಕವಾಗಿ ಯೋಚಿಸಿದ್ದೇನೆ ಹಾಗು ಪ್ರಾಮಾಣಿಕವಾಗಿ ನನ್ನೆಲ್ಲಾ ಗೆಳೆಯರನ್ನು ಪ್ರಶ್ನಿಸಿದ್ದೇನೆ ’ಒಂದು ರೂಪಾಯಿ ಹೆಚ್ಚಿಗೆ ಸಂಪಾದಿಸಲು ನಿಮ್ಮಲ್ಲಿ ಯಾವುದಾದರೂ ಸಲಹೆ’ಇದೆಯಾ ಎಂದು. ಪ್ರಿಯ ಓದುಗರೇ ನಿಮಗೇನಾದರೂ ಅಂತಹ ಒಂದು ಸಲಹೆ ಸೂಚನೆಗಳು ಗೊತ್ತಿದ್ದರೆ ನೀವು ತಿಳಿಸುವಿರಾ!?

ಶನಿವಾರ, ಅಕ್ಟೋಬರ್ 16, 2010

ನವರಾತ್ರಿಯ ಆಯುಧಪೂಜೆಯೊ,ನಮ್ಮಲ್ಲಿರುವ ಕ್ರೂರತೆಯೊ!

ನಮ್ಮ ಕಾರ್ಖಾನೆಯಲ್ಲಿ ನವರಾತ್ರಿ ಬಂತೆಂದರೆ ಎಲ್ಲರಿಗೂ ಖುಷಿ. ಅದಕ್ಕೆ ಎರಡು ಕಾರಣಗಳಿವೆ,ಮೊದಲನೆಯದು ನಮ್ಮ ಜೇಬಿಗೆ ಬೋನಸ್ ಹಣ ಬಂದು ಬೀಳುತ್ತೆ, ಎರಡನೆಯದು ನಮಗೆಲ್ಲಾ ಸಂಭ್ರಮ ಕೊಡೋ ಆಯುಧಪೂಜೆ ಕಾರ್ಖಾನೆಯಲ್ಲಿ ಭವ್ಯವಾಗಿ ಆಚರಿಸುತ್ತೇವೆ ಅದಕ್ಕೆ. ವರ್ಷದ ಕೊಳೆಯೆಲ್ಲವನ್ನೂ ತೊಳೆದು ನಮಗಾಗಿ,ನಮ್ಮ ಏಳಿಗೆಗಾಗಿ ದಣಿವರಿಯದೇ ದುಡಿಯುವ ಯಂತ್ರಗಳನ್ನು ಪೊಜಿಸುವುದು,ಗೌರವಿಸುವುದು ನಮ್ಮ ಹಿಂದೂ ಸಂಸ್ಕೃತಿಯ ಸಂಪ್ರದಾಯ. ಅದರ ಹಿಂದಿರುವ ತತ್ವವೆಂದರೆ "ನಮಗಾಗಿ ದುಡಿಯುವ ನೇರಾವಾಗಿ ಅಥವಾ ಪರೋಕ್ಷವಾಗಿ ಕಾರಣವಾಗಿರುವವರನ್ನು ಪೂಜಿಸುವುದು, ಗೌರವದಿಂದ ಕಾಣುವುದು ಹಾಗು ಅವರ ತ್ಯಾಗವನ್ನು ನೆನೆಯುವುದೇ ಆಗಿದೆ". ಆದುದರಿಂದಲೇ ಹಿಂದೂಗಳಿಗೆ ಅನುಕೂಲ ಒದಗಿಸುವುದೆಲ್ಲವೂ ದೇವರೇ ಆಗಿವೆ. ಉದಾಹರಣೆಗೆ ನೀರು-ಗಂಗೆಯಾದರೆ,ಗಾಳಿ-ವಾಯುದೇವ,ಮಣ್ಣು-ಭೂಮಿತಾಯಿ ಹಾಗೆ ಕಲ್ಲು,ಮರ,ಪ್ರಾಣಿಗಳೂ ನಮಗೆ ದೇವರೇ ಆಗಿದೆ. ಪೂಜಿಸುವುದೆಂದರೆ ಗೌರವಿಸುವುದೊಂದೇ ಅಲ್ಲದೇ ಅದನ್ನು ಸಂರಕ್ಷಿಸಬೇಕೆನ್ನುವ ಕಾಳಜಿಯೊ ಅದರಲ್ಲಿದೆ. ಅದಕ್ಕಾಗಿಯೇ ಹಿಂದೂ ಸಮಾಜದಲ್ಲಿ ದೇವರುಗಳ ಸಂಖ್ಯೆ ಜಾಸ್ತಿ-ಮೊವ್ವತ್ತು ಮೊರು ಕೋಟಿ ದೇವತೆಗಳಿದ್ದಾರೆ ಎಂದು ಒಂದು ಅಂದಾಜು ಹೇಳುತ್ತದೆ.ನಾಗರೀಕತೆ,ವಿಜ್ಘ್ಯಾನ,ತಂತ್ರಜ್ಘ್ಯಾನ,ಬುದ್ಧಿವಂತಿಕೆ ಬೆಳೆದಂತೆಲ್ಲಾ ನಮ್ಮ ಆಚರಣೆಗಳ ನಿಜವಾದ ಅರ್ಥವನ್ನು ತಿಳಿದುಕೊಳ್ಳುವುದರಲ್ಲಿ ನಾವು ಎಡವಿದ್ದೇವೆ.ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಹಾಳುಮಾಡಿಕೊಂಡಿದ್ದೇವೆ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಗಾಧೆಯಂತೆ ಈಗ ನಮ್ಮ ಸರ್ಕಾರಗಳು,ಸಂಘ-ಸಂಸ್ಥೆಗಳು ಪರಿಸರ ರಕ್ಷಿಸಬೇಕು ಎಂದು ಜನ ಸಾಮಾನ್ಯರಲ್ಲಿ ಜಾಗೃತಿ ಮೊಡಿಸುವ ಪ್ರಯತ್ನಮಾಡುತ್ತಿದೆ.
ಹಬ್ಬ ಹದಿನೈದು ದಿನಗಳಿರುವಂತೆಯೇ ಕಾರ್ಖಾನೆಯಲ್ಲಿ ಬರೀ ಬೋನಸ್ ನದೇ ಸುದ್ಧಿ,ಬರೀ ಗಾಳಿ ಸುದ್ಧಿ. ಕಳೆದ ವರ್ಷ ಆರ್ಥಿಕ ಹಿಂಜರಿತವಿತ್ತಲ್ಲ ಅದಕ್ಕೆ ಸಂಸ್ಥೆಗೆ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚಾಗಿರುವುದರಿಂದ ಈ ಬಾರಿ ಬೋನಸ್ ಕೊಡೋದಿಲ್ಲವೆಂದು, ಈ ಬಾರಿ ಕೇವಲ ಐದು ಸಾವಿರ ಮಾತ್ರ ಬೋನಸ್ ಅಂತೆ, ಇಲ್ಲ ಈ ಬಾರಿ ಕೇವಲ ನಮ್ಮ ಸಂಬಳದಲ್ಲಿ ೨೦% ಮಾತ್ರ ಬೋನಸ್ ಕೊಡ್ತಾರಂತೆ ಎಂಬ ಅಂತೆ ಕಂತೆಗಳು ಕಾರ್ಖಾನೆಯ ಎಲ್ಲೆಡೆಯಲ್ಲೂ ಹರಡಿತ್ತು. ಯಾರಾದರೂ ಇಬ್ಬರು ಮಾತನಾಡುತ್ತಿದ್ದಾರೆಂದರೆ ಸುಲಭವಾಗಿ ಹೇಳಬಹುದು ಅವರು ಬೋನಸ್ ಬಗ್ಗೆಯೇ ಮಾತನಾಡ್ತಿರೋದು ಅಂತ. ಯಾರೇ ಸಿಕ್ಕರೂ ಅವರು ಕೇಳುವಂತಹ ಮೊದಲ ಪ್ರಶ್ನೆಯೆಂದರೆ ಏನು ಸುದ್ಧಿ? ಅಂತ. ಈ ಬಾರಿ ಅಷ್ಟು ಕೊಡ್ತಾರಂತೆ,ಇಷ್ಟು ಕೊಡ್ತಾರಂತೆ ಎನ್ನುವ ಮಾತುಗಳೇ!. ಕಾಯುವುದರಲ್ಲಿರುವ ಕುತೂಹಲ ಅದು ಕೈಗೂಡಿದಾಗ ಇರುವುದಿಲ್ಲ ಹಾಗೆಯೇ ಅಂತೆ ಕಂತೆಗಳಿಗೆ ದಿನಾಂಕ:೦೭.೧೦.೨೦೧೦ ರಂದು ತೆರೆಬಿದ್ದಿತು.ಅಂದು ಸಂಸ್ಥೆಯ ಸೂಚನಾ ಫಲಕದಲ್ಲಿ ಒಂದು ತಿಂಗಳ ಸಂಬಳದಷ್ಟು ಬೋನಸ್ ಎಂದು ಪ್ರಕಟವಾಗಿತ್ತು.ಎಲ್ಲರಲ್ಲಿಯೊ ಒಂದು ರೀತಿಯ ಸಮಾಧಾನ ತಂದಿತ್ತು.
ಬೋನಸ್ ಏನೋ ಕೈಗೆ ಬಂದಾಯಿತು ಇನ್ನು ಆಯುಧ ಪೂಜೆಯದೇ ಚಿಂತೆ ಏಕೆಂದರೆ ಆಡಳಿತ ವರ್ಗ ಹಾಗು ಕಾರ್ಮಿಕ ಸಂಘಟನೆಯ ನಡುವೆ ಒಮ್ಮತ ಏರ್ಪಡದೇ ಇದ್ದುದ್ದೇ ಕಾರಣವಾಗಿತ್ತು. ಕಾರ್ಮಿಕ ಸಂಘಟನೆಯ ಜೊತೆ ಮಾತುಕತೆ ಮಾಡದೇ ಆಯುಧ ಪೂಜೆಯ ವಿವರಗಳನ್ನು ಸಂಸ್ಥೆಯ ಸೂಚನಾ ಫಲಕದಲ್ಲಿ ಹಾಕಿದರು ಎನ್ನುವುದೇ ಅವರ ತಗಾಧೆಯಾಗಿತ್ತು ಹಾಗು ಈ ಬಾರಿ ಅವರೆಲ್ಲರೂ ಆಯುಧಪೂಜೆಯನ್ನು ಬಹಿಷ್ಕರಿಸಬೇಕೆನ್ನುವ ತೀರ್ಮಾನಕ್ಕೆ ಬಂದಿದ್ದರು ಎನ್ನುವ ಸುದ್ಧಿ ಎಲ್ಲೆಡೆಯಲ್ಲೂ ಕೇಳಿಬರುತ್ತಿತ್ತು. ಹಾಗು ಆಡಳಿತ ವರ್ಗದವರು ಕೊಡುವ ಆಯುಧಪೂಜೆಯ ಸಿಹಿಯನ್ನೂ ಸ್ವೀಕರಿಸುವುದಿಲ್ಲವೆಂದು ಸುದ್ಧಿ ಬಂದಿತ್ತು. ತೆಗೆದುಕೊಳ್ಳದೇಯಿದ್ದರೆ ಸಂಸ್ಥೆಗೇನೂ ನಷ್ಟವಿಲ್ಲವೆಂದು ಅವರಿಗೆ ತಿಳಿಯುವ ಕಾಲ ಬೇಗ ಬರಲಿ ಎಂಬ ಪ್ರಾರ್ಥನೆ ಮಾತ್ರ ನಮ್ಮದಾಗಿತ್ತು.
ಕೆಲಸವನ್ನು ಪ್ರೀತಿಸುವವರಾರೂ ಈ ರೀತಿ ಮಾಡುವುದಿಲ್ಲವೆಂಬ ಭಾವನೆ ನನ್ನದು. ಆಡಳಿತ ವರ್ಗ ಏನೇ ಹೇಳಿದರೂ ಅದಕ್ಕೆ ವಿರುದ್ಧವಾಗೇ ವರ್ತಿಸುವ ಕಾರ್ಮಿಕ ವರ್ಗ, ಆಡಳಿತ ವರ್ಗದವರು ಕೊಟ್ಟ ಬೋನಸ್ ಸ್ವೀಕರಿಸಿದ್ದೇಕೋ?. ಪ್ರತಿಯೊಂದು ಕಾರ್ಖಾನೆಯಲ್ಲಿ ಆಡಳಿತ ವರ್ಗ ಹಾಗು ಕಾರ್ಮಿಕ ವರ್ಗಗಳ ನಡುವೆ ಮನಸ್ತಾಪಗಳಿರುವುದು ಸರ್ವೇ ಸಾಮಾನ್ಯವಾದರೂ ಅದನ್ನು ಪರಿಹರಿಸಿಕೊಳ್ಳುವತ್ತ ನಮ್ಮ ಗಮನವಿರಬೇಕೇ ಹೊರತು ಬಹಿಷ್ಕಾರ,ಚಳುವಳಿ,ಉಪವಾಸ ಹಾಗು ಪ್ರತಿಭಟನೆಗಳಿಂದ ಸಾಧ್ಯವಿಲ್ಲ. ಬಹಿಷ್ಕಾರ,ಚಳುವಳಿ,ಉಪವಾಸ ಹಾಗು ಪ್ರತಿಭಟನೆಗಳಿಂದ ತಾತ್ಕಾಲಿಕವಾಗಿ ಪರಿಹಾರವನ್ನೇನೋ ನಿರೀಕ್ಷಿಸಬಹುದಾದರೂ ಶಾಶ್ವತ ಪರಿಹಾರವನ್ನು ನಿರೀಕ್ಷಿಸುವುದು ಸಾಧುವಾಗಲಾರದು.ಪರಿಹಾರ ಬೇಕಿದ್ದಲ್ಲಿ ಮನಸುಗಳನ್ನು ನಿರ್ಮಲವಾಗಿಟ್ಟುಕೊಂಡು ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಅಭಿವೃದ್ದಿಯ ಕಡೆ ಗಮನ ಹರಿಸಬೇಕು. ಆಡಳಿತ ಪಕ್ಷ ಹಾಗು ಪ್ರತಿಪಕ್ಷಗಳು ಜನ ಸಾಮಾನ್ಯರ ಕಡೆ ಗಮನಹರಿಸದೇ ತಗಾಧೆ ತೆಗೆಯುತ್ತಾರಲ್ಲ ತಮ್ಮ ಸ್ವಾರ್ಥಸಾಧನೆಗೆ ಹಾಗೇ ಕಾರ್ಮಿಕ ಸಂಘಟನೆಯ ನಡುವಳಿಕೆಯೊ ಹಾಗೇ ಇದೆ ಮತ್ತು ಅದನ್ನು ಮೀರುವ ಸಾಧ್ಯತೆಯೊ ಕಾಣುತ್ತಿದೆ."ನನ್ನ ಕೋಳಿಯಿಂದಲೇ ಬೆಳಗಾಗುವುದು"ಎಂದು ಕಾರ್ಮಿಕ ವರ್ಗದವರು ತಿಳಿದಿದ್ದರೆ ಅದು ಅವರ ತಪ್ಪು ತಿಳುವಳಿಕೆ.ಕಾಲ ಯಾರ ಅಧೀನವೂ ಅಲ್ಲ,ಯಾವುದು ಯಾವಾಗ ಆಗಬೇಕೋ ಆಗ ತನ್ನ ಪಾಡಿಗೆ ಆಗುತ್ತೆ ನಾವು ನಿಮ್ಮಿಥ ಮಾತ್ರ ಎಂದು ನಾವುಗಳು ಅರ್ಥಮಾಡಿಕೊಳ್ಳಬೇಕಿದೆ. ಅದಕ್ಕೆ ಒಂದು ಉದಾಹರಣೆ ಕೊಡುವುದಾದರೆ , ಭಾರತಕ್ಕೆ ಸ್ವಾತಂತ್ರ ಬಂದ ಮೇಲೆ ಜವಹರಲಾಲ್ ನೆಹರು ನಮ್ಮ ಪ್ರಧಾನ ಮಂತ್ರಿಗಳಾದರು ಅವರು ತೀರಿಕೊಂಡ ಮೇಲೆ ಕಾಂಗ್ರೆಸ್ಸಿಗರು ಮುಂದೇನು ಮುಂದೆ ಯಾರು ಪ್ರಧಾನ ಮಂತ್ರಿಯಾಗುತ್ತಾರೆ ಅಂತ ಕನವರಿಸುತ್ತಿದ್ದರು ಆಗ ಭಾರತವನ್ನು ಮುನ್ನಡೆಸಿದವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಅವರು ತೀರಿಕೊಂಡ ಬಳಿಕ ಇಂದಿರಾಗಾಂಧಿಯವರು ಪ್ರಧಾನ ಮಂತ್ರಿಗಳಾದರು. ಅವರೂ ಕೊಲೆಯಾದ ಮೇಲೆ ಮುಂದೆ ಭಾರತವನ್ನು ನಡೆಸುವರಾರು?ಎಂಬ ಪ್ರಶ್ನೆ ಸಹಜಾವಾಗೇ ಮೊಡಿತ್ತು. ಕಾಂಗ್ರೆಸ್ಸಿನಿಂದಲೇ ಭಾರತ ಅನ್ನೋದನ್ನು ಸುಳ್ಳುಮಾಡಿದವರು ಅಟಲ್ ಬಿಹಾರಿ ವಾಜಪೇಯಿ. ಹೀಗೆ ಕಾಲ ಯಾರಿಗೂ ಕಾಯುವುದಿಲ್ಲ ಸಮಯ ಬಂದಾಗ ಯಾರ ಕೈಯಲ್ಲಿ ಕೆಲಸವಾಗಬೇಕೋ ಅವರ ಕೈಯಲ್ಲಿ ಕೆಲಸವಾಗುವುದರಲ್ಲಿ ಸಂದೇಹವಿಲ್ಲ.
ಆಯುಧಪೂಜೆ ನಮ್ಮ ನಿರೀಕ್ಷೆಗೂ ಮೀರಿ ಚೆನ್ನಾಗಿ ನಡೆಯಿತು.ನವರಾತ್ರಿಯ ಈ ಶುಭಸಂದರ್ಭದಲ್ಲಿ ನಮ್ಮ ಮನದ ಕತ್ತಲನ್ನೂ,ನಮ್ಮ ಸ್ವಾರ್ಥದ ಕ್ರೂರತೆಯನ್ನು ತೊಳೆದುಕೊಳ್ಳುವ ಶಕ್ತಿ ಆ ದೇವಿ ನಮಗೆಲ್ಲಾ ನೀಡಲಿ,ನಮ್ಮಲ್ಲಿ ಹೊಸ ಚೈತನ್ಯ ಹರಿಯಲಿ.

ಶನಿವಾರ, ಅಕ್ಟೋಬರ್ 9, 2010

ನನ್ನ ಕಾರ್ಖಾನೆಯ ಪರಿಸ್ಥಿತಿ

ನಾನು ಈಗ ಕೆಲಸ ಮಾಡುವ ಸಂಸ್ಠೆಗೆ ಸೇರಿ ಏಳು ವರ್ಷಗಳು ಕಳೆಯಿತು. ಹಿಂತಿರುಗಿ ನೋಡಿದಾಗ ಎಷ್ಟೋಂದು ಬದಲಾವಣೆಗಳು ಮನಸ್ಸಿಗೆ ಗೋಚರಿಸುತ್ತದೆ. ಅವಾಗಿನ ವಾತಾವರಣಕ್ಕೂ,ಈಗಿನ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸ!. ಅದೇ ಜಾಗ,ಅದೇ ಯಂತ್ರಗಳು,ಅದೇ ಅಧಿಕಾರಿಗಳು,ಅದೇ ಭಾಸ್,ಅದೇ ಜನಗಳು, ಹಾಗಾದರೆ ಬದಲಾದದ್ದು ಏನು? ಈ ಎಲ್ಲಾ ಬದಲಾವಣೆಗಳಿಗೆ ಕಾರಣಗಳೇನು? ಎಂದು ನನ್ನ ಮನಸ್ಸು ಚಿಂತಿಸುತ್ತದೆ. ಇವು ಉತ್ತರ ಸಿಗದ ಪ್ರಶ್ನೆಗಳೇನೂ ಅಲ್ಲ.ಅದೇ ಪ್ರಶ್ನೆಗಳು ಸಮಸ್ಯೆಗಳಾದಾಗ ಅದಕ್ಕೆ ಪರಿಹಾರ ಸಿಗೋದಿಲ್ಲ. ಭಯೋತ್ಪಾದನೆ,ಅನಕ್ಷರತೆ ಹಾಗು ಬಡತನ ಅನ್ನೋದು ಸಮಸ್ಯೆಗಳೇ... ಪರಿಹಾರ ಅನ್ನೋದು ಮರೀಚಿಕೆ ಅನ್ಸೋದಿಲ್ಲವೇ? ನಾವಿರುವ ವಾತಾವರಣದಲ್ಲಿ ಋಣಾತ್ಮಕ ಬದಲಾವಣೆಗಳಾದರೆ ಮೊಲ ಉದ್ದೇಶ ಅಥವಾ ಗುರಿಯ ಕಡೆ ಸಾಗುವ ಹಾದಿ ಕಠಿಣವಾಗುತ್ತದೆ.

ಇವತ್ತು ನಮ್ಮ ಸಂಸ್ಥೆಯ ಸಮಸ್ಯೆಗಳಿಗೆ ಕಾರಣ ಯಾರು? ಮೊಲ ಯಾರು? ಅನ್ನೋದಕ್ಕೆ ಉತ್ತರ ಹುಡುಕುವ ಪ್ರಯತ್ನ ಎಲ್ಲರೂ ಮಾಡಬೇಕು, ಮಿಗಿಲಾಗಿ ಸಂಸ್ಥೆಯ ಹಿರಿಯ ಆಡಳಿತವರ್ಗ ಅದರ ಬಗ್ಗೆ ಚಿಂತಿಸಿ,ಚರ್ಚಿಸುವುದು ಈ ಸಮಯದ ಅವಶ್ಯಕತೆಯಾಗಿದೆ. ಇಂದಿನ ಸಮಸ್ಯೆಗೆ ಸಂಸ್ಥೆಯ ಪ್ರತಿಯೊಬ್ಬರೂ ನೇರವಾಗಿ ಹಾಗು ಪರೋಕ್ಷವಾಗಿ ಕಾರಣಕರ್ತರಾಗಿರುತ್ತಾರೆ. ಇಲ್ಲಿ ಬದಲಾದದ್ದು ಮನುಷ್ಯನ ಸ್ವಭಾವ-ಗುಣ-ನಡುವಳಿಕೆಗಳೇ ಅಗಿವೆ. ಈ ಮನುಷ್ಯ ಅತಿ ವಿಚಿತ್ರ, ಆತನ ಸ್ವಭಾವ-ಗುಣ-ನಡುವಳಿಕೆಗಳು ಕಾಲಕ್ಕೆ ತಕ್ಕಹಾಗೆ, ಅವನ ಅವಶ್ಯಕತೆಗಳಿಗನುಗುಣವಾಗಿ ಬದಲಾಗುತ್ತವೆ.

ಕೆಲಸವಿಲ್ಲದೆ ನಿರುಧ್ಯೋಗಿಯಾಗಿದ್ದಾಗ ಕಾಯಕವೇ ಕೈಲಾಸ ವೆನ್ನುವನು, ಕೆಲಸ ಸಿಕ್ಕಿ ಉಧ್ಯೋಗದಲ್ಲಿ ಭದ್ರತೆ ಬಂತೆಂದರೆ ಕಾಯಕವೇ ಕೈಲಾಸವೆನ್ನುವುದು ಕಸವಾಗಿರುತ್ತದೆ.ನಿರುದ್ಯೋಗಿಯಾಗಿದ್ದಾಗ ಹಸಿವಿರುತ್ತದೆ, ಹೊಸತನವಿರುತ್ತದೆ,ತೃಪ್ತಿಯಿರುತ್ತದೆ,ಕೆಲಸ,ಸಂಸ್ಥೆಯ ಮೇಲೆ ನಿಷ್ಟೆಯಿರುತ್ತದೆ, ಪ್ರತಿಯೊಬ್ಬರಲ್ಲೂ ಗೌರವವಿರುತ್ತದೆ ಆದರೆ ಅನಂತರ ಸ್ವಾರ್ಥದಿಂದ ಬೇರೆಲ್ಲವೂ ನಷ್ಟವಾಗಿ ಬರೀ ಅಹಂಕಾರ ಮಾತ್ರ ಉಳಿಯುತ್ತದೆ, ಕೆಲಸ ಮಾಡದೇ ಮಾಡುವ ಕೆಲಸ ಹೀನವಾಗಲು ನೂರಾರು ಪಿಳ್ಳೆನೆವಹುಡುಕುವುದೇ ಅವನ ಕಾಯಕವಾಗುತ್ತದೆ.

ಇದು ನನ್ನ ಸಂಸ್ಥೆಯ ಪರಿಸ್ಥಿತಿಯೊಂದೇ ಅಲ್ಲ, ಭಾರತದ ಸ್ಥಿತಿಯೊ ಹೌದು. "ಪುರಾಣ ಹೇಳೋದಕ್ಕೆ, ಬದನೆಕಾಯಿ ತಿನ್ನೋದಕ್ಕೆ" ಆನ್ನುವ ಮಾತಿನಂತೆ "ಕಾಯಕವೇ ಕೈಲಾಸ" ಅನ್ನೋದು ಇಂದಿನ ಕಾರ್ಖಾನೆಗಳಲ್ಲಿ ಬರೀ ಆಡಂಬರದ ಮಾತಾಗಿದೆ. ಬರೀ ಬಸವಣ್ಣನವರನ್ನು ನಮ್ಮ ಆದರ್ಶ ಅಂದರೆ ಸಾಲದು ಅವರು ಹೇಳಿದಂತೆ ನಡೆಯುವುದು ಅಷ್ಟೇ ಮುಖ್ಯ ಅಲ್ಲವೇ!.

ನಾವು,ನಮ್ಮದು ಅನ್ನುವ ಭಾವ ಗೌಣವಾಗಿ ಸ್ವಾರ್ಥ ಜಾಸ್ತಿಯಾದರೆ ಮನುಷ್ಯ ಮೃಗವಾಗುತ್ತಾನೆ. ಆಗ ಅವನು ಕೆಲಸವನ್ನು ಪ್ರೀತಿಸುವುದಿಲ್ಲ-ಕೆಲಸಗಳ್ಳನಾಗುತ್ತಾನೆ. ಕೆಲಸ ಮಾಡದೇಯಿರುವುದಕ್ಕೆ ನೂರಲ್ಲ,ಸಾವಿರ ಪಿಳ್ಳೆನೆವ ಹುಡುಕುತ್ತಾನೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಬೇರೆಯವರ ತಪ್ಪನ್ನು ಹುಡುಕುತ್ತಾನೆ. ಹೀಗಾಗಿ ಮನಸ್ತಾಪಗಳುಂಟಾಗಿ ಮನಸ್ಸು-ಮನಸ್ಸುಗಳ ನಡುವೆ ಬಿರುಕು ಬಿಟ್ಟು ದೊಡ್ಡ ಕಂಧಕವೇ ಬೀಡುಬಿಡುತ್ತದೆ. ಮತ್ತೆಂದೂ ಜೋಡಿಸಲಾಗದ ಸಂಭಂದವಾಗಿ ಹೋಗುತ್ತದೆ.

ದೇಶ ಮೊದಲು ಅನ್ನೋ ಹಾಗೆ ಸಂಸ್ಥೆ ಮೊದಲು ಎನ್ನುವ ಭಾವ ಎಲ್ಲರದ್ದೂ ಆದಾಗ ಎಲ್ಲರ ಬಾಳು ಹಸನಾಗುತ್ತದೆ.ಸಂಸ್ಥೆಯ ಗುರಿ ಸಾಧಿಸುವುದೆಂದರೆ ನಮ್ಮ ಬಾಳಿನ ಗುರಿಯನ್ನು ತಲುಪಿದಂತೆಯೇ ಅಲ್ಲವೇ! ಒಂದೇ ಗುರಿ ಅಂದರೆ ಒಂದೇ ದಿಕ್ಕಿನ ಕಡೆ ನಮ್ಮ ಪಯಣವೆಂದಲ್ಲವೇ? ಒಂದು ಸುಂದರ ಉದಾಹರಣೆಯೊಂದಿಗೆ ನಾವು ಏಕತೆಯಿಂದ ದುಡಿಯುವ ಶಕ್ತಿಯನ್ನು ಅರ್ಥಮಾಡಿಕೊಳ್ಳೋಣ.

ಆಯಸ್ಕಾಂತ ವನ್ನು ಪ್ರತಿಯೊಬ್ಬರು ನೋಡಿದ್ದೀರ. ಅದು ಬೇರೆ ಕಬ್ಬಿಣಗಳಿಗಿಂತ ಬಿನ್ನವೆಂದೂ ನಿಮಗೆ ಗೊತ್ತಿದೆ. ಒಂದು ಸಾದಾ ಕಬ್ಬಿಣದ ತುಂಡೊಂದರ ಆಂತರಿಕ ಪರಿಸ್ಥಿಯನ್ನು ನಾವು ಅವಲೋಕಿಸೋಣ. ಅದರ ವೇಲೆನ್ಸಿ ಎಲೆಕ್ಟ್ರಾನ್ ಗಳ ದಿಕ್ಕು ಬೇರೆ ಬೇರೆ ದಿಕ್ಕಿನಲ್ಲಿರುತ್ತದೆ. ಇಂತಹ ಪರಿಸ್ಥಿಯಲ್ಲಿ ಅದಕ್ಕೆ ಯಾವುದೇ ಶಕ್ತಿಯಿರುವುದಿಲ್ಲ.
.
ಅಂತಹ ಒಂದು ಕಬ್ಬಿಣದ ತುಂಡೊಂದಕ್ಕೆ ವಿಧ್ಯುಚ್ಛಕ್ತಿಯನ್ನು ಅದರಲ್ಲಿ ಹರಿಸಿದಾಗ ಅದರಲ್ಲಿಯ ವೇಲೆನ್ಸಿ ಎಲೆಕ್ಟ್ರಾನ್ ಗಳ ದಿಕ್ಕು ಶಕ್ತಿಯ ಪ್ರಯೋಗದಿಂದ ಒಂದೇ ದಿಕ್ಕಿಗೆ ಬದಲಾಯಿಸಿಕೊಳ್ಳುತ್ತದೆ. ಇಂತಹ ಒಂದು ಪರಿಸ್ಥಿಯಲ್ಲಿ ಅದಕ್ಕೆ ವಿಶೇಷವಾದ ಒಂದು ಶಕ್ತಿ ಪಡೆದು ಆಯಸ್ಕಾಂತವಾಗುತ್ತದೆ. ಆ ಬಲದಿಂದ ಯಾವುದೇ ಕಬ್ಬಿಣದ ತುಂಡು ಅದರ ಬಳಿ ಬಂದಾಗ ತನ್ನ ಕಡೆ ಆಕರ್ಷಿಸುತ್ತದೆ.

ಎಲ್ಲಿಯವರೆಗೂ ಅದರ ಚಲನಾ ದಿಕ್ಕು ಒಂದೇ ಆಗಿರುತ್ತದೆ ಅಲ್ಲಿಯವರೆಗೂ ಅದರ ಶಕ್ತಿಯಿರುತ್ತದೆ. ಇದೇ ತತ್ವವನ್ನು ನಾವು ಒಂದು ಸಂಸ್ಥೆಗೂ ಅನ್ವಯಿಸಬಹುದು. ಸಂಸ್ಥೆಯ ಪ್ರತಿಯೊಬ್ಬ ಸದಸ್ಯನ ಗುರಿಯೊ ಒಂದೇ ಅಗಿದಲ್ಲಿ ಸಂಸ್ಥೆಯ ಎಳಿಗೆಯ ಜೊತೆ ನಾವು ಏಳಿಗೆಯಾಗುವುದರಲ್ಲಿ ಸಂದೇಹವೇಯಿಲ್ಲ.

ಒಡೆದ ಮನಸ್ಸುಗಳನ್ನು ಒಂದಾಗಿಸುವುದು ಕಷ್ಟವಾದರೂ ಸಹಮತ,ಸಹಬಾಳ್ವೆಗೆ ಅದು ಅವಶ್ಯ. ಅಧಿಕಾರ ವರ್ಗ ಹಾಗು ಕಾರ್ಮಿಕ ವರ್ಗ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಪ್ರತಿಯೊಬ್ಬರ ಜೀವನವನ್ನು ಹಸನಾಗಿಸಬೇಕು. ಇದು ಈ ಗಳಿಗೆಯ ಅವಶ್ಯಕತೆಯಾಗಿದೆ.

ಬುಧವಾರ, ಅಕ್ಟೋಬರ್ 6, 2010

ನನ್ನ ಜೀವನದ ನಾಯಕ

ಅದೊಂದು ಚಿಕ್ಕ ಊರಿನ ಗಲ್ಲಿ. ಚಿಕ್ಕ ದಾರಿಯ ಆಸುಪಾಸಿನ ಎರಡು ಕಡೆಗಳಲ್ಲಿಯೊ ಮನೆಗಳು. ಸರಿ ಸುಮಾರು ೨೦-೩೦ ಮನೆಗಳಿರಬಹುದು. ಹೊಸದಾಗಿ ಕಟ್ಟಿದ ಬಡಾವಣೆಯಾದ್ದರಿಂದ ಅದಕ್ಕೊಂದು ಹೆಸರು. ಶ್ರಿ ಅರವಿಂದನಗರ ಅಂತ. ಅರವಿಂದರ ಅನುಯಾಯಿಗಳಾದ ಶ್ರಿ ರಾಮರಾವ್ ರವರು ತಮ್ಮ ಮಗನಿಗೂ, ತಾವಿದ್ದ ಬಡಾವಣೆಗೂ ಅದೇ ಹೆಸರಿಟ್ಟಿದ್ದರು ಹಾಗು ತಾವು ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಡಲು ಕಟ್ಟಿಸಿದ ಕಟ್ಟಡಕ್ಕೆ ಶ್ರಿ ಅರವಿಂದ ಆಶ್ರಮವೆಂದೂ ನಾಮಕರಣ ಮಾಡಿದ್ದರು. ಅಂತಹ ಒಂದು ಚಿಕ್ಕ ಊರಿನ ಚಿಕ್ಕ ಬಡಾವಣೆಯಲ್ಲಿ ನಾನು ನನ್ನ ಆರಂಭಿಕ ಶಾಲೆಯಿಂದ ಹಿಡಿದು ಪಿ ಯು ಸಿ ಯವರೆಗೂ ಓದಿ ನಂತರ ಪದವಿ ಶಿಕ್ಷಣಕ್ಕೆ ಪರ ಊರಿಗೆ ಹೋದೆ.

ಶಾಲಾ ದಿನಗಳಲ್ಲಿ ನನ್ನ ಬಡಾವಣೆಯಲ್ಲಿ ನನ್ನ ವಯಸ್ಸಿನವರೂ, ನನಗಿಂತ ಚಿಕ್ಕ ವಯಸ್ಸಿನವರೂ ಹಾಗು ನನಗಿಂತ ವಯಸ್ಸಿನಲ್ಲಿ ದೊಡ್ಡವರೂ ಇದ್ದರು. ಅವರಲ್ಲಿ ಕೆಲವರು ನನಗೆ ಸ್ಪೂರ್ತಿಯಾದವರೂ ಇದ್ದರು. ಅವರ ನಡೆ,ನುಡಿ, ಆಟ,ಪಾಠ....ಇತ್ಯಾದಿಗಳಲ್ಲಿ.

ಜೀವನದಲ್ಲಿ ನಮ್ಮ ಜೊತೆಗೆ ಬಂಧು ಬಳಗದವರು, ಆತ್ಮೀಯರು, ಸ್ನೇಹಿತರೂ ಒಂದಲ್ಲ ಒಂದು ಕಾಲ ಘಟ್ಟದಲ್ಲಿ ನಮ್ಮ ಆಗು-ಹೋಗುಗಳಿಗೆ ಸಾಕ್ಷಿಯಾಗಿರುತ್ತಾರೆ.ಕೆಲವರು ಅವರಲ್ಲಿ ನಮಗೆ ಆದರ್ಶವಾಗಿರುತ್ತಾರೆ ಅದು ಮಾನಸಿಕವಾಗಿ ಆಗಿರಬಹುದು, ಇಲ್ಲವೇ ತಂದೆ-ತಾಯಿ ನೋಡು ಅವನು ಹೀಗೆ-ಹಾಗೆ ಅವನನ್ನು ನೋಡಿ ಕಲಿ ಎಂಬ ಒತ್ತಾಯಪೂರ್ವಕವಾಗಿಯೂ ಇರಬಹುದು. ಅದು ಸರಿ, ತಪ್ಪು ಎಂದು ನಿರ್ಧರಿಸುವ ಮಾನಸಿಕ ಬೆಳೆವಣಿಗೆ ಅಂದು ನಮಗಿರಲಿಲ್ಲ ಬಿಡಿ. ಜೀವನದ ಮತ್ಯಾವುದೋ ಕಾಲ ಘಟ್ಟದಲ್ಲಿ ಅದೇ ಗೆಳೆಯರು,ಬಂಧುಗಳು, ನಮ್ಮ ದೃಷ್ಟಿಯಿಂದ ದೂರವಾಗಿದ್ದವರು ಮತ್ತೆ ಝಗಮಗಿಸುವಂತೆ ಕಾಣಿಸಿದರೆ ಮತ್ತೆ ಕೆಲವರು ಜೀವನದಲ್ಲಿ ಅಧೋಗತಿಗೆ ಇಳಿದಿರುತ್ತಾರೆ. ಅದನ್ನೆಲ್ಲಾ ನೋಡುವವರಿಗೆ ಜೀವನವು ಅಶ್ಚರ್ಯವೂ, ಅವರ ಸ್ಥಿತಿ ದುಃಖವನ್ನೂ ತರುತ್ತದೆ.ಏನೂ ಮಾಡಲಾಗದೆ ಮೊರನೆಯವರಾಗಿ ನೋಡುವುದು ಮಾತ್ರ ನಮ್ಮ ಪಾಲಿಗಿರುತ್ತದೆ. ಹಿಂದೆ ನೋಡಿದಾಗಲೂ, ಈಗ ನೋಡುವುದಕ್ಕೂ ಅಜ-ಗಜ ವ್ಯತ್ಯಾಸವಿರುತ್ತದೆ.

ಪ್ರಾಣೇಶ್ ( ಹೆಸರನ್ನು ಬದಲಿಸಿದ್ದೇನೆ) ಓದಿನಲ್ಲಿ ಅಷ್ಟೇನೂ ಬುದ್ದಿವಂತನಲ್ಲ, ಹತ್ತನೇ ತರಗತಿಯಲ್ಲಿ, ಪಿ ಯು ಸಿ ಯಲ್ಲೂ ಫೇಲ್ ಆದವನು. ಅವನ ಗೆಳೆಯರೆನಿಸಿಕೊಂಡವರಿಗೆ ಅವನ ಬಗ್ಗೆ ಯಾವ ರೀತಿಯ ಅಭಿಪ್ರಾಯವಿರಬಹುದು ನೀವೇ ಊಹಿಸಿ. ಬಂಧು-ಬಳಗಗಳಲ್ಲಿಯೊ ಅವನ ಬಗ್ಗೆ ತಾತ್ಸಾರ,ಅಪಹಾಸ್ಯ, ಗೆಳೆಯರಲ್ಲೂ ಅವನ ಕಂಡರೆ ಅಸಡ್ಡೆ,ಕೀಳುಭಾವನೆ. ಇಂಥಹ ಪರಿಸ್ಥಿತಿ ಎಂಥವನನ್ನೂ ಅಧೀರನನ್ನಾಗಿಸುತ್ತದೆ. ಅವನ ಸಕಾರಾತ್ಮಕ ಧೋರಣೆಗಳನ್ನು ನಾಶಪಡಿಸುತ್ತದೆ. ಆದರೆ ಕೆಲವೇ ಕೆಲವರಲ್ಲಿ ಮಾತ್ರ ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವದ ಗುಣಗಳು ಬಡಿದೇಳುತ್ತವೆ. ನಿಜ, ಪ್ರತಿಯೊಬ್ಬರೂ ಹುಟ್ಟುತ್ತಾ ನಾಯಕರೇ!,ಅಮೃತಪುತ್ರರೇ!, ಆದರೆ ಬೆಳೆಯುತ್ತಾ ನಮ್ಮ ಶಕ್ತಿ ಬಗೆಗಿನ ಅರಿವಿಗೆ ಗಟ್ಟಿಯಾದ ಪರದೆಯನ್ನು ಹಾಕಿಕೊಂಡು ಕೀಳರಿಮೆ ಅನ್ನೋ ಹೊದ್ದಿಗೆಯನ್ನು ಮೈಮೇಲೆ ಹೊದ್ದುಕೊಂಡು ಮಲಗಿಬಿಟ್ಟಿರುತ್ತೇವೆ. ಆಗ ಕೈ ಹಾಕಿದ ಕೆಲಸವೆಲ್ಲಾ ಕುಲಗೆಟ್ಟು ಹೋಗುತ್ತಿರುತ್ತದೆ. ನಮ್ಮ ಟೈಂನ್ನು ಹಳಿದುಕೊಳ್ಳುವುದು ಬಿಟ್ಟರೆ ನಮಗಿನ್ನೇನೂ ಇರುವುದಿಲ್ಲ. ಇಲ್ಲವಾದರೆ ನಮ್ಮ ಸೋಲನ್ನು ಬೇರೆಯವರ ತಲೆಗೆ ಕಟ್ಟೋದು ಬಿಟ್ಟರೆ ಬೇರೇನೂ ನಾವು ಮಾಡುವುದಿಲ್ಲ. ಆದರೆ ಅದೇ ಸೋಲನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಗೆಲುವಿನ ನಗೆ ಬೀರುವವರು ತುಂಬಾ ಕಡಿಮೆ, ಅವರೇ ಜೀವನದಲ್ಲಿ ನಿಜವಾದ ನಾಯಕರು ಅಲ್ಲವೇ?.

ಹತ್ತು ವರ್ಷಗಳ ನಂತರ ಇಂದು ಪರಿಸ್ಥಿತಿ ಬದಲಾಗಿದೆ ಕ್ಷಮಿಸಿ ಅವನು ಪರಿಸ್ಥಿಯನ್ನು ಬದಲಾಯಿಸಿಕೊಂಡನೆಂದರೆ ತಪ್ಪಲ್ಲ. ಅವನು ಎಷ್ಟು ಓದಿದ್ದಾನೆ ಅನ್ನೋದು ಶೇ೫೦ ಮಾತ್ರ ಜೀವನಕ್ಕೆ ಬೇಕಾಗುತ್ತದೆ ಅಷ್ಟೇ ಶೇ ೧೦೦ ರಷ್ಟು ಬೇಕಾಗಿರುವುದು ಜೀವನದ ಕಡೆಗೆ ಅವನ ನಡುವಳಿಕೆ ಅಲ್ಲವೇ?ಅವನು ನಡೆದು ಬಂದ ದಾರಿ,ಅವನ ಕಷ್ಟಕಾಲದಲ್ಲಿ ಹೆಗಲುಕೊಟ್ಟವರು ಅವನ ನಿಜವಾದ ನೆಂಟರು. ಅವನು ಒಂದು ಸಂಸ್ಥೆಯ ಒಡೆಯನಾಗಿದ್ದಾನೆ, ನೂರಾರು ಜನಗಳಿಗೆ ಕೆಲಸ ಕೊಟ್ಟು ಅವರ ಜೀವನದ ಬೆಳಕಾಗಿದ್ದಾನೆ.

ಅವನ ಛಲ. ಬಲಕ್ಕೆ, ಜೀವನ ಪ್ರೀತಿಗೆ ಏನು ಹೇಳಬೇಕು? ನಿಜಕ್ಕೂ ಹ್ಯಾಟ್ಸಾಫ್ ಅನ್ನದೇ ಇರಲು ಸಾಧ್ಯವೇ? ನೀವೇ ಹೇಳಿ.

ಶುಕ್ರವಾರ, ಅಕ್ಟೋಬರ್ 1, 2010

"ಒಂದು ಬೆಡ್ ರೂಮ್ ಫ್ಲಾಟ್" ಬರೆದವರು ಒಬ್ಬ ಭಾರತೀಯ ಸಾಫ್ಟ್ ವೇರ್ ಇಂಜನೀಯರ್- ಒಂದು ನೈಜ ಕಹೀ ಘಟನೆ.


"ಒಂದು ಬೆಡ್ ರೂಮ್ ಫ್ಲಾಟ್" ಬರೆದವರು ಒಬ್ಬ ಭಾರತೀಯ ಸಾಫ್ಟ್ ವೇರ್ ಇಂಜನೀಯರ್- ಒಂದು ನೈಜ ಕಹೀ ಘಟನೆ.

ಎಲ್ಲಾ ತಂದೆ-ತಾಯಿಯರ ಕನಸಿನಂತೆ ನಾನೂ ಕೂಡ ಸಾಫ್ಟ್ ವೇರ್ ಇಂಜನೀಯರಿಂಗ್ ನಲ್ಲಿ ಪದವಿ ಪಡೆದು ಅಮೇರಿಕಾದ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ, ಅಮೇರಿಕಾ ’ ಅವಕಾಶ ಹಾಗು ಬುದ್ದಿವಂತರ ನಾಡು’. ಅಮೇರಿಕಾ ನೆಲದಲ್ಲಿ ಕಾಲಿಡುತ್ತಿದ್ದಂತೆ ನನ್ನ ಬಹುದಿನಗಳ ಕನಸು ನನಸಾಗಿತ್ತು.
ಕೊನೆಗೂ ನಾನು ಯಾವ ಜಾಗದಲ್ಲಿ ಇರಬೇಕೆಂದುಕೊಂಡಿದ್ದೆನೋ ಅಲ್ಲಿಗೆ ತಲುಪಿಯಾಗಿತ್ತು. ನಾನು ಅಂದೇ ನಿರ್ಧರಿಸಿದ್ದೆ ಇನ್ನು ೫ ವರ್ಷಗಳ ಕಾಲ ಚೆನ್ನಾಗಿ ದುಡಿದು ಸಾಕಷ್ಟು ಹಣಗಳಿಸಿ ಭಾರತದಲ್ಲಿ ಖಾಯಂ ಆಗಿ ನೆಲೆಗೊಳ್ಳುವುದೆಂದು.
ನನ್ನ ತಂದೆ ಸರ್ಕಾರಿ ನೌಕರಿಯಿಂದ ನಿವೃತ್ತರಾಗಿದ್ದರು, ಅವರು ತಮ್ಮ ಜೀವಮಾನ ಪೂರ್ತಿ ದುಡಿದು ಒಂದು ರೂಮಿನ ಮನೆಯನ್ನು ಮಾತ್ರ ತಮ್ಮದಾಗಿಸಿಕೊಂಡಿದ್ದರು.
ನಾನು ನನ್ನ ತಂದೆಯವರಿಗಿಂತ ಹೆಚ್ಚಾಗಿ ಆಸ್ತಿ ಮಾಡಬೇಕೆಂದುಕೊಂಡಿದ್ದೆ. ನಂತರ ನನಗೆ ಒಂಟಿತನದ ಜೊತೆಗೆ ನನ್ನ ಮನೆಯ ನೆನಪು ಕಾಡತೊಡಗಿತು. ನಾನು ಪ್ರತಿವಾರ ನನ್ನ ತಂದೆ-ತಾಯಿಗೆ ಕರೆ ಮಾಡತೊಡಗಿದೆ ಅದೂ ತೀರ ಅಗ್ಗದ ಅಂತಾರಾಷ್ಟ್ರೀಯ ದೂರವಾಣಿ ಕರೆ ಬಳಸಿ. ಎರಡು ವರ್ಷ ಕಳೆಯಿತು, ಆ ಎರಡು ವರ್ಷಗಳನ್ನು ನಾನು ಮೆಕ್ ಡೊನಾಲ್ಡ್ ನಲ್ಲಿ ಬರ್ಗರ್ ಮತ್ತು ಪಿಜ್ಜಾ ಹಾಗು ಡಿಸ್ಕೋಗಳ ಜೊತೆ ಕಳೆದೆ. ಮತ್ತೆರಡು ವರ್ಷ ವಿದೇಶಿ ವಿನಮಯದಲ್ಲಿ ಭಾರತೀಯ ರುಪಾಯಿಯ ದರ ಕಡಿಮೆಯಾಗುವುದನ್ನು ನೋಡಿ ಆನಂದಿಸಿದ್ದೆ.
ಕೊನೆಯದಾಗಿ ನಾನು ಮದುವೆಯಾಗಬೇಕೆಂದು ನಿರ್ಧರಿಸಿದೆ. ನನ್ನ ತಂದೆ-ತಾಯಿಗೆ ವಿಷಯ ತಿಳಿಸಿದೆ, ನನಗೆ ಈಗ ಕೇವಲ ೧೦ ದಿನಗಳ ರಜೆ ಮಾತ್ರ ಸಿಗುತ್ತದೆ ಅಷ್ಟರೊಳಗೆ ಎಲ್ಲವೂ ಮುಗಿಯಬೇಕೆಂದು. ನಾನು ಅಗ್ಗದ ವಿಮಾನದಲ್ಲಿ ನನ್ನ ಪ್ರಯಾಣದ ವ್ಯವಸ್ಥೆ ಮಾಡಿಕೊಂಡೆ. ಮನದಲ್ಲೇ ಸಂತೋಷದ ಉತ್ಸವವನ್ನು ಆಚರಿಸುತ್ತಿದ್ದೆ ಏಕೆಂದರೆ ನನ್ನ ಎಲ್ಲಾ ಗೆಳೆಯರಿಗೆ ಉಡುಗೊರೆಗಳನ್ನು ಕೊಡಬೇಕೆಂದುಕೊಂಡಿದ್ದೆ, ಕೊಡದೇಯಿದ್ದರೆ ಎಲ್ಲರಿಂದಲೂ ಮಾತುಗಳನ್ನು ಕೇಳಬೇಕಲ್ಲಾ ಅದಕ್ಕೆ. ಮನೆಗೆ ಬಂದ ನಂತರ ಒಂದು ವಾರ ಬರೀ ಹುಡುಗಿಯರ ಫೋಟೋ ನೋಡುವುದರಲ್ಲೇ ಕಳೆದೆ ಹಾಗು ದಿನ ಕಳೆದಂತೆ ನನಗೆ ಕಾಲಾವಕಾಶ ಇಲ್ಲದ ಕಾರಣ ಅನಿವಾರ್ಯವಾಗಿ ಒಂದು ಹುಡುಗಿಯನ್ನು ಆರಿಸಿಕೊಳ್ಳಲೇಬೇಕಾಯಿತು.
ನನ್ನ ಭಾವೀ ಅತ್ತೆ-ಮಾವಂದಿರು ಹೇಳಿದರು, ನನಗೆ ಆಶ್ಚರ್ಯವಾಗುವಂತೆ. ಮುಂದಿನ ೨-೩ ದಿನಗಳಲ್ಲಿ ಮದುವೆಯಾಗಬೇಕೆಂದು ಏಕೆಂದರೆ ನನಗೆ ಹೆಚ್ಚಿನ ದಿನ ರಜೆ ಇರಲಿಲ್ಲವಲ್ಲಾ ಅದಕ್ಕೆ. ಮದುವೆಯ ನಂತರ, ಅಮೇರಿಕಾಗೆ ಹೊರಡುವ ಕಾಲ ಬಂದಿತು,ತಂದೆ-ತಾಯಿಗೆ ಸ್ವಲ್ಪ ಹಣವನ್ನು ನೀಡಿದೆ ಹಾಗು ಅವರ ನೆರೆ-ಹೊರೆಯವರಿಗೆ ಅವರನ್ನು ಸ್ವಲ್ಪ ನೋಡಿಕೊಳ್ಳಿಯೆಂದು ಹೇಳಿ ನಾವು ಅಮೇರಿಕಾಗೆ ಹೊರಟೆವು.
ನನ್ನ ಹೆಂಡತಿ ಮೊದ-ಮೊದಲು ಹೊಸ ದೇಶದಲ್ಲಿ ಸಂತೋಷವಾಗಿದ್ದಳು ಹಳೆಯದಾದ ನಂತರ ಅವಳಿಗೆ ಬೇಜಾರಾಗತೊಡಗಿತು. ಹೀಗಾಗಿ ಮನೆಗೆ ಕರೆ ಮಾಡುವ ಅಂತರ ವಾರಕ್ಕೆ ಎರಡು ಕೆಲವು ಸಮಯ ವಾರಕ್ಕೆ ಮೊರು ಬಾರಿಯಾಗತೊಡಗಿತು.ನಮ್ಮ ಉಳಿತಾಯ ಕಡಿಮೆಯಾಗತೊಡಗಿತು.ಎರಡು ವರ್ಷಗಳ ನಂತರ ನಮಗೆ ಮಕ್ಕಳಾಯಿತು. ಎರಡು ಮುದ್ದಾದ ಮಕ್ಕಳು, ಒಂದು ಗಂಡು ಮತ್ತು ಇನ್ನೊಂದು ಹೆಣ್ಣು, ದೇವರೇ ಕೊಟ್ಟ ಉಡುಗೊರೆಗಳು. ಪ್ರತಿ ಬಾರಿಯೊ ನಾನು ನನ್ನ ತಂದೆ-ತಾಯಿಯ ಜೊತೆ ಮಾತನಾಡುತ್ತಿದ್ದೆ ಅವರು ಪ್ರತಿ ಬಾರಿಯೊ ಭಾರತಕ್ಕೆ ಬಾ ಮೊಮ್ಮಕ್ಕಳನ್ನು ನೋಡಿದ ಹಾಗಾಗುತ್ತೆ ಎನ್ನುತ್ತಿದ್ದರು.
ಪ್ರತಿ ವರ್ಷವೂ ಭಾರತಕ್ಕೆ ಹೋಗುವುದೆಂದು ನಿರ್ಧರಿಸುತ್ತಿದೆ... ಆದರೆ ಸ್ವಲ್ಪ ಕೆಲಸ ಹಾಗು ಸ್ವಲ್ಪ ಹಣದ ತೊಂದರೆಯಿಂದ ಹೋಗಲು ಆಗುತ್ತಲೇ ಇರಲಿಲ್ಲ. ವರ್ಷಗಳು ಕಳೆದು ಹೋದವು ಹಾಗು ಭಾರತಕ್ಕೆ ಬರುವುದು ಕನಸಾಗಿ ಹೋಯಿತು. ಒಂದು ದಿನ ಹೀಗೆ ತುರ್ತಾಗಿ ವಿಷಯ ತಿಳಿಯಿತು ನನ್ನ ತಂದೆ-ತಾಯಿಗೆ ಹುಶಾರಿಲ್ಲವೆಂದು. ಆದರೆ ನಾನು ಬಹಳ ಪ್ರಯತ್ನಪಟ್ಟರೂ ನನಗೆ ರಜೆ ದೊರೆಯಲಿಲ್ಲ ಹಾಗು ನಾನು ಭಾರತಕ್ಕೆ ಹೊರಡಲಾಗಲಿಲ್ಲ. ಅನಂತರ ನನ್ನ ತಂದೆ-ತಾಯಿ ತೀರಿಕೊಂಡ ವಿಷಯ ತಿಳಿಯಿತು ಹಾಗು ಅವರ ಹತ್ತಿರದವರು ಯಾರೂ ಇಲ್ಲದ ಕಾರಣ ಸಮಾಜದವರೇ ಅವರ ಅಂತಿಮ ಕಾರ್ಯಗಳನ್ನು ಮಾಡಿದರೆಂದು ತಿಳಿಯಿತು. ನನಗೆ ಕೀಳರಿಮೆ ಕಾಡತೊಡಗಿತು. ನನ್ನ ತಂದೆ-ತಾಯಿ ತಮ್ಮ ಮೊಮ್ಮಕ್ಕಳನ್ನು ನೋಡದೇ ತೀರಿಕೊಂಡರೆಂದು.
ಹೀಗೆ ಹಲವು ವರ್ಷಗಳು ಕಳೆಯಿತು,ನನ್ನ ಮಕ್ಕಳಿಗೆ ಇಷ್ಟವಿಲ್ಲದಿದ್ದರೂ, ನನ್ನ ಹೆಂಡತಿಯ ಉತ್ಸಾಹದಿಂದ ನಾವು ಭಾರತಕ್ಕೆ ಹಿಂತಿರುಗಿದೆವು ಇಲ್ಲೆಯೇ ನೆಲೆಸಲು.ನಾನು ನನಗೆ ಬೇಕಾಗುವಂತಹ ಮನೆ ಹುಡುಕಲು ಪ್ರಯತ್ನಿಸಿದೆ ಅದರೆ ನನ್ನ ದುರಾದೃಷ್ಟವೋ ಏನೋ ನನ್ನ ಬಳಿಯಿದ್ದ ಹಣವೂ ಸಾಕಷ್ಟಿಲ್ಲದ ಕಾರಣ ಯಾವುದನ್ನೂ ಕೊಳ್ಳಲಾಗಲಿಲ್ಲ ಹಾಗೇ ಇತ್ತೀಚಿನ ದಿನಗಳಲ್ಲಿ ಆಸ್ತಿಯ ಬೆಲೆಗಳೂ ತುಂಬಾ ಜಾಸ್ತಿಯಾಗಿತ್ತು. ಹೀಗಾಗಿ ನಾನು ಮತ್ತೇ ಅಮೇರಿಕಾಗೆ ಹೋಗಲು ನಿರ್ಧರಿಸಿದೆ.
ನನ್ನ ಹೆಂಡತಿ ಅಲ್ಲಿಗೆ ಬರಲು ನಿರಾಕರಿಸಿದಳು ಹಾಗು ನನ್ನ ಮಕ್ಕಳು ಭಾರತದಲ್ಲಿ ಇರಲು ಇಷ್ಟಪಡಲಿಲ್ಲ. ನಾನು ಹಾಗು ನನ್ನ ಇಬ್ಬರು ಮಕ್ಕಳು ಅಮೇರಿಕಾಗೆ ಹಿಂತಿರುಗಿದೆವು ನನ್ನ ಹೆಂಡತಿಗೆ ಎರಡು ವರ್ಷಗಳಲ್ಲಿ ಬಂದೇ ಬರುತ್ತೇನೆ ಎಂದು ವಚನವನ್ನು ಕೊಟ್ಟು.
ಕಾಲಚಕ್ರ ಉರುಳಿತು, ನನ್ನ ಮಗಳು ಅಮೇರಿಕಾದ ಹುಡುಗನನ್ನು ಮದುವೆಯಾಗಲು ನಿರ್ಧರಿಸಿದ್ದಳು ಹಾಗು ನನ್ನ ಮಗ ಅಮೇರಿಕಾದಲ್ಲಿ ಸಂತೋಷವಾಗಿದ್ದಾನೆ. ನಾನು ನಿರ್ಧರಿಸಿದ್ದೆ ಸಾಕು ಸಾಕು ಎಲ್ಲಾ ಗಂಟು ಮೊಟೆ ಕಟ್ಟಿಕೊಂಡು ಭಾರತಕ್ಕೆ ಬಂದು ಬಿಡಬೇಕೆಂದು. ನನ್ನ ಬಳಿ ಒಂದು ಒಳ್ಳೆಯ ಬಡಾವಣೆಯಲ್ಲಿ ಎರಡು ರೂಮಿನ ಪ್ಲಾಟನ್ನು ಕೊಂಡುಕೊಳ್ಳುವಷ್ಟು ಹಣ ನನ್ನ ಬಳಿ ಇತ್ತು.
ಈಗ ನನಗೆ ೬೦ ವರ್ಷ, ನನ್ನ ಪ್ಲಾಟ್ ನಿಂದ ಹೊರಗೆ ಬರುವುದು ಯಾವಾಗೆಂದರೆ ನಿಯಮಿತವಾಗಿ ನಾನು ದೇವಸ್ಥಾನಕ್ಕೆ ಹೊರಡುವಾಗ ಮಾತ್ರ.ನನ್ನ ನಂಬಿಕಸ್ಥ ಹೆಂಡತಿಯೊ ನನ್ನನ್ನು ಅಗಲಿ ಸ್ವರ್ಗ ಸೇರಿದಳು.
ಕೆಲವು ವೇಳೆ ನನಗೇ ಆಶ್ಚರ್ಯವಾಗುತ್ತೆ,ಏನೇನೆಲ್ಲ ಆಗಿ ಹೋಗಿದೆ ಎಲ್ಲವೂ ಸರಿಯೇ? ನನ್ನ ತಂದೆ ಭಾರತದಲ್ಲೇ ಇದ್ದು,ಒಂದು ಮನೆಯನ್ನು ಕೊಂಡುಕೊಂಡಿದ್ದರು. ನಾನು ಕೂಡ ಎಷ್ಟೋಂದೆಲ್ಲಾ ಒದ್ದಾಡಿ ಈಗ ನನ್ನ ಬಳಿಯೊ ಅಷ್ಟೇಯಿದೆ.
ನಾನು ನನ್ನ ತಂದೆ-ತಾಯಿಯನ್ನು ಮತ್ತು ನನ್ನ ಮಕ್ಕಳನ್ನು ಒಂದು ಹೆಚ್ಚುವರಿ ಬೆಡ್ ರೂಮಿಗಾಗಿ ಕಳೆದುಕೊಂಡೆ.
ಕಿಟಕಿಯಿಂದ ಹೊರಗೆ ನೋಡಿದರೆ ಮಕ್ಕಳು ಕುಣಿಯುತ್ತಿರುವುದು ಕಾಣಿಸುತ್ತದೆ. ಈ ಹಾಳು ಟಿವಿ ಯಿಂದ ನಮ್ಮ ಮಕ್ಕಳು ಹಾಳಾಗುತ್ತಿದ್ದಾರೆ, ಅವರು ನಮ್ಮ ಮೌಲ್ಯ,ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ನನಗೆ ಅವಾಗವಾಗ ನನ್ನ ಮಕ್ಕಳಿಂದ ಪತ್ರಗಳು ಬರುತಿರುತ್ತದೆ ನನ್ನ ಕ್ಷೇಮ ವಿಚಾರಿಸಿ. ಹಾಂ! ಹಾಗಾದರೂ ಅವರು ನನ್ನನ್ನು ನೆನೆಯುತ್ತಾರಲ್ಲ ಅನ್ನೋ ಸಮಾಧಾನವಿದೆ.
ನಾನು ಸತ್ತ ನಂತರ ನನ್ನ ಅಂತಿಮ ಕಾರ್ಯಗಳನ್ನು ನನ್ನ ನೆರೆಹೊರೆಯವರೇ ಮಾಡುತ್ತಾರೆ ಅನಿಸುತ್ತದೆ. ದೇವರು ಅವರನ್ನು ಚೆನ್ನಾಗಿಡಲಿ. ಆದರೂ ನನ್ನಲ್ಲಿ ಆ ಪ್ರಶ್ನೆ ಹಾಗೇ ಉಳಿದಿದೆ’'was all this worth it?'
ಈಗಲೂ ಅದಕ್ಕೆ ಉತ್ತರವನ್ನು ಹುಡುಕುತ್ತಿದ್ದೇನೆ.........

ಭಾನುವಾರ, ಸೆಪ್ಟೆಂಬರ್ 26, 2010

ಅಮರವಾದ ಕ್ರಾಂತಿಯ ಕಿಚ್ಚು-ಭಗತ್ ಸಿಂಗ್


ಇಂದು ೨೭ನೇ ಸೆಪ್ಟೆಂಬರ್ ೨೦೧೦. ಇವತ್ತು ನಿಜಕ್ಕೂ ತುಂಬಾ ಒಳ್ಳೆಯ ದಿನ, ಅದರಲ್ಲೂ ಭಾರತದ ಇತಿಹಾಸದಲ್ಲಿ ಮರೆಯಲಾರದ ಧೃವತಾರೆಯ ಜನ್ಮದಿನವೆಂದರೆ ತಪ್ಪಾಗಲಾರದು. ಇವತ್ತು ನಾವು ಮಾಹಿತಿ ತಂತ್ರಜ್ನಾನದ ಯುಗದಲ್ಲಿದ್ದೇವೆ, ನಮ್ಮ ದೇಶ ಅನೇಕ ಶತೃಗಳ ಕೈಯಲ್ಲಿ ಶತಶತಮಾನಗಳು ನಲುಗಿತ್ತು ಎಂಬುದು ಭಾರತೀಯ ಇತಿಹಾಸ ಓದಿದವರಿಗೆಲ್ಲಾ ತಿಳಿದಿದೆ.ಮುಸಲರು,ಗ್ರೀಕರು,ಡಚ್ಛರು,ಪೋರ್ಚಿಗೀಸರು ಹಾಗು ಆಂಗ್ಲರು ನಮ್ಮನ್ನು ಗುಲಾಮಗಿರಿಗೆ ತಳ್ಳಿ, ನಮ್ಮ ಜನರನ್ನು ಹಾಗು ಸಂಪನ್ಮೂಲಗಳನ್ನು ತಮ್ಮ ವೈಭೋಗಕ್ಕೆ ಬಳಸಿಕೊಂಡರು ಎಂದರೆ ತಪ್ಪಲ್ಲ. ಹಾಗೇ ನಮ್ಮ ಜನ,ಭಾಷೆ,ಸಂಸ್ಕೃತಿಯ ವೈವಿಧ್ಯತೆಯಲ್ಲಿರುವ ಭಿನ್ನತೆಯನ್ನು ನಮ್ಮ-ನಮ್ಮಲ್ಲೇ ವಿಷಬೀಜವನ್ನು ಬಿತ್ತಿ ಹೋದರು ಅವರೆಲ್ಲಾ. ಜನ-ಜನರನ್ನು ಒಡೆಯುವುದೇ ಅಲ್ಲದೆ, ಅಖಂಡ ಭಾರತ ಹೋಳಾಗುವುದಕ್ಕೋ ಅವರೇ ಕಾರಣವಲ್ಲವೇ? ( ಅವರ ಜೊತೆ ಅಧಿಕಾರ ಬಯಸುವ ನಮ್ಮವರು ಇದ್ದರೆನ್ನುವುದು ವಿಷಾದದ ಸಂಗತಿ) ಸ್ವಾತಂತ್ರ ಹೋರಾಟ ೧೮೫೭ ರಲ್ಲೇ ಮಂಗಲಪಾಂಡೆಯಿಂದ ಆರಂಭಗೊಂಡಿತ್ತಾದರೂ ನಮ್ಮಲ್ಲಿಯ ಒಡಕುಗಳ ಕಾರಣದಿಂದ ಸ್ವಾತಂತ್ರ ಬರುವುದು ೯೦ ವರ್ಷಗಳು ಮುಂದೆಹೋದದ್ದು ವಿಪರ್ಯಾಸ. ನಮ್ಮಲ್ಲಿ ಜಾಗೃತಿ ಮೂಡಿಸುವ ಕಾಯಕದ ಜೊತೆಗೆ ಭಾರತೀಯರಲ್ಲಿ ಸ್ವಾತಂತ್ರದ ಕಿಚ್ಚುಹೊತ್ತಿಸಿದ ಮಹನೀಯರು ಒಬ್ಬರೇ? ಇಬ್ಬರೇ?.. ಸಾವಿರಾರು,ಲಕ್ಷಾಂತರ ದೇಶಭಕ್ತರು. ಅಂತಹ ಅಸಂಖ್ಯಾತ ಪ್ರಾಥಃ ಸ್ಮರಣೀಯರನ್ನು ನೆನೆಸಿ ಗೌರವಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಅಂತಹ ಮಹನೀಯರಲ್ಲಿ ಭಗತ್ ಸಿಂಗ್ ಗೆ ತನ್ನದೇ ಆದ ಸ್ಥಾನವಿದೆ. ಇಂದು ಮಹಾತ್ಮ,ಹುತಾತ್ಮ ಭಗತ್ ಸಿಂಗ್ ನ ಜನ್ಮದಿನ.
ಭಗತ್ ಸಿಂಗ್ ಹುಟ್ಟಿದ್ದು ೧೯೦೭ ಸೆಪ್ಟೆಂಬರ್ ೨೭ ರಂದು ಬಾಂಗ ಎನ್ನುವ ಊರಿನಲ್ಲಿ ಅದು ಈಗಿನ ಪಾಕೀಸ್ಥಾನದಲ್ಲಿ.ತಂದೆ ಕಿಶನ್ ಸಿಂಗ್ ಹಾಗು ತಾಯಿ ವಿದ್ಯಾವತಿ. ಕುಟುಂಬದಿಂದ ಬಳುವಳಿಯೆಂದರೆ ಸ್ವಾತಂತ್ರದ ಕಿಚ್ಚು.ಭಗತ್ ಸಿಂಗ್ ಹುಟ್ಟಿದಾಗ ಅವನ ತಂದೆ ಕಿಶನ್ ಸಿಂಗ್ ಜೈಲಿನಲ್ಲಿದ್ದರು. ಅವನ ಬಂಧುವಾದ ಸರ್ದಾರ್ ಅಜಿತ್ ಸಿಂಗ್ ಒಬ್ಬ ಮಹಾನ್ ಸ್ವಾತಂತ್ರ ಹೋರಾಟಗಾರರಾಗಿದ್ದರು.ಇಂತಹ ಕುಟುಂಬದ ವಾತಾವರಣ ಭಗತ್ ಸಿಂಗ್ ಗೆ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಲು ಪ್ರೇರಣೆ ನೀಡಿತೆನ್ನೆಬಹುದು. ತನ್ನ ಶಾಲೆಯ ದಿನಗಳಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಬೆಂಬಲ ವ್ಯಕ್ತಪಡಿಸುತ್ತ ಆಂಗ್ಲ ಸರ್ಕಾರ ನೀಡಿದ್ದ ಪುಸ್ತಕಗಳನ್ನು ಬಹಿರಂಗವಾಗಿ ಸುಟ್ಟು ಪ್ರತಿಭಟಿಸಿದ್ದ.’ಚೌರಿ-ಚೌರಾ’ದ ಅಹಿತಕರ ಘಟನೆಗಳಿಂದ ಮನನೊಂದ ಗಾಂಧೀಜಿ ತಮ್ಮ ಅಸಹಕಾರ ಚಳುವಳಿಯನ್ನು ಕೈಬಿಟ್ಟರು. ಅದರಿಂದ ಭಗತ್ ಸಿಂಗ್ ಬಹುವಾಗಿ ನೊಂದು ಗಾಂಧೀಜಿ ತತ್ವಗಳಿಂದ ಭಾರತಕ್ಕೆ ಸ್ವಾತಂತ್ರ ಸಿಗುವುದಿಲ್ಲವೆಂದರಿತು ಕ್ರಾಂತಿಮಾರ್ಗವೇ ಸೂಕ್ತವೆಂದು ಕ್ರಾಂತಿಕಾರಿಯಾದ.ಅನೇಕ ಯುವ ಕ್ರಾಂತಿ ಸಂಘಟನೆಗಳೊಡನೆ ಭಗತ್ ಸಿಂಗ್ ಗುರುತಿಸಿಕೊಂಡ ಹಾಗು ಅಲ್ಲಿ ಸ್ವಾತಂತ್ರ ಹೋರಾಟ ಮುಂದುವರೆಸಿದ. ಆಂಗ್ಲರ ಲಾಠಿ ಏಟಿನಿಂದ ತೀವ್ರಗಾಯಗೊಂಡ ಲಾಲಾ ಲಜಪತರಾಯರು ಅಸುನೀಗಿದಬಳಿಕ ಅವರ ಸಾವಿಗೆ ಕಾರಣರಾದ ಆಂಗ್ಲ ಅಧಿಕಾರಿಯ ಕೊಲೆಗೆ ಭಗತ್ ಸಿಂಗ್ ಸಂಚು ರೂಪಿಸಿದ. ಆನಂತರ ಕ್ರಾಂತಿಕಾರಿಗಳು ದೇಶದ ಸ್ವಾತಂತ್ರ ಹೋರಾಟಗಾರರು ಎಂಬುದು ದೇಶದ ಜನತೆಗೆ ಹಾಗು ಕಾಂಗ್ರೆಸ್ಸಿಗೆ ಹೇಳಬೇಕಾಗಿತ್ತು. ಅದಕ್ಕಾಗಿ ಅಸೆಂಬ್ಲಿಯಲ್ಲಿ ಬಾಂಬ್ ಹಾಕಿದ. ಭಗತ್ ಸಿಂಗ್ ಹಾಗು ಅವನ ಗೆಳೆಯ ಭತುಕೇಶ್ವರ ದತ್ತ್ ನನ್ನು ಆಂಗ್ಲರು ಬಂಧಿಸಿದರು. ಕೊಲೆ, ಸಂಚು ಆರೋಪದಡಿಯಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಗೆ ಗಲ್ಲು ಶಿಕ್ಷೆ ವಿಧಿಸಿದರು.
’ಇಂಕಿಲಾಬ್ ಜಿಂದಾಬಾದ್’ ಅವರ ಅಂತಿಮ ಮಾತಾಯಿತು. ತಾಯ್ನಾಡಿನ ಬಿಡುಗಡೆಗೆ ತಮ್ಮ ಪ್ರಾಣವನ್ನು ತ್ಯಾಗಮಾಡಿದರು.
ಅವನ ಬಲಿದಾನ ಪ್ರತಿಯೊಬ್ಬ ಭಾರತೀಯನೂ ಸ್ಮರಿಸುವಂತಹುದು. ಇಂದು ನಮ್ಮ ನಡುವೆ ಇಲ್ಲವಾದರೂ ಅವನ ಸಾಹಸ,ಬಲಿದಾನಗಳು ಪ್ರತಿಯೊಬ್ಬ ಭಾರತೀಯನ ಹೃದಯಗಳಲ್ಲಿ ಅಜರಾಮರವಾಗಿವೆ.
" ಓ ಮಹಾನ್ ಚೇತನವೇ ನಿನಗಿದೋ ನಮ್ಮ ನಮನಗಳು,
ಹೃದಯ ನಿನ್ನ ಬಲಿದಾನಕ್ಕಾಗಿ ಕಂಬನಿ ಮಿಡಿಯುತ್ತಿದೆ,
ಮನದಲ್ಲಿ ವ್ಯಥೆಯಿದೆ ಮತ್ತೊಮ್ಮೆ ನೀ ಭಾರತದಲ್ಲಿ ಹುಟ್ಟಲಿಲ್ಲವೆಂದು,
ಬಾ ಧೃವತಾರೆಯೇ ಬಾ ನಮ್ಮ ಚೇತನವಾಗು ಬಾ"

ಶನಿವಾರ, ಸೆಪ್ಟೆಂಬರ್ 25, 2010

ನಿರ್ವಹಣೆ ಕಾರ್ಯದ ಬಗ್ಗೆ ತಾತ್ಸಾರ ಏಕೆ?



ಆಧುನಿಕ ಕೈಗಾರಿಕಾ ಆರ್ಥಿಕತೆಯ ಸುಭದ್ರತೆಗೆ ತಾಂತ್ರಿಕವೃತ್ತಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಕೆಳಗಿನ ಮುಖ್ಯ ಅಂಶಗಳು ಆಧುನಿಕ ಕೈಗಾರಿಕಾ ಆರ್ಥಿಕತೆಗೆ ಅಭಯಂತರನ ತಾಂತ್ರಿಕ ಕೌಶಲತೆಯ ಕೊಡುಗೆಗಳಾಗಿವೆ.
-ಸಾರ್ವಜನಿಕ ಸೇವಾ ವ್ಯವಸ್ಥೆಯ ರಚನೆ, ಮೂಲಭೂತ ಸೌಕರ್ಯಗಳ ರಚನೆ, ಪ್ರತಿಷ್ಟಾಪನೆ, ನಿರ್ಮಾಣ, ಕಾರ್ಯನಿರ್ವಹಣೆ, ಹಾಗು ಸೌಕರ್ಯಗಳ ಸೃಷ್ಟಿ.
-ನಿರಂತರವಾಗಿ ಕೆಲಸ ಮುಂದುವರೆಯುವಿಕೆ, ನಿರ್ವಹಣೆ ಹಾಗೂ ದುರಸ್ತಿ.
-ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದು, ರಚನೆ, ತಾಂತ್ರಿಕತೆ.
-ಆಸ್ತಿಯ ಕ್ರೋಡೀಕರಣ, ಉತ್ಪಾದನೆ, ಉಪಾಯಗಳು.
-ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವುದು, ಗುಣಮಟ್ಟ ಕಾದಿರಿಸುವೆಕೆ, ಗುಣಮಟ್ಟ ವರ್ದಿಸುವಿಕೆ.
-ಹೊಸ ವಸ್ತುಗಳು, ತಾಂತ್ರಿಕತೆ, ಪ್ರಯೋಗ, ಸಂಶೋದನೆ ಹಾಗು ಅಭಿವೃದ್ದಿ.
-ವ್ಯಾಪಾರೀಕರಣ ಹಾಗು ಕೈಗಾರಿಕಾ ವಸ್ತುಗಳ ಮಾರಾಟ ಪ್ರಕ್ರಿಯೆ.
ಮೇಲಿನ ಅಂಶಗಳನ್ನು ಗಮನಿಸಿದರೆ ತಾಂತ್ರಿಕ ವೃತ್ತಿಯ ಬಾಹುಳ್ಯದ ಅಗಾಧತೆ ದೇಶದ ಆರ್ಥಿಕತೆಯ ಮೇಲಿನ ಸ್ವಾಮ್ಯಯದ ಅರಿವಾಗುತ್ತದೆ. ತಾಂತ್ರಿಕತೆಯ ವೈಶಿಷ್ಟ್ಯತೆ ಬಳಕೆಯಲ್ಲಿರುವ ಸಂಪನ್ಮೂಲಗಳನ್ನು ಬಳಸಿ ಹೊಸ ಸಂಪನ್ಮೂಲಗಳನ್ನು ರಚಿಸುವುದು ಹಾಗೂ ಜನ ಜೀವನ ಶ್ರೀಮಂತ ಹಾಗೂ ಅರ್ಥಪೂರ್ಣವಾಗಿಸುವುದೇ ಆಗಿದೆ.
ಕೈಗಾರಿಕಾ ತಾಂತ್ರಿಕತೆಯ ಬಾಹುಳ್ಯದಲ್ಲಿ ನಿರ್ವಹಣಾ ಕಾರ್ಯ ಅವಿಭಾಜ್ಯ ಅಂಗವಾಗಿದೆ.ಅತ್ಯಾಧುನಿಕ ತಾಂತ್ರಿಕತೆಯನ್ನು ಮೈಗೂಡಿಸಿಕೊಂಡಿರುವ ಆಧುನಿಕ ಕೈಗಾರಿಕಾ ಸಂಸ್ಥೆಗಳು ಯಂತ್ರಗಳ ಸುರಕ್ಷಿತ ನಿರಂತರ ಚಾಲನೆಯ ಮೇಲೆ ಬಹಳಷ್ಟು ಅವಲಂಬಿತವಾಗಿದೆ.ನಿರ್ವಹಣಾ ಕಾರ್ಯವು ತಾಂತ್ರಿಕ ವಿದ್ಯಾರ್ಹತೆಯುಳ್ಳ ಪದವೀಧರ ಅಭಯಂತರರಿಗೆ ಅನೇಕ ಉನ್ನತ ಅವಕಾಶಗಳನ್ನು ಕಲ್ಪಿಸಿದೆ. ವಿಧ್ಯುಚ್ಛಕ್ತಿ ಆಧುನಿಕ ಕೈಗಾರಿಕೆಯ ನಿರಂತರ ಚಲನೆಗೆ ಅತ್ಯವಶ್ಯವಾಗಿರುವುದರಿಂದ ವಿಧ್ಯುಚ್ಛಕ್ತಿ ಅಭಯಂತರರಿಗೆ ಬಹಳ ಏಡಿಕೆಯಿದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿರ್ವಹಣಾ ಕಾರ್ಯವು ಬಹುಬೇಡಿಕೆಯ ವೃತ್ತಿಯಾಗಿದೆ. ತುರ್ತುಪರಿಸ್ಥಿಗಳಲ್ಲಿ ಯಂತ್ರದ ನಿಲುಗಡೆಯ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬ ಯಾವುದೇ ವೇಳೆಯಲ್ಲಿಯೂ ಅಭಾದಿತವಾಗಿ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ನಿರ್ವಹಣಾ ಕಾರ್ಯಕ್ಷೇತ್ರದ ಗಹನತೆಯನ್ನು ದೈಹಿಕವಾಗಿ ಹೆಚ್ಚಿಸಿದೆ. ಆದರೂ ಪಾಳಿಯಲ್ಲಿ ಕೆಲಸ ಮಾಡುವುದು ಕೆಲಸದ ಒಂದು ಅಂಗವಾಗಿದೆ. ಸಾಮಾನ್ಯ ಜನರ ವಾಸಸ್ಥಳಗಳಿಗಿಂತ ಬಹಳ ದೂರವಿರುವ ಕೈಗಾರಿಕಾ ವಸಾಹತುಗಳು,ಸಮುದ್ರದ ಮಧ್ಯದಲ್ಲಿ, ಮರುಭೂಮಿ, ಪರ್ವತ ಹಾಗೂ ಶಕ್ತಿ ಉತ್ಪಾದನಾ ಸ್ಥಳಗಳಲ್ಲಿ ಕೆಲಸ ಮಾಡುವ ನಿರ್ವಹಣಾ ಕೆಲಸಗಾರರಿಗೆ ದೈಹಿಕ ಸಾಂಮರ್ಥ್ಯದ ಜೊತೆಗೆ ಮಾನಸಿಕ ಒತ್ತಡಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯದ ಅಗತ್ಯವಿರುತ್ತದೆ.
ಪ್ರಾಯೋಗಿಕ ಪ್ರಯೋಗಗಳ ಬಗ್ಗೆ ಒಲವು ನಿರ್ವಹಣಾ ಕಾರ್ಯದ ಎರಡನೇ ಅತ್ಯುತ್ತಮ ಬೇಡಿಕೆಯಾಗಿದೆ. ನಿರ್ವಹಣಾ ಕೆಲಸವನ್ನು ವೃತ್ತಿಯನ್ನಾಗಿಸಿಕೊಳ್ಳುವರು ಕೈ ಕೆಸರು ಮಾಡಿಕೊಳ್ಳುವುದಕ್ಕೆ ಉತ್ಸುಕರಾಗಿರಬೇಕು. ಪ್ರಾಯೋಗಿಕತೆಯ ಅರಿವು ಅದರಲ್ಲೂ ಎಣ್ಣೆಯನ್ನು ಬದಲಾವಣೆ ಮಾಡುವಾಗ , ಹಾಳಾದ ಬೇರಿಂಗ್ ಗಳನ್ನು ಬದಲಾವಣೆ ಮಾಡುವಾಗ, ಇನ್ನಿತರ ನೂರಾರು ಪ್ರಾಯೋಗಿಕ ಕೆಲಸಗಳನ್ನು ಮಾಡುವಾಗ ವೈಜ್ಣಾನಿಕ ಪ್ರಾಯೋಗಿಕತೆಯ ಅರಿವು ಇರಬೇಕಾದುದು ಅವಶ್ಯಕವಾಗಿದೆ. ನಿರ್ವಹಣಾಧಿಕಾರಿಯಿಂದ ಹಿಡಿದು ಸಹಾಯಕ ಕೆಲಸಗಾರರವರೆವಿಗೂ ಕೈ ತುಂಬಾ ಕೆಲಸವಿರುತ್ತದೆ. ಅಧಿಕಾರಶಾಹೀ ದರ್ಪ, ಅಹಂಕಾರಗಳು ನಿರ್ವಹಣಾ ಕಾರ್ಯದಲ್ಲಿ ಕೆಲಸ ಮಾಡಲಾರದು.
ಆಧುನಿಕ ಕೈಗಾರಿಕೆಯು ಅನೇಕ ತಾಂತ್ರಿಕತೆಯ ಸಮ್ಮೇಳನತೆಯ ಸಹಾಯದಿಂದ ಕೆಲಸಕಾರ್ಯಗಳು ನಿರಂತರವಾಗಿ ಚಲನೆಯಲ್ಲಿರುತ್ತದೆ. ನಿರ್ವಹಣಾ ಅಭಯಂತರರು ಅಗಾಗ್ಗೆ ಅನೇಕ ಕಾರ್ಯಕ್ಷೇತ್ರಗಳಲ್ಲಿ ಕೆಲಸಮಾಡಬೇಕಾಗುತ್ತದೆ ಉದಾಹರಣೆ: ಸಿವಿಲ್,ಮೆಕ್ಯಾನಿಕಲ್, ವಿಧ್ಯುನ್ಮಾನ, ಇನ್ಸ್ಟುಮೆಂಟೇಷನ್, ಶೈತ್ಯೀಕರಣ.......ಇತ್ಯಾದಿ. ಹೀಗಾಗಿ ನಿರ್ವಹಣಾ ಅಭಯಂತರರು ಇತರೇ ವೈಜ್ಣಾನಿಕ, ತಾಂತ್ರಿಕ ವಿಷಯಗಳ ಅರಿವು ಹಾಗೂ ಪ್ರಾಯೋಗಿಕತೆಯ ಅವಶ್ಯಕತೆಯಿರುತ್ತದೆ. ಆದುದರಿಂದ ನಿರ್ವಹಣಾ ಅಭಯಂತರ " ಸಕಲ ಕಾರ್ಯಗಳ ಅರಿವು ಹಾಗೂ ಒಂದು ವಿಷಯದಲ್ಲಿ ಪಾಂಡಿತ್ಯ" ವನ್ನು ಪಡೆದಿರಬೇಕಾಗುತ್ತದೆ.
ನಿರ್ವಹಣಾ ಕಾರ್ಯದ ಜೊತೆ ಅತಿ ಹತ್ತಿರದ ಸಂಭಂದವಿರುವುದು ಭದ್ರತೆಗೆ. ಯಂತ್ರಗಳನ್ನು ಸರಿಯಾಗಿ ನಿರ್ವಹಣೆಯ ಗಮನದಲ್ಲಿ ಇರಿಸದಿದ್ದರೆ ಅನೇಕ ಅಪಘಾತಗಳು ಸಂಭವಿಸಬಹುದು. ನಿರ್ವಹಣಾ ಅಭಯಂತರರು ದಿನಂಪ್ರತಿಯ ಸಣ್ಣಸಣ್ಣ ಕೆಲಸಗಳಿಗೆ ಅಚಲವಾದ ಗಮನವನ್ನು ಕೇಂದ್ರೀಕರಿಸಬೇಕು. ಬೇಜವಾಬ್ದಾರಿ ಹಾಗೂ ಕೆಲಸಕಾರ್ಯಗಳಲ್ಲಿ ವಾಮಮಾರ್ಗಗಳನ್ನು ಅನುಸರಿಸುವ ವ್ಯಕ್ತಿಯಿಂದ ನಿರ್ವಹಣಾ ಕೆಲಸಗಳಿಗೆ ಅಡಚಣೆಯುಂಟಾಗಿ ಜೀವ ಹಾಗೂ ಉತ್ಪಾದಕತೆಯಲ್ಲಿ ತೊಂದರೆಯುಂಟಾಗುತ್ತದೆ.
ಆದುದರಿಂದ ನಿರ್ವಹಣಾ ಕೆಲಸವನ್ನು ವೃತ್ತಿಯನ್ನಾಗಿಸಿಕೊಳ್ಳುವ ವ್ಯಕ್ತಿಗಳಿಗೆ ಪ್ರಾಯೋಗಿಕತೆಯ ಅರಿವು, ವೃತ್ತಿಯ ಕಠಿಣತ್ವ ಹಾಗೂ ಇತರ ವಿಷಯಗಳನ್ನು ಮೈಗೂಡಿಸಿಕೊಳ್ಳುವ ನೈತಿಕತೆಯ ಜೊತೆಗೆ ಕೆಲಸ ಕಾರ್ಯಗಳಲ್ಲಿ ಶಿಸ್ತು ಹಾಗೂ ಸಂಯಮದ ಅವಶ್ಯಕತೆ ಹೆಚ್ಚಾಗಿರುತ್ತದೆ. ಮೇಲಿನ ಅಂಶಗಳು ಒಬ್ಬ ಉತ್ತಮ ನಿರ್ವಹಣಾ ಅಭಯಂತರನ ಮುಖ್ಯ ಲಕ್ಷಣಗಳಾಗಿವೆ.
ನಿರ್ವಹಣಾ ವೃತ್ತಿಪರರಿಗೆ ತಮ್ಮ ಕೆಲಸ ಅನನ್ಯವಾದಂತಹ ಸ್ಥಾನವನ್ನು ಕೈಗಾರಿಕಾ ಸಂಸ್ಥೆಗಳಲ್ಲಿ ಒದಗಿಸಿಕೊಟ್ಟಿದೆ. ಬೇರೆ ವೃತ್ತಿಗಳಂತೆ ನಿರ್ವಹಣಾ ಅಭಯಂತರನ ಜ್ಣಾನ, ಪ್ರೌಡಿಮೆ ಒಂದು ಕೈಗಾರಿಕೆಗೆ ಮಾತ್ರ ಮೀಸಲಾಗಿರದೆ ಎಲ್ಲಾ ಕೈಗಾರಿಕಾ ಸಂಸ್ಥೆಗಳಲ್ಲೂ ಕೆಲಸ ಮಾಡುವ ನೈತಿಕತೆಯನ್ನು ಹೊಂದಿರುತ್ತಾರೆ. ಹೀಗಾಗಿ ನಿರ್ವಹಣಾ ಅಭಯಂತರರು ಒಮ್ದು ಕೈಗಾರಿಕೆಯಿಂದ ಮತ್ತೊಂದು ಕೈಗಾರಿಕೆಗೆ ಬಹುಬೇಗನೆ ಹೊಂದಿಕೊಳ್ಳುವವರಾಗಿರುತ್ತಾರೆ. ನಿರ್ವಹಣಾ ಅಭಯಂತರರನ್ನು ಕೈಗಾರಿಕೆಗಳು ಬಹು ಬೇಗನೆ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ನಿರ್ವಹಣಾ ವೃತ್ತಿಯ ಬಾಗುವಿಕೆಯ ಲಕ್ಷಣ ಅನೇಕ ಇತರ ವೃತ್ತಿಪರರು ಮತ್ಸರ ಪಡುವಂತಾಗಿದೆ. ನಿರ್ವಹಣಾ ವೃತ್ತಿಯ ಕಾರ್ಯಕ್ಷೇತ್ರ ಕೆಲಸದ ಅವಕಾಶಗಳು ಈ ಕೆಳಗಿನ ಕ್ಷೇತ್ರಗಳಲ್ಲಿ ಹೆಚ್ಚಾಗಿವೆ. ತಾರೆಯರ ಉಪಹಾರ ಕೇಂದ್ರಗಳು, ವಾಣಿಜ್ಯ ಸಂಕೀರ್ಣಗಳು, ಶಕ್ತಿ ಉತ್ಪಾದನಾ ಸಂಸ್ಥೆಗಳು, ಪೆಟ್ರೋಲಿಯಮ್ ರಾಸಾಯನಿಕ ಉತ್ಪಾದನಾ ಸಂಸ್ಥೆಗಳು, ವಾಹನ ತಯಾರಿಕಾ ಘಟಕಗಳು ಹಾಗೂ ಸಾಮಾನ್ಯ ಕೈಗಾರಿಕಾ ಸಂಸ್ಥೆಗಳು.
ಸಂಸ್ಥೆಯಲ್ಲಿ ಮುನ್ನಡೆ ಹಾಗೂ ಜೀವನದಲ್ಲಿ ಮುನ್ನಡೆ ವ್ಯಕ್ತಿಗತವಾದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಸಂಸ್ಥೆಯ ನೀತಿ-ನಿಯಮಗಳ ಮೇಲೂ ವ್ಯಕ್ತಿಯೋರ್ವನ ಮೇಲೋಭಿವೃದ್ದಿ ಅವಲಂಬಿತವಾಗಿದೆ. ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೋರ್ವನ ಸಾಮರ್ಥ್ಯ ಅಭಿವೃದ್ದಿಯ ಅಳತೆಗೋಲಾಗಿ ಸಂಸ್ಥೆಗಳು ಅಳವಡಿಸಿಕೊಂಡಿವೆ. ಹತ್ತು-ಹನ್ನೆರಡು ವರ್ಷಗಳ ಕಾರ್ಯಾನುಭವ ಸಂಸ್ಥೆಯೊಂದರಲ್ಲಿ ಉಚ್ಚಮಟ್ಟದ ಹುದ್ದೆ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸಬಹುದಾಗಿದೆ.
ಔಷದ ಕಾರ್ಖಾನೆಗಳು ಅದರಲ್ಲೂ ಬಹುರಾಷ್ಟ್ರೀಯ ಸಂಸ್ಥೆಗಳು ವೇತನ ಕೊಡುವಿಕೆಯಲ್ಲಿ ಮೊದಲ ಸ್ಥಾನವನ್ನು ಪೆಟ್ರೋಲಿಯಮ್ ರಸಾಯನಿಕಗಳನ್ನು ತಯಾರಿಸುವವರು ಹಾಗೂ ಮೂರನೆಯ ಸ್ಥಾನದಲ್ಲಿ ರಸಾಯನಿಕಗಳನ್ನು ತಯಾರಿಸುವ ಸಂಸ್ಥೆಗಳಿವೆ.
ಹೆಚ್ಚಿನ ಅವಕಾಶಗಳು ಅದರಲ್ಲೂ ಉತ್ತಮ ಪದವಿಯ ಜೊತೆಗೆ ಅನುಭವ ಹೊಂದಿದ ಅಭಯಂತರರಿಗೆ ಸಲಹಾಕೇಂದ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಅನೇಕ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ಸಲಹಾಕೇಂದ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ- ನಿರ್ವಹಣೆಯ ಬಗ್ಗೆ, ಹೊಸ ಬದಲಾವಣೆಗಳ ವಿಷಯಗಳಲ್ಲಿ ಸಲಹಾಕೇಂದ್ರಗಳ ಮೇಲೆ ಅವಲಂಬಿತರಾಗಿದ್ದಾರೆ. ಓಳ್ಳೆಯ ಜನರ ಪರಿಚಯದಿಂದ ನಿರ್ವಹಣಾ ಕಾರ್ಯ ಲಾಭದಾಯಕ ವೃತ್ತಿಯೆನಿಸಿದೆ. ಮತ್ತೊಂದು ವ್ಯಕ್ತಿಗತವಾದ ಸಂಸ್ಥೆಯೆಂದರೆ ಗುತ್ತಿಗೆ ಆಧಾರದ ಮೇಲೆ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು. ಅನೇಕ ಕಾರ್ಖಾನೆಗಳು, ಸಂಸ್ಥೆಗಳು ಅದರಲ್ಲೂ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ನಿರ್ವಹಣಾ ಕಾರ್ಯದ ಜವಾಬ್ದಾರಿಯನ್ನು ಖಾಸಗೀ ಸಂಸ್ಥೆಗಳಿಗೆ ವಹಿಸುತ್ತಿದೆ. ಸಾರ್ವಜನಿಕ ಉದ್ಯಮಗಳು ಹೆಚ್ಚಾಗಿ ಖಾಸಗೀ ಸಂಸ್ಥೆಗಳಿಗೆ ನಿರ್ವಹಣಾ ಕಾರ್ಯಗಳನ್ನು ವಹಿಸಿಕೊಡುತ್ತಿವೆ. ಮುಮ್ದೆಯೂ ಈ ರೀತಿಯ ಒಲವು ಹೆಚ್ಚಾಗಲಿದೆ.
ನಿರ್ವಹಣಾ ಕಾರ್ಯವು ಬಹುಮುಖ್ಯವಾದ ಕೆಲಸವಾದರೂ ಆಡಳಿತವರ್ಗದವರಿಮ್ದ ತುಚ್ಛವಾಗಿ ಕಾಣಲ್ಪಟ್ಟಿದೆ. ನಿಜ ಹೇಳಬೇಕೆಂದರೆ ನಿರ್ವಹಣಾಕಾರ್ಯವು ಕಡೆಗಣಿಸಲ್ಪಟ್ಟ ಕಾಯಕವಾಗಿದೆ. ನಿರ್ವಹಣಾ ವೃತ್ತಿಪರರ ಪ್ರಾಮುಖ್ಯತೆಯನ್ನು ಪ್ರಖ್ಯಾತ ಸಂಸ್ಥೆಗಳೂ ಕಡೆಗಣಿಸಿವೆ. ಪ್ರಸ್ತುತ ಕಡೆಗಣಿಸಿದ ಭಾವನೆ ಕ್ಷೀಣಿಸುತ್ತಿದೆಯಾದರೂ ಒಂದು ಒಳ್ಳೆಯ ಸ್ಥಾನಮಾನ ಸಿಗಲು ಬಹಳ ಕಾಲದ ಅವಶ್ಯಕತೆ ಹಾಗೂ ಆಡಳಿತವರ್ಗಗಳ ದೃಷ್ಟಿಕೋನ ಬದಲಾಗ ಬೇಕು.
ನಿರ್ವಹಣಾ ವೃತ್ತಿಪರರು ಅಪಘಾತಗಳಿಗೆ ತೀರ ಹತ್ತಿರವಿರುತ್ತಾರೆ, ಹೀಗಾಗಿ ಸಣ್ಣ-ಪುಟ್ಟ ಅಪಘಾತಗಳು ಘಟಿಸುತ್ತಿರುತ್ತವೆ. ವಿಷಯುಕ್ತ ಅನಿಲ, ಬೆಂಕಿ, ಹಾಗೂ ಆಮ್ಲ.... ಇತ್ಯಾದಿ ಗಳನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕು. ಎಚ್ಚರ ತಪ್ಪಿದಲ್ಲಿ ಕರಾಳ ಅಪಘಾತಗಳು ಸಂಭವಿಸಿ ವ್ಯಕ್ತಿಯ ಜೀವಕ್ಕೆ ಅಪಾಯವುಂಟಾಗಬಹುದು ಹಾಗೂ ಆಸ್ತಿ-ಪಾಸ್ತಿಯ ನಷ್ಟವೂ ಸಂಭವಿಸಬಹುದು. ಕಾರ್ಖಾನೆಗಳಲ್ಲಿ ಯಂತ್ರಗಳು ಚಲಿಸುವಾಗ ಶಬ್ದವು ಉಂಟಾಗಿ ಶಬ್ದಮಾಲಿನ್ಯದಿಂದ ಕಿವುಡುತನ ಬರುವ ಸಂಭವವೂ ಹೆಚ್ಚು. ವಿಷಯುಕ್ತ ಅನಿಲ,ಧೂಳು ಹಾಗೂ ಪರಿಸರ ಮಾಲಿನ್ಯದಿಂದ ಶ್ವಾಸಕೋಶಕ್ಕೆ ಸಂಭಂದಿಸಿದ ಕಾಯಿಲೆಗಳು ಬರುವ ಸಂಭವಗಳು ಹೆಚ್ಚು.
ನವನವೀನ ಕಾರ್ಯತಂತ್ರಗಳು, ತಾಂತ್ರಿಕತೆಯಿಂದ ಹಳೆಯ ಕಾರ್ಯತಂತ್ರಗಳು ಬೆಲೆಯನ್ನು ಕಳೆದುಕೊಂಡು ನಿರ್ವಹಣಾ ಕಾರ್ಯಕ್ಕೆ ಪ್ರಾಮುಖ್ಯತೆ ತಂದುಕೊಡುತ್ತಿದೆ. ಹೆಚ್ಚುತ್ತಿರುವ ತಾಂತ್ರಿಕತೆಯಿಂದಾಗಿ ಕಾರ್ಖಾನೆಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ನಿರ್ವಹಣಾ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರಸ್ತುತ ಜಾಗತೀಕರಣದಿಂದಾಗಿ ನಿರ್ವಹಣಾಕಾರ್ಯದ ಬಗ್ಗೆ ಇದ್ದ ಹಳೆಯ ಧೋರಣೆ ಆಡಳಿತವರ್ಗಗಳಲ್ಲಿ ಕಡಿಮೆಯಾಗುತ್ತಿದೆ. ನಿರ್ವಹಣಾ ವೃತ್ತಿಪರರು ಹೊಸ ಹೊಸ ಕಾರ್ಯತಂತ್ರಗಳನ್ನು, ವಿಧಾನಗಳನ್ನು ಕಲಿಯುವ ಹಂಬಲವುಳ್ಳವರಾಗಿರಬೇಕಾದುದು ಪ್ರಸ್ತುತ ಕಾಲದ ಬೇಡಿಕೆಯಾಗಿದೆ. ಹೊಸದಾಗಿ ನಿರ್ವಹಣಾ ಕಾರ್ಯವನ್ನು ವೃತ್ತಿಯನ್ನಾಗಿ ಸ್ಚೀಕರಿಸುವವರಿಗೆ ಇಂದು ಕಾಲಸೂಕ್ತವಾಗಿದೆ ಏಕೆಂದರೆ ಹೊಸ ಹೊಸ ಸಂಸ್ಥೆಗಳು ಭಾರತಕ್ಕೆ ಕಾಲಿಡುತ್ತಿದ್ದು ವಾಹನ ತಯಾರಿಕಾ ಘಟಕಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಸುರಕ್ಷಿತ ಸಾದನಗಳನ್ನು, ಕಾರ್ಯವಿದಾನಗಳನ್ನು ಅಳವಡಿಸಿಕೊಳ್ಳುವುದರಿಂದ ಅಪಘಾತಗಳು ಕಡಿಮೆಯಾಗಿ ವ್ಯಕ್ತಿ ಆರೋಗ್ಯದಲ್ಲೂ ಸುಧಾರಣೆಯನ್ನು ಕಾಣಬಹುದಾಗಿದೆ. ನವೀನ ತಾಂತ್ರಿಕತೆಯಲ್ಲಿ ಭದ್ರತೆಗೆ ಹೆಚ್ಚಿನ ಗಮನವನ್ನು ಕೊಡಲಾಗಿದೆ. ನವೀನ ಭದ್ರತಾ ತಾಂತ್ರಿಕತೆಯಿಂದಾಗಿ ಕಾರ್ಖಾನೆಗಳಲ್ಲಿ ಕೆಲಸಮಾಡುವವರಿಗೆ ನಿರಾಳತೆಯಿದೆ. ಹೊಸ ತಾಂತ್ರಿಕತೆ, ವಿಧಿ-ವಿಧಾನಗಳು ಸುರಕ್ಷಿತ ಕೆಲಸದ ಪರಿಸರವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುವತ್ತ ಧಾಪುಗಾಲಿಡುತ್ತಿದೆ.

ನಾಗೇಂದ್ರ ಕುಮಾರ್ ಕೆ. ಎಸ್.

ಜ್ಘ್ಯಾನವೆಂದರೆ ಯಾವುದು?

ಕೆಲಸ ಮಾಡುವಾಗ, ರಾಮನ್ ಹಾಗು ನಾರಾಯಣ ಹರಟೆಹೊಡೆಯುತ್ತಿದ್ದರು.
ರಾಮನ್: ನಾರಾಯಣ್ ನಾನು ಕಳೆದ ೫ ತಿಂಗಳಿಂದ ರಾತ್ರಿ ತರಗತಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನಗೆ ಪರೀಕ್ಷೆಯಿದೆ.
ನಾರಾಯಣ: ಒಹ್! ಹೌದಾ!
ರಾಮನ್: ಉದಾಹರಣೆಗೆ, ನಿನಗೆ ಗ್ರಾಹಾಂಬೆಲ್ ಯಾರೆಂದು ತಿಳಿದಿದೆಯೇ?
ನಾರಾಯಣ: ಗೊತ್ತಿಲ್ಲ.
ರಾಮನ್: ಗ್ರಾಹಾಂಬೆಲ್ ದೂರವಾಣೆಯನ್ನು ೧೮೭೬ರಲ್ಲಿ ಕಂಡುಹಿಡಿದ ಅನ್ವೇಷಕ, ನೀನು ರಾತ್ರಿ ತರಗತಿಗೆ ಬಂದರೆ ನಿನಗೂ ತಿಳಿಯುತ್ತದೆ.


ಮಾರನೇ ದಿನ, ಮತ್ತೇ ಅದೇ ವಿಚಾರದ ಬಗ್ಗೆ ಅವರ ನಡುವೆ ಮಾತುಕತೆಯಾಯಿತು.
ರಾಮನ್: ನಿನಗೆ ಅಲೆಗ್ಸಾಂಡರ್ ಡುಮಾಸ್ ಯಾರೆಂದು ತಿಳಿದಿದೆಯೇ?
ನಾರಾಯಣ: ಗೊತ್ತಿಲ್ಲ.
ರಾಮನ್: ಅವನು ’ದಿ ೩ ಮಸ್ಕಿಟೀಯರ್ಸ್" ಪುಸ್ತಕ ಬರೆದವನು,ನೀನು ರಾತ್ರಿ ತರಗತಿಗೆ ಬಂದರೆ ನಿನಗೂ ತಿಳಿಯುತ್ತದೆ.


ಮಾರನೇ ದಿವಸ ಅದೇ ಚರ್ಚೆಯಾಯಿತು
ರಾಮನ್: ನಿನಗೆ ಜೀನ್ ಜಾಕಸ್ ರೋಸೈ ಯಾರೆಂದು ತಿಳಿದಿದೆಯೇ?
ನಾರಾಯಣ: ಗೊತ್ತಿಲ್ಲ.
ರಾಮನ್: ಅವನು ’ಕನ್‌ಪ್ಫೆಶನ್ಸ್" ಪುಸ್ತಕ ಬರೆದವನು,ನೀನು ರಾತ್ರಿ ತರಗತಿಗೆ ಬಂದರೆ ನಿನಗೂ ತಿಳಿಯುತ್ತದೆ.
ಈ ಬಾರಿ ನಾರಾಯಣ್ ಗೆ ತುಂಬಾ ಸಿಟ್ಟು ಬಂತು ಹಾಗು ಅವನು ರಾಮನ್ ಗೆ ಪ್ರಶ್ನೆ ಕೇಳಿದ: ನಿನಗೆ ಬಾಲಕೃಷ್ಣ ಕುಪ್ಪುಸ್ವಾಮಿ ಯಾರೆಂದು ತಿಳಿದಿದೆಯೇ?
ರಾಮನ್: ಗೊತ್ತಿಲ್ಲ.
ನಾರಾಯಣ್: ಅವನು ನಿನ್ನ ಹೆಂಡತಿಯೊಂದಿಗೆ ತಿರುಗುತ್ತಿರುವವನು, ನೀನು ರಾತ್ರಿ ತರಗತಿಗೆ ಹೋಗುವುದನ್ನು ನಿಲ್ಲಿಸಿದರೆ ನಿನಗೆ ಇದು ತಿಳಿಯುತ್ತದೆ.

ಸೋಮವಾರ, ಸೆಪ್ಟೆಂಬರ್ 20, 2010

ಸಾಂಸ್ಕೃತಿಕ ಸ್ಪರ್ಧೆಗಳ ವರದಿ


ಸುಂದರ ವೇದಿಕೆ, ಮನಕ್ಕೊಪ್ಪುವ ಶೃಂಗಾರ, ನಗುವ ಹೊಮ್ಮುವ ಮಾತುಗಳು, ಸಾಗರದಂತೆ ಸೇರಿದ ಜನಸಮೂಹ, ಅಲ್ಲಲ್ಲಿ ತೇಲಿಬರುವ ಮಾತುಗಳು, ಮುಂಗಾರು ಮಳೆಯಂತೆ ಹಿತವಾಗಿ ಮನಸೂರೆಗೊಳ್ಳುವ ಸ್ನೇಹಿತರ ಅಕ್ಕರೆಯ ಮಾತುಗಳು. ಇದೇನು ಯಾವುದೋ ಸಿನಿಮಾ ಚಿತ್ರಮಂದಿರದಲ್ಲಿ ಕೇಳಿ ಬರುವಂತಹ ಮಾತುಗಳಿವು ಎಂದುಕೊಂಡಿರಾ? ಹೀಗೆ ಅಲ್ಲಿ ಏನಿದೆಲ್ಲ ಎಂದು ಯೋಚಿಸುವುದಕ್ಕೆ ಯಾರಿಗಾದರೋ ಬಿಡುವಿದ್ದರೆ ತಾನೆ!. ಹಾಮ್! ನಾನು ಹೇಳಕ್ಕೆ ಹೊರಟಿರುವುದು ನಮ್ಮ ಸಂಸ್ಥೆಯ "ಸಾಂಸ್ಕೃತಿಕ ದಿನಾಚರಣೆ"ಯ ಅಂಗವಾಗಿ ನಡೆದ ಕಾರ್ಯಕ್ರಮಗಳ ಬಗ್ಗೆ. ಹೌದು ನೋಡಿ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದ ಕ್ಷಣ " ಏನೋ ಒಂಥರಾ " ಹುಡುಗಾಟದ ಖುಷಿಯಾಗುತ್ತೆ.
ಪ್ರಹಸನವೆಂದ ಕೂಡಲೇ ನಮಗೆ ಜ್ಞಾಪಕ ಬರುವುದು ಡಿ.ವಿ.ಜಿ ಯವರ
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ!
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ, ನಗಿಸುತ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ- ಮಂಕುತಿಮ್ಮ
ಇಂತಹ ಮುತ್ತಿನಂತಹ ಮಾತು ನೆನಪಿಗೆ ಬರದೆ ಇರಲು ಸಾಧ್ಯವೇ? ಜೀವನದ ಯಾಂತ್ರಿಕ ಬದುಕು ಬೇಸರ ತಂದು ಜೀವನ ಏತಕ್ಕೆ? ಎಂಬ ಜಿಗುಪ್ಸೆಯನ್ನು ನೀಗಲು ಇಂತಹ ಕಾರ್ಯಕ್ರಮಗಳ ಅಗತ್ಯ ಇಂದು ಎದ್ದು ಕಾಣುತ್ತಿದೆ.
ದಿ೨೯.೦೭.೨೦೦೭ ರ ಸುಂದರ ಸಂಜೆ ಕೆ.ಟಿ.ಟಿ.ಎಮ್. ಸಹೋದ್ಯೋಗಿಗಳು ರಂಜಿಸಲು ತಯಾರಾಗಿಯೇ ಬಂದಿದ್ದರು. ನಿರೂಪಕರಾಗಿ ಶ್ರೀ. ಸುರೇಶ್ ಜೋಷಿ ಹಾಗೂ ಕು ಲೋಕೇಶ್ವರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಮಾತುಮಾತಿನ ನಡುವೆ ತೇಲಿ ಬರುತ್ತಿದ್ದ ಹಾಸ್ಯ ಚಟಾಕಿಗಳು ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿತ್ತು. ಇನ್ನೂ ನೆನಪಿದೆ. ಮನೆಯಲ್ಲೂ ’ಗದಗ’ದ "ಧಗಧಗ" ಊಟ ನೆನಪಿಗೆ ಬಂದು ನಕ್ಕಿದಿದೆ.
ಅಂದು ಸಮಯಕ್ಕೆ ಸರಿಯಾಗಿ ಬಸ್ಸುಗಳು ತಲುಪಿ, ಜಯನಗರದ ಹೆಚ್.ಎನ್. ಕಲಾಕ್ಷೇತ್ರದಲ್ಲಿ ಸಂಜೆ ೪.೦೦ ಕ್ಕೆ ಸರಿಯಾಗಿ ಕಾರ್ಯಕ್ರಮಗಳು ಆರಂಭಗೊಂಡವು. ಕಾರ್ಯಕ್ರಮವು ಶ್ರೀ. ನರಸಿಂಹರವರ ಕಂಠಸಿರಿಯಲ್ಲಿ ಮೂಡಿಬಂದ ದೇವರನಾಮದಿಂದ ಮೊದಲುಗೊಂಡು ಆನಂತರ ಸಂಸ್ಥೆಯ ಮುಖ್ಯಸ್ಥರನ್ನು ಸ್ವಾಗತಿಸಿ, ಸಂಜೆಯ ಮೊದಲ ಸ್ಪರ್ಧೆ "ಪ್ರಹಸನ"ದ ಮೂಲಕ ಶುರುವಿಟ್ಟುಕೊಂಡಿತು. "ಪ್ರಹಸನ" ಸ್ಪರ್ಧೆಯಲ್ಲಿ ಸುಮಾರು ೬ ತಂಡಗಳು ಸಭಿಕರನ್ನು ಮೋಡಿಮಾಡಲು ತಯಾರಾಗಿ ಬಂದಿದ್ದವು. ಮೊದಲನೆಯದಾಗಿ ಶ್ರೀ. ಪೂಜಾರ್‌ರವರ ತಂಡ ನಡೆಸಿಕೊಟ್ಟ "ಮೂರುಜನ ಖೈದಿಗಳ" ಪ್ರಹಸನ ಪ್ರಸ್ತುತ ರಾಜಕೀಯ ಹಾಗು ಸರ್ಕಾರಾಧಿಕಾರಿಗಳ ಲಂಚಗುಳಿತನದ ಕೆಟ್ಟಚಾಳಿಯನ್ನು ಕಣ್ಣಮುಂದೆ ತೆರೆದಿಟ್ಟು ಸಭಿಕರನ್ನು ನಗೆಯ ಸಾಗರದಲ್ಲಿ ತೇಲಿಸಿತ್ತು.
ಎರಡನೆಯದಾಗಿ ಬಂದ ಶ್ರೀ. ವಿಜಯಕುಮಾರ್ ಮತ್ತು ತಂಡದವರ ಹಾಸ್ಯ ಮಿಶ್ರಿತ ರಾಮಾಯಣ ಪೌರಾಣಿಕ ನಾಟಕ ಸಬಿಕರನ್ನು ನಗೆಗಡಲಿನಲ್ಲಿ ತೇಲಿಸಿತು.
ಮೂರನೆಯ ತಂಡವಾಗಿ ಶ್ರೀ. ನಾಗೇಂದ್ರ ಕುಮಾರ್ ಮತ್ತು ಗೆಳೆಯರ ಮೂಕಾಭಿನಯದ ಪ್ರಹಸನ ಚೆನ್ನಾಗಿ ಮೂಡಿಬಂತು.
ಹವ್ಯಾಸ ಬದಲಿಸು- ಹಣೆಬರಹ ಬದಲಾದೀತು
ದೃಷ್ಟಿ ಬದಲಿಸು- ದೃಶ್ಯ ಬದಲಾದೀತು
ಹಡುಗು ಬದಲಿಸಬೇಕಿಲ್ಲ, ದಿಕ್ಕು ಬದಲಿಸಿದರೆ ಸಾಕು ದಡ ಸಿಕ್ಕೀತು"
ಎನ್ನುವ ನುಡಿಯಂತೆ ಜನರು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡರೆ ಸಾಕು, ಸಮಾಜಕ್ಕೆ ಸಾಕಷ್ತು ಅನುಕೂಲಗಳನ್ನು ಮಾಡಬಹುದು. ಸಾಮಾನ್ಯ ಜನ ತಮ್ಮ ದೈನಂದಿನ ನಡೆಗಳಲ್ಲಿ ಪರಿಸರಕ್ಕೆ ಸಾಕಷ್ಟು ಹಾನಿಯಾಗುವಂತೆ ನಡೆದುಕೊಳ್ಳುತ್ತಾರೆ. ತಾವು ಆರೋಗ್ಯವಾಗಿದ್ದಾಗ ಬೇರೆಯವರ ಮಾತುಗಳಿಗೆ ಬೆಲೆ ಕೊಡುವುದಿಲ್ಲ. ಅದೇ ತಮಗೆ ತೊಂದರೆಯಾದಾಗ ತಮ್ಮ ತಪ್ಪಿನ ತಿಳುವಳಿಕೆ ಬೇಗ ಆಗುತ್ತದೆ ಎನ್ನುವ ನೀತಿಯುಕ್ತ "ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಾಗು ಆರೋಗ್ಯವೇ ಭಾಗ್ಯ ಎಂಬ ಪ್ರಹಸನ" ಮನಮುಟ್ಟುವಂತೆ ಪ್ರದರ್ಶಿಸಲ್ಪಟ್ಟಿತ್ತು.
ಆನಂತರ ಪ್ರದರ್ಶನಗೊಂಡ "ಭೂಮಿಗೆ ಬಂದ ಭಗವಂತ" ಶ್ರೀ. ಸಂತೋಷ್ ಮತ್ತು ತಂಡದವರು ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.
ಪ್ರಹಸನ ಮುಗಿದ ನಂತರ ನೃತ್ಯ-ಡ್ಯಾನ್ಸ್ ಕಾರ್ಯಕ್ರಮ ಎಲ್ಲರನ್ನೂ ಮೈಮರೆಯುವಂತೆ ಮಾಡಿತು. ಹೊಸತು- ಹಳತು ಸಮ್ಮಿಳಿತಗೊಂಡ ನೃತ್ಯ ಸಭಿಕರ ಮನಸ್ಸನ್ನು ಸೂರೆಗೊಂಡಿತು. ಶ್ರೀ. ರವಿಕುಮಾರ್ ತಂಡದ ’ಮುಮ್ಗಾರು ಮಳೆ’ ಚಲನಚಿತ್ರ ದ "ಒಂದೇ ಒಂದೇ ಸಾರಿ, ಕಣ್ಮುಂದೆ ಬಾರೇ", ’ಪಲ್ಲಕ್ಕಿ’ ಚಲನಚಿತ್ರದ "ಕಣ್ಣಲೂ ನೀನೇನೆ . . .", ಹಿಂದಿ ಚಲನಚಿತ್ರದ " " ಮನಸೂರೆಗೊಂಡವು. ಶ್ರೀ. ವಿಜಯ ಕುಮಾರ್ ಮತ್ತು ತಂಡದ " ಗುರು ಶಿಷ್ಯರು" ಚಲನಚಿತ್ರದ "ದೊಡ್ಡೋರೆಲ್ಲಾ ಜಾಣರಲ್ಲ, ಚಿಕ್ಕೋರೆಲ್ಲಾ ಕೋಣರಲ್ಲ" ಸಭಿಕರ ಮೆಚ್ಚುಗೆ ಗಳಿಸಿ ಪ್ರಥಮ ಸ್ಥಾನ ಪಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಪುಷ್ಕಳವಾದ ಊಟದ ವ್ಯವಸ್ಥೆಯಿತ್ತು. ಊಟದ ನಂತರ ಸಂಸ್ಥೆಯ ಎಲ್ಲ ಸದಸ್ಯರು, ಆ ಸಂಜೆಯ ಸವಿಘಳಿಗೆಗಳನ್ನೇ ಮೆಲುಕುಹಾಕುತ್ತಾ ಮರಳಿ ಮನೆಯೆಡೆಗೆ ಸಾಗಿದರು.
ವರದಿ : ನಾಗೆಂದ್ರ ಕುಮಾರ್

-ನಮ್ಮ ಮೌಲ್ಯ-

ಒಬ್ಬ ಪ್ರಖ್ಯಾತ ಉಪನ್ಯಾಸಕರಿಂದ ಒಂದು ಸಂಜೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಉಪನ್ಯಾಸಕಾರು ತಮ್ಮ ಉಪನ್ಯಾಸವನ್ನು ಕೈಯಲ್ಲಿ ರೂ.೫೦೦ ರ ನೋಟನ್ನು ಹಿಡಿದು ಆರಂಭಿಸಿದರು. ಆ ಸಭಾಂಗಣದಲ್ಲಿ ಸುಮಾರು ೨೦೦ ಜನರಿಗೆ ಆ ನೋಟನ್ನು ತೋರಿಸುತ್ತಾ ಕೇಳಿದರು " ಯಾರಿಗೆ ಬೇಕು ಈ ರೂ. ೫೦೦ ರ ನೋಟು?" ಎಂದು. ಅವರು ಹಾಗೆ ಪ್ರಶ್ನಿಸುತ್ತಿದ್ದಂತೆ ಎಲ್ಲರ ಕೈಗಳು ಮೇಲೇರ ತೊಡಗಿತು ಅದಕ್ಕುತ್ತರವಾಗಿ ಅವರು " ನಿಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ನಾನು ಈ ನೋಟನ್ನು ಕೊಟ್ಟೇ ಕೊಡುತ್ತೇನೆ ಮೊದಲು ನಾನು ಮಾಡುವುದನ್ನು ನೀವು ನೋಡಿ". ಅವರು ತನ್ನ ಕೈಯಲ್ಲಿದ್ದ ನೋಟನ್ನು ಹಿಂಡಿ ಹಿಪ್ಪೆಮಾಡಿದರು ಹಾಗು ಅದನ್ನು ಕೈಗೆ ತೆಗೆದುಕೊಳ್ಳುತ್ತಾ " ಈಗ ಹೇಳಿ ಈ ನೋಟು ಯಾರಿಗೆ ಬೇಕು" ಎಂದರು. ಮತ್ತೆ ಎಲ್ಲರ ಕೈಗಳೂ ಮೇಲೇರತೊಡಗಿತು. " ಸಂತೋಷ " ಎಂದು ಹೇಳಿ " ಈಗ ಹೇಳಿ ಯಾರಿಗೆ ಬೇಕು ನಾನು ಹೀಗೆ ಮಾಡಿದರೆ" ಎಂದು ಹೇಳಿ ನೋಟನ್ನು ನೆಲಕೆ ಹಾಕಿ ಕಾಲಿನಿಂದ ಚೆನ್ನಾಗಿ ತುಳಿದು ತೊಪ್ಪೆಮಾಡಿ ಕೈಗೆತ್ತಿಕೊಂಡರು, ನೋಟು ಗಲೀಜಾಗಿ ನೋಡಲು ಅಸಹ್ಯವಾಗುತ್ತಿತು. "ಈಗ ಹೇಳಿ ಯಾರಿಗೆ ಬೇಕು" ಎಂದರು. ಮತ್ತೆ ಎಲ್ಲರ ಕೈ ಮೇಲೇರತೊಡಗಿತು. " ಆತ್ಮೀಯ ಗೆಳೆಯರೆ ಈಗ ತಾನೇ ನೀವೊಂದು ಜೀವನದ ಅಮೂಲ್ಯವಾದ ಪಾಠವನ್ನು ಕಲಿತಿರಿ, ನಾನು ಹಣಕ್ಕೆ ಏನೇ ಮಾಡಿದರೂ ನೀವು ಅದು ಬೇಕೆಂದೇ ಹೇಳಿದಿರಿ. ನಾನು ಹಣಕ್ಕೆ ಏನು ಮಾಡಿದರೂ ಹಣದ ಮೌಲ್ಯ ಮಾತ್ರ ಕಡಿಮೆಯಾಗಲಿಲ್ಲ, ಈಗಲೂ ಅದರ ಮೌಲ್ಯ ರೂ ೫೦೦ ರೇ ಆಗಿದೆ. ಕೆಲವು ಸಮಯದಲ್ಲಿ ನಮ್ಮ ಪರಿಸ್ಥಿತಿಗಳು, ನಾವು ತೆಗೆದುಕೊಳ್ಳುವ ತೀರ್ಮಾನಗಳು, ನಮ್ಮನ್ನು ಜೀವನದಲ್ಲಿ ಕುಗ್ಗಿ ಹೋಗುವಂತೆ, ಮತ್ತೆ ಏಳಲಾಗದಂತೆ ಮಾಡುತ್ತದೆ. ನಮಗೇ ನಾವೇ ಅಂದುಕೊಳ್ಳುತ್ತೇವೆ ನಾವು ನಿಷ್ಪ್ರಯೋಜಕರು, ಕಸಕ್ಕಿಂತ ಕಡೆ, ನಮಗೆ ಬೆಲೆಯಿಲ್ಲ" ಎಂದು " ಆದರೆ ನಾವು ಏನೇ ಆಗಿದ್ದರೂ ನಮ್ಮ ಬೆಲೆಯನ್ನು ಎಂದೂ ನಾವು ಕಳೆದುಕೊಳ್ಳುವುದಿಲ್ಲ". " ನಿಮ್ಮ ವ್ಯಕ್ತಿತ್ವ ಅನನ್ಯವಾದುದು, ನೀವು ಬೇರೆಯವರಿಗಿಂತ ಬಿನ್ನವೆಂಬುದನ್ನು ಮರೆಯ ಬೇಡಿ ‘ನಾಳೆಯ ಕನಸಿನ ಮೇಲೆ ಇಂದಿನ ನಿರಾಶೆಯ ಕರಿನೆರಳು ಬೀಳದಂತೆ ನೋಡಿಕೊಳ್ಳಿ’.ಹಳೆಯ ವರುಷದ ನೋವುಗಳನ್ನು ಇಂದಿಗೇ ಕೊನೆಗೊಳಿಸಿ ಮಧುರ ನೆನೆಹುಗಳನ್ನು ಬರುವ ವರುಷಕ್ಕೆ ಕೊಂಡೊಯ್ಯಿರಿ. ಹೊಸ ವರುಷವನ್ನು ಹೊಸ ಕನಸು ಹಾಗು ಆಕಾಂಕ್ಷೆಗಳೊಂದಿಗೆ ಆರಂಭಿಸಿ, ನಿಮಗೆಲ್ಲರಿಗೂ ಶುಭವಾಗಲಿ" ಎಂದು ತಮ್ಮ ಉಪನ್ಯಾಸವನ್ನು ಮುಗಿಸಿದರು.
ಇಷ್ಟೊಂದೆಲ್ಲಾ ಏಕೆ ಹೇಳಬೇಕಾಯಿತೆಂದರೆ,ಪ್ರಸ್ತುತ ಆರ್ಥಿಕ ಹಿಂಜರಿತದಿಂದ ನಾವು ಹಾಗು ನಮ್ಮನ್ನು ಸಲಹುತ್ತಿರುವ ಸಂಸ್ಥೆಗಳು ಕಂಗೆಡುತ್ತಿವೆ, ಎಲ್ಲೆಡೆಯಲ್ಲೂ ನಿರಾಶೆಯ ಕರಿನೆರಳು ಹಬ್ಬುತ್ತಿದೆ, ಜೀವನ ದುಸ್ತರವೆನಿಸುತ್ತಿದೆ. ಇಂತಹ ಪರಿಸ್ಥಿತಿ ಶಾಶ್ವತವಲ್ಲವೆಂಬುದು ತಿಳಿದಿರಲಿ. ಕಷ್ಟದ ಪರಿಸ್ಥಿತಿ ಹೊಸ ಹೊಸ ಅವಕಾಶಗಳ ಹೆದ್ದಾರಿಯನ್ನು ತೆರೆಯುತ್ತದೆ, ಮಾನಸಿಕ ಸಿದ್ದತೆಗೆ ಇದೇ ಪ್ರಶಸ್ತಕಾಲ ಬನ್ನಿ ಕಷ್ಟಕಾಲದಲ್ಲಿ ಬೆಂದು ಹದವಾಗಿ ಅನುಭವ ಅಮೃತವ ಸವಿಯೋಣ, ನಾಳೆಯೆಂಬ ಅಮೃತಗಳಿಗೆಯ ಸ್ವಾಗತಿಸಲು ಇಂದೇ ಸಿದ್ದರಾಗೋಣ.

ಭಾನುವಾರ, ಸೆಪ್ಟೆಂಬರ್ 19, 2010

ವಿಶ್ವ ಪರಿಸರ ದಿನ-೨೦೧೦

ಜೂನ್ ೫, ಮತ್ತೊಮ್ಮೆ ಬಂದಿದೆ!, ಏನು ವಿಶೇಷ? ಅಂತ ಯೋಚನೆ ಮಾಡ್ತಾಯಿದ್ದೀರ? ಜೂನ್ ೫ "ವಿಶ್ವ ಪರಿಸರ ದಿನ". ನಮ್ಮ ರಕ್ಷಣೆಗೆ, ಪಾಲನೆಗೆ,ಪೋಷಣೆಗೆ ತನ್ನದೆಲ್ಲವನ್ನೂ ಮುಕ್ತವಾಗಿ ನೀಡಿದ ಪರಿಸರ ಇಂದು ಬೆತ್ತಲಾಗಿದೆ. ನಮ್ಮನ್ನು ಸಲಹಿದ ಪರಿಣಾಮವಾಗಿ, ಇಂದು ತನಗೇ ನೆಲೆಯಿಲ್ಲದಂತಾಗಿದೆ ಹಾಗು ಪರಿಸ್ಥಿತಿ ಶೋಚನೀಯವಾಗಿದೆ. ನಮ್ಮ ಪರಿಸರದ ಪುನರುತ್ಥಾನಕ್ಕೆ ನಾವು ಏನು ಮಾಡಬೇಕೆಂಬುದರ ಬಗ್ಗೆ ಚಿಂತನ-ಮಂಥನ ನಡೆಸಿ ಸರಿದಾರಿಯಲ್ಲಿ ಪರಿಸರ ಸಂರಕ್ಷಿಸುವ ಕಾರ್ಯ ಈ ಕ್ಷಣದ ಅವಶ್ಯಕತೆಯಾಗಿದೆ.ಜಾಗತೀಕವಾಗಿ ಏರುತ್ತಿರುವ ತಾಪಮಾನ,ಇಳಿಮುಖವಾಗುತ್ತಿರುವ ಮಳೆ, ಏರುತ್ತಿರುವ ವಾಯು,ಜಲ, ನೆಲ ಮಾಲಿನ್ಯ ಮತ್ತು ಇಳಿಮುಖವಾಗುತ್ತಿರುವ ಶುದ್ಧ ನೀರು,ಗಾಳಿ, ಆಹಾರ ಪದಾರ್ಥಗಳು ಪ್ರತಿಯೊಂದು ದೇಶವನ್ನು ಚಿಂತೆಗೀಡು ಮಾಡಿದೆ. ಮಾನವ ತನ್ನ ನೆಲೆಯನ್ನು ತಾನೇ ನಾಶಮಾಡಿಕೊಳ್ಳುತ್ತಿದ್ದಾನೆ. ಅತಿಯಾದ ಕೈಗಾರೀಕರಣ, ನಗರೀಕರಣದ ಜೊತೆಗೆ ಮಾನವನ ಅತಿಯಾದ ಸ್ವಾರ್ಥ ಹಾಗು ಪರಿಸರದ ಬಗ್ಗೆ ತಳೆದಿರುವ ನಕಾರಾತ್ಮಕ ಧೋರಣೆ, ಇಂದು ಪ್ರಪಂಚಾದ್ಯಂತ ಎಲ್ಲಾ ದೇಶಗಳನ್ನು ಬಡಿದೆಬ್ಬಿಸಿದೆ. ನಾಗರೀಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೊಡಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಜನಸಾಮಾನ್ಯರಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸಿ ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯಗೊಳ್ಳುವುದನ್ನು ತಡೆಗಟ್ಟಿ, ಮುಂದಿನ ಪೀಳಿಗೆಗೆ ನೆಮ್ಮದಿಯ ಬದುಕು ಕಟ್ಟಿಕೊಡುವ ಪ್ರಯತ್ನದ ಸಾಂಕೇತಿಕವಾಗಿ ಪ್ರತಿವರ್ಷ ಜೂನ್ ೫ ರಂದು "ವಿಶ್ವ ಪರಿಸರ ದಿನ" ವೆಂದು ಪ್ರಪಂಚಾದ್ಯಂತ ಆಚರಿಸಲಾಗುವುದು (ವಿಶ್ವ ಪರಿಸರ ದಿನ ಮೊದಲ ಬಾರಿ ಜೂನ್ ೫, ೧೯೭೩ ರಂದು ಆಚರಿಸಲಾಯಿತು).
ಪರಿಸರದ ಮಡಿಲಲ್ಲಿ ನಾವು:
>ನಮ್ಮ ಪರಿಸರ ನಮಗೇನು ಕೊಟ್ಟಿಲ್ಲ ಹೇಳಿ! ಸುಂದರ ಬದುಕು,ಕನಸು,ಕಷ್ಟಗಳನ್ನು ಎದುರಿಸುವ ಶಕ್ತಿ,
ಬಂಧು-ಬಾಂಧವರು, ಕೋಟ್ಯಾಂತರ ಜೀವ-ವೈವಿಧ್ಯಗಳಿಗೆ ತವರುಮನೆ-ಭೂಮಿ, ಭೂಮಿ ನಮ್ಮೆಲ್ಲರ ತಾಯಿ.
>ಪ್ರಕೃತಿಯ ಸೌಂದರ್ಯ ಸವಿಯಲು ನೂರು ಜನ್ಮ ಸಾಲದು,ಕವಿಯಾಗಿ ಪ್ರಕೃತಿಯ ಗುಣಗಾನ ಮಾಡುವ ಕವಿಗಳಿದ್ದಾರೆ ಇಲ್ಲಿ.ಪ್ರಕೃತಿ ತನ್ನೊಳಡಗಿಸಿಕೊಂಡಿರುವ ಸಾವಿರಾರು ರಹಸ್ಯಗಳನ್ನು ಭೇದಿಸಲು ಸಾವಿರಾರು ವಿಜ್ನಾನಿಗಳು ಸಂಶೋಧನೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿದ್ದಾರೆ.
>ದಟ್ಟವಾದ ಕಾನನಗಳು,ಪಾತಾಳದ ಕಣಿವೆಗಳು,ಧೈರ್ಯವಿದ್ದರೆ ನನ್ನನ್ನೇರು ಎಂದು ಕೈಬೀಸಿ ಕರೆಯುವ ಪರ್ವತ ಶ್ರೇಣಿಗಳು,ರಸಿಕರಿಗೆ ಹಾಗು ಚಾರಣಿಗರಿಗೆ ಸವಾಲೆಸೆಯುತ್ತಿದೆ.
ನಮ್ಮ ಮುಡಿಲಲ್ಲಿ ಪರಿಸರ:
ನಮ್ಮನ್ನು ಸಲಹಿದ ಪರಿಸರದ ಬಗ್ಗೆ ನಮಗೂ ಕಾಳಜಿ ಇರಬೇಕಲ್ಲವೆ.ಬೇಕಾಬಿಟ್ಟಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಹಾಳುಮಾಡುತ್ತಿದ್ದೇವೆ.ಹಿತ-ಮಿತವಾಗಿ ಬಳಸುವುದನ್ನು ನಾವು ಕಲಿಯಬೇಕಿದೆ. ಸಂಪನ್ಮೂಲಗಳನ್ನು ಬಳಸುವಾಗಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳಿತು.
o ನೀರನ್ನು ಅವಶ್ಯಕತೆಗನುಗುಣವಾಗಿ ಬಳಸಿ.
o ಮಳೆ ನೀರನ್ನು ಸಾಧ್ಯವಾದಷ್ಟು ಬಳಸಿ ಹಾಗು ಅಂತರ್ಜಲದ ವೃದ್ಧಿಗೆ ಯೋಜನೆಗಳನ್ನು ರೂಪಿಸಿ.
o ನೀರಿನ ಮೊಲಗಳಾದ ಕೆರೆ,ಬಾವಿ,ಕೊಳ ಹಾಗು ನದಿಗಳ ಮಾಲಿನ್ಯವನ್ನು ತಡೆಯಿರಿ.

ವಿಧ್ಯುಚ್ಚಕ್ತಿಯನ್ನು ಮಿತವಾಗಿ ಬಳಸಿ,ಇತರೆ ಮೂಲಗಳಿಂದ ವಿಧ್ಯುಚ್ಚಕ್ತಿಯನ್ನು ತಯಾರಿಸಿ,ಬಳಸುವ ವಿಧಾನಗಳನ್ನು
ರೂಡಿಸಿಕೊಳ್ಳಿ.
o ಆಹಾರ ಪದಾರ್ಥಗಳನ್ನು ಅನಗತ್ಯವಾಗಿ ಚೆಲ್ಲಬೇಡಿ.
o ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಿ.
o ಮರ-ಗಿಡಗಳನ್ನು ಹೆಚ್ಚಾಗಿ ಬೆಳಸಿ.
o ಕಸವನ್ನು ವಿಂಗಡನೆ ಮಾಡಿ ವಿಲೇವಾರಿ ಮಾಡಿ.
o ಬೈಸಿಕಲ್ ಅಥವಾ ನಡೆಯುವ ಹವ್ಯಾಸದಿಂದ ಆರೋಗ್ಯವೂ ವೃದ್ಧಿಸುತ್ತದೆ ಹಾಗು ಪರಿಸರ ಮಾಲಿನ್ಯವೂ ತಪ್ಪುತ್ತದೆ.
o ವಾರದಲ್ಲಿ ಒಂದು ದಿನವಾದರೂ ಸಾರ್ವಜನಿಕ ವಾಹನ ಬಳಸಿ.
o ಜವಾಬ್ದಾರಿಯುತ ನಾಗರೀಕರಾಗಿ ನಿಮ್ಮ ಹಕ್ಕು ಹಾಗು ಜವಾಬ್ದಾರಿಯನ್ನು ಅರಿತುಕೊಳ್ಳಿ.
o ಹಸಿರೇ ಉಸಿರು ಎಂಬ ತತ್ವದಲ್ಲಿ ನಂಬಿಕೆಯಿಡಿ.
o ಜನ ಸಾಮಾನ್ಯರಲ್ಲಿಪರಿಸರದ ಕಾಳಜಿಯ ಬಗ್ಗೆಅರಿವು ಮೂಡಿಸಿ.
೨೦೧೦ ರ ವಿಶ್ವ ಪರಿಸರ ದಿನದ ಘೋಷ ವಾಕ್ಯ
" ಹಲವು ಜೀವ ಪ್ರಭೇದ- ಒಂದು ಭೂಮಿ, ಒಂದೇ ಭವಿಷ್ಯ"

ಮಂಗಳವಾರ, ಸೆಪ್ಟೆಂಬರ್ 14, 2010

ಇಂಗು ತಿಂದ ಮಂಗ

ಹೀಗೆ ಮೊನ್ನೆ ಇದ್ದಕ್ಕಿದ್ದ ಹಾಗೆ ನನ್ನ ಕಾರ್ಖಾನೆಯಲ್ಲಿ ,ನನಗೆ ಹಾಗು ನನ್ನ ಮೇಲಿನ ಧರ್ಜೆಯ ಇಂಜಿನಿಯರ್ ಗಳಿಗೆಲ್ಲಾ ನಮ್ಮ ವ್ಯವಸ್ಥಾಪಕ ನಿರ್ದೇಶಕರು ಬೆಂಗಳೂರು ಕ್ಲಬ್ ನಲ್ಲಿ ಪಾರ್ಟಿ ಕೊಡುವ ಆಮಂತ್ರಣ ಬಂದಿತ್ತು. ನಮಗೂ ತುಂಬಾ ಸಂತೋಷದ ಜೊತೆಗೆ ಆತಂಕವೂ ಅಯಿತು. ಸಂತೋಷ ಏಕೆಂದರೆ ನಾವು ಕಳೆದ ಎರಡು ವರ್ಷಗಳಿಂದ ಇನ್ಕ್ರ್ ಮೆಂಟ್ ಹಾಗು ಪ್ರಮೋಶನ್ ಗಾಗಿ ಕಾಯುತ್ತಿದ್ದೇವು ಅದರ ಬಗ್ಗೆ ನಾವು ಅವರನ್ನೇ ನೇರವಾಗಿ ಕೇಳಿ ನಮ್ಮ ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳಬಹುದೆನ್ನುವ ಆಸೆಯ ಜೊತೆಗೆ ನಮ್ಮ ಸಮಸ್ಯೆಗೆ ಇಷ್ಟು ಬೇಗ ಪರಿಹಾರ ಸಿಕ್ಕಿಬಿಡ್ತಲ್ಲ ಅನ್ನೋದು ಸೇರಿತ್ತು. ಆತಂಕ ಏಕೆಂದರೆ ನಮ್ಮ ಸಮಸ್ಯೆಗಳ ಪಟ್ಟಿ ತುಂಬಾ ದೊಡ್ಡದಾಗಿತ್ತು ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಅವರಿಗೆ ಇರುತ್ತದೋ ಇಲ್ಲವೋ ಅಥವಾ ನಮ್ಮ ಸಮಸ್ಯೆಗಳನ್ನು ನಮ್ಮ ಮೇಲಿನ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿತ್ತಲ್ಲ, ನಮ್ಮ ಮೇಲಿನ ಅಧಿಕಾರಿಗಳು ಅವರಿಗೆ ಏನು ಹೇಳಿದ್ದಾರೋ ಅಥವಾ ನಮ್ಮ ಮೇಲೆಯೇ ಎತ್ತಿ ಕಟ್ಟಿದ್ದಾರೋ ಎಂಬ ಆತಂಕ ನನ್ನನ್ನು ಹಾಗು ನನ್ನ ಸ್ನೇಹಿತರಿಗೆ ಕಾಡುತ್ತಿತ್ತು. ಎಲ್ಲ ಗೆಳೆಯರ, ಸಹೊದ್ಯೋಗಿಗಳನ್ನು ಭೇಟಿಮಾಡಿ ಅವರವರ ಸಮಸ್ಯೆಗಳನ್ನು ಕೇಳಿ ಅದಕ್ಕೆಲ್ಲಾ ಪ್ರಶ್ನೆಯ ರೂಪ ಕೊಟ್ಟೆವು. ಪ್ರತಿಯೊಂದು ಸಮಸ್ಯೆಗೂ ಒಂದೊಂದು ಉದಾಹರಣೆಯನ್ನು ಇಟ್ಟುಕೊಂಡಿದ್ದೆವು. ಉದಾಹರಣೆ ಏಕೆಂದರೆ ನಮ್ಮ ಸಮಸ್ಯೆ ಬರೀ ಊಹಾಪೋಹದ್ದಲ್ಲ ಅದು ನೈಜವಾದುದು ಎಂಬುದು ಅವರಿಗೆ ಮನಗಾಣಿಸಲು ಅದರ ಅಗತ್ಯ ನಮಗಿತ್ತು.ಎಲ್ಲರಿಗೂ ನಾವು ಇಂತೆಲ್ಲಾ ಪ್ರಶ್ನೆಗಳನ್ನು ಕೇಳುತ್ತೇವೆ, ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೇ, ನಮ್ಮ ಡಿಮ್ಯಾಂಡ್ ಸರಿಯಾಗಿದೆ ಅಂದುಕೊಂಡೆವು ಹಾಗು ಮನಸ್ಸಿನಲ್ಲಿ ನಮ್ಮ ಸಮಸ್ಯೆಗೆ ಪರಿಹಾರಸಿಕ್ಕೇ ಬಿಡ್ತು ಎಂದು ಮಂಡುಗೆಯನ್ನು ಒಳಒಳಗೇ ತಿನ್ನುತ್ತಿದ್ದೆವು. ಎಲ್ಲೆಲ್ಲಿ ನಾವು ಹೋದರೂ ಅದರದೇ ಮಾತುಕತೆ,ಅದರದೇ ಚರ್ಚೆ, ಗುಸುಗುಸು-ಪಿಸುಪಿಸು ಆ ಕುತೂಹಲದ ಕ್ಷಣಗಳನ್ನು ತುಂಬಾ ಆನಂದಿಸಿದೆವು.ನಮ್ಮ ಸಮಸ್ಯೆಗಳ ಪಟ್ಟಿಯನ್ನು ತಯಾರಿಸಿ ಪ್ರತಿಯೊಬ್ಬರಿಗೂ ಅದರ ಪ್ರತಿಯನ್ನು ತಲುಪಿಸಿದೆವು ಹಾಗು ಯಾರು ಯಾರು ಯಾವ ಯಾವ ಪ್ರಶ್ನೆಯನ್ನು ಕೇಳಬೇಕು ಎಂದು ಮಾರ್ಕ್ ಮಾಡಿ ಅವರು ಅದನ್ನು ಕೇಳುವ ತಾಲೀಮು ಮಾಡಲು ಆದೇಶಿಸಿದ್ದೆವು.
ನನಗೋ ರಾತ್ರಿಯೆಲ್ಲಾ ಅವೇ ಪ್ರಶ್ನೆಗಳು ಕಣ್ಣ ಮುಂದೆ ಬಂದು ಮನದಲ್ಲೇ ಪರಿಹಾರ ಸಿಕ್ಕಿಬಿಡುವ ಆನಂದ ಕ್ಷಣಗಳನ್ನು ಅನುಭವಿಸಿದ್ದೆ.ರಾತ್ರೋ ರಾತ್ರಿ ನಾನೇ ಸಮಸ್ಯೆಗಳನ್ನು ಪರಿಹರಿಸುವ ನಾಯಕನಾಗಿ ಕಂಗೊಳಿಸುತ್ತಿದ್ದೆ. ಡಾ\\ ರಾಜ್ ಕುಮಾರ್ ರವರ ಮಯೊರ ವರ್ಮ ಹಾಡುವ "ನಾನಿರುವುದೆ ನಿಮಗಾಗಿ" ಹಾಡು ಮನದಲ್ಲೇ ನೂರು ಬಾರಿ ಹಾಡಿಕೊಂಡು ಸಂತಸ ಪಟ್ಟಿದ್ದೇನೆ.
ಆ ದಿನ ಬಂದೇ ಬಂತು, ಹಿಂದಿನ ದಿನ ನಾನು ಎರಡನೇ ಪಾಳಿಯಲ್ಲಿದ್ದೆ ಹೀಗಾಗಿ ನನ್ನ ಮೇಲಿನ ಅಧಿಕಾರಿಗಳು "ನಾಳೆ ನೀವು informal meeting ಗೆ ಹೋಗಬೇಕಲ್ಲಾ, ಅದಕ್ಕೆ ನೀವು ನಾಳೆ ಜನರಲ್ ಶಿಫ್ಟನಲ್ಲಿ ಬನ್ನಿ ಸಾಯಂಕಾಲ ಹೋಗೋದಕ್ಕೆ ಅನುಕೂಲ ಆಗುತ್ತೆ" ಅಂದಿದ್ದರು. ಜನರಲ್ ಶಿಫ್ಟನಲ್ಲಿ ಕೆಲಸ ಮಾಡುವ ಮನಸ್ಸೇ ಇರಲಿಲ್ಲ ಯಾವಾಗ ೪.೩೦ ಆಗಿ ಹೊರಟರೆ ಸಾಕೆನಿಸಿತು. ಅಂತೂ ಕೆಲಸ ಮುಗಿಸಿ ಮನೆಗೆ ಬಂದು ಎಲ್ಲಾ ತಯಾರಿ ಮುಗಿಸಿದ್ದೆ. ಕಾರ್ಖಾನೆ ಬಿಟ್ಟು ಮನೆಗೆ ಬರುವ ಹೊತ್ತಿಗೆ ಸಂಜೆ ಆರಾಗಿತ್ತು. ಮನೆಯಲ್ಲಿ ಹೆಂಡತಿಯ ಮುನಿಸು ಬೇರೆ "ಹೊರಗಡೆ ಅವಳನ್ನು ಬಿಟ್ಟು ಹೋಟಲಿನಲ್ಲಿ ನಾರ್ಥ್ ಇಂಡಿಯನ್ನು ಊಟ ಮಾಡುತ್ತೇನೆ" ಅಂತ. ಹೇಗೋ ಸಮಾಧಾನ ಮಾಡಿ ನನ್ನ ಸ್ಕೂಟರಿನಲ್ಲಿ ಹೊರಟೆ. ನಾನಿರುವುದು ಕತ್ರಗುಪ್ಪೆ ವಾಟರ್ ಟ್ಯಾಂಕ ಹತ್ತಿರ ಗೊತ್ತಾಗಲಿಲ್ಲವೇ, ಅದೇ ನಮ್ಮ ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಇದ್ದರಲ್ಲ ಅವರ ಹೆಸರಲ್ಲಿ ಒಂದು ಉಧ್ಯಾನವನ ಅಲ್ಲಿದೆ, ಅದರ ಹತ್ತಿರ. ಸೀತ ಸರ್ಕಲ್ ದಾಟಿ ಬ್ಯಾಂಕ್ ಕಾಲೋನಿ, ಹನುಮಂತ ನಗರ, ಬಸವನ ಗುಡಿ, ನ್ಯಾಷನಲ್ ಕಾಲೇಜ್, ಸಜ್ಜನ್ ರಾವ್ ಸರ್ಕಲ್, ಜೇಸಿ ರೋಡ್ ಮೊಲಕ ಕಾರ್ಪೊರೇಷನ್. ಹಡ್ಸಂನ್ ವೃತ್ತ, ಆನಂತರ ಮಲ್ಯ ಹಾಸ್ಪೆಟಲ್ ರೋಡ್ ನಲ್ಲಿ ಬಂದು ರಿಚ್ ಮಂಡ್ ವೃತ್ತದ ಫ್ಲೈ ಓವರ್ ಆದ ನಂತರ ಬೆಂಗಳೂರು ಕ್ಲಬಿನ ವಾಹನ ನಿಲುಗಡೆಯ ಪ್ರದೇಶದಲ್ಲಿ ನನ್ನ ವಾಹನವನ್ನು ನಿಲ್ಲಿಸಿದೆ. ಅಷ್ಟೊತ್ತಿಗೆ ನನ್ನ ಆತ್ಮೀಯ ಗೆಳೆಯ ರಾಮಮೊರ್ತಿ ಬಂದಿದ್ದರು. ಆಗಲೇ ಸಮಯ ೭.೩೦ ಆಗಿತ್ತು. ಬಿರಬಿರನೇ ಗೋಯಂಕಾ ಹಾಲಿನ ಕಡೆ ಹೊರಟೆವು. ಅದಾಗಲೇ ಮೀಟಿಂಗ್ ಆರಂಭಗೊಂಡಿತ್ತು. ಎಲ್ಲರ ಮುಂದೆಯೂ ಉದ್ದುದ್ದದ ಬಾಟಲಿನಲಿ ಬೀರ್,ಸಾಪ್ಟ್ ಡ್ರಿಂಕ್ಸ್, ಅದರ ಜೊತೆಗೆ ಬೋಂಡ, ಕಡ್ಲೇಬೀಜ ತಿನ್ನುವುದಕ್ಕೆ ರೆಡಿಯಾಗಿತ್ತು. ಕೆಲವರು ಅದಾಗಲೇ ತೀರ್ಥ ಸೇವನೆ ಆರಂಭಮಾಡಿದ್ದರು. ಯಾರ ಬಾಯಿಂದಲೂ ಒಂದು ಮಾತು ಬರುತ್ತಿರಲಿಲ್ಲ ಏಕೆಂದರೆ ಎಲ್ಲರೂ ತುಂಬಾ ಬಿಸ್ಜಿಯಾಗಿದ್ದರು. ನಮ್ಮ ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಮಾತನಾಡುತ್ತಿದ್ದರು. ಬೇರೆಯವರೆಲ್ಲಾ ಕೋಲೆ ಬಸವನಹಾಗೆ ಅವರು ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಿದ್ದರು. ಕೆಲವರು ಕೇಳಿದ ಪ್ರಶ್ನೆಗೆಲ್ಲಾ ಸೊಂಟ ಮುರಿಯುವ ನಾಯಕನ ಹಾಗೆ ನಮ್ಮನ್ನು ಮಾತನಾಡದಂತೆ ಅವರು ಮಾಡುತ್ತಿದ್ದರು. ನಮ್ಮ ಸಮಸ್ಯೆಗಳೆಲ್ಲಾ ಗಾಳಿಯಲ್ಲಿ ತೇಲಿಹೋಗಿತ್ತು. ಅವರು ಮೀಟಿಂಗ್ ಆರಂಭವಾಗಲೇ ಹೇಳಿದ್ದರಂತೆ "ಇನ್ಕ್ರಿಮೆಂಟ್,ಪ್ರಮೋಶನ್ ಬಗ್ಗೆ ಯಾರೂ ಪ್ರಶ್ನೆ ಕೇಳುವಹಾಗಿಲ್ಲ, ಏನಿದ್ದರೂ ಕಂಪನಿಯ ಭವಿಷ್ಯದ ಬಗ್ಗೆ ಮಾತ್ರ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು" ಅಂತ. ಕಂಪನಿಯ ಭವಿಷ್ಯಮಾತ್ರ ಉಜ್ವಲವಾಗಿದೆ ಆದರೆ ನಮ್ಮ ಭವಿಷ್ಯದ ಗೊತ್ತು-ಗುರಿ ಅದರಲ್ಲಿ ಕಾಣಿಸುತ್ತಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಅನ್ನೋಹಾಗೆ ಕೆಲವರು ನಮ್ಮ ಆಸೆಗಳೆಲ್ಲಾ ನೀರಿನಲ್ಲಿ ಹೋಮ ಮಾಡಿದಹಾಗೆ ಆಯಿತಲ್ಲ ಅನ್ನುವ ವ್ಯಥೆಯಲ್ಲಿ ಎರ್ರಾಬಿರ್ರಿ ಗುಂಡು ಹಾಕಿ ಅದರಲ್ಲೇ ತೃಪ್ತಿ ಕಂಡುಕೊಳ್ಳುತ್ತಿದ್ದರು. ನನ್ನ ಹಾಗು ನನ್ನ ಗೆಳೆಯರ ಮುಖ ಇಂಗು ತಿಂದ ಮಂಗನಂತೆ ಆಗಿತ್ತು.
ನಮ್ಮ ಇನ್ಕ್ರಿಮೆಂಟ್,ಪ್ರಮೋಶನ್ ಬೆಂಗಳೂರಿನ ಟ್ರಾಫಿಕ್ನಲ್ಲಿ ಮನದಲ್ಲೇ ಸತ್ತುಹೋಗಿತ್ತು.


ಹಾಂ! ಅಂದ ಹಾಗೆ ೧೩.೦೯.೨೦೧೦ ರಂದು ನಮ್ಮ ವ್ಯವಸ್ಥಾಪಕ ನಿರ್ದೇಶಕರ ೬೦ ನೆ ಹುಟ್ಟು ಹಬ್ಬ. ಅವರಿಗೆ ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಸಹೋಧ್ಯೋಗಿಗಳ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

ಭಾನುವಾರ, ಸೆಪ್ಟೆಂಬರ್ 5, 2010

ಹಬ್ಬ-ಪರಿಸರ

ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಸಾಲು ಓಡಿಬರುತ್ತದೆ. ಹಿಂದುಗಳಿಗೆ ಹಬ್ಬಗಳೆಂದರೆ ಆಸಕ್ತಿ,ಕಾಳಜಿ ಅದರ ಜೊತೆಗೆ ಸಂತೋಷ,ಸಡಗರ. ಧಾರ್ಮಿಕ ಹಾಗು ಸಾಮಾಜಿಕವಾಗಿ ಮನ-ಮನಗಳನ್ನು ಜೊತೆಗೂಡಿಸುತ್ತದೆ ನಮ್ಮ ಹಬ್ಬಗಳು. ನೋವು,ಗೋಳುಗಳಿಗೆ ಪೂರ್ಣವಿರಾಮ ಹಾಕಿ ಮನಸ್ಸು ಸಂತೋಷ.ಉಲ್ಲಸಿಸುವ ಕಾಲ ಈ ಹಬ್ಬಗಳಂದು.ಯಾಂತ್ರಿಕ ಜಂಜಾಟಗಳನ್ನು ಮರೆತು ಹೊಸತನಕ್ಕೆ ನಾಂಧಿ ಹಾಡುತ್ತದೆ ನಮ್ಮ ಹಬ್ಬಗಳು. ಹಬ್ಬಗಳ ಆಚರಣೆಯ ಹಿಂದಿನ ಧ್ಯೇಯ,ಆದರ್ಶಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಆಚರಣೆಯ ಆಡಂಬರಕ್ಕೆ ದಕ್ಕೆ ಏನೂ ಇಲ್ಲ.

ನಮ್ಮ ಹಬ್ಬಗಳು ಪರಿಸರ ಪ್ರೇಮಿಯಾಗಿದ್ದು ಆಧುನಿಕತೆ,ವಿಜ್ನಾನ,ತಂತ್ರಜ್ನಾನಗಳ ಸೆಳೆತದಿಂದ ತನ್ನ ಸ್ವರೂಪದಲ್ಲಿ ಬದಲಾವಣೆಯನ್ನು ಪಡೆದಿದೆ.ಎಂದೂ ನಿಂತ ನೀರಾಗಿರದೆ ಸದಾ ಬದಲಾವಣೆಗೆ ತೆರೆದುಕೊಂಡಿರುವ ನಮ್ಮ ಆಚರಣೆಗಳು ಕಾಲಕ್ಕೆ ತಕ್ಕಹಾಗೆ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಆಷಾಡ ಅಮಾವಾಸ್ಯೆಯಿಂದ ಆರಂಭಗೊಂಡು ದೀಪಾವಳಿಯವರೆವಿಗೂ ಜನತೆಯಲ್ಲಿ ಸಡಗರ,ಸಂಭ್ರಮವನ್ನು ಕಾಪಿಡುತ್ತದೆ.

ಹಬ್ಬಗಳ ಆಚರಣೆಯಿಂದ ನಮ್ಮ ಪರಿಸರದ ಮೇಲಾಗುವ ಪರಿಣಾಮಗಳನ್ನು ಅರಿತು ನಮ್ಮ ನಡುವಳಿಕೆಗಳನ್ನು ತಿದ್ದಿಕೊಳ್ಳುವುದು ಈಗ ತೀರ ಅವಶ್ಯಕವಾಗಿದೆ. ಪರಿಸರ ಸ್ವಚ್ಛವಾಗಿದ್ದರೆ ನಾವು ಹಾಗು ನಮ್ಮ ಹಬ್ಬಗಳು ಅಲ್ಲವೇ?
ಪ್ರತಿನಿತ್ಯದಲ್ಲಿ ನಡೆಯುವ ವ್ಯವಹಾರಗಳಲ್ಲಿಯೂ ಹತ್ತು ಹಲವು ಬಗೆಯಲ್ಲಿ ಪರಿಸರ ನಮ್ಮ ನಿಮ್ಮಿಂದ ಹಾನಿಗೊಳಗಾಗುತ್ತಲೇಯಿದೆ, ಸಧ್ಯಕ್ಕೆ ಅದಕ್ಕೆ ಪರಿಹಾರವೆಂಬುದಿಲ್ಲವೆಂಬುದು ನಿಜವಾದರೂ ನಮ್ಮ ಪ್ರಯತ್ನ ನಿಲ್ಲಬಾರದು. ಇನ್ನು ಹಬ್ಬ-ಹರಿದಿನಗಳಂದೂ ನಮ್ಮ ಇತಿ-ಮಿತಿಗಳಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಕಡಿಮೆಮಾಡಬಹುದು.

ಈಗಾಗಲೇ ಗಣೇಶ ಚತುರ್ಥಿ ಹೊಸಲಲ್ಲಿ ನಿಂತಿದೆ, ಮಾರುಕಟ್ಟೆ,ಅಂಗಡಿ ಮುಂಗಟ್ಟುಗಳಲ್ಲಿ ಚಿಕ್ಕ ಪುಟ್ಟದಿಂದ ಹಿಡಿದು ಆಳೆತ್ತರದ ಬಣ್ಣ ಬಣ್ಣದ ಗಣೇಶ ವಿಗ್ರಹಗಳು ಗ್ರಾಹಕರಿಗಾಗಿ ಕಾಯುತ್ತಿದೆ. ಆಚರಣೆ ನಿಲ್ಲಬಾರದು ನಿಜ ಹಾಗಾದರೆ ನಾವು ಪರಿಸರದ ಸಂರಕ್ಷಣೆಗೆ ಏನು ಮಾಡಬಹುದು? ಈ ಕೆಳಗಿನ ಅಂಶಗಳನ್ನು ಚಾಚುತಪ್ಪದೆ ಮಾಡಿದರೆ ನಮ್ಮ ಕೈಲಾದ ಮಟ್ಟಿಗೆ ಪರಿಸರ ಸಂರಕ್ಷಣೆ ಮಾಡಬಹುದು.

೧. ಬಣ್ಣ ಬಣ್ಣದ ಗಣಪಗಳನ್ನು ಖರೀದಿ ಮಾಡಬೇಡಿ. ಬಣ್ಣಗಳು ರಾಸಾಯನಿಕಗಳಾದ್ದರಿಂದ ಅವು ನೀರು,ಮಣ್ಣನ್ನು ಮಾಲಿನ್ಯಮಾಡುತ್ತದೆ.
೨.ಪ್ಲಾಷ್ಟರ್ ಆಫ್ ಪ್ಯಾರಿಸಿನಿಂದ ಗಣಪಗಳನ್ನು ಖರೀದಿ ಮಾಡಬೇಡಿ.
೩. ಗಣಪಗಳ ವಿಸರ್ಜನೆಯನ್ನು ಪಾಲಿಕೆ/ನಗರ ಪಾಲಿಕೆ ನಿಗದಿಪಡಿಸಿದ ಸ್ಥಳಗಳಲ್ಲಿಯೇ ಮಾಡಿ.
೪. ಕಸ-ಕಡ್ಡಿಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ, ನಿಗದಿತ ಜಾಗಗಳಲ್ಲಿ ಶೇಖರಿಸಿ ಪಾಲಿಕೆಯವರು ತೆಗೆದೊಯ್ಯುವಂತೆ ವ್ಯವಸ್ಥೆಮಾಡಿ.
೫.ನೀರನ್ನು ಮಿತವಾಗಿ ಬಳಸಿ ಹಾಗು ಮಾಲಿನ್ಯಗೊಳ್ಳುವುದನ್ನು ತಡೆಯಿರಿ. ಮಳೆ ನೀರನ್ನು ಇತರೇ ಕೆಲಸಗಳಿಗೆ ಬಳಕೆ ಮಾಡುವುದನ್ನು ರೂಡಿಸಿಕೊಳ್ಳಿ.
೬. ಧ್ವನಿ ವರ್ಧಕಗಳನ್ನು ಸಾರ್ವಜನಿಕರ ಅವಶ್ಯತೆಗನುಗುಣವಾಗಿ ಬಳಸಿ. ಅತಿಯಾದ ಬಳಕೆ ಸಲ್ಲ.
ನಮ್ಮ ಪರಿಸರವನ್ನು ಸಂರಕ್ಷಿಸುವುದು ಮುಂದಿನ ಪೀಳಿಗೆಗೆ ಕೊಡುವ ಅತಿದೊಡ್ಡ ಉಡುಗೊರೆ.
ಆದ್ದರಿಂದ ಸ್ನೇಹಿತರೇ ಹಬ್ಬಗಳನ್ನು ಆಚರಿಸುವಾಗ ಪರಿಸರದ ಬಗ್ಗೆ ಗಮನವಿಟ್ಟು, ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಆಚರಿಸಿ. ನಿಮ್ಮ ಕೈಲಾದಷ್ಟು ಜನರಲ್ಲಿ ಪರಿಸರದ ಬಗ್ಗೆ ಖಾಳಜಿ, ಅರಿವು ಮೊಡಿಸಿ. ಮಕ್ಕಳಲ್ಲಿ ಪರಿಸರ ಪ್ರೀತಿಯನ್ನು ಬೆಳೆಸಿ.
ಎಲ್ಲರಿಗೂ ಗಣೇಶ ಹಬ್ಬದ ಶುಭಾಷಯಗಳು