ಶುಕ್ರವಾರ, ಡಿಸೆಂಬರ್ 3, 2010

ದೃಷ್ಟಿಕೋನ

ಒಮ್ಮೆ ಶ್ರೀಮಂತ ಕುಟುಂಬಕ್ಕೆ ಸೇರಿದ ತಂದೆ ತನ್ನ ಮಗನನ್ನು ಕರೆದುಕೊಂಡು ದೇಶದ ಹಳ್ಳಿ-ಹಳ್ಳಿಗಳನ್ನು ಸಂದರ್ಶಿಸಲು ಹೊರಟ. ಈ ದೇಶ ಸಂಚಾರದ ಮೊಲ ಉದ್ದೇಶ ಮಗನಿಗೆ ಬಡಜನರ ಸ್ಥಿತಿ-ಗತಿಗಳನ್ನು ಪರಿಚಯಿಸುವುದೇ ಆಗಿತ್ತು.

ತಂದೆ ಹಾಗು ಮಗ ಇಬ್ಬರೂ ಕೆಲವು ದಿನಗಳನ್ನು ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಬಡತನದ ಪ್ರತ್ಯಕ್ಷ ದರ್ಶನವನ್ನು ಪಡೆದರು. ದೇಶ ಸಂಚಾರದಿಂದ ಹಿಂತಿರುಗಿದ ಬಳಿಕ ತಂದೆ ಮಗನನ್ನು ಕುರಿತು " ಮಗು ದೇಶ ಸಂಚಾರ, ಬಡತನದ ದರ್ಶನ ಹೇಗಿತ್ತು?" ಮಗ ಉತ್ತರಿಸುತ್ತಾ "ತುಂಬಾ ಚೆನ್ನಾಗಿತ್ತು ತಂದೆಯೇ"ಎಂದ."ಬಡಜನರು ಹೇಗೆ ಜೀವಿಸುತ್ತಾರೆ ಎಂಬುದು ನಿನಗೆ ತಳಿಯಿತಲ್ಲವೇ?"ತಂದೆ ಮಗನನ್ನು ಮರು ಪ್ರಶ್ನಿಸಿದರು. " ಹೌದು" ಎಂದುತ್ತರಿಸಿದ ಮಗ. "ಮಗು ಹಾಗಾದರೆ ಈ ದೇಶ ಸಂಚಾರದಿಂದ ನಿನಗೆ ಏನು ಮನವರಿಕೆಯಾಯಿತು? ಹೇಳು" ತಂದೆ ಮಗನನ್ನು ಪ್ರಶ್ನಿಸಿದ. ಮಗ ಉತ್ತರವಾಗಿ " ತಂದೆಯೇ! ನಮ್ಮ ಬಳಿ ಒಂದೇ ಒಂದು ಸಾಕು ನಾಯಿಯಿದೆ ಆದರೆ ಅವರ ಬಳಿ ನಾಲ್ಕಕ್ಕಿಂತ ಹೆಚ್ಚು ನಾಯಿಗಳಿವೆ. ನಮ್ಮ ಬಳಿ ಆಮದಾದ ವಿದೇಶಿ ಕಂದೀಲುಗಳಿವೆ ಅದರೆ ಅವರ ಬಳಿ ಆಕಾಶದ ರಾತ್ರಿ ನಕ್ಷತ್ರಗಳು, ಹುಣ್ಣಿಮೆಯ ಚಂದ್ರನಿದ್ದಾನೆ. ನಮ್ಮ ಮನೆ ಹಾಗು ಉದ್ಯಾನವನಕ್ಕೆ ಸೀಮಿತವಾದ ತಡೆಗೋದೆಗಳಿವೆ ಆದರೆ ಅವರಿಗೆ ವಿಸ್ತಾರವಾದ ಭೂಮಿಯೇ ಇದೆ. ನಮ್ಮ ಬಳಿ ಚಿಕ್ಕದಾದ ಜಾಗವಿದೆ ವಾಸ್ತವ್ಯಕ್ಕೆ ಆದರೆ ಅವರ ಬಳಿ ಕಣ್ಣಿಗೆಟುಕದಷ್ಟು ಅಗಾಧವಾದ ಜಾಗವಿದೆ. ನಮ್ಮ ಬಳಿ ಅನೇಕ ಕೆಲಸಗಾರರು, ಸಹಾಯಕರಿದ್ದಾರೆ ಆದರೆ ಅವರೆಲ್ಲರೂ ಬೇರೆಯವರಿಗೆ ಸಹಾಯ ಮಾಡುತ್ತಾರೆ. ನಾವು ನಮ್ಮ ಆಹಾರ ಧಾನ್ಯಗಳನ್ನು ಹಣದಿಂದ ಕೊಂಡುಕೊಳ್ಳುತ್ತೇವೆ ಆದರೆ ಅವರು ತಮ್ಮ ಆಹಾರ ಧಾನ್ಯಗಳನ್ನು ಅವರೇ ಬೆಳೆದುಕೊಳ್ಳುತ್ತಾರೆ. ನಮ್ಮ ಆಸ್ತಿಯನ್ನು ರಕ್ಷಿಸಲು ದೊಡ್ಡ-ದೊಡ್ಡ ಗೋಡೆಗಳಿವೆ ಆದರೆ ಅವರಿಗೆ ಆತ್ಮೀಯ ಸ್ನೇಹಿತರಿದ್ದಾರೆ ರಕ್ಷಿಸಲು". ಮಗನ ಮಾತುಗಳನ್ನು ಆಲಿಸಿ ತಂದೆ ಸ್ತಂಭಿತನಾದ. ಮಗ ತನ್ನ ಮಾತುಗಳನ್ನು ಮುಂದುವರೆಸುತ್ತಾ " ತಂದೆಯೇ! ನಿನಗೆ ಧನ್ಯವಾದಗಳು ನನ್ನ ಕಣ್ಣುಗಳನ್ನು ತೆರೆಸಿದ್ದಕ್ಕೆ, ನಾವು ಎಷ್ಟು ಬಡವರೆಂದು ತೋರಿಸಿದ್ದಕ್ಕೆ" ಎಂದ.

ವಾವ್! ಎಂತಹ ಅದ್ಭುತ ದೃಷ್ಟಿಕೋನವಲ್ಲವೇ!. ನಮ್ಮ ಬಳಿಯಿರುವುದಕ್ಕೆ ನಾವು ಸಂತೋಷಪಡಬೇಕು, ಪರರ ಬಳಿ ಇರುವುದು ನಮ್ಮ ಬಳಿಯಿಲ್ಲವೆಂದು ದುಃಖಪಡುವುದು,ಕೊರಗುವುದು ಸಮಂಜಸವಲ್ಲ ಅಲ್ಲವೇ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ