ಶನಿವಾರ, ಡಿಸೆಂಬರ್ 3, 2011

ಅರ್ಧ ಮನುಷ್ಯ-ಅರ್ಧ ಬೆಲೆಯ ಅಂಗಡಿ ~ಪೆಂಗ್ ಶುಲಿನ್” ನ ನೈಜ ಸತ್ಯಕಥೆ








ಜೀವನದಲ್ಲಿ ಕೆಲವೊಮ್ಮೆ ನಮ್ಮ ಸ್ಥಿತಿ ಹಾಗು ಒತ್ತಡಗಳಿಂದ ಎಲ್ಲವನ್ನೂ,ಎಲ್ಲರನ್ನೂ ದೂರುತ್ತೇವೆ. ನಾವು ಬದುಕಿರುವುದೇ ಬೇಡವೆನಿಸುತ್ತದೆ. ಜೀವನ ದುಸ್ತರವೆನಿಸುತ್ತದೆ. ನಮ್ಮ ಪರಿಪೂರ್ಣ ದೇಹವೇ ನಮಗೆ ಭಾರವಾಗುತ್ತದೆ ಹಾಗು ಜೀವನ ಅಸಹನೀಯವಾಗುತ್ತದೆ. ದಪ್ಪಗಿರುವ ವ್ಯಕ್ತಿಗಳು ಹೇಳುತ್ತಾರೆ “ನಾನು ಸಣ್ಣಗಾಗಬೇಕು” ನರಪೇತಲರು .ಹೇಳುತ್ತಾರೆ “ನಾನು ದಪ್ಪಗಾಗಬೇಕು”. ಬಡವರು ಶ್ರೀಮಂತರಾಗ ಬಯಸುತ್ತಾರೆ ಮತ್ತು ಶ್ರೀಮಂತರಿಗೆ ಎಲ್ಲವೂ ಇದ್ದರೂ ನೆಮ್ಮದಿ ಇಲ್ಲವಾಗಿರುತ್ತದೆ.

ಪೆಂಗ್ ಶುಲಿನ್ ಕೇವಲ ೭೮ ಸೆಂ,ಮೀ ಉದ್ದವಿದ್ದಾನೆ, ಪೆಂಗ್ ಶುಲಿನ್ ಹುಟ್ಟಿದ್ದು ಹ್ಯೂಮನ್ ಪ್ರಾವಿನ್ಸ್, ಚೈನಾದಲ್ಲಿ.
೧೯೯೫ ರಲ್ಲಿ, ಶೆನ್ ಜುಹೆನ್ ಎಂಬಲ್ಲಿ ವಸ್ತು ಸಾಗಾಣಿಕಾ ವಾಹನವು ಅವನ ದೇಹವನ್ನು ಅರ್ಧ ತುಂಡರಿಸಿತು. ವೈದ್ಯರು ಅವನ ದೇಹದ ಕೆಳಭಾಗವನ್ನು ಸರಿಮಾಡಲಾಗದೇ ತೆಗೆದುಹಾಕಿದರು.
ಪೆಂಗ್ ಶುಲಿನ್ ೩೭, ಸುಮಾರು ಎರಡು ವರ್ಷ ದಕ್ಷಿಣ ಚೈನಾದ ಶೆನ್ ಜುಹೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದ.
ಹತ್ತು ಹಲವಾರು ಶಸ್ತ್ರಚಿಕಿತ್ಸೆಗಳಿಂದ ಅವನ ಉಳಿದ ದೇಹದ ಭಾಗಗಳನ್ನು ಮತ್ತು ಇತರ ವ್ಯವಸ್ಥೆಯನ್ನು ಮಾಡಲಾಯಿತು. ಪೆಂಗ್ ಉಳಿದ ತನ್ನ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ತನ್ನ ಕೈಗಳಿಂದಲೇ ವ್ಯಾಯಾಮ ಮಾಡುತ್ತಿದ್ದನು. ಇದ್ದ ಎರಡು ಕೈಗಳಿಂದಲೇ ಮುಖತೊಳೆಯುವುದು,ಹಲ್ಲುಜ್ಜುವುದು, ಎಲ್ಲಾ ಕೆಲಸಗಳನ್ನೂ ತಾನೇ ಮಾಡಿಕೊಳ್ಳಲಾರಂಭಿಸಿದ. ಅವನು ಬದುಕುಳಿದ ಎಲ್ಲಾ ವಿಷಮ ಪರಿಸ್ಥಿತಿಗಳಿಂದ.

ಈಗ ಪೆಂಗ್ ಆಸ್ಪತ್ರೆಯ ವೈದ್ಯರು ಮೂಕವಿಸ್ಮಿತರಾಗುವಂತೆ ಮಾಡಿದ್ದಾನೆ. ದಶಕಗಳ ನಂತರ ನಡೆಯುವುದನ್ನು ಕಲಿತು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಪೆಂಗ್ ನ ಅವಸ್ಥೆಯನ್ನು ಪರಿಗಣಿಸಿ ವೈದ್ಯರು ಚೈನ ಪುನರ್ವಸತಿ ಮತ್ತು ಸಂಶೋಧನಾ ಕೇಂದ್ರ, ಬೀಜಿಂಗ್ ರವರು ಅವನಿಗಾಗಿ ದೇಶೀಯ ನಿರ್ಮಿತ ಕೃತಕ ಓಡಾಟ ಸಾಧನವನ್ನು ಕಂಡುಹಿಡಿದರು. ಮೊಟ್ಟೆಯಾಕಾರದ ಪೆಟ್ಟಿಯಲ್ಲಿ ಅವನ ದೇಹಕ್ಕೆ ಹೊಂದಿಕೆಯಾಗುವ ರೀತಿ ಮಾಡಿ ಅದಕ್ಕೆ ಎರಡು ಕಾಲುಗಳನ್ನೂ ಕೊಡಲಾಯಿತು. ಅವನಿಗಾಗಿಯೇ ಸೂಕ್ತ ರೀತಿಯಲ್ಲಿ ವೈಜ್ನಾನಿಕವಾಗಿ, ಕೌಶಲವನ್ನು ಮಾಪನಮಾಡಿ ರೂಪಿಸಲಾಯಿತು.
ಪೆಂಗ ಹೊಸ ಕಾಲಿನ ಸಹಾಯದಿಂದ ಬೀಜಿಂಗ್ ನ ಪುನರ್ವಸತಿ ಮತ್ತು ಸಂಶೋಧನಾ ಕೇಂದ್ರ ಪಡಸಾಲೆಯಲ್ಲಿ ನಡೆದಾಡಿದ,
ಆಸ್ಪತ್ರೆಯ ವೈಸ್ ಪ್ರಸಿಡೆಂಟ್ ಆದ ಲಿನ್ ಲಿಯು ಹೇಳುತ್ತಾರೆ “ನಾವು ಅವನಿಗೆ ಸಲಕರಣೆಗಳನ್ನು ಒದಗಿಸಿದ್ದೇವೆ ಹಾಗು ಅವನನ್ನು ಪರೀಕ್ಷಿಸಿದ್ದೇವೆ ಅವನು ಅವನ ವಯಸ್ಸಿನ ಸಾಮಾನ್ಯ ಮನುಷ್ಯನಿಗಿಂತ ಚೆನ್ನಾಗಿ ಆರೋಗ್ಯವಾಗಿದ್ದಾನೆ ಹಾಗು ಸಮರ್ಥನಾಗಿದ್ದಾನೆ.”
ಪೆಂಗ್ ಒಂದು ತನ್ನದೇ ಆದ ಚೌಕಾಸಿ ಸೂಪರ್ ಮಾರ್ಕೇಟ್ ತೆರೆದಿದ್ದಾರೆ ಹಾಗು ಅದಕ್ಕೆ ಹೆಸರಿಟ್ಟಿದ್ದಾನೆ ಅರ್ಧ ಮನುಷ್ಯ-ಅರ್ಧ ಬೆಲೆಯ ಅಂಗಡಿ.
೩೭ ವರ್ಷದ, ಪೆಂಗ್ ವ್ಯಾಪಾರಿಯಾಗಿ ತನ್ನಂತೆಯೇ ಇರುವ ವಿಕಲಾಂಗರಿಗೆ ಪ್ರೇರಕ ಶಕ್ತಿಯಾಗಿದ್ದಾನೆ, ವೀಲ್ ಛೇರಿನ ಮೇಲೆ ಕುಳಿತು ತಾನು ಹೇಗೆ ಅಂಗಹೀನತೆಯಿಂದ ಹೊರಬಂದೆ ಎಂಬುದರ ಬಗ್ಗೆ ಜನರಿಗೆ ಉಪನ್ಯಾಸಗಳನ್ನೂ ಕೊಡುತ್ತಾನೆ. ಅವನ ಅಸಾದಾರಣ ನಡುವಳಿಕೆ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ, ಅವನೆಂದೂ ಅವನ ಅಸಹಾಯಕತೆಯನ್ನು ದೂರುವುದಿಲ್ಲ. ಅವನ ಸ್ಪೂರ್ತಿಯೆಂದರೆ ಸದಾ ಹಸನ್ಮುಖಿಯಾಗಿರುವುದು ಮತ್ತು ಅವನನ್ನು ಯಾವುದೇ ನಕಾರಾತ್ಮಕ ವಿಷಯಗಳು ಅವನ ದೃತಿಗೆಡಸದೇಯಿರುವುದು. ನಮಗೆ ಪೂರ್ತಿ ದೇಹವಿದೆ,ಕಾಲುಗಳಿವೆ. ಅವನ ಜೀವನವೇ ತಾಳ್ಮೆಯ ಜಯದ ಹಬ್ಬದಂತೆ. ಮಾನವ ಪ್ರಯತ್ನ ಹಾಗು ತಾಳ್ಮೆಯ ಮುಂದೆ ಎಂತಹುದೇ ಅಡತಡೆಗಳೂ ನಿಲ್ಲುವುದಿಲ್ಲ ಎನ್ನುವುದಕ್ಕೆ ಪೆಂಗ್ ನ ಜೀವನವೇ ಸಾಕ್ಷಿ.
ಅವನ ಜೀವನವನ್ನು ನೋಡಿ ನಾವು ಕಲಿಯಬೇಕಾದುದು ಬಹಳಷ್ಟಿದೆ.

ಜೀವನ ಒಂದು ಉಡುಗೊರೆ

ಇಂದು ನಿಷ್ಠುರ ಮಾತು ಹೇಳುವ ಮುನ್ನ-
ಯೋಚಿಸು ಮಾತನಡಲು ಅಶಕ್ತರಾದವರ ಬಗ್ಗೆ.

ಊಟದ ರುಚಿಯ ಬಗ್ಗೆ ದೂರುವ ಮುನ್ನ-
ಯೋಚಿಸು ಒಂದೊತ್ತಿನ ಊಟಕ್ಕೂ ಇಲ್ಲದವರ.

ಹೆಂಡತಿ ಅಥವಾ ಗಂಡನ ದೂರುವ ಮುನ್ನ-
ಯೋಚಿಸು ಜೊತೆ ಬೇಕೆಂದು ದೇವರಲ್ಲಿ ಮೊರೆಯಿಡುವವರ.

ಇಂದು ಜೀವನದ ಬಗ್ಗೆ ದೂರುವ ಮುನ್ನ-
ಯೋಚಿಸು ಅಕಾಲಿಕವಗಿ ನಮ್ಮನ್ನು ಅಗಲಿದವರ.

ಗಾಡಿಯಲ್ಲಿ ದೂರ ಹೋಗಬೇಕೆಂದು ಗೊಣಗುವ ಮುನ್ನ-
ಯೋಚಿಸು ಮತ್ತೆ ಮತ್ತೆ ಬರಿಗಾಲಲ್ಲಿ ನಡೆಯುವವರ.

ಮತ್ತೆ ನಿನಗೆ ದಣಿವಾದಾಗ ಹಾಗು ನಿನ್ನ ಕೆಲಸದ ಬಗ್ಗೆ ದೂರಿದಾಗ-
ಯೋಚಿಸು ಕೆಲಸವಿಲ್ಲದವರ,ವಿಕಲಚೇತನರ ಮತ್ತು ನಿನ್ನ ಜಾಗದಲ್ಲಿರಬೇಕಾದವರ.

ನಿಮ್ಮ ಮನಸ್ಸಿಗೆ ನೋವಾಗಿ ಭಾವನೆಗಳು ನಿಮ್ಮನ್ನು ಕಂಗೆಡಿಸಿದರೆ
ನಿಮ್ಮ ಮುಖದಲ್ಲಿ ನಗು ಹೊಮ್ಮಲಿ ಮತ್ತು ಯೋಚಿಸು
ನೀವಿನ್ನೂ ಜೀವಂತ ಮತ್ತು ಜಂಗಮ,

ಗುರುವಾರ, ನವೆಂಬರ್ 24, 2011

ಕನ್ನಡದ ಗೊರೂರು





ಕನ್ನಡ ತಾಯಿ ಭುವನೇಶ್ವರಿಯ ಕೊರಳಲ್ಲಿ ನಿಲಿದಾಡುತ್ತಿರುವ ರತ್ನಖಚಿತ ಕಂಠೀಹಾರದಲ್ಲಿ ಅನೇಕ ಸಾಹಿತ್ಯರತ್ನಗಳು ತುಂಬಿವೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಒಬ್ಬರೇ? ಇಬ್ಬರೇ?... ಅಸಂಖ್ಯಾತ ಕನ್ನಡಿಗರು. ಅವರೆಲ್ಲರಲ್ಲಿ ಇಂಥಹವರು ಹೆಚ್ಚು, ಇಂಥಹವರು ಕಡಿಮೆ ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಮ್ಮನ ಸೇವೆ ಸಲ್ಲಿಸಿದವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.


'ತಾಯಿಗೆ ಎಲ್ಲಾ ಮಕ್ಕಳೂ ಒಂದೇ' ಎನ್ನುವ ಹಾಗೆ ಕನ್ನಡ ತಾಯಿ ಕನ್ನಡಾಂಬೆಗೆ ನಿಸ್ವಾರ್ಥವಾಗಿ ದುಡಿದ ಎಲ್ಲಾ ಸಾಹಿತಿಗಳೂ ಸಮಾನರೇ, ಎಲ್ಲರೂ ಕನ್ನಡದ ರತ್ನಗಳೇ ಅಲ್ಲವೇ?!. ಅಂತಹ ಅನರ್ಘ್ಯ ರತ್ನಗಳಲ್ಲಿ 'ಗೊರೂರು' ಎಂದೇ ಪ್ರಸಿದ್ಧರಾದ ಗೊರೂರು ರಾಮಸ್ವಾಮಿ ಅಯ್ಯಂಗಾರರೂ ಒಬ್ಬರು.


1904, ಜುಲೈ 4 ರಂದು ಜನಿಸಿದ ಇವರ ಜನ್ಮಸ್ಥಳ ಹಾಸನ ಜಿಲ್ಲೆಯ ಗೊರೂರು. ಅಪ್ರತಿಮ ಗಾಂಧೀವಾದಿಗಳಾಗಿದ್ದ ಗೊರೂರರು ತಮ್ಮ ಶಾಲಾದಿನಗಳಲ್ಲೇ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಓಗೊಟ್ಟು ತಮ್ಮ ಓದಿಗೆ ತಿಲಾಂಜಲಿಯಿತ್ತು ರಾಷ್ರ್ಟಸೇವೆಗೆ ಧುಮುಕಿದವರು. ಆನಂತರ ಅನೇಕ ಪತ್ರಿಕೆಗಳಲ್ಲಿ ಲೇಖಕರಾಗಿ, ಉಪಸಂಪಾದಕರಾಗಿ ಸೇವೆಸಲ್ಲಿಸಿದರು. ಕರ್ನಾಟಕದ ಏಕೀಕರಣದಲ್ಲೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡ ಮಹನೀಯರು.


ಗೊರೂರು ರವರ ಬರಹಗಳಲ್ಲಿ ಹೆಚ್ಚಾಗಿ ಸಮಾಜದ ಅಂಕು-ಡೊಂಕು ತಿದ್ದುವ, ವಿಡಂಬನೆ, ವಿಮರ್ಶೆಗೊಳಪಡಿಸುವ, ನವಿರಾದ ಹಾಸ್ಯ ಓದುಗರನ್ನು ಸೆಳೆಯುತ್ತದೆ. ಹಳ್ಳಿಯ ಚಿತ್ರಗಳನ್ನು ಮನಮುಟ್ಟುವಂತೆ ಚಿತ್ರಿಸಿದ ರೀತಿ ಅನುಪಮವಾದುದು. ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅನುಪಮ ಸೇವೆ ಸದಾ ನೆನಪಿಸಿಕೊಳ್ಳುವಂತಹುದು.


ಗೊರೂರರ ಕೃತಿಗಳು

ಕಾದಂಬರಿ

1.ಹೇಮಾವತಿ
2.ಪುನರ್ಜನ್ಮ
3.ಮೆರವಣಿಗೆ
4.ಊರ್ವಶಿ

ಪ್ರಬಂಧ ಮತ್ತು ಕಥಾ ಸಂಕಲನ

1.ಹಳ್ಳಿಯ ಚಿತ್ರಗಳು
2.ಗರುಡಗಂಬದ ದಾಸಯ್ಯ
3.ನಮ್ಮ ಊರಿನ ರಸಿಕರು
4.ಶಿವರಾತ್ರಿ
5.ಕಮ್ಮಾರ ವೀರಭದ್ರಾಚಾರಿ
6.ಬೆಸ್ತರ ಕರಿಯ
7.ಬೆಟ್ಟದ ಸಂಪರ್ಕದ ಹೆಸರುಮನೆಯಲ್ಲಿ ಮತ್ತು ಇತರ ಕಥೆಗಳು
8.ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು
9.ಗೋಪುರದ ಬಾಗಿಲು
10.ಉಸುಬು
11.ವೈಯ್ಯಾರಿ
12.ಕನ್ಯಾಕುಮಾರಿ ಮತ್ತು ಇತರ ಕಥೆಗಳು

ಪ್ರವಾಸ ಕಥನ

1.ಅಮೇರಿಕಾದಲ್ಲಿ ಗೊರೂರು

ಅನುವಾದಗಳು

1.ಮಲೆನಾಡಿನವರು
2.ಭಕ್ತಿಯೋಗ
3.ಭಗವಾನ್ ಕೌಟಿಲ್ಯ

ಗೊರೂರರು 1991, ಸೆಪ್ಟೆಂಬರ್ 8 ರಂದು ನಿಧನರಾದರು.

(ಕೃತಿಗಳ ವಿವರ : ಕನ್ನಡ ವಿಕಿಪೀಡಿಯಾ)

http://www.kahale.gen.in
ಕಹಳೆಗೆ ಈ ಲೇಖನ ಬರೆದದ್ದು.

ಮಂಗಳವಾರ, ಅಕ್ಟೋಬರ್ 25, 2011

ಬೆಳಕಿನ ಹಬ್ಬ ದೀಪಾವಳಿ


ಇಂದು ಬೆಳಕಿನ ಹಬ್ಬ ದೀಪಾವಳಿ.ಬೆಳಕಿಗೆ ತನ್ನದೇ ಆದ ಪಾವಿತ್ರ್ಯತೆ ಪ್ರಪಂಚದೆಲ್ಲಡೆ ಇದೆ.ಜಗತ್ತು,ವ್ಯಕ್ತಿ ಹಾಗು ಸಮಾಜಕ್ಕೆ ಬೆಳಕಿನ ಅಗತ್ಯತೆ ಇದ್ದೇಯಿದೆ.

ಬೆಳಕೆಂದರೆ ಅರಿವು;
ಬೆಳಕೆಂದರೆ ಪ್ರಗತಿಯ ಸಂಕೇತ;
ಬೆಳಕೆಂದರೆ ಚೈತನ್ಯದ ಪ್ರತೀಕ;

ಅಂತಹ ಪವಿತ್ರವಾದ ಬೆಳಕನ್ನು ಅನುಸರಿಸಿ ನಮ್ಮ ಬದುಕಿನ ದಾರಿಯನ್ನು ಕಂಡುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.
ನಮ್ಮ ಪಯಣ ಹೇಗಿರಬೇಕೆಂದರೆ, ಪ್ರಾಚೀನರ ಪಯಣದ ಆದರ್ಶದಂತೆ ಇರಬೇಕು.

ಪ್ರಾಚೀನರ ಉಕ್ತಿ ಹೀಗೆ ಹೇಳುತ್ತೆ;

ಅಸತೋಮ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿಃ||

ನನ್ನ, ನಿನ್ನ ಹಾಗು ಸಮಾಜದ ನಡೆ
ಅಸತ್ಯದಿಂದ ಸತ್ಯದ ಕಡೆಗೆ
ಕತ್ತಲಿನಿಂದ ಬೆಳಕಿನೆಡೆಗೆ
ಜಡತ್ವದಿಂದ ಚೈತನ್ಯದೆಡೆಗೆ ಇರಬೇಕೆಂಬ ಅಪೇಕ್ಷೆ ಪ್ರಾಚೀನರ ಉಕ್ತಿಯಲ್ಲಿ ಅಡಗಿದೆ.

ನಮ್ಮ ಜೀವನವು ಕತ್ತಲು-ಬೆಳಕಿನ ತೋರಣದಿಂದ ಅಲಂಕರಿಸಲ್ಪಟ್ಟಿದೆ. ಅದೇ ಜಗದ ಜೀವಕೋಟಿಗೆ ಹಬ್ಬದ ಹೂರಣವನ್ನು ತೆರೆದಿಟ್ಟಿದೆ.
ಮನದ ಕತ್ತಲು;
ಜಗದ ಕತ್ತಲು;
ಹಬ್ಬುವುದು ಕ್ಷಣಮಾತ್ರದಲ್ಲೇ;
ಈ ಕತ್ತಲಿನ ಮಾಯೆ ಎಂತಹುದೆಂದರೆ ನೋವಿನ,ಸಂಕಷ್ಟದ,ಯಾತನೆಯ ಪರಿಸ್ಥಿತಿಯನ್ನು ಅದು ನಿರ್ಮಿಸುತ್ತದೆ.
ಜೀವನ ನರಕವೆನಿಸುತ್ತದೆ.
ಅದನ್ನು ತೊಲಗಿಸಲು,ಅಂಧಕಾರವ ಓಡಿಸಲು ಬೇಕು ಬೆಳಕಿನ ಕಿರಣ;
ಒಂದು ಸಣ್ಣ ದೀಪ ನಮ್ಮ ವಾಸ್ತವದ ಕತ್ತಲನ್ನು ಓಡಿಸಿದರೆ;
ಮನದ ಕತ್ತಲನ್ನು ಓಡಿಸಲು ಅರಿವಿನ ಶಲಾಕೆಯ ಅಗತ್ಯತೆ ಬೇಕು;
ಬರೀ ಬಾಹ್ಯ ಕತ್ತಲನ್ನು ಓಡಿಸಿದರೆ ಸಾಲದು,ಮನುಷ್ಯನ ಮನದ ಕತ್ತಲನ್ನು ಓಡಿಸುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ದೀಪ ಸಾಲದು,
ಸಾಧನೆಯ ಪರಿಶ್ರಮದ ಹಾದಿಯನ್ನು ದಾಟಿದರೆ ಮಾತ್ರ ಮನದ ಕತ್ತಲನ್ನು ಓಡಿಸಲು ಸಾಧ್ಯ.
ಕತ್ತಲಿದ್ದರೆ ಬೆಳಕಿರದು;
ಬೆಳಕಿದ್ದರೆ ಕತ್ತಲಿರದು;
ಕತ್ತಲು-ಬೆಳಕು ಒಂದೇ ನಾಣ್ಯದ ಎರಡು ಮುಖಗಳು;
ನಮ್ಮ ಮುಂದಿರುವುದ ತಾತ್ಕಾಲಿಕವಾಗಿ ಮರೆಮಾಡುವ ಶಕ್ತಿ ಕತ್ತಲಿಗಿದೆ,ಅಸತ್ಯದ ಭ್ರಮೆಯನ್ನು ಹುಟ್ಟಿಸುವ ಶಕ್ತಿ ಕತ್ತಲಿಗಿದೆ.ನಕಾರಾತ್ಮಕ ಧೋರಣೆಯನ್ನು ನಮ್ಮ ಮನದಲ್ಲಿ ಬಿತ್ತಿ ನಮ್ಮನ್ನು ಸೋಲಿಸುವ ಕತ್ತಲಿನ ಈ ಆಟ ತಾತ್ಕಾಲಿಕವೆಂಬುದನ್ನು ನಾವು ಅರಿಯಬೇಕು.
ಕತ್ತಲಿಗೆ ನೆಲೆಯಿಲ್ಲ;
ಕತ್ತಲು ವಾಸ್ತವವಲ್ಲ;
ಕತ್ತಲು ಸತ್ಯವಲ್ಲ;
ಕತ್ತಲಿನ ಈ ಸ್ವಾಭಾವಿಕ ನಿಯಮವನ್ನು ನಾವು ಅರಿತರೆ, ನಮ್ಮ ಬೆಳಕಿನೆಡೆಗಿನ ದಾರಿ ಸುಲಭವಾಗುತ್ತದೆ, ಕಷ್ಟ,ಸಂಕಷ್ಟಗಳನ್ನು ಎದುರಿಸುವ ನಮ್ಮ ಚೈತನ್ಯ ಇಮ್ಮಡಿಯಾಗುತ್ತದೆ.
ಜೀವನಕ್ಕೆ ಕತ್ತಲೂ ಬೇಕು;
ಬೆಳಕೂ ಬೇಕು;
ಕತ್ತಲು-ಬೆಳಕು ಎರಡೂ ಇದ್ದಾಗಲೇ ಜೀವನಕ್ಕೊಂದು ಅರ್ಥ;
ಪರಿಪೂರ್ಣ ಕತ್ತಲು;
ಪರಿಪೂರ್ಣ ಬೆಳಕು;
ಎಂಬ ಎರಡು ಸ್ತರಗಳಿವೆ. ಅಂತಹ ಸ್ತರಗಳಲ್ಲಿ ನಮ್ಮ ಸ್ಥಿತಿ ಒಂದೇ ಆಗಿರುತ್ತದೆ.
ಅದು ಹೇಗೆಂದರೆ ಪೂರ್ಣ ಕತ್ತಲಲ್ಲೂ ನಮಗೇನೂ ಕಾಣಿಸದು
ಹಾಗೆ ಪೂರ್ಣ ಬೆಳಕಿನಲ್ಲೂ ನಮಗೇನೂ ಕಾಣುವುದಿಲ್ಲ.
ನಮ್ಮ ಜೀವನಕ್ಕೆ ಬೇಕಾಗಿರುವುದು ಪೂರ್ಣ ಕತ್ತಲೂ ಅಲ್ಲ ಅಥವಾ ಪೂರ್ಣ ಬೆಳಕೂ ಅಲ್ಲ.
ಎರಡೂ ಕೂಡಿರುವ ಸಮಸ್ಥಿತಿ, ಆಗಲೇ ಜೀವನದ ಬಂಡಿ ಸಾಗಿಸಲು ಸಾಧ್ಯ. ಆಗ ಮಾತ್ರ ನಮ್ಮ ಮುಂದಿರುವ ಹಾದಿ ಸ್ಪಷ್ಟವಾಗಿ ಗೋಚರಿಸುತ್ತದೆ.
ನಮ್ಮ ಜೀವನದ ನಡಿಗೆಗೆ ದೀಪ ಕತ್ತಲೋಡಿಸುವ ಸಾಧನವಷ್ಟೆ. ಈ ದೀಪಾವಳಿ ಹಬ್ಬ ನನ್ನ,ನಿನ್ನ ಹಾಗು ಸಮಾಜದ ಕತ್ತಲನ್ನು ಓಡಿಸುವ ಸಾಂಕೇತಿಕ ಅಷ್ಟೆ.
ದೀಪವನ್ನು ಬೆಳಗಿದರೆ ಸಾಲದು;
ಬಾಹ್ಯ ಕತ್ತಲನ್ನು ತಳ್ಳಿದರೆ ಸಾಲದು;
ಮನುಕುಲದ ಉನ್ನತಿಗೆ ಶ್ರಮಿಸೋಣ
ಬನ್ನಿ ಶಾಂತಿ,ನೆಮ್ಮದಿ,ಪ್ರೀತಿ-ವಾತ್ಸಲ್ಯ,ಮಾನವೀಯತೆಯ ದೀವಿಗೆಯನ್ನು ಮನ ಮನಗಳಲ್ಲಿ,ಮನೆ ಮನೆಗಳಲ್ಲಿ ಹೊತ್ತಿಸೋಣ,
ಬಡತನ,ನೋವು,ದ್ವೇಷ,ಭ್ರಷ್ಟಾಚಾರದ ಅಂಧಕಾರವನ್ನು ಇಲ್ಲವಾಗಿಸೋಣ.

ಭಾನುವಾರ, ಅಕ್ಟೋಬರ್ 23, 2011

ಅಹಂಕಾರದ ಸೋಲು


ಇದೊಂದು ನೀತಿ ಕಥೆ. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ತಂದಿದ್ದೇನೆ.ನನ್ನ ಅಕ್ಕನ ಮಗಳು ’ಅಂಜು’ಳ ಶಾಲಾ ಪಠ್ಯದಲ್ಲಿ ಪಾಠವಾಗಿತ್ತು ಈ ಕಥೆ.

ಅದೊಂದು ಅತಿಚಳಿಯ ಚಳಿಗಾಲ. ಒಂದು ಗುಂಪು ಹಂಸಗಳು ಅತಿಯಾದ ಹಿಮಾಲಯದ ಚಳಿ ತಡೆಯಲಾರದಾಯಿತು. ಆದುದರಿಂದ ಅವೆಲ್ಲವೂ ಬೆಚ್ಚಗಿನ ಪ್ರದೇಶವನ್ನು ಹುಡುಕುತ್ತಾ ಕೇರಳದ ಮಲಬಾರ್ ಸಮುದ್ರತೀರಕ್ಕೆ ಬಂದವು.ಹತ್ತಿರದ ಅರಣ್ಯ ಪ್ರದೇಶದಲ್ಲಿ ಒಂದು ಗುಂಪು ಕಾಗೆಗಳು ವಾಸವಾಗಿದ್ದವು. ಅವುಗಳಿಗೆಲ್ಲಾ ಒಂದು ನಾಯಕ ಕಾಗೆಯಿತ್ತು. ಅದಕ್ಕೆ ತನ್ನ ಹಾರಾಟದ ಶಕ್ತಿ-ಯುಕ್ತಿಯ ಬಗ್ಗೆ ಅಪಾರ ಅಹಂಕಾರವಿತ್ತು.

ಒಂದು ದಿನ ಕಾಗೆಯ ನಾಯಕ ಹಂಸಗಳ ಬಳಿ ಹೋಗಿ " ನಾನು ಯಾರೆಂದು ನಿಮಗೆ ಗೊತ್ತೇ? ನಾನು ಈ ಮಲಬಾರಿನ ಹಾರಾಟದ ರಾಜ!,ಯಾರೊಬ್ಬರೂ ನನ್ನೊಂದಿಗೆ ಹಾರಟದಲ್ಲಿ ಸ್ಪರ್ಧಿಸಲಾರರು.ನೀವಾದರೂ ನನ್ನೊಂದಿಗೆ ಸ್ಪರ್ಧಿಸುವಿರಾ?" ಎಂದು ದರ್ಪದಿಂದ ಕೇಳಿದನು. ಹಂಸಗಳ ನಾಯಕ ಏನನ್ನೂ ಹೇಳಲಿಲ್ಲ. ಕಾಗೆಗಳ ನಾಯಕ ಹಂಸಗಳನ್ನು ಬೈದುಕೊಳ್ಳುತ್ತಾ ಆಕಾಶಕ್ಕೆ ಹಾರಿತು. ತನ್ನ ಹಾರಾಟದ ಶಕ್ತಿಯನ್ನು ಎಲ್ಲರಿಗೂ ತೋರಿಸುವುದಕ್ಕೆ ಅಕಾಶದಲ್ಲಿ ಜಿಗಿತ,ನೆಗೆತ,ರೆಕ್ಕೆಗಳನ್ನು ಮುಚ್ಚುವುದು,ರೆಕ್ಕೆಗಳನ್ನು ಛತ್ರಿಯಂತೆ ಮಾಡಿ ಹಲವು ಭಂಗಿಗಳಲ್ಲಿ ಹಾರಾಟಮಾಡಿತು. ಬೇರೆಯ ಕಾಗೆಗಳು ಅದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದವು. ಅದೇ ಕ್ಷಣದಲ್ಲಿ ನಾಯಕ ಕಾಗೆಯು ಹಂಸಗಳಿಗೆ ಸ್ಪರ್ಧೆಗೆ ಬರುವಂತೆ ತಾಕೀತು ಮಾಡಿತು. ಹಂಸವು ನಗುತ್ತಾ ಹೇಳಿತು"ನಾಯಕ ಕಾಗೆಯೇ ನಾನು ನೇರವಾಗಿ ಮಾತ್ರ ಹಾರಬಲ್ಲೆ,ಅದನ್ನು ಮಾತ್ರ ನಿನ್ನೊಂದಿಗೆ ಪ್ರಯತ್ನ ಪಡುತ್ತೇನೆ". ಎಂದು ಹೇಳುತ್ತಲೇ ಹಂಸವು ಆಕಾಶಕ್ಕೆ ಹಾರಿತು ಮತ್ತು ಕಾಗೆಯ ನಾಯಕ ಹಂಸವನ್ನು ಹಿಂಬಾಲಿಸಿತು.ಹಲವು ಗಂಟೆಗಳ ಕಾಲ ಸತತವಾಗಿ ಎರಡು ಜೊತೆಜೊತೆಯಾಗಿ ಹಾರಾಡಿದವು.ಪಶ್ಚಿಮದಲ್ಲಿ ಸೂರ್ಯ ದಿನಕ್ಕೆ ತೆರೆಯೆಳೆಯುತ್ತಿದ್ದಂತೆಯೇ ಕಾಗೆಯ ನಾಯಕನಿಗೆ ದಣಿವಾಗತೊಡಗಿತು.ಹಂಸದೊಂದಿಗೆ ಹಾರಾಟ ಮುಂದುವರೆಸಲು ನಾಯಕ ಕಾಗೆಗೆ ಅಸಾಧ್ಯವಾಯಿತು. ನಾಯಕ ಕಾಗೆಯು ವಿಶ್ರಾಂತಿ ತೆಗೆದುಕೊಳ್ಳಲು ಜಾಗ ಹುಡುಕತೊಡಗಿತು,ಆದರೆ ಎಲ್ಲಿಯೊ ಮಣ್ಣಿನ,ಮರದ ಜಾಗ ಸಿಗಲೇಯಿಲ್ಲ.ಅದು ಎತ್ತರದಿಂದ ಜಾರತೊಡಗಿತು ಹಾಗು ಸಮುದ್ರಕ್ಕೆ ಬೀಳತೊಡಗಿತು. ಹಂಸವು ನಾಯಕ ಕಾಗೆಯ ಕಡೆ ನೋಡಿತು ಹಾಗು ಹೇಳಿತು"ಸಹೋದರನೇ ಏಕೆ ಅಲೆಗಳೊಡನೆ ಆಟವಾಡುತ್ತಿರುವೆ?" ತನ್ನನ್ನು ಬದುಕಿಸಿಕೊಳ್ಳುವ ಸಂಘರ್ಷದಲ್ಲಿ ನಾಯಕ ಕಾಗೆಯು ಹೇಳಿತು"ಸಹೋದರನೇ! ನನ್ನ ಮೇಲೆ ಕರುಣೆತೋರಿಸು, ನನ್ನನ್ನು ರಕ್ಷಿಸು ಇಲ್ಲವಾದರೆ ನಾನು ಸಮುದ್ರದಲ್ಲಿ ಮುಳುಗಿಸಾಯುತ್ತೇನೆ". ಹಂಸವು ಕಾಗೆಯ ಮೇಲೆ ಕರುಣೆತೋರಿ ಅದನ್ನು ಸಮುದ್ರದ ತೀರಕ್ಕೆ ಕರೆದೊಯ್ಯಿತು.ನಾಯಕ ಕಾಗೆಗೆ ನಾಚಿಕೆಯಾಯಿತು. ಅವನ ಗರ್ವಭಂಗವಾಗಿತ್ತು.
ಕಥೆಯ ನೀತಿ: "ಅಹಂಕಾರ ಯಾವಾಗಲೂ ಸೋಲುತ್ತದೆ".

ಮಂಗಳವಾರ, ಅಕ್ಟೋಬರ್ 11, 2011

ಭಾರತೀಯ ಕೇಂದ್ರ ಸರ್ಕಾರದ ಭಾಷಾಸೂತ್ರ-ಮಾತೃಭಾಷೆಯ ಕಗ್ಗೊಲೆ




ತುಂಬಾ ದಿನಗಳ ನಂತರ ಬರೆಯುವ ಅವಕಾಶ ಬಂದಿದೆ. ನನ್ನ ಆತ್ಮೀಯ ಗೆಳೆಯ ಹಾಗು ಕನ್ನಡ ಕಟ್ಟಾಳು, ಕನ್ನಡದ ಕಂದ ಶ್ರೀಯುತ ಆನಂದ್.ಜಿ ಯವರು ’ಹಿಂದೀ ಹೇರಿಕೆ -ಮೊರು ಮಂತ್ರ ; ನೂರು ತಂತ್ರ’ ಎಂಬ ’ಪುಸ್ತಕದ ಬಗ್ಗೆ ಅಭಿಪ್ರಾಯ ತಿಳಿಸಿ’ ಎಂದ ಮೇಲೆ ಇಲ್ಲವೆನ್ನಲು ಮನಸ್ಸಾಗಲಿಲ್ಲ. ’ಏನು ಗುರು ಕಾಫಿ ಆಯ್ತಾ’ ಕನ್ನಡದ ಬ್ಲಾಗ್ನಲ್ಲಿ ಅವಾಗವಾಗ ಬಿಡಿ ಲೇಖನಗಳತ್ತ ಕಣ್ಣಾಡಿಸಿದ್ದೆ. ಆ ಬಿಡಿ ಲೇಖನಗಳ ಜೊತೆ ಒಂದು ದೊಡ್ದ ಸಂಶೋಧನೆಯನ್ನೇ ಮಾಡಿ ಅನೇಕಾನೇಕ ಮಾಹಿತಿ ಮೊಲಗಳ ಬೆನ್ನುಹತ್ತಿ ಪರಿಪೂರ್ಣವಾದ ಒಂದು ಪುಸ್ತಕ ಹೊರತರುವ ಅವರ ಪ್ರಯತ್ನ ಸಫಲವಾಗಿದೆ. ಅವರ ಪ್ರಯತ್ನದ ಫಲವಾಗಿ ಈ ಒಂದು ಅತ್ಯುತ್ತಮವಾದ ಪುಸ್ತಕವೇನೋ ಹೊರಬಂದಿದೆ, ಆದರೆ ಜನತೆ, ಓದುವರ್ಗ ಯಾವ ರೀತಿ ಅದನ್ನು ಸ್ವೀಕರಿಸುತ್ತಾರೆ ಅನ್ನೋ ಕುತೂಹಲವಿದೆ. ವಿಷಯದ ಗಂಭೀರತೆಯು ಲೇಖಕರಿಂದ ಸಮರ್ಥವಾಗಿ ಚಿತ್ರಿತವಾಗಿದೆ. ಮನದಲ್ಲಿ ವಿಮರ್ಶೆಗೆ ಹಚ್ಚುವಂತಹ ವಿಷಯ ಲೇಖಕರಿಂದ ಅತ್ಯುತ್ತಮವಾಗಿ ಕಾಗದದ ಮೇಲೆ ಮೊಡಿಬಂದಿದೆ.ಕಾರ್ಯರೂಪಕ್ಕೆ ತರುವ ಅಥವಾ ನಮ್ಮತನವನ್ನು ಉಳಿಸಿಕೊಳ್ಳುವ ಪ್ರಯತ್ನ ಪ್ರತಿಯೊಬ್ಬರದೂ ಆಗಿದೆ. ಲೇಖಕರು ಎತ್ತಿರುವ ಪ್ರಶ್ನೆ ಹಾಗು ಅದಕ್ಕೆ ಪರಿಹಾರ ಚರ್ಚೆ ಹಾಗು ಒತ್ತಾಯ ಮೊಲಕ ಮಾತ್ರ ಸಾಧ್ಯ. ಪರಿಹಾರದ ಹಾದಿ ಅಷ್ಟು ಸುಗಮವಲ್ಲ ವೆಂಬುದು ಎಲ್ಲರಿಗೂ ತಿಳಿದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಣ್ತೆರೆದು ನಾಡಿನ ಜನತೆಯ ಭಾವನೆಗಳಿಗೆ ಬೆಲೆ ಕೊಡಲೇಬೇಕಾಗಿದೆ ( ತಮಿಳುನಾಡಿನ ಹೋರಾಟಕ್ಕೆ ಸಿಕ್ಕ ಜಯ ನಮ್ಮ ಕಣ್ಮುಂದಿದೆ).
ಭಾರತ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವೆಂಬ ಹೆಗ್ಗಳಿಕೆ ಎಲ್ಲರಿಗೂ ತಿಳಿದ ವಿಷಯ. ವೈವಿಧ್ಯತೆ ಎಂದರೆ ಭಾಷೆ, ಸಂಸ್ಕೃತಿ, ಆಚಾರ-ವಿಚಾರ,ಉಡಿಗೆ-ತೊಡಿಗೆ,ಆಹಾರ-ವಿಹಾರ ಕ್ಕೆ ಸಂಬಂದಿತ ವಿಷಯಗಳಾಗಿವೆ.ಅದರಲ್ಲಿಯೊ ಭಾಷೆಯ ಆಧಾರದ ಮೇಲೆ ಅನೇಕಾನೇಕ ರಾಜ್ಯಗಳ ಹುಟ್ಟೂ ಆಗಿರುವುದು ಹಾಗು ಆ ರಾಜ್ಯಗಳ ಹೆಸರುಗಳಿಗೂ ಅವುಗಳ ಮಾತೃ ಭಾಷೆಗೂ ಅವಿನಾಭಾವ ಸಂಬಂದದಿಂದಲೇ ಎಂದು ಎಲ್ಲರಿಗೂ ತಿಳಿದಿದೆ ಹಾಗು ತಿಳಿಯುತ್ತದೆ. ಆದರೆ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರ ಈ ವೈವಿಧ್ಯತೆಯನ್ನು ನಾಶಮಾಡುವ ಹುನ್ನಾರ.ದೂರದೃಷ್ಟಿ,ಸಂಚು ಅಡಗಿದೆ ಎನ್ನುವುದು ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟವಾದರೂ, ಈ ನಿಟ್ಟಿನಲ್ಲಿ ಲೇಖಕರ ಪ್ರಯತ್ನ ಮಾತ್ರ ಮೆಚ್ಚುವಂತಹುದು.
ಲೇಖಕರು ಹೇಳಿರುವಂತೆ ’ಹಿಂದೀ ಭಾಷೆ ರಾಷ್ಟ್ರಭಾಷೆಯಲ್ಲ’ ಎಂಬ ವಿಷಯ ಅನೇಕರಿಗೆ ಗೊತ್ತೇಯಿಲ್ಲ. ಶಾಲೆ-ಕಾಲೇಜುಗಳಲ್ಲಿ ಹಿಂದೀ ರಾಷ್ಟ್ರಭಾಷೆಯೆಂದೇ ಬಿಂಬಿಸಲಾಗಿದೆ.ನಮ್ಮ ಚಿಕ್ಕ ಮಕ್ಕಳು ಹಾಗು ಯುವ ಜನತೆಯಲ್ಲಿ ಹಿಂದೀ ರಾಷ್ಟ್ರಭಾಷೆ ಎನ್ನುವುದನ್ನು ಅವರ ಮನಗಳಲ್ಲಿ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಸಣ್ಣ ಮನೋಭಾವ ಭಾಷೆಯ ವಿಷಯದಲ್ಲಿ ಪ್ರಾಂತೀಯವಾದ ಅಥವಾ ಒಕ್ಕೂಟ ವ್ಯವಸ್ಥೆಯನ್ನು ನಾಶಮಾಡುವ ಸಂಚು ಎನ್ನದೆ ಬೇರೆ ದಾರಿಯಿಲ್ಲ. ದೇಶದ ಸಮಗ್ರತೆ, ರಾಷ್ಟ್ರಾಭಿಮಾನ ಎಂದೆಲ್ಲಾ ಪೊಳ್ಳು ನುಡಿಗಳಿಂದ ಬಣ್ಣ ಬಳಿಯುತ್ತಿರುವ ಸರ್ಕಾರಗಳು, ಅದರ ಹಿಂದಿರುವ ಭೀಕರ ದುರುದ್ಧೇಶ ಜನಸಾಮಾನ್ಯರಿಗೆ ಕಾಣದಂತೆ ಮಾಡಿದೆ.ನಮಗೆಲ್ಲಾ ತಿಳಿದಿದೆ: ಸೇವೆ, ವ್ಯಾಪಾರವೆಂದುಕೊಂಡು ಬಂದವರ ಹಿಂದಿನ ದುರುದ್ಧೇಶ ನಮ್ಮ ದೇಶವನ್ನು,ಜನತೆಯನ್ನು ಶತ-ಶತಮಾನಗಳ ಕಾಲ ಪರಕೀಯರ ಆಳ್ವಿಕೆಗೆ,ಗುಲಾಮಗಿರಿಗೆ ಒಳಗಾಗಿದ್ದು ಒಂದು ತಿಳಿದ ಇತಿಹಾಸ. ಮತ್ತೊಮ್ಮೆ ಅಂತಹುದೇ ಆತಂಕ ಕೇಂದ್ರ ಸರ್ಕಾರದ ಭಾಷಾನೀತಿಯಿಂದ ಮುಂದೆ ಉದ್ಬವಿಸಬಹುದು.ಭಾಷಾ ಸಾಮ್ರಾಜ್ಯಶಾಹಿಯ ಉದ್ದೇಶ / ದುರುದ್ಧೇಶ ಹಿಂದೀ ಹೇರಿಕೆಯ ಮೊಲ ಎಂದರೆ ತಪ್ಪಲ್ಲ.
ಹಿಂದೀ ಹೇರಿಕೆಯ ವಿರುದ್ಧದ ಹೋರಾಟಗಳ ವಿವರಗಳನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ಲೇಖಕರು ತಮ್ಮ ಪುಸ್ತಕದಲ್ಲಿ ಅಳವಡಿಸಿಕೊಂಡಿರುವುದು ಪ್ರಸ್ತುತವಾಗಿದೆ. ಹಿಂದೀ ವಿರೋಧದ ಹೋರಾಟದಲ್ಲಿ ತಮಿಳುನಾಡು ಜಯಗಳಿಸಿರುವುದೂ ಗಮನಾರ್ಹವಾದುದು ಅದು ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಹಿಂದೀ ವಿರೋಧದ ಹೋರಾಟದಲ್ಲಿ ಮಿಕ್ಕ ರಾಜ್ಯಗಳ ಧ್ವನಿ ಮಾತ್ರ ತುಂಬಾ ಕ್ಷೀಣವಾಗಿದೆ. ಅಸ್ಸಾಂ.ಮಹಾರಾಷ್ಟ್ರಗಳಲ್ಲಿ ಹಾಗು ತೀರ ಇತ್ತೀಚೆಗೆ ಕರ್ನಾಟಕದಲ್ಲೂ ಹಿಂದೀ ಹೇರಿಕೆ ವಿರುದ್ಧದ ಹೋರಾಟಗಳ ಧ್ವನಿಗೂಡುತ್ತಿರುವುದು ಗಮನಾರ್ಹವಾಗಿದೆ.
ಭಾರತದ ಸಂವಿಧಾನದ ೧೭ನೇ ಭಾಗದ ೧ನೇ ಅಧ್ಯಾಯದಲ್ಲಿ ೩೪೩ ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಭಾರತದ ಆಡಳಿತ ಭಾಷೆಯ ಬಗ್ಗೆ ಬರೆಯಲಾಗಿದೆ. ಹಿಂದೀ ಭಾಷೆ ಭಾರತದ ಆಡಳಿತ ಭಾಷೆ ಎಂದು ಹೇಳದೆ ಭಾರತದ ಆಡಳಿತ ಭಾಷೆ ಎಂದು ಮಾತ್ರ ಹೇಳಲಾಗಿದೆ. ಬರೀ ಹಿಂದೀ ಭಾಷೆಯ ಬಗ್ಗೆ ಸಂಶೋಧನೆ,ಪ್ರಚಾರದ ಬಗ್ಗೆ ಸಮಿತಿಗಳ ರಚನೆ ಮಾಡಬೇಕೆಂದು ಮಾತ್ರ ಸಂವಿಧಾನದಲ್ಲಿ ಹೇಳಲಾಗಿದೆ, ಇತರ ಭಾರತೀಯ ಭಾಷೆಗಳ ಬಗ್ಗೆ ಸಂವಿಧಾನವೇ ಅಸಡ್ಡೆ ತೋರಿದೆ ಎಂದೆನಿಸಿದೆ. ಬೇರೆ ಭಾರತೀಯ ಭಾಷೆಗಳ ಅಭಿವೃದ್ಧಿಯ ಬಗ್ಗೆ ಅದು ಅವಕಾಶ ನೀಡಲಿಲ್ಲವೇಕೋ? ಸಂವಿಧಾನದ ಈ ವಿಧಿ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ ಎಂದರೆ ತಪ್ಪಲ್ಲ.ಸಂವಿಧಾನವನ್ನು ಒಪ್ಪಿದ್ದೇವೆ ಎಂದರೆ ನಮ್ಮತನವನ್ನು ನಾವು ಬಿಡಲು ಒಪ್ಪಿಗೆಕೊಟ್ಟಿದ್ದೇವೆ ಎಂದರ್ಥವಲ್ಲ.ಏಕತೆ ಸಾಧಿಸಬೇಕಾದಂತಹ ಸಂವಿಧಾನದಿಂದಲೇ ರಾಜ್ಯಗಳ ಒಗ್ಗಟ್ಟಿಗೆ ಕೊಡಲಿಪೆಟ್ಟು ಕೊಡುತ್ತಿರುವುದು ವಿಪರ್ಯಾಸ. ಸಂವಿಧಾನದ ಈ ವಿಧಿಯೇ ಆಡಳಿತ ಭಾಷೆಯಾದ ಹಿಂದೀಯ ಬಳಕೆಯನ್ನು ಒತ್ತಾಯ,ಆಮೀಷ ಮತ್ತು ವಿಶ್ವಾಸಗಳ ಮೊಲಕ ಭಾರತಾದ್ಯಂತ ನಿರಂತರವಾಗಿ ಹೇರುವುದಕ್ಕೆ ಪ್ರೇರಣೆ ನೀಡಿದೆ ಹಾಗು ಕೇಂದ್ರ ಸರ್ಕಾರ ಅದನ್ನೇ ಮಾಡುತ್ತಿದೆ. ಸರ್ಕಾರಗಳು ಇನ್ನೂ ಮುಂದೆ ಹೋಗಿ ಹಿಂದೀ ಭಾಷೆ ರಾಷ್ಟ್ರಭಾಷೆ ಯೆಂದು,ದೇಶಕ್ಕೊಂದು ಭಾಷೆ, ಹಿಂದೀ ಏಕತೆಯ ಸಂಕೇತವೆಂದೂ ಬಿಂಬಿಸ ಹೊರಟಿದೆ. ಒಂದು ಕಡೆ ನಮ್ಮ ಸಂವಿಧಾನ ಅನೇಕತೆಯಲ್ಲಿ ಏಕತೆ ಅದು ಭಾರತದ ಅನನ್ಯತೆ ಎಂದು ಹೇಳುತ್ತದೆ, ಇನ್ನೊಂದು ಕಡೆ ಭಾರತಕ್ಕೊಂದು ಭಾಷೆ ಎನ್ನುತ್ತದೆ, ಈ ಇಬ್ಬಂದಿತನ ಏಕೆ? ಈ ಹಿಂದೀ ಹೇರಿಕೆಯಿಂದ ಭಾರತದ ಅನನ್ಯತೆಗೆ ಖಂಡಿತವಾಗಿಯೊ ಆತಂಕವಿದೆ.
ಕೇಂದ್ರ ಸರ್ಕಾರಿ ಉಧ್ಯಮೆಗಳಲ್ಲಿ ಹಿಂದೀ ಹೇರಿಕೆ ಹೆಚ್ಚಾಗಿ ಕಂಡುಬರುತ್ತಿದು ಕನ್ನಡಿಗರು ಮುಂದೆ ಅಲ್ಲಿ ಕೆಲಸ ಸಿಗದೇ ಒದ್ದಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕನ್ನಡ ಭಾಷೆಯಿಂದ ಮುಂದೆ ಹೊಟ್ಟೆಗೆ ಊಟ ಸಿಗದ ಪರಿಸ್ಥಿತಿ ಕೇಂದ್ರ ಸರ್ಕಾರದ ಭಾಷಾನೀತಿಯಿಂದ ನಿರ್ಮಾಣವಾಗಿದೆ.ನಮ್ಮ ಭಾಷೆಯನ್ನು ನಾವೇ ಅಸಡ್ಡೆಮಾಡುವಂತಹ ಪರಿಸ್ಥಿತಿಯನ್ನು ನಿರ್ಮಾಣಮಾಡಿದೆ.ಒಟ್ಟಾರೆಯಾಗಿ ನಮ್ಮ ಸರ್ಕಾರದ ಆಷಾಡಭೂತಿತನ ಬಯಲಾಗಿದೆ. ಇಷ್ಟಾದರೂ ನಮ್ಮ ರಾಜ್ಯ ಸರ್ಕಾರಗಳು, ಬುದ್ದಿಜೀವಿಗಳು. ಸಾಹಿತಿಗಳು, ಭಾಷಾ ವಿದ್ವಾಂಸರು ಈ ಬಗ್ಗೆ ಚಕಾರವೆತ್ತದೇಯಿರುವುದು ಆಶ್ಚರ್ಯ ಮೊಡಿಸಿದೆ. ರಾಜ್ಯ ಸರ್ಕಾರ,ಕೇಂದ್ರ ಸರ್ಕಾರ ಹಾಗು ಬುದ್ದಿಜೀವಿಗಳ ನಡುವೆ ಏನು ಒಳಒಪ್ಪಂದವಾಗಿದೆ ಎಂಬುದು ಬಯಲಾಗಬೇಕು.
ಒಟ್ಟಾರೆ ಲೇಖಕರು ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ, ಅವರ ಪ್ರಯತ್ನ ಸಾರ್ಥಕ. ಅವರ ಲೇಖನಿಯಿಂದ ಇನ್ನೂ ಹೆಚ್ಚಿನ ಕನ್ನಡ ಪುಸ್ತಕಗಳನ್ನು ನಿರೀಕ್ಷಿಸಬಹುದು.ಒಳ್ಳೆಯ ಗುರಿಯನ್ನು ಹೊತ್ತಿರುವ ಹೊತ್ತಿಗೆ ಎಂದರೆ ತಪ್ಪಲ್ಲ. ಸತ್ತಂತಿಹರನ್ನು ಬಡಿದೆಚ್ಚರಿಸುವ ಮೊದಲ ಗಂಟೆ ಈ ಪುಸ್ತಕವೆನ್ನಬಹುದು.

ಮಂಗಳವಾರ, ಮೇ 3, 2011

ಸ್ನೇಹ ನಿವೇದನೆ

ಆತ್ಮೀಯ ಗೆಳೆಯರೇ!,

ನಮ್ಮ ಆಯಸ್ಸಿನ ಅರ್ಧಭಾಗವನ್ನು ನಾವೆಲ್ಲರೂ ಕಳೆದಿದ್ದೇವೆ. ಜೀವನದ ಯಾವುದೋ ಒಂದು ಘಟ್ಟದಲ್ಲಿ ನಾವೆಲ್ಲಾ ಒಂದೆಡೆ ಜೊತೆಯಾಗಿ ಜೀವನದ ಮಧುರ ಕ್ಷಣಗಳನ್ನು ಆಸ್ವಾದಿಸಿದ್ದೇವೆ.ಕಷ್ಟ,ಸಂಕಟ,ನೋವು,ವಿರಹ,ಸ್ನೇಹ,ಕೋಪ,ದ್ವೇಷದ ಹತ್ತು-ಹಲವು ಮಜಲುಗಳನ್ನು ದಾಟಿ ನಮ್ಮದೇ ಜೀವನವನ್ನು ಅನುಭವದ ಪಾತ್ರೆಯಲ್ಲಿಟ್ಟು ಆಸ್ವಾಧಿಸಿ ರಸಾನುಭವನ್ನೋ ಅಥವಾ ರಸಭಂಗವನ್ನೋ ನಮ್ಮದಾಗಿಸಿಕೊಂಡಿದ್ದೇವೆ. ನಮ್ಮ ನಮ್ಮ ಕಾಲಜ್ಯ್ಯಾನ,ಶಕ್ತಿ-ಯುಕ್ತಿ,ಅದೃಷ್ಟ,ಹಾರೈಕೆಗಳಿಗನುಗುಣವಾಗಿ ಇಂದಿನ ವ್ಯವಸ್ಥೆಯಲ್ಲಿ ನಮ್ಮದೇ ಪ್ರಯತ್ನದ ಫಲದಿಂದ ಸಮಾಜದಲ್ಲಿ ಒಂದು ಸ್ಥಾನವನ್ನು ಪಡೆದುಕೊಂಡಿದ್ದೇವೆ.ಜೀವನದಲ್ಲಿ ಸಾಕಷ್ಟುದೂರ ಬಂದಿದ್ದೇವೆ.ನಮ್ಮ ನಿನ್ನೆಗಳು ಏನನ್ನೋ ಹೇಳುತ್ತಿರುವುದನ್ನೂ ಕೇಳಿಸಿಕೊಳ್ಳದೆ ನಾಳೆಗಳ ಬೆನ್ನಟ್ಟಿ ಬಂದಿದ್ದೇವೆ. ನಮ್ಮದೇ,ನಮ್ಮವರೆನಿಸಿಕೊಂಡವರ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದೇವೆ. ಹಣ,ಪ್ರತಿಷ್ಟೆಗಳ ಹಿಂದೆ ಎಡಬಿಡದೆ ಓಡುತ್ತಲೇ ಇದ್ದೇವೆ. ಹತ್ತು-ಹಲವು ವ್ಯಾಮೋಹಗಳಿಗೆ ಬಲಿಬಿದ್ದಿದ್ದೇವೆ. ಸ್ನೇಹದ ಪರಿಧಿಯನ್ನು ಧಾಟಿ ಬಹುದೂರ ಸಾಗಿಬಂದಿದ್ದೇವೆ.ನಮ್ಮತನವನ್ನು ಕಳೆದುಕೊಂಡಿದ್ದೇವೆ, ನಮ್ಮದೇ ಲೋಕದಲ್ಲಿ ಬಾವಿಯೊಳಗಿನ ಕಪ್ಪೆಯಂತೆ ಜೀವನವನ್ನು ಸಾಗಿಸುತ್ತಿದ್ದೇವೆ.ಒಮ್ಮೆ ಹಿಂತಿರುಗಿ ನೋಡಿ, ನಮ್ಮ ಆ ದಿನಗಳು ಹೇಗಿದ್ದವು?ಸ್ನೇಹದ ಕಡಲಿನ ದೋಣಿಯಲ್ಲಿ ಒಂದೇ ದಿಕ್ಕಿನೆಡೆಗೆ ನಡೆಯುವ ಪಯಣಿಗರಾಗಿ,ಸ್ವಚ್ಛಂಧ ಹಕ್ಕಿಗಳಾಗಿ,ಚೈತನ್ಯದ ಚಿಲುಮೆಗಳಾಗಿದ್ದೆವು.ರುಚಿಯಿಲ್ಲದ ಆಹಾರ,ಶುಚಿಯಿಲ್ಲದ ಬಟ್ಟೆಯಲ್ಲಿಯೊ ಮನಸ್ಸು ಮಾತ್ರ ಅಪರಂಜಿಯಂತಿತ್ತಲ್ಲವೇ? ಆದರೆ ಇಂದೇನಾಗಿದೆ? ಬಗೆ ಬಗೆ ಭಕ್ಷ್ಯಭೋಜ್ಯಗಳೇ ನಮ್ಮ ದಿನನಿತ್ಯದ ಆಹಾರ, ಅದೂ ಪಂಚತಾರಾ ಹೋಟಲಿನಲ್ಲೇ ಅಲ್ಲವೇ!. ಓಡಾಟ ಕಾರು-ವಿಮಾನಗಳಲ್ಲೇ! ಅಪ್ಪಟ ಹಕ್ಕಿಗಳಾಗಿ ಹಾರಾಡುತ್ತಿದ್ದರೂ ಮನಸ್ಸು ಹಗುರವಾಗಿರದೆ ಹಲವಾರು ಒತ್ತಡಗಳಿಗೆ ಸಿಲುಕಿಕೊಂಡಿದೆ ಮತ್ತು ನಮ್ಮತನವನ್ನು ಕಳೆದುಕೊಂಡು ನರಳುತ್ತಿದೆ ನಿಮಗೆ ಇದು ಅರ್ಥವಾಗುತ್ತಿಲ್ಲವೇ?
’ವಿದ್ಯಾರ್ಥಿ ಜೀವನ, ಸುವರ್ಣ ಜೀವನ’ ಎನ್ನುವ ಮಾತಿದೆಯಲ್ಲವೇ ಅದೇ ರೀತಿ ಸ್ನೇಹ ಜೀವನ ನಿರಂತರವಾದುದು ಅದನ್ನು (ಸ್ನೇಹವನ್ನು) ನಾವು ಬರೀ ವಿದ್ಯಾರ್ಥಿ ಜೀವನಕ್ಕೆ ಸೀಮಿತಮಾಡಿ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿಲ್ಲವೇ?

ಕವಿಯೊಬ್ಬ ಸ್ನೇಹದ ಕುರಿತು ಈ ರೀತಿ ಬರೆದಿದ್ದಾನೆ
"ಬಾ ನಾವಿಕನೆ ಸ್ನೇಹದ ಒಡಲಿನ ಜೇನಿನ ಕಡಲಿದು ಇಂದು-ನಾಳೆಗೆ ಮುಗಿಯದು ನಿತ್ಯ ನಿರಂತರ ಅನಂತ ದೂರಕು ತೋರುವ ಕಡಲ ಒಡಲಿದು ಉಬ್ಬರದಿ ಅಬ್ಬರಿಸುವ ಕಡಲ ಆಳ ನೋಡಬೇಡ ಮೌನವನ್ನು ಮುರಿಯುವ ಭೋರ್ಗರೆತಕೆ ಅಂಜಬೇಡ ಸ್ನೇಹದ ಆಳವಿದು ಸವಿನೆನಪಿನ ಭೋರ್ಗರೆತವಿದು ಸ್ನೇಹ ಸಾಗರವೆಂಬುದು ನೆನಪಿನ ಬುತ್ತಿಯ ಮುತ್ತು ಪಚ್ಚೆಗಳ ಗೂಡು ಒಡಲಿನೊಂದಿಗೆ ಸುಳಿವ ಸವಿನೆನಪಿನ ಹಾಡು ಗೆಳೆತನದ ಸೆಲೆಗೆ ಮನಮಿಡಿಯುವ ತಾಳಕೆ ಪ್ರೀತಿ-ವಾತ್ಸಲ್ಯದ ಹಾಡು".

ನಮ್ಮ ಡಿ,ವಿ,ಜಿ ಯವರು ಮಂಕುತ್ತಿಮ್ಮನ ಕಗ್ಗದಲ್ಲಿ ಸ್ನೇಹದ ಬಗ್ಗೆ ಈ ರೀತಿ ಹೇಳಿದ್ದಾರೆ
"ಕಾರಿಳೊಳಾಗಸದಿ ತಾರೆ ನೂರಿದ್ದರೇನು?
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು
ದೂರದಾ ದೈವವಂತಿರಲಿ, ಮಾನುಷಸಖನ
ಕೋರುವುದು ಬಡಜೀವ – ಮಂಕುತಿಮ್ಮ"
ಎಷ್ಟು ಅದ್ಭುತವಾಗಿದೆಯಲ್ಲವೇ? ಕೇಳಲು ಇಷ್ಟೋಂದು ಮಧುರವಾಗಿದೆ ಇನ್ನು ಸ್ನೇಹದ ಮಧುರತೆಯನ್ನು ಅನುಭವಿಸಿರೋ ನಮಗೆ ಅದನ್ನು ಮತ್ತೆ ಜ್ನ್ಯಾಪಿಸುವ ಅಗತ್ಯತೆ ಇದೆ ಅದಕ್ಕೆ ಇಷ್ಟೋಂದು ಹರಿಕಥೆ. ಸ್ನೇಹದ ಕಡಲಿನಲ್ಲಿ ಮತ್ತೆ ಈಜೋಣ ಬನ್ನಿ.