ಮಂಗಳವಾರ, ಅಕ್ಟೋಬರ್ 11, 2011

ಭಾರತೀಯ ಕೇಂದ್ರ ಸರ್ಕಾರದ ಭಾಷಾಸೂತ್ರ-ಮಾತೃಭಾಷೆಯ ಕಗ್ಗೊಲೆ




ತುಂಬಾ ದಿನಗಳ ನಂತರ ಬರೆಯುವ ಅವಕಾಶ ಬಂದಿದೆ. ನನ್ನ ಆತ್ಮೀಯ ಗೆಳೆಯ ಹಾಗು ಕನ್ನಡ ಕಟ್ಟಾಳು, ಕನ್ನಡದ ಕಂದ ಶ್ರೀಯುತ ಆನಂದ್.ಜಿ ಯವರು ’ಹಿಂದೀ ಹೇರಿಕೆ -ಮೊರು ಮಂತ್ರ ; ನೂರು ತಂತ್ರ’ ಎಂಬ ’ಪುಸ್ತಕದ ಬಗ್ಗೆ ಅಭಿಪ್ರಾಯ ತಿಳಿಸಿ’ ಎಂದ ಮೇಲೆ ಇಲ್ಲವೆನ್ನಲು ಮನಸ್ಸಾಗಲಿಲ್ಲ. ’ಏನು ಗುರು ಕಾಫಿ ಆಯ್ತಾ’ ಕನ್ನಡದ ಬ್ಲಾಗ್ನಲ್ಲಿ ಅವಾಗವಾಗ ಬಿಡಿ ಲೇಖನಗಳತ್ತ ಕಣ್ಣಾಡಿಸಿದ್ದೆ. ಆ ಬಿಡಿ ಲೇಖನಗಳ ಜೊತೆ ಒಂದು ದೊಡ್ದ ಸಂಶೋಧನೆಯನ್ನೇ ಮಾಡಿ ಅನೇಕಾನೇಕ ಮಾಹಿತಿ ಮೊಲಗಳ ಬೆನ್ನುಹತ್ತಿ ಪರಿಪೂರ್ಣವಾದ ಒಂದು ಪುಸ್ತಕ ಹೊರತರುವ ಅವರ ಪ್ರಯತ್ನ ಸಫಲವಾಗಿದೆ. ಅವರ ಪ್ರಯತ್ನದ ಫಲವಾಗಿ ಈ ಒಂದು ಅತ್ಯುತ್ತಮವಾದ ಪುಸ್ತಕವೇನೋ ಹೊರಬಂದಿದೆ, ಆದರೆ ಜನತೆ, ಓದುವರ್ಗ ಯಾವ ರೀತಿ ಅದನ್ನು ಸ್ವೀಕರಿಸುತ್ತಾರೆ ಅನ್ನೋ ಕುತೂಹಲವಿದೆ. ವಿಷಯದ ಗಂಭೀರತೆಯು ಲೇಖಕರಿಂದ ಸಮರ್ಥವಾಗಿ ಚಿತ್ರಿತವಾಗಿದೆ. ಮನದಲ್ಲಿ ವಿಮರ್ಶೆಗೆ ಹಚ್ಚುವಂತಹ ವಿಷಯ ಲೇಖಕರಿಂದ ಅತ್ಯುತ್ತಮವಾಗಿ ಕಾಗದದ ಮೇಲೆ ಮೊಡಿಬಂದಿದೆ.ಕಾರ್ಯರೂಪಕ್ಕೆ ತರುವ ಅಥವಾ ನಮ್ಮತನವನ್ನು ಉಳಿಸಿಕೊಳ್ಳುವ ಪ್ರಯತ್ನ ಪ್ರತಿಯೊಬ್ಬರದೂ ಆಗಿದೆ. ಲೇಖಕರು ಎತ್ತಿರುವ ಪ್ರಶ್ನೆ ಹಾಗು ಅದಕ್ಕೆ ಪರಿಹಾರ ಚರ್ಚೆ ಹಾಗು ಒತ್ತಾಯ ಮೊಲಕ ಮಾತ್ರ ಸಾಧ್ಯ. ಪರಿಹಾರದ ಹಾದಿ ಅಷ್ಟು ಸುಗಮವಲ್ಲ ವೆಂಬುದು ಎಲ್ಲರಿಗೂ ತಿಳಿದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಣ್ತೆರೆದು ನಾಡಿನ ಜನತೆಯ ಭಾವನೆಗಳಿಗೆ ಬೆಲೆ ಕೊಡಲೇಬೇಕಾಗಿದೆ ( ತಮಿಳುನಾಡಿನ ಹೋರಾಟಕ್ಕೆ ಸಿಕ್ಕ ಜಯ ನಮ್ಮ ಕಣ್ಮುಂದಿದೆ).
ಭಾರತ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವೆಂಬ ಹೆಗ್ಗಳಿಕೆ ಎಲ್ಲರಿಗೂ ತಿಳಿದ ವಿಷಯ. ವೈವಿಧ್ಯತೆ ಎಂದರೆ ಭಾಷೆ, ಸಂಸ್ಕೃತಿ, ಆಚಾರ-ವಿಚಾರ,ಉಡಿಗೆ-ತೊಡಿಗೆ,ಆಹಾರ-ವಿಹಾರ ಕ್ಕೆ ಸಂಬಂದಿತ ವಿಷಯಗಳಾಗಿವೆ.ಅದರಲ್ಲಿಯೊ ಭಾಷೆಯ ಆಧಾರದ ಮೇಲೆ ಅನೇಕಾನೇಕ ರಾಜ್ಯಗಳ ಹುಟ್ಟೂ ಆಗಿರುವುದು ಹಾಗು ಆ ರಾಜ್ಯಗಳ ಹೆಸರುಗಳಿಗೂ ಅವುಗಳ ಮಾತೃ ಭಾಷೆಗೂ ಅವಿನಾಭಾವ ಸಂಬಂದದಿಂದಲೇ ಎಂದು ಎಲ್ಲರಿಗೂ ತಿಳಿದಿದೆ ಹಾಗು ತಿಳಿಯುತ್ತದೆ. ಆದರೆ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರ ಈ ವೈವಿಧ್ಯತೆಯನ್ನು ನಾಶಮಾಡುವ ಹುನ್ನಾರ.ದೂರದೃಷ್ಟಿ,ಸಂಚು ಅಡಗಿದೆ ಎನ್ನುವುದು ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟವಾದರೂ, ಈ ನಿಟ್ಟಿನಲ್ಲಿ ಲೇಖಕರ ಪ್ರಯತ್ನ ಮಾತ್ರ ಮೆಚ್ಚುವಂತಹುದು.
ಲೇಖಕರು ಹೇಳಿರುವಂತೆ ’ಹಿಂದೀ ಭಾಷೆ ರಾಷ್ಟ್ರಭಾಷೆಯಲ್ಲ’ ಎಂಬ ವಿಷಯ ಅನೇಕರಿಗೆ ಗೊತ್ತೇಯಿಲ್ಲ. ಶಾಲೆ-ಕಾಲೇಜುಗಳಲ್ಲಿ ಹಿಂದೀ ರಾಷ್ಟ್ರಭಾಷೆಯೆಂದೇ ಬಿಂಬಿಸಲಾಗಿದೆ.ನಮ್ಮ ಚಿಕ್ಕ ಮಕ್ಕಳು ಹಾಗು ಯುವ ಜನತೆಯಲ್ಲಿ ಹಿಂದೀ ರಾಷ್ಟ್ರಭಾಷೆ ಎನ್ನುವುದನ್ನು ಅವರ ಮನಗಳಲ್ಲಿ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಸಣ್ಣ ಮನೋಭಾವ ಭಾಷೆಯ ವಿಷಯದಲ್ಲಿ ಪ್ರಾಂತೀಯವಾದ ಅಥವಾ ಒಕ್ಕೂಟ ವ್ಯವಸ್ಥೆಯನ್ನು ನಾಶಮಾಡುವ ಸಂಚು ಎನ್ನದೆ ಬೇರೆ ದಾರಿಯಿಲ್ಲ. ದೇಶದ ಸಮಗ್ರತೆ, ರಾಷ್ಟ್ರಾಭಿಮಾನ ಎಂದೆಲ್ಲಾ ಪೊಳ್ಳು ನುಡಿಗಳಿಂದ ಬಣ್ಣ ಬಳಿಯುತ್ತಿರುವ ಸರ್ಕಾರಗಳು, ಅದರ ಹಿಂದಿರುವ ಭೀಕರ ದುರುದ್ಧೇಶ ಜನಸಾಮಾನ್ಯರಿಗೆ ಕಾಣದಂತೆ ಮಾಡಿದೆ.ನಮಗೆಲ್ಲಾ ತಿಳಿದಿದೆ: ಸೇವೆ, ವ್ಯಾಪಾರವೆಂದುಕೊಂಡು ಬಂದವರ ಹಿಂದಿನ ದುರುದ್ಧೇಶ ನಮ್ಮ ದೇಶವನ್ನು,ಜನತೆಯನ್ನು ಶತ-ಶತಮಾನಗಳ ಕಾಲ ಪರಕೀಯರ ಆಳ್ವಿಕೆಗೆ,ಗುಲಾಮಗಿರಿಗೆ ಒಳಗಾಗಿದ್ದು ಒಂದು ತಿಳಿದ ಇತಿಹಾಸ. ಮತ್ತೊಮ್ಮೆ ಅಂತಹುದೇ ಆತಂಕ ಕೇಂದ್ರ ಸರ್ಕಾರದ ಭಾಷಾನೀತಿಯಿಂದ ಮುಂದೆ ಉದ್ಬವಿಸಬಹುದು.ಭಾಷಾ ಸಾಮ್ರಾಜ್ಯಶಾಹಿಯ ಉದ್ದೇಶ / ದುರುದ್ಧೇಶ ಹಿಂದೀ ಹೇರಿಕೆಯ ಮೊಲ ಎಂದರೆ ತಪ್ಪಲ್ಲ.
ಹಿಂದೀ ಹೇರಿಕೆಯ ವಿರುದ್ಧದ ಹೋರಾಟಗಳ ವಿವರಗಳನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ಲೇಖಕರು ತಮ್ಮ ಪುಸ್ತಕದಲ್ಲಿ ಅಳವಡಿಸಿಕೊಂಡಿರುವುದು ಪ್ರಸ್ತುತವಾಗಿದೆ. ಹಿಂದೀ ವಿರೋಧದ ಹೋರಾಟದಲ್ಲಿ ತಮಿಳುನಾಡು ಜಯಗಳಿಸಿರುವುದೂ ಗಮನಾರ್ಹವಾದುದು ಅದು ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಹಿಂದೀ ವಿರೋಧದ ಹೋರಾಟದಲ್ಲಿ ಮಿಕ್ಕ ರಾಜ್ಯಗಳ ಧ್ವನಿ ಮಾತ್ರ ತುಂಬಾ ಕ್ಷೀಣವಾಗಿದೆ. ಅಸ್ಸಾಂ.ಮಹಾರಾಷ್ಟ್ರಗಳಲ್ಲಿ ಹಾಗು ತೀರ ಇತ್ತೀಚೆಗೆ ಕರ್ನಾಟಕದಲ್ಲೂ ಹಿಂದೀ ಹೇರಿಕೆ ವಿರುದ್ಧದ ಹೋರಾಟಗಳ ಧ್ವನಿಗೂಡುತ್ತಿರುವುದು ಗಮನಾರ್ಹವಾಗಿದೆ.
ಭಾರತದ ಸಂವಿಧಾನದ ೧೭ನೇ ಭಾಗದ ೧ನೇ ಅಧ್ಯಾಯದಲ್ಲಿ ೩೪೩ ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಭಾರತದ ಆಡಳಿತ ಭಾಷೆಯ ಬಗ್ಗೆ ಬರೆಯಲಾಗಿದೆ. ಹಿಂದೀ ಭಾಷೆ ಭಾರತದ ಆಡಳಿತ ಭಾಷೆ ಎಂದು ಹೇಳದೆ ಭಾರತದ ಆಡಳಿತ ಭಾಷೆ ಎಂದು ಮಾತ್ರ ಹೇಳಲಾಗಿದೆ. ಬರೀ ಹಿಂದೀ ಭಾಷೆಯ ಬಗ್ಗೆ ಸಂಶೋಧನೆ,ಪ್ರಚಾರದ ಬಗ್ಗೆ ಸಮಿತಿಗಳ ರಚನೆ ಮಾಡಬೇಕೆಂದು ಮಾತ್ರ ಸಂವಿಧಾನದಲ್ಲಿ ಹೇಳಲಾಗಿದೆ, ಇತರ ಭಾರತೀಯ ಭಾಷೆಗಳ ಬಗ್ಗೆ ಸಂವಿಧಾನವೇ ಅಸಡ್ಡೆ ತೋರಿದೆ ಎಂದೆನಿಸಿದೆ. ಬೇರೆ ಭಾರತೀಯ ಭಾಷೆಗಳ ಅಭಿವೃದ್ಧಿಯ ಬಗ್ಗೆ ಅದು ಅವಕಾಶ ನೀಡಲಿಲ್ಲವೇಕೋ? ಸಂವಿಧಾನದ ಈ ವಿಧಿ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ ಎಂದರೆ ತಪ್ಪಲ್ಲ.ಸಂವಿಧಾನವನ್ನು ಒಪ್ಪಿದ್ದೇವೆ ಎಂದರೆ ನಮ್ಮತನವನ್ನು ನಾವು ಬಿಡಲು ಒಪ್ಪಿಗೆಕೊಟ್ಟಿದ್ದೇವೆ ಎಂದರ್ಥವಲ್ಲ.ಏಕತೆ ಸಾಧಿಸಬೇಕಾದಂತಹ ಸಂವಿಧಾನದಿಂದಲೇ ರಾಜ್ಯಗಳ ಒಗ್ಗಟ್ಟಿಗೆ ಕೊಡಲಿಪೆಟ್ಟು ಕೊಡುತ್ತಿರುವುದು ವಿಪರ್ಯಾಸ. ಸಂವಿಧಾನದ ಈ ವಿಧಿಯೇ ಆಡಳಿತ ಭಾಷೆಯಾದ ಹಿಂದೀಯ ಬಳಕೆಯನ್ನು ಒತ್ತಾಯ,ಆಮೀಷ ಮತ್ತು ವಿಶ್ವಾಸಗಳ ಮೊಲಕ ಭಾರತಾದ್ಯಂತ ನಿರಂತರವಾಗಿ ಹೇರುವುದಕ್ಕೆ ಪ್ರೇರಣೆ ನೀಡಿದೆ ಹಾಗು ಕೇಂದ್ರ ಸರ್ಕಾರ ಅದನ್ನೇ ಮಾಡುತ್ತಿದೆ. ಸರ್ಕಾರಗಳು ಇನ್ನೂ ಮುಂದೆ ಹೋಗಿ ಹಿಂದೀ ಭಾಷೆ ರಾಷ್ಟ್ರಭಾಷೆ ಯೆಂದು,ದೇಶಕ್ಕೊಂದು ಭಾಷೆ, ಹಿಂದೀ ಏಕತೆಯ ಸಂಕೇತವೆಂದೂ ಬಿಂಬಿಸ ಹೊರಟಿದೆ. ಒಂದು ಕಡೆ ನಮ್ಮ ಸಂವಿಧಾನ ಅನೇಕತೆಯಲ್ಲಿ ಏಕತೆ ಅದು ಭಾರತದ ಅನನ್ಯತೆ ಎಂದು ಹೇಳುತ್ತದೆ, ಇನ್ನೊಂದು ಕಡೆ ಭಾರತಕ್ಕೊಂದು ಭಾಷೆ ಎನ್ನುತ್ತದೆ, ಈ ಇಬ್ಬಂದಿತನ ಏಕೆ? ಈ ಹಿಂದೀ ಹೇರಿಕೆಯಿಂದ ಭಾರತದ ಅನನ್ಯತೆಗೆ ಖಂಡಿತವಾಗಿಯೊ ಆತಂಕವಿದೆ.
ಕೇಂದ್ರ ಸರ್ಕಾರಿ ಉಧ್ಯಮೆಗಳಲ್ಲಿ ಹಿಂದೀ ಹೇರಿಕೆ ಹೆಚ್ಚಾಗಿ ಕಂಡುಬರುತ್ತಿದು ಕನ್ನಡಿಗರು ಮುಂದೆ ಅಲ್ಲಿ ಕೆಲಸ ಸಿಗದೇ ಒದ್ದಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕನ್ನಡ ಭಾಷೆಯಿಂದ ಮುಂದೆ ಹೊಟ್ಟೆಗೆ ಊಟ ಸಿಗದ ಪರಿಸ್ಥಿತಿ ಕೇಂದ್ರ ಸರ್ಕಾರದ ಭಾಷಾನೀತಿಯಿಂದ ನಿರ್ಮಾಣವಾಗಿದೆ.ನಮ್ಮ ಭಾಷೆಯನ್ನು ನಾವೇ ಅಸಡ್ಡೆಮಾಡುವಂತಹ ಪರಿಸ್ಥಿತಿಯನ್ನು ನಿರ್ಮಾಣಮಾಡಿದೆ.ಒಟ್ಟಾರೆಯಾಗಿ ನಮ್ಮ ಸರ್ಕಾರದ ಆಷಾಡಭೂತಿತನ ಬಯಲಾಗಿದೆ. ಇಷ್ಟಾದರೂ ನಮ್ಮ ರಾಜ್ಯ ಸರ್ಕಾರಗಳು, ಬುದ್ದಿಜೀವಿಗಳು. ಸಾಹಿತಿಗಳು, ಭಾಷಾ ವಿದ್ವಾಂಸರು ಈ ಬಗ್ಗೆ ಚಕಾರವೆತ್ತದೇಯಿರುವುದು ಆಶ್ಚರ್ಯ ಮೊಡಿಸಿದೆ. ರಾಜ್ಯ ಸರ್ಕಾರ,ಕೇಂದ್ರ ಸರ್ಕಾರ ಹಾಗು ಬುದ್ದಿಜೀವಿಗಳ ನಡುವೆ ಏನು ಒಳಒಪ್ಪಂದವಾಗಿದೆ ಎಂಬುದು ಬಯಲಾಗಬೇಕು.
ಒಟ್ಟಾರೆ ಲೇಖಕರು ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ, ಅವರ ಪ್ರಯತ್ನ ಸಾರ್ಥಕ. ಅವರ ಲೇಖನಿಯಿಂದ ಇನ್ನೂ ಹೆಚ್ಚಿನ ಕನ್ನಡ ಪುಸ್ತಕಗಳನ್ನು ನಿರೀಕ್ಷಿಸಬಹುದು.ಒಳ್ಳೆಯ ಗುರಿಯನ್ನು ಹೊತ್ತಿರುವ ಹೊತ್ತಿಗೆ ಎಂದರೆ ತಪ್ಪಲ್ಲ. ಸತ್ತಂತಿಹರನ್ನು ಬಡಿದೆಚ್ಚರಿಸುವ ಮೊದಲ ಗಂಟೆ ಈ ಪುಸ್ತಕವೆನ್ನಬಹುದು.

2 ಕಾಮೆಂಟ್‌ಗಳು:

  1. ಉತ್ತಮ ವಿಮರ್ಶೆ ಬರೆದಿದ್ದೀರಿ. ಕನ್ನಡದ ಬಗೆಗಿನ ನಿಮ್ಮ ಅಭಿಮಾನವು ಲೇಖನದುದ್ದಕ್ಕೂ ಅಭಿವ್ಯಕ್ತಗೊಂಡಿದೆ. ನಮ್ಮ-ನಿಮ್ಮೆಲ್ಲರ ಭಾಷಾಭಿಮಾನ ಇನ್ನೂ ಪ್ರಬಳವಾಗಲಿ ಎಂದು ಆಶಿಸುತ್ತೇನೆ. ಹಾಗೂ, ಒಂದು ಒಳ್ಳೆಯ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    ಮುಂದುವರೆಯುತ್ತಾ, ಬರುವ ಕನ್ನಡ ರಾಜ್ಯೋತ್ಸವದ ಅಂಗವಾಗಿ 'ಕಹಳೆ' (www.kahale.gen.in) ಎಂಬ ಅಂತರ್ಜಾಲ ತಾಣವೊಂದನ್ನು ನಿರ್ಮಿಸಿ ಅದರಲ್ಲಿ ನವೆಂಬರ್ ತಿಂಗಳ ಪ್ರತಿ ದಿನವೂ ಒಬ್ಬೊಬ್ಬ ಲೇಖಕರಿಂದ ರಚಿತವಾದ ಕನ್ನಡ ಬರವಣಿಗೆಯನ್ನು ಬಿತ್ತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದಯವಿಟ್ಟು ನೀವೂ ಸಹ ಭಾಗವಹಿಸಿ - ಕನ್ನಡದಲ್ಲಿ ಲೇಖನವೊಂದನ್ನು ಬರೆದು ನಮಗೆ ಕಳುಹಿಸಿಕೊಡಿ. ನಿಮ್ಮ ಸ್ನೇಹಿತರನ್ನೂ ನಮ್ಮೊಡನೆ ಭಾಗವಹಿಸಲು ಪ್ರೇರೇಪಿಸಿ.

    ಪ್ರತ್ಯುತ್ತರಅಳಿಸಿ
  2. ಪ್ರಶಾಂತ್ ಅವರೇ ನಿಮ್ಮ ಆಶಯ ಸಫಲವಾಗಲಿ ಎಂದು ಹಾರೈಸುತ್ತೇನೆ.
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ