ಮಂಗಳವಾರ, ಅಕ್ಟೋಬರ್ 25, 2011

ಬೆಳಕಿನ ಹಬ್ಬ ದೀಪಾವಳಿ


ಇಂದು ಬೆಳಕಿನ ಹಬ್ಬ ದೀಪಾವಳಿ.ಬೆಳಕಿಗೆ ತನ್ನದೇ ಆದ ಪಾವಿತ್ರ್ಯತೆ ಪ್ರಪಂಚದೆಲ್ಲಡೆ ಇದೆ.ಜಗತ್ತು,ವ್ಯಕ್ತಿ ಹಾಗು ಸಮಾಜಕ್ಕೆ ಬೆಳಕಿನ ಅಗತ್ಯತೆ ಇದ್ದೇಯಿದೆ.

ಬೆಳಕೆಂದರೆ ಅರಿವು;
ಬೆಳಕೆಂದರೆ ಪ್ರಗತಿಯ ಸಂಕೇತ;
ಬೆಳಕೆಂದರೆ ಚೈತನ್ಯದ ಪ್ರತೀಕ;

ಅಂತಹ ಪವಿತ್ರವಾದ ಬೆಳಕನ್ನು ಅನುಸರಿಸಿ ನಮ್ಮ ಬದುಕಿನ ದಾರಿಯನ್ನು ಕಂಡುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.
ನಮ್ಮ ಪಯಣ ಹೇಗಿರಬೇಕೆಂದರೆ, ಪ್ರಾಚೀನರ ಪಯಣದ ಆದರ್ಶದಂತೆ ಇರಬೇಕು.

ಪ್ರಾಚೀನರ ಉಕ್ತಿ ಹೀಗೆ ಹೇಳುತ್ತೆ;

ಅಸತೋಮ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿಃ||

ನನ್ನ, ನಿನ್ನ ಹಾಗು ಸಮಾಜದ ನಡೆ
ಅಸತ್ಯದಿಂದ ಸತ್ಯದ ಕಡೆಗೆ
ಕತ್ತಲಿನಿಂದ ಬೆಳಕಿನೆಡೆಗೆ
ಜಡತ್ವದಿಂದ ಚೈತನ್ಯದೆಡೆಗೆ ಇರಬೇಕೆಂಬ ಅಪೇಕ್ಷೆ ಪ್ರಾಚೀನರ ಉಕ್ತಿಯಲ್ಲಿ ಅಡಗಿದೆ.

ನಮ್ಮ ಜೀವನವು ಕತ್ತಲು-ಬೆಳಕಿನ ತೋರಣದಿಂದ ಅಲಂಕರಿಸಲ್ಪಟ್ಟಿದೆ. ಅದೇ ಜಗದ ಜೀವಕೋಟಿಗೆ ಹಬ್ಬದ ಹೂರಣವನ್ನು ತೆರೆದಿಟ್ಟಿದೆ.
ಮನದ ಕತ್ತಲು;
ಜಗದ ಕತ್ತಲು;
ಹಬ್ಬುವುದು ಕ್ಷಣಮಾತ್ರದಲ್ಲೇ;
ಈ ಕತ್ತಲಿನ ಮಾಯೆ ಎಂತಹುದೆಂದರೆ ನೋವಿನ,ಸಂಕಷ್ಟದ,ಯಾತನೆಯ ಪರಿಸ್ಥಿತಿಯನ್ನು ಅದು ನಿರ್ಮಿಸುತ್ತದೆ.
ಜೀವನ ನರಕವೆನಿಸುತ್ತದೆ.
ಅದನ್ನು ತೊಲಗಿಸಲು,ಅಂಧಕಾರವ ಓಡಿಸಲು ಬೇಕು ಬೆಳಕಿನ ಕಿರಣ;
ಒಂದು ಸಣ್ಣ ದೀಪ ನಮ್ಮ ವಾಸ್ತವದ ಕತ್ತಲನ್ನು ಓಡಿಸಿದರೆ;
ಮನದ ಕತ್ತಲನ್ನು ಓಡಿಸಲು ಅರಿವಿನ ಶಲಾಕೆಯ ಅಗತ್ಯತೆ ಬೇಕು;
ಬರೀ ಬಾಹ್ಯ ಕತ್ತಲನ್ನು ಓಡಿಸಿದರೆ ಸಾಲದು,ಮನುಷ್ಯನ ಮನದ ಕತ್ತಲನ್ನು ಓಡಿಸುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ದೀಪ ಸಾಲದು,
ಸಾಧನೆಯ ಪರಿಶ್ರಮದ ಹಾದಿಯನ್ನು ದಾಟಿದರೆ ಮಾತ್ರ ಮನದ ಕತ್ತಲನ್ನು ಓಡಿಸಲು ಸಾಧ್ಯ.
ಕತ್ತಲಿದ್ದರೆ ಬೆಳಕಿರದು;
ಬೆಳಕಿದ್ದರೆ ಕತ್ತಲಿರದು;
ಕತ್ತಲು-ಬೆಳಕು ಒಂದೇ ನಾಣ್ಯದ ಎರಡು ಮುಖಗಳು;
ನಮ್ಮ ಮುಂದಿರುವುದ ತಾತ್ಕಾಲಿಕವಾಗಿ ಮರೆಮಾಡುವ ಶಕ್ತಿ ಕತ್ತಲಿಗಿದೆ,ಅಸತ್ಯದ ಭ್ರಮೆಯನ್ನು ಹುಟ್ಟಿಸುವ ಶಕ್ತಿ ಕತ್ತಲಿಗಿದೆ.ನಕಾರಾತ್ಮಕ ಧೋರಣೆಯನ್ನು ನಮ್ಮ ಮನದಲ್ಲಿ ಬಿತ್ತಿ ನಮ್ಮನ್ನು ಸೋಲಿಸುವ ಕತ್ತಲಿನ ಈ ಆಟ ತಾತ್ಕಾಲಿಕವೆಂಬುದನ್ನು ನಾವು ಅರಿಯಬೇಕು.
ಕತ್ತಲಿಗೆ ನೆಲೆಯಿಲ್ಲ;
ಕತ್ತಲು ವಾಸ್ತವವಲ್ಲ;
ಕತ್ತಲು ಸತ್ಯವಲ್ಲ;
ಕತ್ತಲಿನ ಈ ಸ್ವಾಭಾವಿಕ ನಿಯಮವನ್ನು ನಾವು ಅರಿತರೆ, ನಮ್ಮ ಬೆಳಕಿನೆಡೆಗಿನ ದಾರಿ ಸುಲಭವಾಗುತ್ತದೆ, ಕಷ್ಟ,ಸಂಕಷ್ಟಗಳನ್ನು ಎದುರಿಸುವ ನಮ್ಮ ಚೈತನ್ಯ ಇಮ್ಮಡಿಯಾಗುತ್ತದೆ.
ಜೀವನಕ್ಕೆ ಕತ್ತಲೂ ಬೇಕು;
ಬೆಳಕೂ ಬೇಕು;
ಕತ್ತಲು-ಬೆಳಕು ಎರಡೂ ಇದ್ದಾಗಲೇ ಜೀವನಕ್ಕೊಂದು ಅರ್ಥ;
ಪರಿಪೂರ್ಣ ಕತ್ತಲು;
ಪರಿಪೂರ್ಣ ಬೆಳಕು;
ಎಂಬ ಎರಡು ಸ್ತರಗಳಿವೆ. ಅಂತಹ ಸ್ತರಗಳಲ್ಲಿ ನಮ್ಮ ಸ್ಥಿತಿ ಒಂದೇ ಆಗಿರುತ್ತದೆ.
ಅದು ಹೇಗೆಂದರೆ ಪೂರ್ಣ ಕತ್ತಲಲ್ಲೂ ನಮಗೇನೂ ಕಾಣಿಸದು
ಹಾಗೆ ಪೂರ್ಣ ಬೆಳಕಿನಲ್ಲೂ ನಮಗೇನೂ ಕಾಣುವುದಿಲ್ಲ.
ನಮ್ಮ ಜೀವನಕ್ಕೆ ಬೇಕಾಗಿರುವುದು ಪೂರ್ಣ ಕತ್ತಲೂ ಅಲ್ಲ ಅಥವಾ ಪೂರ್ಣ ಬೆಳಕೂ ಅಲ್ಲ.
ಎರಡೂ ಕೂಡಿರುವ ಸಮಸ್ಥಿತಿ, ಆಗಲೇ ಜೀವನದ ಬಂಡಿ ಸಾಗಿಸಲು ಸಾಧ್ಯ. ಆಗ ಮಾತ್ರ ನಮ್ಮ ಮುಂದಿರುವ ಹಾದಿ ಸ್ಪಷ್ಟವಾಗಿ ಗೋಚರಿಸುತ್ತದೆ.
ನಮ್ಮ ಜೀವನದ ನಡಿಗೆಗೆ ದೀಪ ಕತ್ತಲೋಡಿಸುವ ಸಾಧನವಷ್ಟೆ. ಈ ದೀಪಾವಳಿ ಹಬ್ಬ ನನ್ನ,ನಿನ್ನ ಹಾಗು ಸಮಾಜದ ಕತ್ತಲನ್ನು ಓಡಿಸುವ ಸಾಂಕೇತಿಕ ಅಷ್ಟೆ.
ದೀಪವನ್ನು ಬೆಳಗಿದರೆ ಸಾಲದು;
ಬಾಹ್ಯ ಕತ್ತಲನ್ನು ತಳ್ಳಿದರೆ ಸಾಲದು;
ಮನುಕುಲದ ಉನ್ನತಿಗೆ ಶ್ರಮಿಸೋಣ
ಬನ್ನಿ ಶಾಂತಿ,ನೆಮ್ಮದಿ,ಪ್ರೀತಿ-ವಾತ್ಸಲ್ಯ,ಮಾನವೀಯತೆಯ ದೀವಿಗೆಯನ್ನು ಮನ ಮನಗಳಲ್ಲಿ,ಮನೆ ಮನೆಗಳಲ್ಲಿ ಹೊತ್ತಿಸೋಣ,
ಬಡತನ,ನೋವು,ದ್ವೇಷ,ಭ್ರಷ್ಟಾಚಾರದ ಅಂಧಕಾರವನ್ನು ಇಲ್ಲವಾಗಿಸೋಣ.

ಭಾನುವಾರ, ಅಕ್ಟೋಬರ್ 23, 2011

ಅಹಂಕಾರದ ಸೋಲು


ಇದೊಂದು ನೀತಿ ಕಥೆ. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ತಂದಿದ್ದೇನೆ.ನನ್ನ ಅಕ್ಕನ ಮಗಳು ’ಅಂಜು’ಳ ಶಾಲಾ ಪಠ್ಯದಲ್ಲಿ ಪಾಠವಾಗಿತ್ತು ಈ ಕಥೆ.

ಅದೊಂದು ಅತಿಚಳಿಯ ಚಳಿಗಾಲ. ಒಂದು ಗುಂಪು ಹಂಸಗಳು ಅತಿಯಾದ ಹಿಮಾಲಯದ ಚಳಿ ತಡೆಯಲಾರದಾಯಿತು. ಆದುದರಿಂದ ಅವೆಲ್ಲವೂ ಬೆಚ್ಚಗಿನ ಪ್ರದೇಶವನ್ನು ಹುಡುಕುತ್ತಾ ಕೇರಳದ ಮಲಬಾರ್ ಸಮುದ್ರತೀರಕ್ಕೆ ಬಂದವು.ಹತ್ತಿರದ ಅರಣ್ಯ ಪ್ರದೇಶದಲ್ಲಿ ಒಂದು ಗುಂಪು ಕಾಗೆಗಳು ವಾಸವಾಗಿದ್ದವು. ಅವುಗಳಿಗೆಲ್ಲಾ ಒಂದು ನಾಯಕ ಕಾಗೆಯಿತ್ತು. ಅದಕ್ಕೆ ತನ್ನ ಹಾರಾಟದ ಶಕ್ತಿ-ಯುಕ್ತಿಯ ಬಗ್ಗೆ ಅಪಾರ ಅಹಂಕಾರವಿತ್ತು.

ಒಂದು ದಿನ ಕಾಗೆಯ ನಾಯಕ ಹಂಸಗಳ ಬಳಿ ಹೋಗಿ " ನಾನು ಯಾರೆಂದು ನಿಮಗೆ ಗೊತ್ತೇ? ನಾನು ಈ ಮಲಬಾರಿನ ಹಾರಾಟದ ರಾಜ!,ಯಾರೊಬ್ಬರೂ ನನ್ನೊಂದಿಗೆ ಹಾರಟದಲ್ಲಿ ಸ್ಪರ್ಧಿಸಲಾರರು.ನೀವಾದರೂ ನನ್ನೊಂದಿಗೆ ಸ್ಪರ್ಧಿಸುವಿರಾ?" ಎಂದು ದರ್ಪದಿಂದ ಕೇಳಿದನು. ಹಂಸಗಳ ನಾಯಕ ಏನನ್ನೂ ಹೇಳಲಿಲ್ಲ. ಕಾಗೆಗಳ ನಾಯಕ ಹಂಸಗಳನ್ನು ಬೈದುಕೊಳ್ಳುತ್ತಾ ಆಕಾಶಕ್ಕೆ ಹಾರಿತು. ತನ್ನ ಹಾರಾಟದ ಶಕ್ತಿಯನ್ನು ಎಲ್ಲರಿಗೂ ತೋರಿಸುವುದಕ್ಕೆ ಅಕಾಶದಲ್ಲಿ ಜಿಗಿತ,ನೆಗೆತ,ರೆಕ್ಕೆಗಳನ್ನು ಮುಚ್ಚುವುದು,ರೆಕ್ಕೆಗಳನ್ನು ಛತ್ರಿಯಂತೆ ಮಾಡಿ ಹಲವು ಭಂಗಿಗಳಲ್ಲಿ ಹಾರಾಟಮಾಡಿತು. ಬೇರೆಯ ಕಾಗೆಗಳು ಅದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದವು. ಅದೇ ಕ್ಷಣದಲ್ಲಿ ನಾಯಕ ಕಾಗೆಯು ಹಂಸಗಳಿಗೆ ಸ್ಪರ್ಧೆಗೆ ಬರುವಂತೆ ತಾಕೀತು ಮಾಡಿತು. ಹಂಸವು ನಗುತ್ತಾ ಹೇಳಿತು"ನಾಯಕ ಕಾಗೆಯೇ ನಾನು ನೇರವಾಗಿ ಮಾತ್ರ ಹಾರಬಲ್ಲೆ,ಅದನ್ನು ಮಾತ್ರ ನಿನ್ನೊಂದಿಗೆ ಪ್ರಯತ್ನ ಪಡುತ್ತೇನೆ". ಎಂದು ಹೇಳುತ್ತಲೇ ಹಂಸವು ಆಕಾಶಕ್ಕೆ ಹಾರಿತು ಮತ್ತು ಕಾಗೆಯ ನಾಯಕ ಹಂಸವನ್ನು ಹಿಂಬಾಲಿಸಿತು.ಹಲವು ಗಂಟೆಗಳ ಕಾಲ ಸತತವಾಗಿ ಎರಡು ಜೊತೆಜೊತೆಯಾಗಿ ಹಾರಾಡಿದವು.ಪಶ್ಚಿಮದಲ್ಲಿ ಸೂರ್ಯ ದಿನಕ್ಕೆ ತೆರೆಯೆಳೆಯುತ್ತಿದ್ದಂತೆಯೇ ಕಾಗೆಯ ನಾಯಕನಿಗೆ ದಣಿವಾಗತೊಡಗಿತು.ಹಂಸದೊಂದಿಗೆ ಹಾರಾಟ ಮುಂದುವರೆಸಲು ನಾಯಕ ಕಾಗೆಗೆ ಅಸಾಧ್ಯವಾಯಿತು. ನಾಯಕ ಕಾಗೆಯು ವಿಶ್ರಾಂತಿ ತೆಗೆದುಕೊಳ್ಳಲು ಜಾಗ ಹುಡುಕತೊಡಗಿತು,ಆದರೆ ಎಲ್ಲಿಯೊ ಮಣ್ಣಿನ,ಮರದ ಜಾಗ ಸಿಗಲೇಯಿಲ್ಲ.ಅದು ಎತ್ತರದಿಂದ ಜಾರತೊಡಗಿತು ಹಾಗು ಸಮುದ್ರಕ್ಕೆ ಬೀಳತೊಡಗಿತು. ಹಂಸವು ನಾಯಕ ಕಾಗೆಯ ಕಡೆ ನೋಡಿತು ಹಾಗು ಹೇಳಿತು"ಸಹೋದರನೇ ಏಕೆ ಅಲೆಗಳೊಡನೆ ಆಟವಾಡುತ್ತಿರುವೆ?" ತನ್ನನ್ನು ಬದುಕಿಸಿಕೊಳ್ಳುವ ಸಂಘರ್ಷದಲ್ಲಿ ನಾಯಕ ಕಾಗೆಯು ಹೇಳಿತು"ಸಹೋದರನೇ! ನನ್ನ ಮೇಲೆ ಕರುಣೆತೋರಿಸು, ನನ್ನನ್ನು ರಕ್ಷಿಸು ಇಲ್ಲವಾದರೆ ನಾನು ಸಮುದ್ರದಲ್ಲಿ ಮುಳುಗಿಸಾಯುತ್ತೇನೆ". ಹಂಸವು ಕಾಗೆಯ ಮೇಲೆ ಕರುಣೆತೋರಿ ಅದನ್ನು ಸಮುದ್ರದ ತೀರಕ್ಕೆ ಕರೆದೊಯ್ಯಿತು.ನಾಯಕ ಕಾಗೆಗೆ ನಾಚಿಕೆಯಾಯಿತು. ಅವನ ಗರ್ವಭಂಗವಾಗಿತ್ತು.
ಕಥೆಯ ನೀತಿ: "ಅಹಂಕಾರ ಯಾವಾಗಲೂ ಸೋಲುತ್ತದೆ".

ಮಂಗಳವಾರ, ಅಕ್ಟೋಬರ್ 11, 2011

ಭಾರತೀಯ ಕೇಂದ್ರ ಸರ್ಕಾರದ ಭಾಷಾಸೂತ್ರ-ಮಾತೃಭಾಷೆಯ ಕಗ್ಗೊಲೆ




ತುಂಬಾ ದಿನಗಳ ನಂತರ ಬರೆಯುವ ಅವಕಾಶ ಬಂದಿದೆ. ನನ್ನ ಆತ್ಮೀಯ ಗೆಳೆಯ ಹಾಗು ಕನ್ನಡ ಕಟ್ಟಾಳು, ಕನ್ನಡದ ಕಂದ ಶ್ರೀಯುತ ಆನಂದ್.ಜಿ ಯವರು ’ಹಿಂದೀ ಹೇರಿಕೆ -ಮೊರು ಮಂತ್ರ ; ನೂರು ತಂತ್ರ’ ಎಂಬ ’ಪುಸ್ತಕದ ಬಗ್ಗೆ ಅಭಿಪ್ರಾಯ ತಿಳಿಸಿ’ ಎಂದ ಮೇಲೆ ಇಲ್ಲವೆನ್ನಲು ಮನಸ್ಸಾಗಲಿಲ್ಲ. ’ಏನು ಗುರು ಕಾಫಿ ಆಯ್ತಾ’ ಕನ್ನಡದ ಬ್ಲಾಗ್ನಲ್ಲಿ ಅವಾಗವಾಗ ಬಿಡಿ ಲೇಖನಗಳತ್ತ ಕಣ್ಣಾಡಿಸಿದ್ದೆ. ಆ ಬಿಡಿ ಲೇಖನಗಳ ಜೊತೆ ಒಂದು ದೊಡ್ದ ಸಂಶೋಧನೆಯನ್ನೇ ಮಾಡಿ ಅನೇಕಾನೇಕ ಮಾಹಿತಿ ಮೊಲಗಳ ಬೆನ್ನುಹತ್ತಿ ಪರಿಪೂರ್ಣವಾದ ಒಂದು ಪುಸ್ತಕ ಹೊರತರುವ ಅವರ ಪ್ರಯತ್ನ ಸಫಲವಾಗಿದೆ. ಅವರ ಪ್ರಯತ್ನದ ಫಲವಾಗಿ ಈ ಒಂದು ಅತ್ಯುತ್ತಮವಾದ ಪುಸ್ತಕವೇನೋ ಹೊರಬಂದಿದೆ, ಆದರೆ ಜನತೆ, ಓದುವರ್ಗ ಯಾವ ರೀತಿ ಅದನ್ನು ಸ್ವೀಕರಿಸುತ್ತಾರೆ ಅನ್ನೋ ಕುತೂಹಲವಿದೆ. ವಿಷಯದ ಗಂಭೀರತೆಯು ಲೇಖಕರಿಂದ ಸಮರ್ಥವಾಗಿ ಚಿತ್ರಿತವಾಗಿದೆ. ಮನದಲ್ಲಿ ವಿಮರ್ಶೆಗೆ ಹಚ್ಚುವಂತಹ ವಿಷಯ ಲೇಖಕರಿಂದ ಅತ್ಯುತ್ತಮವಾಗಿ ಕಾಗದದ ಮೇಲೆ ಮೊಡಿಬಂದಿದೆ.ಕಾರ್ಯರೂಪಕ್ಕೆ ತರುವ ಅಥವಾ ನಮ್ಮತನವನ್ನು ಉಳಿಸಿಕೊಳ್ಳುವ ಪ್ರಯತ್ನ ಪ್ರತಿಯೊಬ್ಬರದೂ ಆಗಿದೆ. ಲೇಖಕರು ಎತ್ತಿರುವ ಪ್ರಶ್ನೆ ಹಾಗು ಅದಕ್ಕೆ ಪರಿಹಾರ ಚರ್ಚೆ ಹಾಗು ಒತ್ತಾಯ ಮೊಲಕ ಮಾತ್ರ ಸಾಧ್ಯ. ಪರಿಹಾರದ ಹಾದಿ ಅಷ್ಟು ಸುಗಮವಲ್ಲ ವೆಂಬುದು ಎಲ್ಲರಿಗೂ ತಿಳಿದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಣ್ತೆರೆದು ನಾಡಿನ ಜನತೆಯ ಭಾವನೆಗಳಿಗೆ ಬೆಲೆ ಕೊಡಲೇಬೇಕಾಗಿದೆ ( ತಮಿಳುನಾಡಿನ ಹೋರಾಟಕ್ಕೆ ಸಿಕ್ಕ ಜಯ ನಮ್ಮ ಕಣ್ಮುಂದಿದೆ).
ಭಾರತ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವೆಂಬ ಹೆಗ್ಗಳಿಕೆ ಎಲ್ಲರಿಗೂ ತಿಳಿದ ವಿಷಯ. ವೈವಿಧ್ಯತೆ ಎಂದರೆ ಭಾಷೆ, ಸಂಸ್ಕೃತಿ, ಆಚಾರ-ವಿಚಾರ,ಉಡಿಗೆ-ತೊಡಿಗೆ,ಆಹಾರ-ವಿಹಾರ ಕ್ಕೆ ಸಂಬಂದಿತ ವಿಷಯಗಳಾಗಿವೆ.ಅದರಲ್ಲಿಯೊ ಭಾಷೆಯ ಆಧಾರದ ಮೇಲೆ ಅನೇಕಾನೇಕ ರಾಜ್ಯಗಳ ಹುಟ್ಟೂ ಆಗಿರುವುದು ಹಾಗು ಆ ರಾಜ್ಯಗಳ ಹೆಸರುಗಳಿಗೂ ಅವುಗಳ ಮಾತೃ ಭಾಷೆಗೂ ಅವಿನಾಭಾವ ಸಂಬಂದದಿಂದಲೇ ಎಂದು ಎಲ್ಲರಿಗೂ ತಿಳಿದಿದೆ ಹಾಗು ತಿಳಿಯುತ್ತದೆ. ಆದರೆ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರ ಈ ವೈವಿಧ್ಯತೆಯನ್ನು ನಾಶಮಾಡುವ ಹುನ್ನಾರ.ದೂರದೃಷ್ಟಿ,ಸಂಚು ಅಡಗಿದೆ ಎನ್ನುವುದು ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟವಾದರೂ, ಈ ನಿಟ್ಟಿನಲ್ಲಿ ಲೇಖಕರ ಪ್ರಯತ್ನ ಮಾತ್ರ ಮೆಚ್ಚುವಂತಹುದು.
ಲೇಖಕರು ಹೇಳಿರುವಂತೆ ’ಹಿಂದೀ ಭಾಷೆ ರಾಷ್ಟ್ರಭಾಷೆಯಲ್ಲ’ ಎಂಬ ವಿಷಯ ಅನೇಕರಿಗೆ ಗೊತ್ತೇಯಿಲ್ಲ. ಶಾಲೆ-ಕಾಲೇಜುಗಳಲ್ಲಿ ಹಿಂದೀ ರಾಷ್ಟ್ರಭಾಷೆಯೆಂದೇ ಬಿಂಬಿಸಲಾಗಿದೆ.ನಮ್ಮ ಚಿಕ್ಕ ಮಕ್ಕಳು ಹಾಗು ಯುವ ಜನತೆಯಲ್ಲಿ ಹಿಂದೀ ರಾಷ್ಟ್ರಭಾಷೆ ಎನ್ನುವುದನ್ನು ಅವರ ಮನಗಳಲ್ಲಿ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಸಣ್ಣ ಮನೋಭಾವ ಭಾಷೆಯ ವಿಷಯದಲ್ಲಿ ಪ್ರಾಂತೀಯವಾದ ಅಥವಾ ಒಕ್ಕೂಟ ವ್ಯವಸ್ಥೆಯನ್ನು ನಾಶಮಾಡುವ ಸಂಚು ಎನ್ನದೆ ಬೇರೆ ದಾರಿಯಿಲ್ಲ. ದೇಶದ ಸಮಗ್ರತೆ, ರಾಷ್ಟ್ರಾಭಿಮಾನ ಎಂದೆಲ್ಲಾ ಪೊಳ್ಳು ನುಡಿಗಳಿಂದ ಬಣ್ಣ ಬಳಿಯುತ್ತಿರುವ ಸರ್ಕಾರಗಳು, ಅದರ ಹಿಂದಿರುವ ಭೀಕರ ದುರುದ್ಧೇಶ ಜನಸಾಮಾನ್ಯರಿಗೆ ಕಾಣದಂತೆ ಮಾಡಿದೆ.ನಮಗೆಲ್ಲಾ ತಿಳಿದಿದೆ: ಸೇವೆ, ವ್ಯಾಪಾರವೆಂದುಕೊಂಡು ಬಂದವರ ಹಿಂದಿನ ದುರುದ್ಧೇಶ ನಮ್ಮ ದೇಶವನ್ನು,ಜನತೆಯನ್ನು ಶತ-ಶತಮಾನಗಳ ಕಾಲ ಪರಕೀಯರ ಆಳ್ವಿಕೆಗೆ,ಗುಲಾಮಗಿರಿಗೆ ಒಳಗಾಗಿದ್ದು ಒಂದು ತಿಳಿದ ಇತಿಹಾಸ. ಮತ್ತೊಮ್ಮೆ ಅಂತಹುದೇ ಆತಂಕ ಕೇಂದ್ರ ಸರ್ಕಾರದ ಭಾಷಾನೀತಿಯಿಂದ ಮುಂದೆ ಉದ್ಬವಿಸಬಹುದು.ಭಾಷಾ ಸಾಮ್ರಾಜ್ಯಶಾಹಿಯ ಉದ್ದೇಶ / ದುರುದ್ಧೇಶ ಹಿಂದೀ ಹೇರಿಕೆಯ ಮೊಲ ಎಂದರೆ ತಪ್ಪಲ್ಲ.
ಹಿಂದೀ ಹೇರಿಕೆಯ ವಿರುದ್ಧದ ಹೋರಾಟಗಳ ವಿವರಗಳನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ಲೇಖಕರು ತಮ್ಮ ಪುಸ್ತಕದಲ್ಲಿ ಅಳವಡಿಸಿಕೊಂಡಿರುವುದು ಪ್ರಸ್ತುತವಾಗಿದೆ. ಹಿಂದೀ ವಿರೋಧದ ಹೋರಾಟದಲ್ಲಿ ತಮಿಳುನಾಡು ಜಯಗಳಿಸಿರುವುದೂ ಗಮನಾರ್ಹವಾದುದು ಅದು ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಹಿಂದೀ ವಿರೋಧದ ಹೋರಾಟದಲ್ಲಿ ಮಿಕ್ಕ ರಾಜ್ಯಗಳ ಧ್ವನಿ ಮಾತ್ರ ತುಂಬಾ ಕ್ಷೀಣವಾಗಿದೆ. ಅಸ್ಸಾಂ.ಮಹಾರಾಷ್ಟ್ರಗಳಲ್ಲಿ ಹಾಗು ತೀರ ಇತ್ತೀಚೆಗೆ ಕರ್ನಾಟಕದಲ್ಲೂ ಹಿಂದೀ ಹೇರಿಕೆ ವಿರುದ್ಧದ ಹೋರಾಟಗಳ ಧ್ವನಿಗೂಡುತ್ತಿರುವುದು ಗಮನಾರ್ಹವಾಗಿದೆ.
ಭಾರತದ ಸಂವಿಧಾನದ ೧೭ನೇ ಭಾಗದ ೧ನೇ ಅಧ್ಯಾಯದಲ್ಲಿ ೩೪೩ ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಭಾರತದ ಆಡಳಿತ ಭಾಷೆಯ ಬಗ್ಗೆ ಬರೆಯಲಾಗಿದೆ. ಹಿಂದೀ ಭಾಷೆ ಭಾರತದ ಆಡಳಿತ ಭಾಷೆ ಎಂದು ಹೇಳದೆ ಭಾರತದ ಆಡಳಿತ ಭಾಷೆ ಎಂದು ಮಾತ್ರ ಹೇಳಲಾಗಿದೆ. ಬರೀ ಹಿಂದೀ ಭಾಷೆಯ ಬಗ್ಗೆ ಸಂಶೋಧನೆ,ಪ್ರಚಾರದ ಬಗ್ಗೆ ಸಮಿತಿಗಳ ರಚನೆ ಮಾಡಬೇಕೆಂದು ಮಾತ್ರ ಸಂವಿಧಾನದಲ್ಲಿ ಹೇಳಲಾಗಿದೆ, ಇತರ ಭಾರತೀಯ ಭಾಷೆಗಳ ಬಗ್ಗೆ ಸಂವಿಧಾನವೇ ಅಸಡ್ಡೆ ತೋರಿದೆ ಎಂದೆನಿಸಿದೆ. ಬೇರೆ ಭಾರತೀಯ ಭಾಷೆಗಳ ಅಭಿವೃದ್ಧಿಯ ಬಗ್ಗೆ ಅದು ಅವಕಾಶ ನೀಡಲಿಲ್ಲವೇಕೋ? ಸಂವಿಧಾನದ ಈ ವಿಧಿ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ ಎಂದರೆ ತಪ್ಪಲ್ಲ.ಸಂವಿಧಾನವನ್ನು ಒಪ್ಪಿದ್ದೇವೆ ಎಂದರೆ ನಮ್ಮತನವನ್ನು ನಾವು ಬಿಡಲು ಒಪ್ಪಿಗೆಕೊಟ್ಟಿದ್ದೇವೆ ಎಂದರ್ಥವಲ್ಲ.ಏಕತೆ ಸಾಧಿಸಬೇಕಾದಂತಹ ಸಂವಿಧಾನದಿಂದಲೇ ರಾಜ್ಯಗಳ ಒಗ್ಗಟ್ಟಿಗೆ ಕೊಡಲಿಪೆಟ್ಟು ಕೊಡುತ್ತಿರುವುದು ವಿಪರ್ಯಾಸ. ಸಂವಿಧಾನದ ಈ ವಿಧಿಯೇ ಆಡಳಿತ ಭಾಷೆಯಾದ ಹಿಂದೀಯ ಬಳಕೆಯನ್ನು ಒತ್ತಾಯ,ಆಮೀಷ ಮತ್ತು ವಿಶ್ವಾಸಗಳ ಮೊಲಕ ಭಾರತಾದ್ಯಂತ ನಿರಂತರವಾಗಿ ಹೇರುವುದಕ್ಕೆ ಪ್ರೇರಣೆ ನೀಡಿದೆ ಹಾಗು ಕೇಂದ್ರ ಸರ್ಕಾರ ಅದನ್ನೇ ಮಾಡುತ್ತಿದೆ. ಸರ್ಕಾರಗಳು ಇನ್ನೂ ಮುಂದೆ ಹೋಗಿ ಹಿಂದೀ ಭಾಷೆ ರಾಷ್ಟ್ರಭಾಷೆ ಯೆಂದು,ದೇಶಕ್ಕೊಂದು ಭಾಷೆ, ಹಿಂದೀ ಏಕತೆಯ ಸಂಕೇತವೆಂದೂ ಬಿಂಬಿಸ ಹೊರಟಿದೆ. ಒಂದು ಕಡೆ ನಮ್ಮ ಸಂವಿಧಾನ ಅನೇಕತೆಯಲ್ಲಿ ಏಕತೆ ಅದು ಭಾರತದ ಅನನ್ಯತೆ ಎಂದು ಹೇಳುತ್ತದೆ, ಇನ್ನೊಂದು ಕಡೆ ಭಾರತಕ್ಕೊಂದು ಭಾಷೆ ಎನ್ನುತ್ತದೆ, ಈ ಇಬ್ಬಂದಿತನ ಏಕೆ? ಈ ಹಿಂದೀ ಹೇರಿಕೆಯಿಂದ ಭಾರತದ ಅನನ್ಯತೆಗೆ ಖಂಡಿತವಾಗಿಯೊ ಆತಂಕವಿದೆ.
ಕೇಂದ್ರ ಸರ್ಕಾರಿ ಉಧ್ಯಮೆಗಳಲ್ಲಿ ಹಿಂದೀ ಹೇರಿಕೆ ಹೆಚ್ಚಾಗಿ ಕಂಡುಬರುತ್ತಿದು ಕನ್ನಡಿಗರು ಮುಂದೆ ಅಲ್ಲಿ ಕೆಲಸ ಸಿಗದೇ ಒದ್ದಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕನ್ನಡ ಭಾಷೆಯಿಂದ ಮುಂದೆ ಹೊಟ್ಟೆಗೆ ಊಟ ಸಿಗದ ಪರಿಸ್ಥಿತಿ ಕೇಂದ್ರ ಸರ್ಕಾರದ ಭಾಷಾನೀತಿಯಿಂದ ನಿರ್ಮಾಣವಾಗಿದೆ.ನಮ್ಮ ಭಾಷೆಯನ್ನು ನಾವೇ ಅಸಡ್ಡೆಮಾಡುವಂತಹ ಪರಿಸ್ಥಿತಿಯನ್ನು ನಿರ್ಮಾಣಮಾಡಿದೆ.ಒಟ್ಟಾರೆಯಾಗಿ ನಮ್ಮ ಸರ್ಕಾರದ ಆಷಾಡಭೂತಿತನ ಬಯಲಾಗಿದೆ. ಇಷ್ಟಾದರೂ ನಮ್ಮ ರಾಜ್ಯ ಸರ್ಕಾರಗಳು, ಬುದ್ದಿಜೀವಿಗಳು. ಸಾಹಿತಿಗಳು, ಭಾಷಾ ವಿದ್ವಾಂಸರು ಈ ಬಗ್ಗೆ ಚಕಾರವೆತ್ತದೇಯಿರುವುದು ಆಶ್ಚರ್ಯ ಮೊಡಿಸಿದೆ. ರಾಜ್ಯ ಸರ್ಕಾರ,ಕೇಂದ್ರ ಸರ್ಕಾರ ಹಾಗು ಬುದ್ದಿಜೀವಿಗಳ ನಡುವೆ ಏನು ಒಳಒಪ್ಪಂದವಾಗಿದೆ ಎಂಬುದು ಬಯಲಾಗಬೇಕು.
ಒಟ್ಟಾರೆ ಲೇಖಕರು ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ, ಅವರ ಪ್ರಯತ್ನ ಸಾರ್ಥಕ. ಅವರ ಲೇಖನಿಯಿಂದ ಇನ್ನೂ ಹೆಚ್ಚಿನ ಕನ್ನಡ ಪುಸ್ತಕಗಳನ್ನು ನಿರೀಕ್ಷಿಸಬಹುದು.ಒಳ್ಳೆಯ ಗುರಿಯನ್ನು ಹೊತ್ತಿರುವ ಹೊತ್ತಿಗೆ ಎಂದರೆ ತಪ್ಪಲ್ಲ. ಸತ್ತಂತಿಹರನ್ನು ಬಡಿದೆಚ್ಚರಿಸುವ ಮೊದಲ ಗಂಟೆ ಈ ಪುಸ್ತಕವೆನ್ನಬಹುದು.