ಶುಕ್ರವಾರ, ಡಿಸೆಂಬರ್ 3, 2010

ಗೆಳತಿಗೊಂದು ಪತ್ರ

ಗೆಳತಿ ಹೇಗಿದ್ದೀಯ? ಎಷ್ಟು ವರುಷಗಳಾಗಿ ಹೋಯಿತಲ್ಲವೇ ಭೇಟಿಯಾಗಿ?ಜೀವನದ ಒಂದೊಂದೇ ಮಜಲುಗಳನ್ನು ದಾಟಿದ್ದೇವೆ. ಜೀವನ ಎನ್ನುವ ಪಾಠಶಾಲೆಯಲ್ಲಿ ಹದವಾಗುತ್ತಿದ್ದೇವೆ ಎನಿಸುವುದಿಲ್ಲವೇ? ಮನಸ್ಸು ಅರಳಿ ಕಂಪನ್ನು ಬೀರುವ ಸಮಯ ಇದೇ ಅಲ್ಲವೇ!?. ಜೀವನದ ಜಂಜಡಗಳಲ್ಲಿ ಎಷ್ಟೋ ಮಧುರ ಕ್ಷಣಗಳು ನೆನಪಿಗೆ ಬಾರದೇ ಜಾರಿ ಹೋಗಿರುತ್ತದೆ, ಆ ನೆನಪೇ ಜೀವನದಲ್ಲಿ ಉಲ್ಲಾಸ ತರುತ್ತದೆ ಅನ್ನೋದು ನಿಜ ಹಾಗೂ ಸಹಜ ಕೂಡ. ಆ ಅನುಭವ ನಿನಗಾಗಿದೆಯೇ? ಸಂಸಾರದ ನಾಲ್ಕು ಗೋಡೆಗಳ ಮಧ್ಯೆ ಯಾಂತ್ರಿಕ ಬದುಕಿನಲ್ಲಿ ಕಳೆದುಹೋಗಬೇಡ. ಪ್ರಕೃತಿಯ ಸೌಂದರ್ಯವನ್ನು ಅನುಭವಿಸು. ಮನಸ್ಸು ಪೂರ್ಣಪ್ರಮಾಣದಲ್ಲಿ ಅರಳುವತ್ತ ನಿನ್ನ ಗಮನವಿರಲಿ. ನಿನ್ನ ಅನುಭವಗಳು ಹೊಸರೂಪ ಪಡೆಯಲಿ, ಅದು ನೊಂದವರ ಭಾಳಿನ ದಾರಿಧೀಪವಾಗುತ್ತೆ.ಇಷ್ಟೋಂದೆಲ್ಲಾ ನಿನಗೂ ತಿಳಿದಿದೆ ಆದರೆ ಚಿಪ್ಪಿನಿಂದ ಹೊರಬರದೆ ಇರೋ ಮುತ್ತಿನಂತೆ ನೀನೂ ಕೂಡ. ಆ ಸಂಕೋಲೆ ಅನ್ನುವಂತಹ ಪರಿಧಿಯನ್ನು ದಾಟಬೇಕು. ವಿಶಾಲವಾದ ಪ್ರಪಂಚ ನಿನಗಾಗಿ ಕಾದಿದೆ ಕಣ್ತೆರೆದು ನೋಡು ಬಾ ಗೆಳತಿ. ಏನೋ ಉದ್ದುದ್ದ ಬರೆಯುತ್ತಾನೆ, ಹೇಳೋ ಅಷ್ಟು ಜೀವನ ಸುಲಭವಲ್ಲ ಅಂತ ನನ್ನ ಮಾತುಗಳನ್ನು ನಿರ್ಲಕ್ಷಿಸಬೇಡ. ನಿನ್ನ ಮಾತುಗಳು ನಿಜವಾದರೂ ಪ್ರಾಣಿಗಳಂತೆ ಬಂದು ಹೋಗುವುದಕ್ಕಂತೂ ನಾವು ಮನುಷ್ಯರು ಇಲ್ಲಿಗೆ ಬಂದಿಲ್ಲ ಅಲ್ಲವೇ? ನಮ್ಮ ಹುಟ್ಟಿಗೆ ಕಾರಣ ಬಹಳಷ್ಟು ಇರಬಹುದು ಅದನ್ನು ತಿಳಿದು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆಯೇ ಹೊರತು ಬೇರೆಯವರು ನಮ್ಮನ್ನು ಉದ್ಧಾರ ಮಾಡುತ್ತಾರೆ ಅಂತ ಅವರಿಗಾಗಿ ಕಾಯುವುದು ಎಷ್ಟು ಸಮಂಜಸ ನೀನೇ ಹೇಳು ಗೆಳತಿ. ನನಗಾಗಿ ನೀನು ಕಾಯುವಂತೆ, ನಿನಗಾಗಿ ನಾನು ಕಾಯುವಂತೆ ಸಾರ್ಥಕತೆಗೆ ನಾವು ಕಾಯಬಾರದಲ್ಲವೇ? ನಮ್ಮ ಪ್ರಯತ್ನ ಮಾತ್ರ ನಿರಂತರವಾಗಿ ಸಾಗುತ್ತಲ್ಲೇ ಇರಬೇಕಲ್ಲವೇ? ನಿನ್ನ ನೆನೆಪೊಂದೇ ಸಾಕೆನಗೆ ನಗುನಗುತ್ತಾ ಈ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಲು ಆದರೆ ನೀನೇ ಹೀಗೆ ಕೈಕಟ್ಟಿ ಕುಳಿತು ಚಿಂತೆಗೆ ಬಿದ್ದರೆ ನನ್ನ ಸ್ಥಿತಿ ಏನಾಗಬೇಡ ನೀನೇ ಹೇಳು. ನೀನೆಷ್ಟು ಖುಷಿಯಾಗುದ್ದರೆ ಅದರ ಎರಡು ಪಟ್ಟು ಖುಷಿ ನನಗಿಲ್ಲಿ ಆಗುತ್ತೆ. ಆಕಾಶದಲ್ಲಿ ಚಂದ್ರ ನಕ್ಕರೆ ಹೇಗೆ ತಾವರೆಗಳು ನಕ್ಕು ಪರಿಮಳ ಸೂಸುವುದೋ ಹಾಗೇ ನೀನು ನನ್ನ ಚಂದ್ರಿಕೆ. ನಿನ್ನ ತುಟಿಯಂಚಿನ ನಗುವು ಎಂದೆಂದಿಗೂ ನನ್ನದೇ ಅಲ್ಲವೇ! ಅಮಾವಾಸ್ಯೆ ಎಂದೂ ಶಾಶ್ವತವಲ್ಲ, ಆ ಕತ್ತಲೇ ಕ್ಷಣಿಕ, ಕತ್ತಲು ಕಳೆದ ಮೇಲೆ ಬೆಳಕು ಚಿಗುರಲೇ ಬೇಕು. ನಿನ್ನ ಕತ್ತಲಿನಿಂದ ಹೊರಗೆ ಬಾ.. ನಿನಗಾಗಿ ಈ ಪ್ರಪಂಚ ಕಾಯುತ್ತಿದೆ, ಯಾರು ನಿನ್ನನ್ನು ಗುರುತಿಸದೇಯಿದ್ದರೂ ಚಿಂತೆಯಿಲ್ಲ ನಾನು ನಿನ್ನೊಂದಿಗೆ ಇದ್ದೇನೆ. ನಿನ್ನ ಏಳಿಗೆಯನ್ನು ನೋಡಿ ಸಂತೋಷಪಡುವವರಲ್ಲಿ ನಾನೇ ಮೊದಲಿಗ. ಬಾ ಗೆಳತಿ ಬಾ ನಿನಗಾಗಿ ಕಾಯುತ್ತಿರುವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ