ಗುರುವಾರ, ಅಕ್ಟೋಬರ್ 28, 2010

-ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು-

ಉದ್ಧರೇದಾತ್ಮನಾ ಆತ್ಮಾನಂ ನಾತ್ಮಾನಂ ಅವಸಾದಯೇತ್\
ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ\\
" ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು, ನಮ್ಮನ್ನು ನಾವೇ ಅವನತಿಗೀಡು ಮಾಡಿಕೊಳ್ಳಬಾರದು.
ನಮ್ಮ ಉದ್ಧಾರವಾಗಲಿ,ಅವನತಿಯಾಗಲೀ ಇರುವುದು ನಮ್ಮ ಕೈಯಲ್ಲೇ. ನಮ್ಮ ಒಳಿತಿಗೋ,ಕೆಡುಕಿಗೋ
ಕಾರಣರಾಗಿ ನಾವೇ ನಮ್ಮ ಮಿತ್ರರೂ,ಶತೃಗಳೂ ಆಗಬಲ್ಲೆವು"
ವ್ಯಕ್ತಿ ವಿಕಸನದ ಸಾಧನೆಯ ಈ ಮೊಲ ತತ್ವವನ್ನು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಜಗತ್ತಿಗೆ ಸಾರಿದ್ದಾನೆ.
ಜಗತ್ತಿನ ಪ್ರತಿಯೊಬ್ಬರೂ "ಅಮೃತ ಪುತ್ರ"ರು ಎಂದು ವೇದ ಹೇಳುತ್ತದೆ. ಹಾಗೆಯೇ ಪ್ರತಿಯೊಬ್ಬರ ಆಂತರ್ಯದಲ್ಲೂ ಅಪಾರವಾದ ಶಕ್ತಿ ಸುಪ್ತವಾಗಿದೆ. ಆ ಸುಪ್ತಶಕ್ತಿಯನ್ನು ಪ್ರಯತ್ನಶೀಲತೆಯಿಂದ ಚಾಲನೆಗೆ ತರಬೇಕಾಗಿದೆ. ಆ ಪ್ರಯತ್ನದಲ್ಲಿ ಸೋಲಾದಾಗ ಅಥವಾ ಪ್ರಯತ್ನಶೀಲರಾಗದೇ ಹೋದಲ್ಲಿ ಆ ಅಪಾರವಾದ ಶಕ್ತಿ ಉಪಯೋಗಕ್ಕೆ ಬಾರದೇ ನಂದಿ ಹೋಗುತ್ತದೆ.ದೊಡ್ಡ ಹೆಸರಾಂತ ಸಂಸ್ಥೆಯಲ್ಲಿ ನೂರಾರು-ಸಾವಿರಾರು ಕೆಲಸಗಾರರು ಕೆಲಸ ಮಾಡುತ್ತಾರೆ, ಆದರೆ ಎಷ್ಟು ಜನ ತಮ್ಮ ಪಾಲಿನ ಕೆಲಸವನ್ನು ಮಹೋನ್ನತವಾಗಿ ಮಾಡುತ್ತಾರೆ? ಅಸಡ್ಡೆ, ಅನಾಸಕ್ತಿಯಿಂದ ಮಾಡುವ ಕೆಲಸದಿಂದ ಅಭಿವೃದ್ಧಿ ಸಾಧಿಸುವುದಾದರೂ ಹೇಗೆ? ಪ್ರಖ್ಯಾತ ಅಂತಾರಾಷ್ಟ್ರೀಯ ತರಭೇತುದಾರನಿಂದ ನಾನು ತರಭೇತಿ ಪಡೆದು ನಾನು ವಿಫಲನಾದರೆ ಅದಕ್ಕೆ ಕಾರಣ ನಾನೇ ಹೊರತು ನನ್ನ ತರಭೇತುದಾರನಲ್ಲ ಅಲ್ಲವೇ!. ಅಂದರೆ ನಮ್ಮ ಪ್ರಯತ್ನ ಹೇಗೋ ಹಾಗೇ ನಮ್ಮ ಅಭಿವೃದ್ಧಿಯೊ ಹಾಗೇ ಇರುತ್ತದೆ. ಗುರಿ ಸಾಧಿಸುವುದಕ್ಕೆ ಅಚಲ ಶ್ರದ್ಧೆಯ ಅವಶ್ಯಕತೆ ಬೇಕೇ ಬೇಕು. ನಮ್ಮ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೋ ನಮ್ಮ ಕೆಲಸ ಕಾರ್ಯಗಳೂ ಅಷ್ಟೇ ಗಟ್ಟಿಯಾಗಿರುತ್ತದೆ. ನಕಾರಾತ್ಮಕ ಧೋರಣೆ ಮನದಲ್ಲಿ ಸುಳಿಯಿತೆಂದರೆ, ನಮ್ಮ ಅಧಃಪತನ ಆರಂಭವಾದಂತೆಯೇ ಸರಿ. ಹಾಗೆ ನಮ್ಮ ಮನವನ್ನು ಸಕಾರಾತ್ಮಕ ಧೋರಣೆಯ ಚೌಕಟ್ಟಿನಲ್ಲಿ ವ್ಯವಸ್ಥಿತವಾಗಿಡುವ ಜವಾಬ್ದಾರಿ ವ್ಯಕ್ತಿಗತವಾದದ್ದೇ ಅಲ್ಲವೇ?. ಒಂದು ಮೊಟ್ಟೆಗೆ ನಾವು ಹೊರಗಿನಿಂದ ಶಕ್ತಿ ಪ್ರಯೋಗಿಸಿದರೆ ಅದರ ಸರ್ವನಾಶ ಶತಸಿದ್ಧ, ಅದೇ ಒಳಗಿನಿಂದ ಉಂಟಾಗುವ ಘರ್ಷಣೆಯ ಒತ್ತಡದ ಶಕ್ತಿ ಒಂದು ಜೀವದ ಹುಟ್ಟಿಗೆ ಕಾರಣವಾಗುತ್ತದೆ.ಅಂದರೆ ನಮ್ಮಲ್ಲಿ ಆವಿರ್ಭವಿಸುವ ಅಂತರಾತ್ಮದ ಶಕ್ತಿ ಅಪಾರವಾದುದು ಅದರಿಂದ ಲೋಕ ಉದ್ಧಾರವಾಗುತ್ತದೆ. ಅಂತಹ ಶಕ್ತಿ ಪ್ರತಿಯೊಬ್ಬರಲ್ಲಿಯೊ ಇದೆ. ಆದರೆ ಅದನ್ನು ಹೊರತೆಗೆಯಲು ನಮ್ಮ ಪ್ರಯತ್ನ ಪ್ರಾಮಾಣಿಕವಾಗಿರಬೇಕಷ್ಟೆ.
ಕೃಷ್ಣ ಬಯಸುತ್ತಾನೆ ನಾವು ಆತ್ಮಶಕ್ತಿಯ ಸಾಗರವಾಗಬೇಕು,ಅಂತಹ ಆತ್ಮಶಕ್ತಿಯಿಂದ ನಾವು ಏನನ್ನಾದರೂ ಸಾಧಿಸಬಹುದು ಅಥವಾ ಅದೇ ಆತ್ಮಶಕ್ತಿ ನಕಾರಾತ್ಮಕವಾಗಿದ್ದರೆ ಅದೇ ನಮ್ಮ ಕೆಡುಕಿಗೆ ದಾರಿಮಾಡಿಕೊಡುತ್ತದೆ. ಮಹಾಭಾರತದ ಪಾತ್ರಗಳಾದ ದುರ್ಯೋಧನ,ದುಶ್ಯಾಸನ ಹಾಗು ಕರ್ಣಗಳ ಪಾತ್ರಗಳಿಂದ ಕಲಿಯಬೇಕಾದಂತಹ ಪಾಠವೂ ಅದೇ ಅಲ್ಲವೇ?
ನಮ್ಮ ನಡೆ ಹೇಗಿದೆ? ಅದೇ ನಾವು ಪಯಣಿಸುವ ದಾರಿಯನ್ನು ತೋರಿಸುತ್ತದೆ. ಇದನ್ನೇ ಕೃಷ್ಣ ’ನಿನ್ನ ಉದ್ಧಾರವನ್ನು ನೀನೇ ಮಾಡಿಕೋ" ಎಂದು ಹೇಳಿರುವುದು. ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳೇ ಹೊರತು ಬೇರೆಯವರು ಖಂಡಿತ ಅಲ್ಲ. ನಮ್ಮ ಏಳಿಗೆಗೆ ಬೇರೆಯವರನ್ನು ಹೊಣೆಗಾರರನ್ನಾಗಿಸುವವರು ಹೇಡಿಗಳಲ್ಲದೇ ಮಾತೇನು ಆಗಿರಲು ಸಾಧ್ಯ. ಹೀಗಾಗಿ ನಾವು ನಡೆಯುತ್ತಿರುವ ದಾರಿಯನ್ನು ಅರಿಯೋಣ, ಅರಿವಿನ ದಾರಿದೀಪದಲ್ಲಿ ನಮ್ಮ ಏಳಿಗೆಯೊ ಅಡಗಿದೆ. ಬನ್ನಿ ನಮ್ಮ ನಾವು ಅರಿಯೋಣ, ನಮ್ಮ ಜೀವನದ ಶಿಲ್ಪಿಗಳು ನಾವೇ ಆಗೋಣ.

2 ಕಾಮೆಂಟ್‌ಗಳು: