ಭಾನುವಾರ, ಅಕ್ಟೋಬರ್ 17, 2010

ಒಂದು ರೂಪಾಯಿ ಹೆಚ್ಚಿಗೆ ಸಂಪಾದಿಸಲು ಸಲಹೆ ಕೊಡಿ

ಇತ್ತೀಚೆಗೆ ಕಾರ್ಖಾನೆಯ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಒಂದು ನಮ್ಮ ಪ್ರಾಮಾಣಿಕ ಕೆಲಸಕ್ಕೆ ಸಂದಾಯವಾಗಬೇಕಾದ ಗೌರವ ಸಿಗದೇಯಿದ್ದರೆ ಯಾರಿಗೇ ಆಗಲಿ ನೋವು ಆಗುತ್ತೆ. ಅದರರ್ಥ ನಾವು ಮಾಡುತ್ತಿರುವ ಕೆಲಸ ಅಪ್ರಯೋಜಕವಾದುದು ಎನಿಸದೇಯಿರದು. ಅದರ ಜೊತೆಗೆ ಕಾರ್ಮಿಕ ಸಂಘಟನೆಯ ಅನೈತಿಕ ಕೆಲಸಗಳು ತಲೆಯಲ್ಲಿ ನೂರು ಚಿಂತೆಯನ್ನು ಬಿತ್ತಿ ನೆಮ್ಮದಿಯನ್ನು ಕೆಡಿಸಿತ್ತು. ನಮ್ಮ ಸಂಸ್ಥೆಯಲ್ಲಿ ಕಾರ್ಮಿಕ ಸಂಘಟನೆ ಅಸ್ಥಿತ್ವಕ್ಕೆ ಬಂದ ನಂತರ ಸಂಸ್ಥೆಯ ಉತ್ಪಾದಕತೆಯಲ್ಲಿ, ಕೆಲಸದ ನೈತಿಕತೆ,ಹಿರಿಯ ಅಧಿಕಾರಿಗಳ ಮೇಲಿನ ಗೌರವ,ಸಹೋಧ್ಯೊಗಿಗಳ ಗೌರವ ಪಾತಾಳಕ್ಕೆ ಇಳಿದಿತ್ತು. "ಕೆಲಸ ಮಾಡಿ" ಎಂದು ಹೇಳುವುದು ಅಪರಾಧವೇ ಆಗಿ ಹೋಗಿದೆ. ಈಗಂತೂ ಕೆಲಸ ಮಾಡಿ ಎಂದು ಹೇಳುವುದು ಕಷ್ಟದ ಕೆಲಸವೇ ಆಗಿದೆ." ಮಾಡೋದಿಲ್ಲ ಯಾರಿಗೆ ಹೇಳುಕೊಳ್ಳುವಿರೋ ಹೇಳಿಕೋ ಹೋಗಿ"ಎಂಬ ಪ್ರತ್ಯುತ್ತರ ಸಿದ್ಧವಾಗೇಯಿರುತ್ತೆ. ಇಂತಹ ನಕಾರಾತ್ಮಕ ವಾತಾವರಣದಲ್ಲಿ ಹೇಗೆ ಕೆಲಸ ಮಾಡುವುದು ನೀವೇ ಹೇಳಿ ಹಾಗು ಎಂತಹವರನ್ನೂ ದೃತಿಕೆಡಿಸುತ್ತದೆ.ಬೇರೆ ಕಡೆ ಕೆಲಸ ಹುಡುಕೋಣವೆಂದರೆ ಆರ್ಥಿಕ ಹಿಂಜರಿತದಿಂದ ಕೆಲಸದ ಅವಕಾಶಗಳು ಕಡಿಮೆಯಾಗಿದೆ.’ನಿಂತಲ್ಲಿ ನಿಲ್ಲಲಾಗುತ್ತಿಲ್ಲ,ಬೇರೆಡೆ ಜಾಗ ಸಿಗುತ್ತಿಲ್ಲ’ ಪರಿಸ್ಥಿತಿ ಹೀಗಿರುವಾಗ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದೆ. ದೇವರು ನನಗೊಂದು ಶಕ್ತಿ ಕೊಟ್ಟಿದಾನೆ ಅದೇನೆಂದರೆ ಕಾರ್ಖಾನೆಯ ಗೇಟು ದಾಟಿದ ನಂತರ ಅಲ್ಲಿನದ್ದೇನೂ ಮನಸ್ಸಿಗೆ ಬರೀದೇ ಇಲ್ಲ. ಅದೇನೇ ಇದ್ದರೂ ಮುಂದೆ ಏನು? ಎಂಬ ಪ್ರಶ್ನೆ ಮನಸ್ಸಿನಲ್ಲಿ ಹಸಿರಾಗೇ ಇರುತಿತ್ತು. ಕಾರ್ಮಿಕರೋ ಅವರ ಕೆಲಸದ ಬಗ್ಗೆ ಏನೂ ಕೇಳಬೇಡಿ ಆದರೆ ಅವರ ಬೇಡಿಕೆಗಳೇನೂ ಕಡಿಮೆಯಂತೂ ಇರಲಿಲ್ಲ ಹಿಮಾಲಯದೆತ್ತರಕ್ಕೆ ಅವು ಬೆಳೆದಿತ್ತು. ಎಲ್ಲರಿಗೂ ಕೆಲಸ ಮಾಡುವುದು ಬೇಕಿರಲಿಲ್ಲ ಆದರೆ ಕೈ ತುಂಬಾ ಹಣ ಮಾತ್ರ ಅಭಾದಿತವಾಗಿ ಬರಬೇಕೆಂದು ಬಯಸುತ್ತಿದ್ದಾರೆ. ಯಾರೋ ಹೀಗೆ ಮಾತನಾಡುತ್ತಾ ಹೇಳಿದ ಮಾತು " ಕಾರ್ಖಾನೆ ಬಾಗಿಲು ಹಾಕಿದರೆ ಸಂಸ್ಥೆಯವರು ಕಾರ್ಮಿಕರಿಗೆ ೧೫ ಲಕ್ಷ ಕೊಟ್ಟು ಕಳುಹಿಸುತ್ತಾರೆ" ಎಂದು. ಹರಿಹರ ದ ಕಿರ್ಲೋಸ್ಕರ್ ಸಂಸ್ಥೆ ಬಾಗಿಲುಹಾಕಿ ಹಲವು ವರುಷಗಳೇ ಕಳೆದಿದೆ, ಪರಿಹಾರ ಅನ್ನೋದು ಮಾತ್ರ ಮರೀಚಿಕೆ ಆಗಿರೋವಾಗ ನಮ್ಮ ಸಂಸ್ಥೆಯ ಕಾರ್ಮಿಕರ ಕನಸು ಹಗಲು ಕನಸೇ ಸರಿ ಎನಿಸಿತು.ಕೆಲವೇ ವರ್ಷಗಳ ಹಿಂದೆ ಕೆಲಸ ಕೊಟ್ಟರೆ ಸಾಕು ಅನ್ನೋ ಸ್ಥಿತಿಯಲ್ಲಿದ್ದವರು, ಪ್ರಾಮಾಣಿಕತೆಗೆ ಇವರೇ ದತ್ತುಪುತ್ರರೆನ್ನುವಂತೆ ಇದ್ದವರು ಇಂದು ’ಜಾಬ್ ಸೆಕ್ಯೋರಿಟಿ" ಅನ್ನೋದು ಬಂದ ಮೇಲೆ ಅಹಂಕಾರ, ದರ್ಪದಿಂದ ಹೊಟ್ಟೆಗೆ ಊಟ ಹಾಕಿ ಸಲಹಿದ ಸಂಸ್ಥೆಗೆ ಚೂರಿಹಾಕಲು ಸಿದ್ಧರಾಗಿದ್ದಾರೆ ಅನಿಸುತ್ತಿತ್ತು.
ತ್ರಿಶಂಕು ಸ್ಥಿತಿಯಲ್ಲಿರೋ ನನ್ನಂತಹ ಇಂಜನಿಯರುಗಳಿಗೆ ಇಂತಹ ವಾತಾವರಣ ಹೇಸಿಗೆ ತರಿಸುತ್ತದೆ. ಏಕೆಂದರೆ ಮೇಲಿನವರು ನಮ್ಮನ್ನೇ ಕೇಳುವುದು " ಕೆಲಸ ಏಕೆ ಆಗಿಲ್ಲ" ಅಂತ. ಆಡಳಿತ ವರ್ಗ ಹಾಗು ಕಾರ್ಮಿಕರ ನಡುವೆ ನಾವು ’ಸೇತುವೆ’ ಇದ್ದ ಹಾಗೆ. ಎರಡೂ ಕಡೆಯಿಂದ ತುಳಿಯಲ್ಪಡುವವರೂ ನಾವೇ!. ಆರಕ್ಕೇರಲಾಗದೆ ಮೊರಕ್ಕಿಳಿಯಲಾಗದೆ ತ್ರಿಶಂಕು ಸ್ಥಿತಿಯಲ್ಲಿ ಇರುವವರು ನಾವು. ಮೇಲಿನವರು ತಮ್ಮ ಅನುಕೂಲಗಳನ್ನು ತಾವು ನೋಡಿಕೊಳ್ಳುತ್ತಾರೆ. ಕೆಳಗಿನವರು ತಮಗೆ ಬೇಕಾಗಿರುವುದನ್ನು ’ಡಿಮ್ಯಾಂಡ್’ ಮಾಡಿ ಪಡೆದುಕೊಳ್ಳುತ್ತಾರೆ, ನಾವು ಮಧ್ಯದಲ್ಲಿರುವವರು ಮೇಲಿನವರ ಮರ್ಜಿಗಾಗಿ ಕೈಕಟ್ಟಿ ಕುಳಿತಿರಬೇಕು. ಅವರು ’ಕೊ’ ಅಂದಾಗ ಕೈ ಚಾಚಬೇಕು ಇಲ್ಲವೆಂದರೆ ಅದಕ್ಕಾಗಿ ಕಾಯಬೇಕು. ಮೇಲಿನವರು ಕೊಡುವ ಬಿಕ್ಷೆಗಾಗಿ ನಾವು ಕೈ ಚಾಚಬೇಕಾದಂತಹ ಹೀನಾಯ ಸ್ಥಿತಿ ನಮ್ಮದು. ಎಷ್ಟೋ ಬಾರಿ ನನಗೇ ಅನಿಸಿದೆ ನಾನೇ ಸರಿಯಿಲ್ಲವೋ?, ಇಲ್ಲ ನಾನು ಹೆಜ್ಜೆಯಿಡುವ ಕಡೆಯೇ ಸರಿಯಿಲ್ಲವೋ? ಎಂಬ ಅನುಮಾನ ಮನದಲ್ಲಿ ನೂರೆಂಟು ಬಾರಿ ಬಂದು ಹೋಗಿದೆ.
ಇಂತಹ ಪರಿಸ್ಥಿಯಲ್ಲೇ ಒಂದು ದಿನ ಮೊದಲನೇ ಪಾಳಿ ಮುಗಿಸಿ ಕಾರ್ಖಾನೆಯ ಬಸ್ಸಿನಲ್ಲಿ ೨-೪೦ ಕ್ಕೆ ಹೊರಟು ತಂಪಾಗಿ ಕಣ್ಣು ತುಂಬಾ ನಿದ್ದೆ ಮಾಡಿ ೩-೪೫ಕ್ಕೆ ಕತ್ರಗುಪ್ಪೆಯ ’ಬಾಟ ಶೋ ರೂಂ’ ಬಳಿ ಇಳಿದೆ. ನಾಲ್ಕು ರಸ್ತೆಗಳು ಕೊಡುವ ಸ್ಥಳವದು. ಎತ್ತರಕ್ಕೆ ಬೆಳೆದು ನಿಂತಿರುವ ಕಟ್ಟಡಗಳು,ಅಂಗಡಿ ಮುಂಗಟ್ಟುಗಳು ನನ್ನ ಮನದಲ್ಲಿ ನೂರು ಪ್ರಶ್ನೆಗಳನ್ನು ಹುಟ್ಟುಹಾಕಿತು. ಈ ಅಂಗಡಿಗಳೆಲ್ಲಾ ನಮ್ಮ ಹಣ ಖರ್ಚುಮಾಡಿಸುತ್ತವೇ ಹೊರತು ಯಾವುದೇ ಅಂಗಡಿಯಲ್ಲಿ ನಮಗೆ ಹಣ ಗಳಿಸುವ ಮಾರ್ಗ ತೋರಿಸುವ ಒಂದೇ ಒಂದು ಅಂಗಡಿಯೊ ಅಲ್ಲಿರಲಿಲ್ಲ. ನಾಳೆ ನಮ್ಮ ಕಾರ್ಖಾನೆಗೆ ಏನಾದರೂ ಬೀಗ ಹಾಕಿದರೆ ಏನು ಗತಿ? ಬೇರೆ ಕೆಲಸ ಹುಡುಕಿಕೊಳ್ಳಬಹುದು ಅದು ಬೇರೇ ವಿಷಯ. ಆದರೂ ಕೆಲಸ ಸಿಗುವವರೆಗೂ ಏನು ಮಾಡುವುದು? ಇಲ್ಲಿರುವ ಪ್ರತಿ ಅಂಗಡಿಗಳಲ್ಲೂ ನಮ್ಮ ಜೇಬಿನಲ್ಲಿರುವ ಹಣದ ಮೇಲೆ ಕಣ್ಣು, ಇಲ್ಲಿ ಖರ್ಚುಮಾಡುವುದಕ್ಕೆ ನೂರು ದಾರಿಗಳು ಸ್ಪಷ್ಟವಾಗಿದೆ ಆದರೆ ಹಣ ಗಳಿಸುವ ಒಂದೇ ಒಂದು ದಾರಿಯೊ ಇಲ್ಲಿ ಗೋಚರಿಸುತ್ತಿಲ್ಲ,ಗೋಚರಿಸಲಿಲ್ಲ. ಜೇಬಿನಲ್ಲಿರುವ ಹಣ ಅಲ್ಲಿರಲಾಗದೆ ತಕ ತಕ ಕುಣಿಯುತ್ತಿದೆ ಬೇರೆಯವರ ಕೈ ಸೇರಲು, ಎಷ್ಟಾದರೂ ಲಕ್ಷ್ಮೀ ಚಂಚಲೆಯಲ್ಲವೇ!. ನನ್ನ ಸಂಸ್ಥೆ ಬಾಗಿಲು ಹಾಕಿದರೆ ಅಕ್ಷರಶಹ ನಾನು ಓದಿದ್ದರೂ ಬೀದಿಯಲ್ಲಿ, ನಡು ದಾರಿಯಲ್ಲಿ ಜೀವನ ಸಾಗಿಸಲು ಒದ್ದಾಡಬೇಕಾದಂತಹ ಪರಿಸ್ಥಿತಿ ಬಂದೊದಗುತ್ತದೆ. ಇಂತಹ ಸಂದರ್ಭದಲ್ಲಿ ನಾನೊಬ್ಬನೇ ಅಲ್ಲ ಯಾರಾದರೂ ಹಣಗಳಿಸಲು ಒದ್ದಾಡುತ್ತಾರೆ ಹೀಗಾಗಿ ನಾವು ಎಷ್ಟೇ ಓದಿದ್ದರೂ ಆಗ ನಾವು ಮಾರ್ಕೆಟ್ ನಲ್ಲಿ ಹೆಬ್ಬೆಟ್ಟೇ ಅಲ್ಲವೇ? ಪ್ರಾಮಾಣಿಕವಾಗಿ ಯೋಚಿಸಿದ್ದೇನೆ ಹಾಗು ಪ್ರಾಮಾಣಿಕವಾಗಿ ನನ್ನೆಲ್ಲಾ ಗೆಳೆಯರನ್ನು ಪ್ರಶ್ನಿಸಿದ್ದೇನೆ ’ಒಂದು ರೂಪಾಯಿ ಹೆಚ್ಚಿಗೆ ಸಂಪಾದಿಸಲು ನಿಮ್ಮಲ್ಲಿ ಯಾವುದಾದರೂ ಸಲಹೆ’ಇದೆಯಾ ಎಂದು. ಪ್ರಿಯ ಓದುಗರೇ ನಿಮಗೇನಾದರೂ ಅಂತಹ ಒಂದು ಸಲಹೆ ಸೂಚನೆಗಳು ಗೊತ್ತಿದ್ದರೆ ನೀವು ತಿಳಿಸುವಿರಾ!?

2 ಕಾಮೆಂಟ್‌ಗಳು:

  1. ಪತ್ರಾಂಕಿತ ಅಧಿಕಾರಿಗಳಾದ ನಮಗೆ ಸಿ ಮತ್ತು ಡಿ-ಗುಂಪಿನ ನೌಕರರು ಅವರಿಗೆ ನಿರ್ವಹಿಸಿದ ಕೆಲಸಗಳನ್ನು ಮಾಡದೆ, ಬರಿಯ ಆಕ್ಷೇಪಣೆಗಳ ಪಟ್ಟಿಯನ್ನು ಸಿದ್ಧಪಡಿಸಿ ನಮ್ಮನ್ನೇ ದೂರುತ್ತಾ, ಕೆಲಸ ಮಾಡದೆ ಸಂಬಳ ಪಡೆಯುವುದು ಅವರ ಜನ್ಮಸಿದ್ಧ ಹಕ್ಕು ಎನ್ನುವಂತೆ ವರ್ತಿಸುವುದು ನಮ್ಮ ಸರ್ಕಾರಿ ಕಛೇರಿಗಳಲ್ಲಿ ಮಾತ್ರ ಎಂದುಕೊಂಡಿದ್ದೆ. ಆದರೆ, ನಿಮ್ಮ ಕಾರ್ಖಾನೆಯಲ್ಲೂ ಸಹ ಇದೇ ವಾತಾವರಣ ಇರುವ ಬಗ್ಗೆ ತಿಳಿದಾಗ ಸ್ವಲ್ಪ ಸಮಾಧಾನವಾದರೂ ನಂತರ ಮನಸ್ಸಿಗೆ ನೋವಾಯಿತು. ಮನುಷ್ಯರ ದುರಾಸೆಗೆ ಒಂದು ಮಿತಿಯೇ ಇಲ್ಲವೇನೋ? ಮೌಲ್ಯಗಳನ್ನು ಗಾಳಿಗೆ ತೂರಿ ಎತ್ತ ಪಯಣ ಬೆಳೆಸಿದ್ದರೋ ತಿಳಿಯದು. ಇದಕ್ಕೆಲ್ಲಾ ಅಂತ್ಯ ಯಾವಾಗ? ಬಹುಶಃ ಭಗವಂತನಿಗೇ ತಿಳಿದಿರಲಿಕ್ಕಿಲ್ಲ..

    ಪ್ರತ್ಯುತ್ತರಅಳಿಸಿ
  2. ಪ್ರಶಾಂತ್ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಜ ಇಂತಹ ಪರಿಸ್ಥಿತಿ ಎಲ್ಲೆಡೆಯಲ್ಲೂ ಕ್ಯಾನ್ಸರ್ ನಂತೆ ಹರಡಿದೆ. ನೀವು ಯಾವುದೇ ಸಂಸ್ಥೆ ಅದು ಸರ್ಕಾರಿ ಅಥವಾ ಖಾಸಗಿ ಇರಬಹುದು ಅಲ್ಲೆಲ್ಲಾ ಇಂತಹುದೇ ಪರಿಸ್ಥಿತಿ. ನಮ್ಮಲೆಲ್ಲಾ ಕಷ್ಟಪಟ್ಟು ಕೆಲಸ ಮಾಡುವವರು ಅಪ್ಪ್ರೆಂಟಿಸ್ ಹುಡುಗರು ಹಾಗು ಟ್ರೈನಿಗಳು ಕೇವಲ ೫-೧೦% ಸ್ವಾಭಿಮಾನ ಇರುವ ಉಧ್ಯೋಗಿಗಳು ಮಾತ್ರ ಕೆಲಸ ಮಾಡುತ್ತಾರೆ.

    ಪ್ರತ್ಯುತ್ತರಅಳಿಸಿ