ಶನಿವಾರ, ಅಕ್ಟೋಬರ್ 9, 2010

ನನ್ನ ಕಾರ್ಖಾನೆಯ ಪರಿಸ್ಥಿತಿ

ನಾನು ಈಗ ಕೆಲಸ ಮಾಡುವ ಸಂಸ್ಠೆಗೆ ಸೇರಿ ಏಳು ವರ್ಷಗಳು ಕಳೆಯಿತು. ಹಿಂತಿರುಗಿ ನೋಡಿದಾಗ ಎಷ್ಟೋಂದು ಬದಲಾವಣೆಗಳು ಮನಸ್ಸಿಗೆ ಗೋಚರಿಸುತ್ತದೆ. ಅವಾಗಿನ ವಾತಾವರಣಕ್ಕೂ,ಈಗಿನ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸ!. ಅದೇ ಜಾಗ,ಅದೇ ಯಂತ್ರಗಳು,ಅದೇ ಅಧಿಕಾರಿಗಳು,ಅದೇ ಭಾಸ್,ಅದೇ ಜನಗಳು, ಹಾಗಾದರೆ ಬದಲಾದದ್ದು ಏನು? ಈ ಎಲ್ಲಾ ಬದಲಾವಣೆಗಳಿಗೆ ಕಾರಣಗಳೇನು? ಎಂದು ನನ್ನ ಮನಸ್ಸು ಚಿಂತಿಸುತ್ತದೆ. ಇವು ಉತ್ತರ ಸಿಗದ ಪ್ರಶ್ನೆಗಳೇನೂ ಅಲ್ಲ.ಅದೇ ಪ್ರಶ್ನೆಗಳು ಸಮಸ್ಯೆಗಳಾದಾಗ ಅದಕ್ಕೆ ಪರಿಹಾರ ಸಿಗೋದಿಲ್ಲ. ಭಯೋತ್ಪಾದನೆ,ಅನಕ್ಷರತೆ ಹಾಗು ಬಡತನ ಅನ್ನೋದು ಸಮಸ್ಯೆಗಳೇ... ಪರಿಹಾರ ಅನ್ನೋದು ಮರೀಚಿಕೆ ಅನ್ಸೋದಿಲ್ಲವೇ? ನಾವಿರುವ ವಾತಾವರಣದಲ್ಲಿ ಋಣಾತ್ಮಕ ಬದಲಾವಣೆಗಳಾದರೆ ಮೊಲ ಉದ್ದೇಶ ಅಥವಾ ಗುರಿಯ ಕಡೆ ಸಾಗುವ ಹಾದಿ ಕಠಿಣವಾಗುತ್ತದೆ.

ಇವತ್ತು ನಮ್ಮ ಸಂಸ್ಥೆಯ ಸಮಸ್ಯೆಗಳಿಗೆ ಕಾರಣ ಯಾರು? ಮೊಲ ಯಾರು? ಅನ್ನೋದಕ್ಕೆ ಉತ್ತರ ಹುಡುಕುವ ಪ್ರಯತ್ನ ಎಲ್ಲರೂ ಮಾಡಬೇಕು, ಮಿಗಿಲಾಗಿ ಸಂಸ್ಥೆಯ ಹಿರಿಯ ಆಡಳಿತವರ್ಗ ಅದರ ಬಗ್ಗೆ ಚಿಂತಿಸಿ,ಚರ್ಚಿಸುವುದು ಈ ಸಮಯದ ಅವಶ್ಯಕತೆಯಾಗಿದೆ. ಇಂದಿನ ಸಮಸ್ಯೆಗೆ ಸಂಸ್ಥೆಯ ಪ್ರತಿಯೊಬ್ಬರೂ ನೇರವಾಗಿ ಹಾಗು ಪರೋಕ್ಷವಾಗಿ ಕಾರಣಕರ್ತರಾಗಿರುತ್ತಾರೆ. ಇಲ್ಲಿ ಬದಲಾದದ್ದು ಮನುಷ್ಯನ ಸ್ವಭಾವ-ಗುಣ-ನಡುವಳಿಕೆಗಳೇ ಅಗಿವೆ. ಈ ಮನುಷ್ಯ ಅತಿ ವಿಚಿತ್ರ, ಆತನ ಸ್ವಭಾವ-ಗುಣ-ನಡುವಳಿಕೆಗಳು ಕಾಲಕ್ಕೆ ತಕ್ಕಹಾಗೆ, ಅವನ ಅವಶ್ಯಕತೆಗಳಿಗನುಗುಣವಾಗಿ ಬದಲಾಗುತ್ತವೆ.

ಕೆಲಸವಿಲ್ಲದೆ ನಿರುಧ್ಯೋಗಿಯಾಗಿದ್ದಾಗ ಕಾಯಕವೇ ಕೈಲಾಸ ವೆನ್ನುವನು, ಕೆಲಸ ಸಿಕ್ಕಿ ಉಧ್ಯೋಗದಲ್ಲಿ ಭದ್ರತೆ ಬಂತೆಂದರೆ ಕಾಯಕವೇ ಕೈಲಾಸವೆನ್ನುವುದು ಕಸವಾಗಿರುತ್ತದೆ.ನಿರುದ್ಯೋಗಿಯಾಗಿದ್ದಾಗ ಹಸಿವಿರುತ್ತದೆ, ಹೊಸತನವಿರುತ್ತದೆ,ತೃಪ್ತಿಯಿರುತ್ತದೆ,ಕೆಲಸ,ಸಂಸ್ಥೆಯ ಮೇಲೆ ನಿಷ್ಟೆಯಿರುತ್ತದೆ, ಪ್ರತಿಯೊಬ್ಬರಲ್ಲೂ ಗೌರವವಿರುತ್ತದೆ ಆದರೆ ಅನಂತರ ಸ್ವಾರ್ಥದಿಂದ ಬೇರೆಲ್ಲವೂ ನಷ್ಟವಾಗಿ ಬರೀ ಅಹಂಕಾರ ಮಾತ್ರ ಉಳಿಯುತ್ತದೆ, ಕೆಲಸ ಮಾಡದೇ ಮಾಡುವ ಕೆಲಸ ಹೀನವಾಗಲು ನೂರಾರು ಪಿಳ್ಳೆನೆವಹುಡುಕುವುದೇ ಅವನ ಕಾಯಕವಾಗುತ್ತದೆ.

ಇದು ನನ್ನ ಸಂಸ್ಥೆಯ ಪರಿಸ್ಥಿತಿಯೊಂದೇ ಅಲ್ಲ, ಭಾರತದ ಸ್ಥಿತಿಯೊ ಹೌದು. "ಪುರಾಣ ಹೇಳೋದಕ್ಕೆ, ಬದನೆಕಾಯಿ ತಿನ್ನೋದಕ್ಕೆ" ಆನ್ನುವ ಮಾತಿನಂತೆ "ಕಾಯಕವೇ ಕೈಲಾಸ" ಅನ್ನೋದು ಇಂದಿನ ಕಾರ್ಖಾನೆಗಳಲ್ಲಿ ಬರೀ ಆಡಂಬರದ ಮಾತಾಗಿದೆ. ಬರೀ ಬಸವಣ್ಣನವರನ್ನು ನಮ್ಮ ಆದರ್ಶ ಅಂದರೆ ಸಾಲದು ಅವರು ಹೇಳಿದಂತೆ ನಡೆಯುವುದು ಅಷ್ಟೇ ಮುಖ್ಯ ಅಲ್ಲವೇ!.

ನಾವು,ನಮ್ಮದು ಅನ್ನುವ ಭಾವ ಗೌಣವಾಗಿ ಸ್ವಾರ್ಥ ಜಾಸ್ತಿಯಾದರೆ ಮನುಷ್ಯ ಮೃಗವಾಗುತ್ತಾನೆ. ಆಗ ಅವನು ಕೆಲಸವನ್ನು ಪ್ರೀತಿಸುವುದಿಲ್ಲ-ಕೆಲಸಗಳ್ಳನಾಗುತ್ತಾನೆ. ಕೆಲಸ ಮಾಡದೇಯಿರುವುದಕ್ಕೆ ನೂರಲ್ಲ,ಸಾವಿರ ಪಿಳ್ಳೆನೆವ ಹುಡುಕುತ್ತಾನೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಬೇರೆಯವರ ತಪ್ಪನ್ನು ಹುಡುಕುತ್ತಾನೆ. ಹೀಗಾಗಿ ಮನಸ್ತಾಪಗಳುಂಟಾಗಿ ಮನಸ್ಸು-ಮನಸ್ಸುಗಳ ನಡುವೆ ಬಿರುಕು ಬಿಟ್ಟು ದೊಡ್ಡ ಕಂಧಕವೇ ಬೀಡುಬಿಡುತ್ತದೆ. ಮತ್ತೆಂದೂ ಜೋಡಿಸಲಾಗದ ಸಂಭಂದವಾಗಿ ಹೋಗುತ್ತದೆ.

ದೇಶ ಮೊದಲು ಅನ್ನೋ ಹಾಗೆ ಸಂಸ್ಥೆ ಮೊದಲು ಎನ್ನುವ ಭಾವ ಎಲ್ಲರದ್ದೂ ಆದಾಗ ಎಲ್ಲರ ಬಾಳು ಹಸನಾಗುತ್ತದೆ.ಸಂಸ್ಥೆಯ ಗುರಿ ಸಾಧಿಸುವುದೆಂದರೆ ನಮ್ಮ ಬಾಳಿನ ಗುರಿಯನ್ನು ತಲುಪಿದಂತೆಯೇ ಅಲ್ಲವೇ! ಒಂದೇ ಗುರಿ ಅಂದರೆ ಒಂದೇ ದಿಕ್ಕಿನ ಕಡೆ ನಮ್ಮ ಪಯಣವೆಂದಲ್ಲವೇ? ಒಂದು ಸುಂದರ ಉದಾಹರಣೆಯೊಂದಿಗೆ ನಾವು ಏಕತೆಯಿಂದ ದುಡಿಯುವ ಶಕ್ತಿಯನ್ನು ಅರ್ಥಮಾಡಿಕೊಳ್ಳೋಣ.

ಆಯಸ್ಕಾಂತ ವನ್ನು ಪ್ರತಿಯೊಬ್ಬರು ನೋಡಿದ್ದೀರ. ಅದು ಬೇರೆ ಕಬ್ಬಿಣಗಳಿಗಿಂತ ಬಿನ್ನವೆಂದೂ ನಿಮಗೆ ಗೊತ್ತಿದೆ. ಒಂದು ಸಾದಾ ಕಬ್ಬಿಣದ ತುಂಡೊಂದರ ಆಂತರಿಕ ಪರಿಸ್ಥಿಯನ್ನು ನಾವು ಅವಲೋಕಿಸೋಣ. ಅದರ ವೇಲೆನ್ಸಿ ಎಲೆಕ್ಟ್ರಾನ್ ಗಳ ದಿಕ್ಕು ಬೇರೆ ಬೇರೆ ದಿಕ್ಕಿನಲ್ಲಿರುತ್ತದೆ. ಇಂತಹ ಪರಿಸ್ಥಿಯಲ್ಲಿ ಅದಕ್ಕೆ ಯಾವುದೇ ಶಕ್ತಿಯಿರುವುದಿಲ್ಲ.
.
ಅಂತಹ ಒಂದು ಕಬ್ಬಿಣದ ತುಂಡೊಂದಕ್ಕೆ ವಿಧ್ಯುಚ್ಛಕ್ತಿಯನ್ನು ಅದರಲ್ಲಿ ಹರಿಸಿದಾಗ ಅದರಲ್ಲಿಯ ವೇಲೆನ್ಸಿ ಎಲೆಕ್ಟ್ರಾನ್ ಗಳ ದಿಕ್ಕು ಶಕ್ತಿಯ ಪ್ರಯೋಗದಿಂದ ಒಂದೇ ದಿಕ್ಕಿಗೆ ಬದಲಾಯಿಸಿಕೊಳ್ಳುತ್ತದೆ. ಇಂತಹ ಒಂದು ಪರಿಸ್ಥಿಯಲ್ಲಿ ಅದಕ್ಕೆ ವಿಶೇಷವಾದ ಒಂದು ಶಕ್ತಿ ಪಡೆದು ಆಯಸ್ಕಾಂತವಾಗುತ್ತದೆ. ಆ ಬಲದಿಂದ ಯಾವುದೇ ಕಬ್ಬಿಣದ ತುಂಡು ಅದರ ಬಳಿ ಬಂದಾಗ ತನ್ನ ಕಡೆ ಆಕರ್ಷಿಸುತ್ತದೆ.

ಎಲ್ಲಿಯವರೆಗೂ ಅದರ ಚಲನಾ ದಿಕ್ಕು ಒಂದೇ ಆಗಿರುತ್ತದೆ ಅಲ್ಲಿಯವರೆಗೂ ಅದರ ಶಕ್ತಿಯಿರುತ್ತದೆ. ಇದೇ ತತ್ವವನ್ನು ನಾವು ಒಂದು ಸಂಸ್ಥೆಗೂ ಅನ್ವಯಿಸಬಹುದು. ಸಂಸ್ಥೆಯ ಪ್ರತಿಯೊಬ್ಬ ಸದಸ್ಯನ ಗುರಿಯೊ ಒಂದೇ ಅಗಿದಲ್ಲಿ ಸಂಸ್ಥೆಯ ಎಳಿಗೆಯ ಜೊತೆ ನಾವು ಏಳಿಗೆಯಾಗುವುದರಲ್ಲಿ ಸಂದೇಹವೇಯಿಲ್ಲ.

ಒಡೆದ ಮನಸ್ಸುಗಳನ್ನು ಒಂದಾಗಿಸುವುದು ಕಷ್ಟವಾದರೂ ಸಹಮತ,ಸಹಬಾಳ್ವೆಗೆ ಅದು ಅವಶ್ಯ. ಅಧಿಕಾರ ವರ್ಗ ಹಾಗು ಕಾರ್ಮಿಕ ವರ್ಗ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಪ್ರತಿಯೊಬ್ಬರ ಜೀವನವನ್ನು ಹಸನಾಗಿಸಬೇಕು. ಇದು ಈ ಗಳಿಗೆಯ ಅವಶ್ಯಕತೆಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ