ಬುಧವಾರ, ಅಕ್ಟೋಬರ್ 6, 2010

ನನ್ನ ಜೀವನದ ನಾಯಕ

ಅದೊಂದು ಚಿಕ್ಕ ಊರಿನ ಗಲ್ಲಿ. ಚಿಕ್ಕ ದಾರಿಯ ಆಸುಪಾಸಿನ ಎರಡು ಕಡೆಗಳಲ್ಲಿಯೊ ಮನೆಗಳು. ಸರಿ ಸುಮಾರು ೨೦-೩೦ ಮನೆಗಳಿರಬಹುದು. ಹೊಸದಾಗಿ ಕಟ್ಟಿದ ಬಡಾವಣೆಯಾದ್ದರಿಂದ ಅದಕ್ಕೊಂದು ಹೆಸರು. ಶ್ರಿ ಅರವಿಂದನಗರ ಅಂತ. ಅರವಿಂದರ ಅನುಯಾಯಿಗಳಾದ ಶ್ರಿ ರಾಮರಾವ್ ರವರು ತಮ್ಮ ಮಗನಿಗೂ, ತಾವಿದ್ದ ಬಡಾವಣೆಗೂ ಅದೇ ಹೆಸರಿಟ್ಟಿದ್ದರು ಹಾಗು ತಾವು ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಡಲು ಕಟ್ಟಿಸಿದ ಕಟ್ಟಡಕ್ಕೆ ಶ್ರಿ ಅರವಿಂದ ಆಶ್ರಮವೆಂದೂ ನಾಮಕರಣ ಮಾಡಿದ್ದರು. ಅಂತಹ ಒಂದು ಚಿಕ್ಕ ಊರಿನ ಚಿಕ್ಕ ಬಡಾವಣೆಯಲ್ಲಿ ನಾನು ನನ್ನ ಆರಂಭಿಕ ಶಾಲೆಯಿಂದ ಹಿಡಿದು ಪಿ ಯು ಸಿ ಯವರೆಗೂ ಓದಿ ನಂತರ ಪದವಿ ಶಿಕ್ಷಣಕ್ಕೆ ಪರ ಊರಿಗೆ ಹೋದೆ.

ಶಾಲಾ ದಿನಗಳಲ್ಲಿ ನನ್ನ ಬಡಾವಣೆಯಲ್ಲಿ ನನ್ನ ವಯಸ್ಸಿನವರೂ, ನನಗಿಂತ ಚಿಕ್ಕ ವಯಸ್ಸಿನವರೂ ಹಾಗು ನನಗಿಂತ ವಯಸ್ಸಿನಲ್ಲಿ ದೊಡ್ಡವರೂ ಇದ್ದರು. ಅವರಲ್ಲಿ ಕೆಲವರು ನನಗೆ ಸ್ಪೂರ್ತಿಯಾದವರೂ ಇದ್ದರು. ಅವರ ನಡೆ,ನುಡಿ, ಆಟ,ಪಾಠ....ಇತ್ಯಾದಿಗಳಲ್ಲಿ.

ಜೀವನದಲ್ಲಿ ನಮ್ಮ ಜೊತೆಗೆ ಬಂಧು ಬಳಗದವರು, ಆತ್ಮೀಯರು, ಸ್ನೇಹಿತರೂ ಒಂದಲ್ಲ ಒಂದು ಕಾಲ ಘಟ್ಟದಲ್ಲಿ ನಮ್ಮ ಆಗು-ಹೋಗುಗಳಿಗೆ ಸಾಕ್ಷಿಯಾಗಿರುತ್ತಾರೆ.ಕೆಲವರು ಅವರಲ್ಲಿ ನಮಗೆ ಆದರ್ಶವಾಗಿರುತ್ತಾರೆ ಅದು ಮಾನಸಿಕವಾಗಿ ಆಗಿರಬಹುದು, ಇಲ್ಲವೇ ತಂದೆ-ತಾಯಿ ನೋಡು ಅವನು ಹೀಗೆ-ಹಾಗೆ ಅವನನ್ನು ನೋಡಿ ಕಲಿ ಎಂಬ ಒತ್ತಾಯಪೂರ್ವಕವಾಗಿಯೂ ಇರಬಹುದು. ಅದು ಸರಿ, ತಪ್ಪು ಎಂದು ನಿರ್ಧರಿಸುವ ಮಾನಸಿಕ ಬೆಳೆವಣಿಗೆ ಅಂದು ನಮಗಿರಲಿಲ್ಲ ಬಿಡಿ. ಜೀವನದ ಮತ್ಯಾವುದೋ ಕಾಲ ಘಟ್ಟದಲ್ಲಿ ಅದೇ ಗೆಳೆಯರು,ಬಂಧುಗಳು, ನಮ್ಮ ದೃಷ್ಟಿಯಿಂದ ದೂರವಾಗಿದ್ದವರು ಮತ್ತೆ ಝಗಮಗಿಸುವಂತೆ ಕಾಣಿಸಿದರೆ ಮತ್ತೆ ಕೆಲವರು ಜೀವನದಲ್ಲಿ ಅಧೋಗತಿಗೆ ಇಳಿದಿರುತ್ತಾರೆ. ಅದನ್ನೆಲ್ಲಾ ನೋಡುವವರಿಗೆ ಜೀವನವು ಅಶ್ಚರ್ಯವೂ, ಅವರ ಸ್ಥಿತಿ ದುಃಖವನ್ನೂ ತರುತ್ತದೆ.ಏನೂ ಮಾಡಲಾಗದೆ ಮೊರನೆಯವರಾಗಿ ನೋಡುವುದು ಮಾತ್ರ ನಮ್ಮ ಪಾಲಿಗಿರುತ್ತದೆ. ಹಿಂದೆ ನೋಡಿದಾಗಲೂ, ಈಗ ನೋಡುವುದಕ್ಕೂ ಅಜ-ಗಜ ವ್ಯತ್ಯಾಸವಿರುತ್ತದೆ.

ಪ್ರಾಣೇಶ್ ( ಹೆಸರನ್ನು ಬದಲಿಸಿದ್ದೇನೆ) ಓದಿನಲ್ಲಿ ಅಷ್ಟೇನೂ ಬುದ್ದಿವಂತನಲ್ಲ, ಹತ್ತನೇ ತರಗತಿಯಲ್ಲಿ, ಪಿ ಯು ಸಿ ಯಲ್ಲೂ ಫೇಲ್ ಆದವನು. ಅವನ ಗೆಳೆಯರೆನಿಸಿಕೊಂಡವರಿಗೆ ಅವನ ಬಗ್ಗೆ ಯಾವ ರೀತಿಯ ಅಭಿಪ್ರಾಯವಿರಬಹುದು ನೀವೇ ಊಹಿಸಿ. ಬಂಧು-ಬಳಗಗಳಲ್ಲಿಯೊ ಅವನ ಬಗ್ಗೆ ತಾತ್ಸಾರ,ಅಪಹಾಸ್ಯ, ಗೆಳೆಯರಲ್ಲೂ ಅವನ ಕಂಡರೆ ಅಸಡ್ಡೆ,ಕೀಳುಭಾವನೆ. ಇಂಥಹ ಪರಿಸ್ಥಿತಿ ಎಂಥವನನ್ನೂ ಅಧೀರನನ್ನಾಗಿಸುತ್ತದೆ. ಅವನ ಸಕಾರಾತ್ಮಕ ಧೋರಣೆಗಳನ್ನು ನಾಶಪಡಿಸುತ್ತದೆ. ಆದರೆ ಕೆಲವೇ ಕೆಲವರಲ್ಲಿ ಮಾತ್ರ ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವದ ಗುಣಗಳು ಬಡಿದೇಳುತ್ತವೆ. ನಿಜ, ಪ್ರತಿಯೊಬ್ಬರೂ ಹುಟ್ಟುತ್ತಾ ನಾಯಕರೇ!,ಅಮೃತಪುತ್ರರೇ!, ಆದರೆ ಬೆಳೆಯುತ್ತಾ ನಮ್ಮ ಶಕ್ತಿ ಬಗೆಗಿನ ಅರಿವಿಗೆ ಗಟ್ಟಿಯಾದ ಪರದೆಯನ್ನು ಹಾಕಿಕೊಂಡು ಕೀಳರಿಮೆ ಅನ್ನೋ ಹೊದ್ದಿಗೆಯನ್ನು ಮೈಮೇಲೆ ಹೊದ್ದುಕೊಂಡು ಮಲಗಿಬಿಟ್ಟಿರುತ್ತೇವೆ. ಆಗ ಕೈ ಹಾಕಿದ ಕೆಲಸವೆಲ್ಲಾ ಕುಲಗೆಟ್ಟು ಹೋಗುತ್ತಿರುತ್ತದೆ. ನಮ್ಮ ಟೈಂನ್ನು ಹಳಿದುಕೊಳ್ಳುವುದು ಬಿಟ್ಟರೆ ನಮಗಿನ್ನೇನೂ ಇರುವುದಿಲ್ಲ. ಇಲ್ಲವಾದರೆ ನಮ್ಮ ಸೋಲನ್ನು ಬೇರೆಯವರ ತಲೆಗೆ ಕಟ್ಟೋದು ಬಿಟ್ಟರೆ ಬೇರೇನೂ ನಾವು ಮಾಡುವುದಿಲ್ಲ. ಆದರೆ ಅದೇ ಸೋಲನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಗೆಲುವಿನ ನಗೆ ಬೀರುವವರು ತುಂಬಾ ಕಡಿಮೆ, ಅವರೇ ಜೀವನದಲ್ಲಿ ನಿಜವಾದ ನಾಯಕರು ಅಲ್ಲವೇ?.

ಹತ್ತು ವರ್ಷಗಳ ನಂತರ ಇಂದು ಪರಿಸ್ಥಿತಿ ಬದಲಾಗಿದೆ ಕ್ಷಮಿಸಿ ಅವನು ಪರಿಸ್ಥಿಯನ್ನು ಬದಲಾಯಿಸಿಕೊಂಡನೆಂದರೆ ತಪ್ಪಲ್ಲ. ಅವನು ಎಷ್ಟು ಓದಿದ್ದಾನೆ ಅನ್ನೋದು ಶೇ೫೦ ಮಾತ್ರ ಜೀವನಕ್ಕೆ ಬೇಕಾಗುತ್ತದೆ ಅಷ್ಟೇ ಶೇ ೧೦೦ ರಷ್ಟು ಬೇಕಾಗಿರುವುದು ಜೀವನದ ಕಡೆಗೆ ಅವನ ನಡುವಳಿಕೆ ಅಲ್ಲವೇ?ಅವನು ನಡೆದು ಬಂದ ದಾರಿ,ಅವನ ಕಷ್ಟಕಾಲದಲ್ಲಿ ಹೆಗಲುಕೊಟ್ಟವರು ಅವನ ನಿಜವಾದ ನೆಂಟರು. ಅವನು ಒಂದು ಸಂಸ್ಥೆಯ ಒಡೆಯನಾಗಿದ್ದಾನೆ, ನೂರಾರು ಜನಗಳಿಗೆ ಕೆಲಸ ಕೊಟ್ಟು ಅವರ ಜೀವನದ ಬೆಳಕಾಗಿದ್ದಾನೆ.

ಅವನ ಛಲ. ಬಲಕ್ಕೆ, ಜೀವನ ಪ್ರೀತಿಗೆ ಏನು ಹೇಳಬೇಕು? ನಿಜಕ್ಕೂ ಹ್ಯಾಟ್ಸಾಫ್ ಅನ್ನದೇ ಇರಲು ಸಾಧ್ಯವೇ? ನೀವೇ ಹೇಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ