ಶನಿವಾರ, ಅಕ್ಟೋಬರ್ 16, 2010

ನವರಾತ್ರಿಯ ಆಯುಧಪೂಜೆಯೊ,ನಮ್ಮಲ್ಲಿರುವ ಕ್ರೂರತೆಯೊ!

ನಮ್ಮ ಕಾರ್ಖಾನೆಯಲ್ಲಿ ನವರಾತ್ರಿ ಬಂತೆಂದರೆ ಎಲ್ಲರಿಗೂ ಖುಷಿ. ಅದಕ್ಕೆ ಎರಡು ಕಾರಣಗಳಿವೆ,ಮೊದಲನೆಯದು ನಮ್ಮ ಜೇಬಿಗೆ ಬೋನಸ್ ಹಣ ಬಂದು ಬೀಳುತ್ತೆ, ಎರಡನೆಯದು ನಮಗೆಲ್ಲಾ ಸಂಭ್ರಮ ಕೊಡೋ ಆಯುಧಪೂಜೆ ಕಾರ್ಖಾನೆಯಲ್ಲಿ ಭವ್ಯವಾಗಿ ಆಚರಿಸುತ್ತೇವೆ ಅದಕ್ಕೆ. ವರ್ಷದ ಕೊಳೆಯೆಲ್ಲವನ್ನೂ ತೊಳೆದು ನಮಗಾಗಿ,ನಮ್ಮ ಏಳಿಗೆಗಾಗಿ ದಣಿವರಿಯದೇ ದುಡಿಯುವ ಯಂತ್ರಗಳನ್ನು ಪೊಜಿಸುವುದು,ಗೌರವಿಸುವುದು ನಮ್ಮ ಹಿಂದೂ ಸಂಸ್ಕೃತಿಯ ಸಂಪ್ರದಾಯ. ಅದರ ಹಿಂದಿರುವ ತತ್ವವೆಂದರೆ "ನಮಗಾಗಿ ದುಡಿಯುವ ನೇರಾವಾಗಿ ಅಥವಾ ಪರೋಕ್ಷವಾಗಿ ಕಾರಣವಾಗಿರುವವರನ್ನು ಪೂಜಿಸುವುದು, ಗೌರವದಿಂದ ಕಾಣುವುದು ಹಾಗು ಅವರ ತ್ಯಾಗವನ್ನು ನೆನೆಯುವುದೇ ಆಗಿದೆ". ಆದುದರಿಂದಲೇ ಹಿಂದೂಗಳಿಗೆ ಅನುಕೂಲ ಒದಗಿಸುವುದೆಲ್ಲವೂ ದೇವರೇ ಆಗಿವೆ. ಉದಾಹರಣೆಗೆ ನೀರು-ಗಂಗೆಯಾದರೆ,ಗಾಳಿ-ವಾಯುದೇವ,ಮಣ್ಣು-ಭೂಮಿತಾಯಿ ಹಾಗೆ ಕಲ್ಲು,ಮರ,ಪ್ರಾಣಿಗಳೂ ನಮಗೆ ದೇವರೇ ಆಗಿದೆ. ಪೂಜಿಸುವುದೆಂದರೆ ಗೌರವಿಸುವುದೊಂದೇ ಅಲ್ಲದೇ ಅದನ್ನು ಸಂರಕ್ಷಿಸಬೇಕೆನ್ನುವ ಕಾಳಜಿಯೊ ಅದರಲ್ಲಿದೆ. ಅದಕ್ಕಾಗಿಯೇ ಹಿಂದೂ ಸಮಾಜದಲ್ಲಿ ದೇವರುಗಳ ಸಂಖ್ಯೆ ಜಾಸ್ತಿ-ಮೊವ್ವತ್ತು ಮೊರು ಕೋಟಿ ದೇವತೆಗಳಿದ್ದಾರೆ ಎಂದು ಒಂದು ಅಂದಾಜು ಹೇಳುತ್ತದೆ.ನಾಗರೀಕತೆ,ವಿಜ್ಘ್ಯಾನ,ತಂತ್ರಜ್ಘ್ಯಾನ,ಬುದ್ಧಿವಂತಿಕೆ ಬೆಳೆದಂತೆಲ್ಲಾ ನಮ್ಮ ಆಚರಣೆಗಳ ನಿಜವಾದ ಅರ್ಥವನ್ನು ತಿಳಿದುಕೊಳ್ಳುವುದರಲ್ಲಿ ನಾವು ಎಡವಿದ್ದೇವೆ.ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಹಾಳುಮಾಡಿಕೊಂಡಿದ್ದೇವೆ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಗಾಧೆಯಂತೆ ಈಗ ನಮ್ಮ ಸರ್ಕಾರಗಳು,ಸಂಘ-ಸಂಸ್ಥೆಗಳು ಪರಿಸರ ರಕ್ಷಿಸಬೇಕು ಎಂದು ಜನ ಸಾಮಾನ್ಯರಲ್ಲಿ ಜಾಗೃತಿ ಮೊಡಿಸುವ ಪ್ರಯತ್ನಮಾಡುತ್ತಿದೆ.
ಹಬ್ಬ ಹದಿನೈದು ದಿನಗಳಿರುವಂತೆಯೇ ಕಾರ್ಖಾನೆಯಲ್ಲಿ ಬರೀ ಬೋನಸ್ ನದೇ ಸುದ್ಧಿ,ಬರೀ ಗಾಳಿ ಸುದ್ಧಿ. ಕಳೆದ ವರ್ಷ ಆರ್ಥಿಕ ಹಿಂಜರಿತವಿತ್ತಲ್ಲ ಅದಕ್ಕೆ ಸಂಸ್ಥೆಗೆ ಲಾಭವಾಗುವುದಕ್ಕಿಂತ ನಷ್ಟವೇ ಹೆಚ್ಚಾಗಿರುವುದರಿಂದ ಈ ಬಾರಿ ಬೋನಸ್ ಕೊಡೋದಿಲ್ಲವೆಂದು, ಈ ಬಾರಿ ಕೇವಲ ಐದು ಸಾವಿರ ಮಾತ್ರ ಬೋನಸ್ ಅಂತೆ, ಇಲ್ಲ ಈ ಬಾರಿ ಕೇವಲ ನಮ್ಮ ಸಂಬಳದಲ್ಲಿ ೨೦% ಮಾತ್ರ ಬೋನಸ್ ಕೊಡ್ತಾರಂತೆ ಎಂಬ ಅಂತೆ ಕಂತೆಗಳು ಕಾರ್ಖಾನೆಯ ಎಲ್ಲೆಡೆಯಲ್ಲೂ ಹರಡಿತ್ತು. ಯಾರಾದರೂ ಇಬ್ಬರು ಮಾತನಾಡುತ್ತಿದ್ದಾರೆಂದರೆ ಸುಲಭವಾಗಿ ಹೇಳಬಹುದು ಅವರು ಬೋನಸ್ ಬಗ್ಗೆಯೇ ಮಾತನಾಡ್ತಿರೋದು ಅಂತ. ಯಾರೇ ಸಿಕ್ಕರೂ ಅವರು ಕೇಳುವಂತಹ ಮೊದಲ ಪ್ರಶ್ನೆಯೆಂದರೆ ಏನು ಸುದ್ಧಿ? ಅಂತ. ಈ ಬಾರಿ ಅಷ್ಟು ಕೊಡ್ತಾರಂತೆ,ಇಷ್ಟು ಕೊಡ್ತಾರಂತೆ ಎನ್ನುವ ಮಾತುಗಳೇ!. ಕಾಯುವುದರಲ್ಲಿರುವ ಕುತೂಹಲ ಅದು ಕೈಗೂಡಿದಾಗ ಇರುವುದಿಲ್ಲ ಹಾಗೆಯೇ ಅಂತೆ ಕಂತೆಗಳಿಗೆ ದಿನಾಂಕ:೦೭.೧೦.೨೦೧೦ ರಂದು ತೆರೆಬಿದ್ದಿತು.ಅಂದು ಸಂಸ್ಥೆಯ ಸೂಚನಾ ಫಲಕದಲ್ಲಿ ಒಂದು ತಿಂಗಳ ಸಂಬಳದಷ್ಟು ಬೋನಸ್ ಎಂದು ಪ್ರಕಟವಾಗಿತ್ತು.ಎಲ್ಲರಲ್ಲಿಯೊ ಒಂದು ರೀತಿಯ ಸಮಾಧಾನ ತಂದಿತ್ತು.
ಬೋನಸ್ ಏನೋ ಕೈಗೆ ಬಂದಾಯಿತು ಇನ್ನು ಆಯುಧ ಪೂಜೆಯದೇ ಚಿಂತೆ ಏಕೆಂದರೆ ಆಡಳಿತ ವರ್ಗ ಹಾಗು ಕಾರ್ಮಿಕ ಸಂಘಟನೆಯ ನಡುವೆ ಒಮ್ಮತ ಏರ್ಪಡದೇ ಇದ್ದುದ್ದೇ ಕಾರಣವಾಗಿತ್ತು. ಕಾರ್ಮಿಕ ಸಂಘಟನೆಯ ಜೊತೆ ಮಾತುಕತೆ ಮಾಡದೇ ಆಯುಧ ಪೂಜೆಯ ವಿವರಗಳನ್ನು ಸಂಸ್ಥೆಯ ಸೂಚನಾ ಫಲಕದಲ್ಲಿ ಹಾಕಿದರು ಎನ್ನುವುದೇ ಅವರ ತಗಾಧೆಯಾಗಿತ್ತು ಹಾಗು ಈ ಬಾರಿ ಅವರೆಲ್ಲರೂ ಆಯುಧಪೂಜೆಯನ್ನು ಬಹಿಷ್ಕರಿಸಬೇಕೆನ್ನುವ ತೀರ್ಮಾನಕ್ಕೆ ಬಂದಿದ್ದರು ಎನ್ನುವ ಸುದ್ಧಿ ಎಲ್ಲೆಡೆಯಲ್ಲೂ ಕೇಳಿಬರುತ್ತಿತ್ತು. ಹಾಗು ಆಡಳಿತ ವರ್ಗದವರು ಕೊಡುವ ಆಯುಧಪೂಜೆಯ ಸಿಹಿಯನ್ನೂ ಸ್ವೀಕರಿಸುವುದಿಲ್ಲವೆಂದು ಸುದ್ಧಿ ಬಂದಿತ್ತು. ತೆಗೆದುಕೊಳ್ಳದೇಯಿದ್ದರೆ ಸಂಸ್ಥೆಗೇನೂ ನಷ್ಟವಿಲ್ಲವೆಂದು ಅವರಿಗೆ ತಿಳಿಯುವ ಕಾಲ ಬೇಗ ಬರಲಿ ಎಂಬ ಪ್ರಾರ್ಥನೆ ಮಾತ್ರ ನಮ್ಮದಾಗಿತ್ತು.
ಕೆಲಸವನ್ನು ಪ್ರೀತಿಸುವವರಾರೂ ಈ ರೀತಿ ಮಾಡುವುದಿಲ್ಲವೆಂಬ ಭಾವನೆ ನನ್ನದು. ಆಡಳಿತ ವರ್ಗ ಏನೇ ಹೇಳಿದರೂ ಅದಕ್ಕೆ ವಿರುದ್ಧವಾಗೇ ವರ್ತಿಸುವ ಕಾರ್ಮಿಕ ವರ್ಗ, ಆಡಳಿತ ವರ್ಗದವರು ಕೊಟ್ಟ ಬೋನಸ್ ಸ್ವೀಕರಿಸಿದ್ದೇಕೋ?. ಪ್ರತಿಯೊಂದು ಕಾರ್ಖಾನೆಯಲ್ಲಿ ಆಡಳಿತ ವರ್ಗ ಹಾಗು ಕಾರ್ಮಿಕ ವರ್ಗಗಳ ನಡುವೆ ಮನಸ್ತಾಪಗಳಿರುವುದು ಸರ್ವೇ ಸಾಮಾನ್ಯವಾದರೂ ಅದನ್ನು ಪರಿಹರಿಸಿಕೊಳ್ಳುವತ್ತ ನಮ್ಮ ಗಮನವಿರಬೇಕೇ ಹೊರತು ಬಹಿಷ್ಕಾರ,ಚಳುವಳಿ,ಉಪವಾಸ ಹಾಗು ಪ್ರತಿಭಟನೆಗಳಿಂದ ಸಾಧ್ಯವಿಲ್ಲ. ಬಹಿಷ್ಕಾರ,ಚಳುವಳಿ,ಉಪವಾಸ ಹಾಗು ಪ್ರತಿಭಟನೆಗಳಿಂದ ತಾತ್ಕಾಲಿಕವಾಗಿ ಪರಿಹಾರವನ್ನೇನೋ ನಿರೀಕ್ಷಿಸಬಹುದಾದರೂ ಶಾಶ್ವತ ಪರಿಹಾರವನ್ನು ನಿರೀಕ್ಷಿಸುವುದು ಸಾಧುವಾಗಲಾರದು.ಪರಿಹಾರ ಬೇಕಿದ್ದಲ್ಲಿ ಮನಸುಗಳನ್ನು ನಿರ್ಮಲವಾಗಿಟ್ಟುಕೊಂಡು ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಅಭಿವೃದ್ದಿಯ ಕಡೆ ಗಮನ ಹರಿಸಬೇಕು. ಆಡಳಿತ ಪಕ್ಷ ಹಾಗು ಪ್ರತಿಪಕ್ಷಗಳು ಜನ ಸಾಮಾನ್ಯರ ಕಡೆ ಗಮನಹರಿಸದೇ ತಗಾಧೆ ತೆಗೆಯುತ್ತಾರಲ್ಲ ತಮ್ಮ ಸ್ವಾರ್ಥಸಾಧನೆಗೆ ಹಾಗೇ ಕಾರ್ಮಿಕ ಸಂಘಟನೆಯ ನಡುವಳಿಕೆಯೊ ಹಾಗೇ ಇದೆ ಮತ್ತು ಅದನ್ನು ಮೀರುವ ಸಾಧ್ಯತೆಯೊ ಕಾಣುತ್ತಿದೆ."ನನ್ನ ಕೋಳಿಯಿಂದಲೇ ಬೆಳಗಾಗುವುದು"ಎಂದು ಕಾರ್ಮಿಕ ವರ್ಗದವರು ತಿಳಿದಿದ್ದರೆ ಅದು ಅವರ ತಪ್ಪು ತಿಳುವಳಿಕೆ.ಕಾಲ ಯಾರ ಅಧೀನವೂ ಅಲ್ಲ,ಯಾವುದು ಯಾವಾಗ ಆಗಬೇಕೋ ಆಗ ತನ್ನ ಪಾಡಿಗೆ ಆಗುತ್ತೆ ನಾವು ನಿಮ್ಮಿಥ ಮಾತ್ರ ಎಂದು ನಾವುಗಳು ಅರ್ಥಮಾಡಿಕೊಳ್ಳಬೇಕಿದೆ. ಅದಕ್ಕೆ ಒಂದು ಉದಾಹರಣೆ ಕೊಡುವುದಾದರೆ , ಭಾರತಕ್ಕೆ ಸ್ವಾತಂತ್ರ ಬಂದ ಮೇಲೆ ಜವಹರಲಾಲ್ ನೆಹರು ನಮ್ಮ ಪ್ರಧಾನ ಮಂತ್ರಿಗಳಾದರು ಅವರು ತೀರಿಕೊಂಡ ಮೇಲೆ ಕಾಂಗ್ರೆಸ್ಸಿಗರು ಮುಂದೇನು ಮುಂದೆ ಯಾರು ಪ್ರಧಾನ ಮಂತ್ರಿಯಾಗುತ್ತಾರೆ ಅಂತ ಕನವರಿಸುತ್ತಿದ್ದರು ಆಗ ಭಾರತವನ್ನು ಮುನ್ನಡೆಸಿದವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಅವರು ತೀರಿಕೊಂಡ ಬಳಿಕ ಇಂದಿರಾಗಾಂಧಿಯವರು ಪ್ರಧಾನ ಮಂತ್ರಿಗಳಾದರು. ಅವರೂ ಕೊಲೆಯಾದ ಮೇಲೆ ಮುಂದೆ ಭಾರತವನ್ನು ನಡೆಸುವರಾರು?ಎಂಬ ಪ್ರಶ್ನೆ ಸಹಜಾವಾಗೇ ಮೊಡಿತ್ತು. ಕಾಂಗ್ರೆಸ್ಸಿನಿಂದಲೇ ಭಾರತ ಅನ್ನೋದನ್ನು ಸುಳ್ಳುಮಾಡಿದವರು ಅಟಲ್ ಬಿಹಾರಿ ವಾಜಪೇಯಿ. ಹೀಗೆ ಕಾಲ ಯಾರಿಗೂ ಕಾಯುವುದಿಲ್ಲ ಸಮಯ ಬಂದಾಗ ಯಾರ ಕೈಯಲ್ಲಿ ಕೆಲಸವಾಗಬೇಕೋ ಅವರ ಕೈಯಲ್ಲಿ ಕೆಲಸವಾಗುವುದರಲ್ಲಿ ಸಂದೇಹವಿಲ್ಲ.
ಆಯುಧಪೂಜೆ ನಮ್ಮ ನಿರೀಕ್ಷೆಗೂ ಮೀರಿ ಚೆನ್ನಾಗಿ ನಡೆಯಿತು.ನವರಾತ್ರಿಯ ಈ ಶುಭಸಂದರ್ಭದಲ್ಲಿ ನಮ್ಮ ಮನದ ಕತ್ತಲನ್ನೂ,ನಮ್ಮ ಸ್ವಾರ್ಥದ ಕ್ರೂರತೆಯನ್ನು ತೊಳೆದುಕೊಳ್ಳುವ ಶಕ್ತಿ ಆ ದೇವಿ ನಮಗೆಲ್ಲಾ ನೀಡಲಿ,ನಮ್ಮಲ್ಲಿ ಹೊಸ ಚೈತನ್ಯ ಹರಿಯಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ