ಶುಕ್ರವಾರ, ಅಕ್ಟೋಬರ್ 1, 2010

"ಒಂದು ಬೆಡ್ ರೂಮ್ ಫ್ಲಾಟ್" ಬರೆದವರು ಒಬ್ಬ ಭಾರತೀಯ ಸಾಫ್ಟ್ ವೇರ್ ಇಂಜನೀಯರ್- ಒಂದು ನೈಜ ಕಹೀ ಘಟನೆ.


"ಒಂದು ಬೆಡ್ ರೂಮ್ ಫ್ಲಾಟ್" ಬರೆದವರು ಒಬ್ಬ ಭಾರತೀಯ ಸಾಫ್ಟ್ ವೇರ್ ಇಂಜನೀಯರ್- ಒಂದು ನೈಜ ಕಹೀ ಘಟನೆ.

ಎಲ್ಲಾ ತಂದೆ-ತಾಯಿಯರ ಕನಸಿನಂತೆ ನಾನೂ ಕೂಡ ಸಾಫ್ಟ್ ವೇರ್ ಇಂಜನೀಯರಿಂಗ್ ನಲ್ಲಿ ಪದವಿ ಪಡೆದು ಅಮೇರಿಕಾದ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ, ಅಮೇರಿಕಾ ’ ಅವಕಾಶ ಹಾಗು ಬುದ್ದಿವಂತರ ನಾಡು’. ಅಮೇರಿಕಾ ನೆಲದಲ್ಲಿ ಕಾಲಿಡುತ್ತಿದ್ದಂತೆ ನನ್ನ ಬಹುದಿನಗಳ ಕನಸು ನನಸಾಗಿತ್ತು.
ಕೊನೆಗೂ ನಾನು ಯಾವ ಜಾಗದಲ್ಲಿ ಇರಬೇಕೆಂದುಕೊಂಡಿದ್ದೆನೋ ಅಲ್ಲಿಗೆ ತಲುಪಿಯಾಗಿತ್ತು. ನಾನು ಅಂದೇ ನಿರ್ಧರಿಸಿದ್ದೆ ಇನ್ನು ೫ ವರ್ಷಗಳ ಕಾಲ ಚೆನ್ನಾಗಿ ದುಡಿದು ಸಾಕಷ್ಟು ಹಣಗಳಿಸಿ ಭಾರತದಲ್ಲಿ ಖಾಯಂ ಆಗಿ ನೆಲೆಗೊಳ್ಳುವುದೆಂದು.
ನನ್ನ ತಂದೆ ಸರ್ಕಾರಿ ನೌಕರಿಯಿಂದ ನಿವೃತ್ತರಾಗಿದ್ದರು, ಅವರು ತಮ್ಮ ಜೀವಮಾನ ಪೂರ್ತಿ ದುಡಿದು ಒಂದು ರೂಮಿನ ಮನೆಯನ್ನು ಮಾತ್ರ ತಮ್ಮದಾಗಿಸಿಕೊಂಡಿದ್ದರು.
ನಾನು ನನ್ನ ತಂದೆಯವರಿಗಿಂತ ಹೆಚ್ಚಾಗಿ ಆಸ್ತಿ ಮಾಡಬೇಕೆಂದುಕೊಂಡಿದ್ದೆ. ನಂತರ ನನಗೆ ಒಂಟಿತನದ ಜೊತೆಗೆ ನನ್ನ ಮನೆಯ ನೆನಪು ಕಾಡತೊಡಗಿತು. ನಾನು ಪ್ರತಿವಾರ ನನ್ನ ತಂದೆ-ತಾಯಿಗೆ ಕರೆ ಮಾಡತೊಡಗಿದೆ ಅದೂ ತೀರ ಅಗ್ಗದ ಅಂತಾರಾಷ್ಟ್ರೀಯ ದೂರವಾಣಿ ಕರೆ ಬಳಸಿ. ಎರಡು ವರ್ಷ ಕಳೆಯಿತು, ಆ ಎರಡು ವರ್ಷಗಳನ್ನು ನಾನು ಮೆಕ್ ಡೊನಾಲ್ಡ್ ನಲ್ಲಿ ಬರ್ಗರ್ ಮತ್ತು ಪಿಜ್ಜಾ ಹಾಗು ಡಿಸ್ಕೋಗಳ ಜೊತೆ ಕಳೆದೆ. ಮತ್ತೆರಡು ವರ್ಷ ವಿದೇಶಿ ವಿನಮಯದಲ್ಲಿ ಭಾರತೀಯ ರುಪಾಯಿಯ ದರ ಕಡಿಮೆಯಾಗುವುದನ್ನು ನೋಡಿ ಆನಂದಿಸಿದ್ದೆ.
ಕೊನೆಯದಾಗಿ ನಾನು ಮದುವೆಯಾಗಬೇಕೆಂದು ನಿರ್ಧರಿಸಿದೆ. ನನ್ನ ತಂದೆ-ತಾಯಿಗೆ ವಿಷಯ ತಿಳಿಸಿದೆ, ನನಗೆ ಈಗ ಕೇವಲ ೧೦ ದಿನಗಳ ರಜೆ ಮಾತ್ರ ಸಿಗುತ್ತದೆ ಅಷ್ಟರೊಳಗೆ ಎಲ್ಲವೂ ಮುಗಿಯಬೇಕೆಂದು. ನಾನು ಅಗ್ಗದ ವಿಮಾನದಲ್ಲಿ ನನ್ನ ಪ್ರಯಾಣದ ವ್ಯವಸ್ಥೆ ಮಾಡಿಕೊಂಡೆ. ಮನದಲ್ಲೇ ಸಂತೋಷದ ಉತ್ಸವವನ್ನು ಆಚರಿಸುತ್ತಿದ್ದೆ ಏಕೆಂದರೆ ನನ್ನ ಎಲ್ಲಾ ಗೆಳೆಯರಿಗೆ ಉಡುಗೊರೆಗಳನ್ನು ಕೊಡಬೇಕೆಂದುಕೊಂಡಿದ್ದೆ, ಕೊಡದೇಯಿದ್ದರೆ ಎಲ್ಲರಿಂದಲೂ ಮಾತುಗಳನ್ನು ಕೇಳಬೇಕಲ್ಲಾ ಅದಕ್ಕೆ. ಮನೆಗೆ ಬಂದ ನಂತರ ಒಂದು ವಾರ ಬರೀ ಹುಡುಗಿಯರ ಫೋಟೋ ನೋಡುವುದರಲ್ಲೇ ಕಳೆದೆ ಹಾಗು ದಿನ ಕಳೆದಂತೆ ನನಗೆ ಕಾಲಾವಕಾಶ ಇಲ್ಲದ ಕಾರಣ ಅನಿವಾರ್ಯವಾಗಿ ಒಂದು ಹುಡುಗಿಯನ್ನು ಆರಿಸಿಕೊಳ್ಳಲೇಬೇಕಾಯಿತು.
ನನ್ನ ಭಾವೀ ಅತ್ತೆ-ಮಾವಂದಿರು ಹೇಳಿದರು, ನನಗೆ ಆಶ್ಚರ್ಯವಾಗುವಂತೆ. ಮುಂದಿನ ೨-೩ ದಿನಗಳಲ್ಲಿ ಮದುವೆಯಾಗಬೇಕೆಂದು ಏಕೆಂದರೆ ನನಗೆ ಹೆಚ್ಚಿನ ದಿನ ರಜೆ ಇರಲಿಲ್ಲವಲ್ಲಾ ಅದಕ್ಕೆ. ಮದುವೆಯ ನಂತರ, ಅಮೇರಿಕಾಗೆ ಹೊರಡುವ ಕಾಲ ಬಂದಿತು,ತಂದೆ-ತಾಯಿಗೆ ಸ್ವಲ್ಪ ಹಣವನ್ನು ನೀಡಿದೆ ಹಾಗು ಅವರ ನೆರೆ-ಹೊರೆಯವರಿಗೆ ಅವರನ್ನು ಸ್ವಲ್ಪ ನೋಡಿಕೊಳ್ಳಿಯೆಂದು ಹೇಳಿ ನಾವು ಅಮೇರಿಕಾಗೆ ಹೊರಟೆವು.
ನನ್ನ ಹೆಂಡತಿ ಮೊದ-ಮೊದಲು ಹೊಸ ದೇಶದಲ್ಲಿ ಸಂತೋಷವಾಗಿದ್ದಳು ಹಳೆಯದಾದ ನಂತರ ಅವಳಿಗೆ ಬೇಜಾರಾಗತೊಡಗಿತು. ಹೀಗಾಗಿ ಮನೆಗೆ ಕರೆ ಮಾಡುವ ಅಂತರ ವಾರಕ್ಕೆ ಎರಡು ಕೆಲವು ಸಮಯ ವಾರಕ್ಕೆ ಮೊರು ಬಾರಿಯಾಗತೊಡಗಿತು.ನಮ್ಮ ಉಳಿತಾಯ ಕಡಿಮೆಯಾಗತೊಡಗಿತು.ಎರಡು ವರ್ಷಗಳ ನಂತರ ನಮಗೆ ಮಕ್ಕಳಾಯಿತು. ಎರಡು ಮುದ್ದಾದ ಮಕ್ಕಳು, ಒಂದು ಗಂಡು ಮತ್ತು ಇನ್ನೊಂದು ಹೆಣ್ಣು, ದೇವರೇ ಕೊಟ್ಟ ಉಡುಗೊರೆಗಳು. ಪ್ರತಿ ಬಾರಿಯೊ ನಾನು ನನ್ನ ತಂದೆ-ತಾಯಿಯ ಜೊತೆ ಮಾತನಾಡುತ್ತಿದ್ದೆ ಅವರು ಪ್ರತಿ ಬಾರಿಯೊ ಭಾರತಕ್ಕೆ ಬಾ ಮೊಮ್ಮಕ್ಕಳನ್ನು ನೋಡಿದ ಹಾಗಾಗುತ್ತೆ ಎನ್ನುತ್ತಿದ್ದರು.
ಪ್ರತಿ ವರ್ಷವೂ ಭಾರತಕ್ಕೆ ಹೋಗುವುದೆಂದು ನಿರ್ಧರಿಸುತ್ತಿದೆ... ಆದರೆ ಸ್ವಲ್ಪ ಕೆಲಸ ಹಾಗು ಸ್ವಲ್ಪ ಹಣದ ತೊಂದರೆಯಿಂದ ಹೋಗಲು ಆಗುತ್ತಲೇ ಇರಲಿಲ್ಲ. ವರ್ಷಗಳು ಕಳೆದು ಹೋದವು ಹಾಗು ಭಾರತಕ್ಕೆ ಬರುವುದು ಕನಸಾಗಿ ಹೋಯಿತು. ಒಂದು ದಿನ ಹೀಗೆ ತುರ್ತಾಗಿ ವಿಷಯ ತಿಳಿಯಿತು ನನ್ನ ತಂದೆ-ತಾಯಿಗೆ ಹುಶಾರಿಲ್ಲವೆಂದು. ಆದರೆ ನಾನು ಬಹಳ ಪ್ರಯತ್ನಪಟ್ಟರೂ ನನಗೆ ರಜೆ ದೊರೆಯಲಿಲ್ಲ ಹಾಗು ನಾನು ಭಾರತಕ್ಕೆ ಹೊರಡಲಾಗಲಿಲ್ಲ. ಅನಂತರ ನನ್ನ ತಂದೆ-ತಾಯಿ ತೀರಿಕೊಂಡ ವಿಷಯ ತಿಳಿಯಿತು ಹಾಗು ಅವರ ಹತ್ತಿರದವರು ಯಾರೂ ಇಲ್ಲದ ಕಾರಣ ಸಮಾಜದವರೇ ಅವರ ಅಂತಿಮ ಕಾರ್ಯಗಳನ್ನು ಮಾಡಿದರೆಂದು ತಿಳಿಯಿತು. ನನಗೆ ಕೀಳರಿಮೆ ಕಾಡತೊಡಗಿತು. ನನ್ನ ತಂದೆ-ತಾಯಿ ತಮ್ಮ ಮೊಮ್ಮಕ್ಕಳನ್ನು ನೋಡದೇ ತೀರಿಕೊಂಡರೆಂದು.
ಹೀಗೆ ಹಲವು ವರ್ಷಗಳು ಕಳೆಯಿತು,ನನ್ನ ಮಕ್ಕಳಿಗೆ ಇಷ್ಟವಿಲ್ಲದಿದ್ದರೂ, ನನ್ನ ಹೆಂಡತಿಯ ಉತ್ಸಾಹದಿಂದ ನಾವು ಭಾರತಕ್ಕೆ ಹಿಂತಿರುಗಿದೆವು ಇಲ್ಲೆಯೇ ನೆಲೆಸಲು.ನಾನು ನನಗೆ ಬೇಕಾಗುವಂತಹ ಮನೆ ಹುಡುಕಲು ಪ್ರಯತ್ನಿಸಿದೆ ಅದರೆ ನನ್ನ ದುರಾದೃಷ್ಟವೋ ಏನೋ ನನ್ನ ಬಳಿಯಿದ್ದ ಹಣವೂ ಸಾಕಷ್ಟಿಲ್ಲದ ಕಾರಣ ಯಾವುದನ್ನೂ ಕೊಳ್ಳಲಾಗಲಿಲ್ಲ ಹಾಗೇ ಇತ್ತೀಚಿನ ದಿನಗಳಲ್ಲಿ ಆಸ್ತಿಯ ಬೆಲೆಗಳೂ ತುಂಬಾ ಜಾಸ್ತಿಯಾಗಿತ್ತು. ಹೀಗಾಗಿ ನಾನು ಮತ್ತೇ ಅಮೇರಿಕಾಗೆ ಹೋಗಲು ನಿರ್ಧರಿಸಿದೆ.
ನನ್ನ ಹೆಂಡತಿ ಅಲ್ಲಿಗೆ ಬರಲು ನಿರಾಕರಿಸಿದಳು ಹಾಗು ನನ್ನ ಮಕ್ಕಳು ಭಾರತದಲ್ಲಿ ಇರಲು ಇಷ್ಟಪಡಲಿಲ್ಲ. ನಾನು ಹಾಗು ನನ್ನ ಇಬ್ಬರು ಮಕ್ಕಳು ಅಮೇರಿಕಾಗೆ ಹಿಂತಿರುಗಿದೆವು ನನ್ನ ಹೆಂಡತಿಗೆ ಎರಡು ವರ್ಷಗಳಲ್ಲಿ ಬಂದೇ ಬರುತ್ತೇನೆ ಎಂದು ವಚನವನ್ನು ಕೊಟ್ಟು.
ಕಾಲಚಕ್ರ ಉರುಳಿತು, ನನ್ನ ಮಗಳು ಅಮೇರಿಕಾದ ಹುಡುಗನನ್ನು ಮದುವೆಯಾಗಲು ನಿರ್ಧರಿಸಿದ್ದಳು ಹಾಗು ನನ್ನ ಮಗ ಅಮೇರಿಕಾದಲ್ಲಿ ಸಂತೋಷವಾಗಿದ್ದಾನೆ. ನಾನು ನಿರ್ಧರಿಸಿದ್ದೆ ಸಾಕು ಸಾಕು ಎಲ್ಲಾ ಗಂಟು ಮೊಟೆ ಕಟ್ಟಿಕೊಂಡು ಭಾರತಕ್ಕೆ ಬಂದು ಬಿಡಬೇಕೆಂದು. ನನ್ನ ಬಳಿ ಒಂದು ಒಳ್ಳೆಯ ಬಡಾವಣೆಯಲ್ಲಿ ಎರಡು ರೂಮಿನ ಪ್ಲಾಟನ್ನು ಕೊಂಡುಕೊಳ್ಳುವಷ್ಟು ಹಣ ನನ್ನ ಬಳಿ ಇತ್ತು.
ಈಗ ನನಗೆ ೬೦ ವರ್ಷ, ನನ್ನ ಪ್ಲಾಟ್ ನಿಂದ ಹೊರಗೆ ಬರುವುದು ಯಾವಾಗೆಂದರೆ ನಿಯಮಿತವಾಗಿ ನಾನು ದೇವಸ್ಥಾನಕ್ಕೆ ಹೊರಡುವಾಗ ಮಾತ್ರ.ನನ್ನ ನಂಬಿಕಸ್ಥ ಹೆಂಡತಿಯೊ ನನ್ನನ್ನು ಅಗಲಿ ಸ್ವರ್ಗ ಸೇರಿದಳು.
ಕೆಲವು ವೇಳೆ ನನಗೇ ಆಶ್ಚರ್ಯವಾಗುತ್ತೆ,ಏನೇನೆಲ್ಲ ಆಗಿ ಹೋಗಿದೆ ಎಲ್ಲವೂ ಸರಿಯೇ? ನನ್ನ ತಂದೆ ಭಾರತದಲ್ಲೇ ಇದ್ದು,ಒಂದು ಮನೆಯನ್ನು ಕೊಂಡುಕೊಂಡಿದ್ದರು. ನಾನು ಕೂಡ ಎಷ್ಟೋಂದೆಲ್ಲಾ ಒದ್ದಾಡಿ ಈಗ ನನ್ನ ಬಳಿಯೊ ಅಷ್ಟೇಯಿದೆ.
ನಾನು ನನ್ನ ತಂದೆ-ತಾಯಿಯನ್ನು ಮತ್ತು ನನ್ನ ಮಕ್ಕಳನ್ನು ಒಂದು ಹೆಚ್ಚುವರಿ ಬೆಡ್ ರೂಮಿಗಾಗಿ ಕಳೆದುಕೊಂಡೆ.
ಕಿಟಕಿಯಿಂದ ಹೊರಗೆ ನೋಡಿದರೆ ಮಕ್ಕಳು ಕುಣಿಯುತ್ತಿರುವುದು ಕಾಣಿಸುತ್ತದೆ. ಈ ಹಾಳು ಟಿವಿ ಯಿಂದ ನಮ್ಮ ಮಕ್ಕಳು ಹಾಳಾಗುತ್ತಿದ್ದಾರೆ, ಅವರು ನಮ್ಮ ಮೌಲ್ಯ,ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ನನಗೆ ಅವಾಗವಾಗ ನನ್ನ ಮಕ್ಕಳಿಂದ ಪತ್ರಗಳು ಬರುತಿರುತ್ತದೆ ನನ್ನ ಕ್ಷೇಮ ವಿಚಾರಿಸಿ. ಹಾಂ! ಹಾಗಾದರೂ ಅವರು ನನ್ನನ್ನು ನೆನೆಯುತ್ತಾರಲ್ಲ ಅನ್ನೋ ಸಮಾಧಾನವಿದೆ.
ನಾನು ಸತ್ತ ನಂತರ ನನ್ನ ಅಂತಿಮ ಕಾರ್ಯಗಳನ್ನು ನನ್ನ ನೆರೆಹೊರೆಯವರೇ ಮಾಡುತ್ತಾರೆ ಅನಿಸುತ್ತದೆ. ದೇವರು ಅವರನ್ನು ಚೆನ್ನಾಗಿಡಲಿ. ಆದರೂ ನನ್ನಲ್ಲಿ ಆ ಪ್ರಶ್ನೆ ಹಾಗೇ ಉಳಿದಿದೆ’'was all this worth it?'
ಈಗಲೂ ಅದಕ್ಕೆ ಉತ್ತರವನ್ನು ಹುಡುಕುತ್ತಿದ್ದೇನೆ.........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ