ಸೋಮವಾರ, ಸೆಪ್ಟೆಂಬರ್ 20, 2010

ಸಾಂಸ್ಕೃತಿಕ ಸ್ಪರ್ಧೆಗಳ ವರದಿ


ಸುಂದರ ವೇದಿಕೆ, ಮನಕ್ಕೊಪ್ಪುವ ಶೃಂಗಾರ, ನಗುವ ಹೊಮ್ಮುವ ಮಾತುಗಳು, ಸಾಗರದಂತೆ ಸೇರಿದ ಜನಸಮೂಹ, ಅಲ್ಲಲ್ಲಿ ತೇಲಿಬರುವ ಮಾತುಗಳು, ಮುಂಗಾರು ಮಳೆಯಂತೆ ಹಿತವಾಗಿ ಮನಸೂರೆಗೊಳ್ಳುವ ಸ್ನೇಹಿತರ ಅಕ್ಕರೆಯ ಮಾತುಗಳು. ಇದೇನು ಯಾವುದೋ ಸಿನಿಮಾ ಚಿತ್ರಮಂದಿರದಲ್ಲಿ ಕೇಳಿ ಬರುವಂತಹ ಮಾತುಗಳಿವು ಎಂದುಕೊಂಡಿರಾ? ಹೀಗೆ ಅಲ್ಲಿ ಏನಿದೆಲ್ಲ ಎಂದು ಯೋಚಿಸುವುದಕ್ಕೆ ಯಾರಿಗಾದರೋ ಬಿಡುವಿದ್ದರೆ ತಾನೆ!. ಹಾಮ್! ನಾನು ಹೇಳಕ್ಕೆ ಹೊರಟಿರುವುದು ನಮ್ಮ ಸಂಸ್ಥೆಯ "ಸಾಂಸ್ಕೃತಿಕ ದಿನಾಚರಣೆ"ಯ ಅಂಗವಾಗಿ ನಡೆದ ಕಾರ್ಯಕ್ರಮಗಳ ಬಗ್ಗೆ. ಹೌದು ನೋಡಿ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದ ಕ್ಷಣ " ಏನೋ ಒಂಥರಾ " ಹುಡುಗಾಟದ ಖುಷಿಯಾಗುತ್ತೆ.
ಪ್ರಹಸನವೆಂದ ಕೂಡಲೇ ನಮಗೆ ಜ್ಞಾಪಕ ಬರುವುದು ಡಿ.ವಿ.ಜಿ ಯವರ
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ!
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ, ನಗಿಸುತ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ- ಮಂಕುತಿಮ್ಮ
ಇಂತಹ ಮುತ್ತಿನಂತಹ ಮಾತು ನೆನಪಿಗೆ ಬರದೆ ಇರಲು ಸಾಧ್ಯವೇ? ಜೀವನದ ಯಾಂತ್ರಿಕ ಬದುಕು ಬೇಸರ ತಂದು ಜೀವನ ಏತಕ್ಕೆ? ಎಂಬ ಜಿಗುಪ್ಸೆಯನ್ನು ನೀಗಲು ಇಂತಹ ಕಾರ್ಯಕ್ರಮಗಳ ಅಗತ್ಯ ಇಂದು ಎದ್ದು ಕಾಣುತ್ತಿದೆ.
ದಿ೨೯.೦೭.೨೦೦೭ ರ ಸುಂದರ ಸಂಜೆ ಕೆ.ಟಿ.ಟಿ.ಎಮ್. ಸಹೋದ್ಯೋಗಿಗಳು ರಂಜಿಸಲು ತಯಾರಾಗಿಯೇ ಬಂದಿದ್ದರು. ನಿರೂಪಕರಾಗಿ ಶ್ರೀ. ಸುರೇಶ್ ಜೋಷಿ ಹಾಗೂ ಕು ಲೋಕೇಶ್ವರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಮಾತುಮಾತಿನ ನಡುವೆ ತೇಲಿ ಬರುತ್ತಿದ್ದ ಹಾಸ್ಯ ಚಟಾಕಿಗಳು ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿತ್ತು. ಇನ್ನೂ ನೆನಪಿದೆ. ಮನೆಯಲ್ಲೂ ’ಗದಗ’ದ "ಧಗಧಗ" ಊಟ ನೆನಪಿಗೆ ಬಂದು ನಕ್ಕಿದಿದೆ.
ಅಂದು ಸಮಯಕ್ಕೆ ಸರಿಯಾಗಿ ಬಸ್ಸುಗಳು ತಲುಪಿ, ಜಯನಗರದ ಹೆಚ್.ಎನ್. ಕಲಾಕ್ಷೇತ್ರದಲ್ಲಿ ಸಂಜೆ ೪.೦೦ ಕ್ಕೆ ಸರಿಯಾಗಿ ಕಾರ್ಯಕ್ರಮಗಳು ಆರಂಭಗೊಂಡವು. ಕಾರ್ಯಕ್ರಮವು ಶ್ರೀ. ನರಸಿಂಹರವರ ಕಂಠಸಿರಿಯಲ್ಲಿ ಮೂಡಿಬಂದ ದೇವರನಾಮದಿಂದ ಮೊದಲುಗೊಂಡು ಆನಂತರ ಸಂಸ್ಥೆಯ ಮುಖ್ಯಸ್ಥರನ್ನು ಸ್ವಾಗತಿಸಿ, ಸಂಜೆಯ ಮೊದಲ ಸ್ಪರ್ಧೆ "ಪ್ರಹಸನ"ದ ಮೂಲಕ ಶುರುವಿಟ್ಟುಕೊಂಡಿತು. "ಪ್ರಹಸನ" ಸ್ಪರ್ಧೆಯಲ್ಲಿ ಸುಮಾರು ೬ ತಂಡಗಳು ಸಭಿಕರನ್ನು ಮೋಡಿಮಾಡಲು ತಯಾರಾಗಿ ಬಂದಿದ್ದವು. ಮೊದಲನೆಯದಾಗಿ ಶ್ರೀ. ಪೂಜಾರ್‌ರವರ ತಂಡ ನಡೆಸಿಕೊಟ್ಟ "ಮೂರುಜನ ಖೈದಿಗಳ" ಪ್ರಹಸನ ಪ್ರಸ್ತುತ ರಾಜಕೀಯ ಹಾಗು ಸರ್ಕಾರಾಧಿಕಾರಿಗಳ ಲಂಚಗುಳಿತನದ ಕೆಟ್ಟಚಾಳಿಯನ್ನು ಕಣ್ಣಮುಂದೆ ತೆರೆದಿಟ್ಟು ಸಭಿಕರನ್ನು ನಗೆಯ ಸಾಗರದಲ್ಲಿ ತೇಲಿಸಿತ್ತು.
ಎರಡನೆಯದಾಗಿ ಬಂದ ಶ್ರೀ. ವಿಜಯಕುಮಾರ್ ಮತ್ತು ತಂಡದವರ ಹಾಸ್ಯ ಮಿಶ್ರಿತ ರಾಮಾಯಣ ಪೌರಾಣಿಕ ನಾಟಕ ಸಬಿಕರನ್ನು ನಗೆಗಡಲಿನಲ್ಲಿ ತೇಲಿಸಿತು.
ಮೂರನೆಯ ತಂಡವಾಗಿ ಶ್ರೀ. ನಾಗೇಂದ್ರ ಕುಮಾರ್ ಮತ್ತು ಗೆಳೆಯರ ಮೂಕಾಭಿನಯದ ಪ್ರಹಸನ ಚೆನ್ನಾಗಿ ಮೂಡಿಬಂತು.
ಹವ್ಯಾಸ ಬದಲಿಸು- ಹಣೆಬರಹ ಬದಲಾದೀತು
ದೃಷ್ಟಿ ಬದಲಿಸು- ದೃಶ್ಯ ಬದಲಾದೀತು
ಹಡುಗು ಬದಲಿಸಬೇಕಿಲ್ಲ, ದಿಕ್ಕು ಬದಲಿಸಿದರೆ ಸಾಕು ದಡ ಸಿಕ್ಕೀತು"
ಎನ್ನುವ ನುಡಿಯಂತೆ ಜನರು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡರೆ ಸಾಕು, ಸಮಾಜಕ್ಕೆ ಸಾಕಷ್ತು ಅನುಕೂಲಗಳನ್ನು ಮಾಡಬಹುದು. ಸಾಮಾನ್ಯ ಜನ ತಮ್ಮ ದೈನಂದಿನ ನಡೆಗಳಲ್ಲಿ ಪರಿಸರಕ್ಕೆ ಸಾಕಷ್ಟು ಹಾನಿಯಾಗುವಂತೆ ನಡೆದುಕೊಳ್ಳುತ್ತಾರೆ. ತಾವು ಆರೋಗ್ಯವಾಗಿದ್ದಾಗ ಬೇರೆಯವರ ಮಾತುಗಳಿಗೆ ಬೆಲೆ ಕೊಡುವುದಿಲ್ಲ. ಅದೇ ತಮಗೆ ತೊಂದರೆಯಾದಾಗ ತಮ್ಮ ತಪ್ಪಿನ ತಿಳುವಳಿಕೆ ಬೇಗ ಆಗುತ್ತದೆ ಎನ್ನುವ ನೀತಿಯುಕ್ತ "ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಾಗು ಆರೋಗ್ಯವೇ ಭಾಗ್ಯ ಎಂಬ ಪ್ರಹಸನ" ಮನಮುಟ್ಟುವಂತೆ ಪ್ರದರ್ಶಿಸಲ್ಪಟ್ಟಿತ್ತು.
ಆನಂತರ ಪ್ರದರ್ಶನಗೊಂಡ "ಭೂಮಿಗೆ ಬಂದ ಭಗವಂತ" ಶ್ರೀ. ಸಂತೋಷ್ ಮತ್ತು ತಂಡದವರು ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.
ಪ್ರಹಸನ ಮುಗಿದ ನಂತರ ನೃತ್ಯ-ಡ್ಯಾನ್ಸ್ ಕಾರ್ಯಕ್ರಮ ಎಲ್ಲರನ್ನೂ ಮೈಮರೆಯುವಂತೆ ಮಾಡಿತು. ಹೊಸತು- ಹಳತು ಸಮ್ಮಿಳಿತಗೊಂಡ ನೃತ್ಯ ಸಭಿಕರ ಮನಸ್ಸನ್ನು ಸೂರೆಗೊಂಡಿತು. ಶ್ರೀ. ರವಿಕುಮಾರ್ ತಂಡದ ’ಮುಮ್ಗಾರು ಮಳೆ’ ಚಲನಚಿತ್ರ ದ "ಒಂದೇ ಒಂದೇ ಸಾರಿ, ಕಣ್ಮುಂದೆ ಬಾರೇ", ’ಪಲ್ಲಕ್ಕಿ’ ಚಲನಚಿತ್ರದ "ಕಣ್ಣಲೂ ನೀನೇನೆ . . .", ಹಿಂದಿ ಚಲನಚಿತ್ರದ " " ಮನಸೂರೆಗೊಂಡವು. ಶ್ರೀ. ವಿಜಯ ಕುಮಾರ್ ಮತ್ತು ತಂಡದ " ಗುರು ಶಿಷ್ಯರು" ಚಲನಚಿತ್ರದ "ದೊಡ್ಡೋರೆಲ್ಲಾ ಜಾಣರಲ್ಲ, ಚಿಕ್ಕೋರೆಲ್ಲಾ ಕೋಣರಲ್ಲ" ಸಭಿಕರ ಮೆಚ್ಚುಗೆ ಗಳಿಸಿ ಪ್ರಥಮ ಸ್ಥಾನ ಪಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಪುಷ್ಕಳವಾದ ಊಟದ ವ್ಯವಸ್ಥೆಯಿತ್ತು. ಊಟದ ನಂತರ ಸಂಸ್ಥೆಯ ಎಲ್ಲ ಸದಸ್ಯರು, ಆ ಸಂಜೆಯ ಸವಿಘಳಿಗೆಗಳನ್ನೇ ಮೆಲುಕುಹಾಕುತ್ತಾ ಮರಳಿ ಮನೆಯೆಡೆಗೆ ಸಾಗಿದರು.
ವರದಿ : ನಾಗೆಂದ್ರ ಕುಮಾರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ