ಮಂಗಳವಾರ, ಸೆಪ್ಟೆಂಬರ್ 14, 2010

ಇಂಗು ತಿಂದ ಮಂಗ

ಹೀಗೆ ಮೊನ್ನೆ ಇದ್ದಕ್ಕಿದ್ದ ಹಾಗೆ ನನ್ನ ಕಾರ್ಖಾನೆಯಲ್ಲಿ ,ನನಗೆ ಹಾಗು ನನ್ನ ಮೇಲಿನ ಧರ್ಜೆಯ ಇಂಜಿನಿಯರ್ ಗಳಿಗೆಲ್ಲಾ ನಮ್ಮ ವ್ಯವಸ್ಥಾಪಕ ನಿರ್ದೇಶಕರು ಬೆಂಗಳೂರು ಕ್ಲಬ್ ನಲ್ಲಿ ಪಾರ್ಟಿ ಕೊಡುವ ಆಮಂತ್ರಣ ಬಂದಿತ್ತು. ನಮಗೂ ತುಂಬಾ ಸಂತೋಷದ ಜೊತೆಗೆ ಆತಂಕವೂ ಅಯಿತು. ಸಂತೋಷ ಏಕೆಂದರೆ ನಾವು ಕಳೆದ ಎರಡು ವರ್ಷಗಳಿಂದ ಇನ್ಕ್ರ್ ಮೆಂಟ್ ಹಾಗು ಪ್ರಮೋಶನ್ ಗಾಗಿ ಕಾಯುತ್ತಿದ್ದೇವು ಅದರ ಬಗ್ಗೆ ನಾವು ಅವರನ್ನೇ ನೇರವಾಗಿ ಕೇಳಿ ನಮ್ಮ ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳಬಹುದೆನ್ನುವ ಆಸೆಯ ಜೊತೆಗೆ ನಮ್ಮ ಸಮಸ್ಯೆಗೆ ಇಷ್ಟು ಬೇಗ ಪರಿಹಾರ ಸಿಕ್ಕಿಬಿಡ್ತಲ್ಲ ಅನ್ನೋದು ಸೇರಿತ್ತು. ಆತಂಕ ಏಕೆಂದರೆ ನಮ್ಮ ಸಮಸ್ಯೆಗಳ ಪಟ್ಟಿ ತುಂಬಾ ದೊಡ್ಡದಾಗಿತ್ತು ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಅವರಿಗೆ ಇರುತ್ತದೋ ಇಲ್ಲವೋ ಅಥವಾ ನಮ್ಮ ಸಮಸ್ಯೆಗಳನ್ನು ನಮ್ಮ ಮೇಲಿನ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿತ್ತಲ್ಲ, ನಮ್ಮ ಮೇಲಿನ ಅಧಿಕಾರಿಗಳು ಅವರಿಗೆ ಏನು ಹೇಳಿದ್ದಾರೋ ಅಥವಾ ನಮ್ಮ ಮೇಲೆಯೇ ಎತ್ತಿ ಕಟ್ಟಿದ್ದಾರೋ ಎಂಬ ಆತಂಕ ನನ್ನನ್ನು ಹಾಗು ನನ್ನ ಸ್ನೇಹಿತರಿಗೆ ಕಾಡುತ್ತಿತ್ತು. ಎಲ್ಲ ಗೆಳೆಯರ, ಸಹೊದ್ಯೋಗಿಗಳನ್ನು ಭೇಟಿಮಾಡಿ ಅವರವರ ಸಮಸ್ಯೆಗಳನ್ನು ಕೇಳಿ ಅದಕ್ಕೆಲ್ಲಾ ಪ್ರಶ್ನೆಯ ರೂಪ ಕೊಟ್ಟೆವು. ಪ್ರತಿಯೊಂದು ಸಮಸ್ಯೆಗೂ ಒಂದೊಂದು ಉದಾಹರಣೆಯನ್ನು ಇಟ್ಟುಕೊಂಡಿದ್ದೆವು. ಉದಾಹರಣೆ ಏಕೆಂದರೆ ನಮ್ಮ ಸಮಸ್ಯೆ ಬರೀ ಊಹಾಪೋಹದ್ದಲ್ಲ ಅದು ನೈಜವಾದುದು ಎಂಬುದು ಅವರಿಗೆ ಮನಗಾಣಿಸಲು ಅದರ ಅಗತ್ಯ ನಮಗಿತ್ತು.ಎಲ್ಲರಿಗೂ ನಾವು ಇಂತೆಲ್ಲಾ ಪ್ರಶ್ನೆಗಳನ್ನು ಕೇಳುತ್ತೇವೆ, ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೇ, ನಮ್ಮ ಡಿಮ್ಯಾಂಡ್ ಸರಿಯಾಗಿದೆ ಅಂದುಕೊಂಡೆವು ಹಾಗು ಮನಸ್ಸಿನಲ್ಲಿ ನಮ್ಮ ಸಮಸ್ಯೆಗೆ ಪರಿಹಾರಸಿಕ್ಕೇ ಬಿಡ್ತು ಎಂದು ಮಂಡುಗೆಯನ್ನು ಒಳಒಳಗೇ ತಿನ್ನುತ್ತಿದ್ದೆವು. ಎಲ್ಲೆಲ್ಲಿ ನಾವು ಹೋದರೂ ಅದರದೇ ಮಾತುಕತೆ,ಅದರದೇ ಚರ್ಚೆ, ಗುಸುಗುಸು-ಪಿಸುಪಿಸು ಆ ಕುತೂಹಲದ ಕ್ಷಣಗಳನ್ನು ತುಂಬಾ ಆನಂದಿಸಿದೆವು.ನಮ್ಮ ಸಮಸ್ಯೆಗಳ ಪಟ್ಟಿಯನ್ನು ತಯಾರಿಸಿ ಪ್ರತಿಯೊಬ್ಬರಿಗೂ ಅದರ ಪ್ರತಿಯನ್ನು ತಲುಪಿಸಿದೆವು ಹಾಗು ಯಾರು ಯಾರು ಯಾವ ಯಾವ ಪ್ರಶ್ನೆಯನ್ನು ಕೇಳಬೇಕು ಎಂದು ಮಾರ್ಕ್ ಮಾಡಿ ಅವರು ಅದನ್ನು ಕೇಳುವ ತಾಲೀಮು ಮಾಡಲು ಆದೇಶಿಸಿದ್ದೆವು.
ನನಗೋ ರಾತ್ರಿಯೆಲ್ಲಾ ಅವೇ ಪ್ರಶ್ನೆಗಳು ಕಣ್ಣ ಮುಂದೆ ಬಂದು ಮನದಲ್ಲೇ ಪರಿಹಾರ ಸಿಕ್ಕಿಬಿಡುವ ಆನಂದ ಕ್ಷಣಗಳನ್ನು ಅನುಭವಿಸಿದ್ದೆ.ರಾತ್ರೋ ರಾತ್ರಿ ನಾನೇ ಸಮಸ್ಯೆಗಳನ್ನು ಪರಿಹರಿಸುವ ನಾಯಕನಾಗಿ ಕಂಗೊಳಿಸುತ್ತಿದ್ದೆ. ಡಾ\\ ರಾಜ್ ಕುಮಾರ್ ರವರ ಮಯೊರ ವರ್ಮ ಹಾಡುವ "ನಾನಿರುವುದೆ ನಿಮಗಾಗಿ" ಹಾಡು ಮನದಲ್ಲೇ ನೂರು ಬಾರಿ ಹಾಡಿಕೊಂಡು ಸಂತಸ ಪಟ್ಟಿದ್ದೇನೆ.
ಆ ದಿನ ಬಂದೇ ಬಂತು, ಹಿಂದಿನ ದಿನ ನಾನು ಎರಡನೇ ಪಾಳಿಯಲ್ಲಿದ್ದೆ ಹೀಗಾಗಿ ನನ್ನ ಮೇಲಿನ ಅಧಿಕಾರಿಗಳು "ನಾಳೆ ನೀವು informal meeting ಗೆ ಹೋಗಬೇಕಲ್ಲಾ, ಅದಕ್ಕೆ ನೀವು ನಾಳೆ ಜನರಲ್ ಶಿಫ್ಟನಲ್ಲಿ ಬನ್ನಿ ಸಾಯಂಕಾಲ ಹೋಗೋದಕ್ಕೆ ಅನುಕೂಲ ಆಗುತ್ತೆ" ಅಂದಿದ್ದರು. ಜನರಲ್ ಶಿಫ್ಟನಲ್ಲಿ ಕೆಲಸ ಮಾಡುವ ಮನಸ್ಸೇ ಇರಲಿಲ್ಲ ಯಾವಾಗ ೪.೩೦ ಆಗಿ ಹೊರಟರೆ ಸಾಕೆನಿಸಿತು. ಅಂತೂ ಕೆಲಸ ಮುಗಿಸಿ ಮನೆಗೆ ಬಂದು ಎಲ್ಲಾ ತಯಾರಿ ಮುಗಿಸಿದ್ದೆ. ಕಾರ್ಖಾನೆ ಬಿಟ್ಟು ಮನೆಗೆ ಬರುವ ಹೊತ್ತಿಗೆ ಸಂಜೆ ಆರಾಗಿತ್ತು. ಮನೆಯಲ್ಲಿ ಹೆಂಡತಿಯ ಮುನಿಸು ಬೇರೆ "ಹೊರಗಡೆ ಅವಳನ್ನು ಬಿಟ್ಟು ಹೋಟಲಿನಲ್ಲಿ ನಾರ್ಥ್ ಇಂಡಿಯನ್ನು ಊಟ ಮಾಡುತ್ತೇನೆ" ಅಂತ. ಹೇಗೋ ಸಮಾಧಾನ ಮಾಡಿ ನನ್ನ ಸ್ಕೂಟರಿನಲ್ಲಿ ಹೊರಟೆ. ನಾನಿರುವುದು ಕತ್ರಗುಪ್ಪೆ ವಾಟರ್ ಟ್ಯಾಂಕ ಹತ್ತಿರ ಗೊತ್ತಾಗಲಿಲ್ಲವೇ, ಅದೇ ನಮ್ಮ ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಇದ್ದರಲ್ಲ ಅವರ ಹೆಸರಲ್ಲಿ ಒಂದು ಉಧ್ಯಾನವನ ಅಲ್ಲಿದೆ, ಅದರ ಹತ್ತಿರ. ಸೀತ ಸರ್ಕಲ್ ದಾಟಿ ಬ್ಯಾಂಕ್ ಕಾಲೋನಿ, ಹನುಮಂತ ನಗರ, ಬಸವನ ಗುಡಿ, ನ್ಯಾಷನಲ್ ಕಾಲೇಜ್, ಸಜ್ಜನ್ ರಾವ್ ಸರ್ಕಲ್, ಜೇಸಿ ರೋಡ್ ಮೊಲಕ ಕಾರ್ಪೊರೇಷನ್. ಹಡ್ಸಂನ್ ವೃತ್ತ, ಆನಂತರ ಮಲ್ಯ ಹಾಸ್ಪೆಟಲ್ ರೋಡ್ ನಲ್ಲಿ ಬಂದು ರಿಚ್ ಮಂಡ್ ವೃತ್ತದ ಫ್ಲೈ ಓವರ್ ಆದ ನಂತರ ಬೆಂಗಳೂರು ಕ್ಲಬಿನ ವಾಹನ ನಿಲುಗಡೆಯ ಪ್ರದೇಶದಲ್ಲಿ ನನ್ನ ವಾಹನವನ್ನು ನಿಲ್ಲಿಸಿದೆ. ಅಷ್ಟೊತ್ತಿಗೆ ನನ್ನ ಆತ್ಮೀಯ ಗೆಳೆಯ ರಾಮಮೊರ್ತಿ ಬಂದಿದ್ದರು. ಆಗಲೇ ಸಮಯ ೭.೩೦ ಆಗಿತ್ತು. ಬಿರಬಿರನೇ ಗೋಯಂಕಾ ಹಾಲಿನ ಕಡೆ ಹೊರಟೆವು. ಅದಾಗಲೇ ಮೀಟಿಂಗ್ ಆರಂಭಗೊಂಡಿತ್ತು. ಎಲ್ಲರ ಮುಂದೆಯೂ ಉದ್ದುದ್ದದ ಬಾಟಲಿನಲಿ ಬೀರ್,ಸಾಪ್ಟ್ ಡ್ರಿಂಕ್ಸ್, ಅದರ ಜೊತೆಗೆ ಬೋಂಡ, ಕಡ್ಲೇಬೀಜ ತಿನ್ನುವುದಕ್ಕೆ ರೆಡಿಯಾಗಿತ್ತು. ಕೆಲವರು ಅದಾಗಲೇ ತೀರ್ಥ ಸೇವನೆ ಆರಂಭಮಾಡಿದ್ದರು. ಯಾರ ಬಾಯಿಂದಲೂ ಒಂದು ಮಾತು ಬರುತ್ತಿರಲಿಲ್ಲ ಏಕೆಂದರೆ ಎಲ್ಲರೂ ತುಂಬಾ ಬಿಸ್ಜಿಯಾಗಿದ್ದರು. ನಮ್ಮ ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಮಾತನಾಡುತ್ತಿದ್ದರು. ಬೇರೆಯವರೆಲ್ಲಾ ಕೋಲೆ ಬಸವನಹಾಗೆ ಅವರು ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಿದ್ದರು. ಕೆಲವರು ಕೇಳಿದ ಪ್ರಶ್ನೆಗೆಲ್ಲಾ ಸೊಂಟ ಮುರಿಯುವ ನಾಯಕನ ಹಾಗೆ ನಮ್ಮನ್ನು ಮಾತನಾಡದಂತೆ ಅವರು ಮಾಡುತ್ತಿದ್ದರು. ನಮ್ಮ ಸಮಸ್ಯೆಗಳೆಲ್ಲಾ ಗಾಳಿಯಲ್ಲಿ ತೇಲಿಹೋಗಿತ್ತು. ಅವರು ಮೀಟಿಂಗ್ ಆರಂಭವಾಗಲೇ ಹೇಳಿದ್ದರಂತೆ "ಇನ್ಕ್ರಿಮೆಂಟ್,ಪ್ರಮೋಶನ್ ಬಗ್ಗೆ ಯಾರೂ ಪ್ರಶ್ನೆ ಕೇಳುವಹಾಗಿಲ್ಲ, ಏನಿದ್ದರೂ ಕಂಪನಿಯ ಭವಿಷ್ಯದ ಬಗ್ಗೆ ಮಾತ್ರ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು" ಅಂತ. ಕಂಪನಿಯ ಭವಿಷ್ಯಮಾತ್ರ ಉಜ್ವಲವಾಗಿದೆ ಆದರೆ ನಮ್ಮ ಭವಿಷ್ಯದ ಗೊತ್ತು-ಗುರಿ ಅದರಲ್ಲಿ ಕಾಣಿಸುತ್ತಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಅನ್ನೋಹಾಗೆ ಕೆಲವರು ನಮ್ಮ ಆಸೆಗಳೆಲ್ಲಾ ನೀರಿನಲ್ಲಿ ಹೋಮ ಮಾಡಿದಹಾಗೆ ಆಯಿತಲ್ಲ ಅನ್ನುವ ವ್ಯಥೆಯಲ್ಲಿ ಎರ್ರಾಬಿರ್ರಿ ಗುಂಡು ಹಾಕಿ ಅದರಲ್ಲೇ ತೃಪ್ತಿ ಕಂಡುಕೊಳ್ಳುತ್ತಿದ್ದರು. ನನ್ನ ಹಾಗು ನನ್ನ ಗೆಳೆಯರ ಮುಖ ಇಂಗು ತಿಂದ ಮಂಗನಂತೆ ಆಗಿತ್ತು.
ನಮ್ಮ ಇನ್ಕ್ರಿಮೆಂಟ್,ಪ್ರಮೋಶನ್ ಬೆಂಗಳೂರಿನ ಟ್ರಾಫಿಕ್ನಲ್ಲಿ ಮನದಲ್ಲೇ ಸತ್ತುಹೋಗಿತ್ತು.


ಹಾಂ! ಅಂದ ಹಾಗೆ ೧೩.೦೯.೨೦೧೦ ರಂದು ನಮ್ಮ ವ್ಯವಸ್ಥಾಪಕ ನಿರ್ದೇಶಕರ ೬೦ ನೆ ಹುಟ್ಟು ಹಬ್ಬ. ಅವರಿಗೆ ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಸಹೋಧ್ಯೋಗಿಗಳ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ