ಭಾನುವಾರ, ಸೆಪ್ಟೆಂಬರ್ 5, 2010

ಹಬ್ಬ-ಪರಿಸರ

ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಸಾಲು ಓಡಿಬರುತ್ತದೆ. ಹಿಂದುಗಳಿಗೆ ಹಬ್ಬಗಳೆಂದರೆ ಆಸಕ್ತಿ,ಕಾಳಜಿ ಅದರ ಜೊತೆಗೆ ಸಂತೋಷ,ಸಡಗರ. ಧಾರ್ಮಿಕ ಹಾಗು ಸಾಮಾಜಿಕವಾಗಿ ಮನ-ಮನಗಳನ್ನು ಜೊತೆಗೂಡಿಸುತ್ತದೆ ನಮ್ಮ ಹಬ್ಬಗಳು. ನೋವು,ಗೋಳುಗಳಿಗೆ ಪೂರ್ಣವಿರಾಮ ಹಾಕಿ ಮನಸ್ಸು ಸಂತೋಷ.ಉಲ್ಲಸಿಸುವ ಕಾಲ ಈ ಹಬ್ಬಗಳಂದು.ಯಾಂತ್ರಿಕ ಜಂಜಾಟಗಳನ್ನು ಮರೆತು ಹೊಸತನಕ್ಕೆ ನಾಂಧಿ ಹಾಡುತ್ತದೆ ನಮ್ಮ ಹಬ್ಬಗಳು. ಹಬ್ಬಗಳ ಆಚರಣೆಯ ಹಿಂದಿನ ಧ್ಯೇಯ,ಆದರ್ಶಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಆಚರಣೆಯ ಆಡಂಬರಕ್ಕೆ ದಕ್ಕೆ ಏನೂ ಇಲ್ಲ.

ನಮ್ಮ ಹಬ್ಬಗಳು ಪರಿಸರ ಪ್ರೇಮಿಯಾಗಿದ್ದು ಆಧುನಿಕತೆ,ವಿಜ್ನಾನ,ತಂತ್ರಜ್ನಾನಗಳ ಸೆಳೆತದಿಂದ ತನ್ನ ಸ್ವರೂಪದಲ್ಲಿ ಬದಲಾವಣೆಯನ್ನು ಪಡೆದಿದೆ.ಎಂದೂ ನಿಂತ ನೀರಾಗಿರದೆ ಸದಾ ಬದಲಾವಣೆಗೆ ತೆರೆದುಕೊಂಡಿರುವ ನಮ್ಮ ಆಚರಣೆಗಳು ಕಾಲಕ್ಕೆ ತಕ್ಕಹಾಗೆ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಆಷಾಡ ಅಮಾವಾಸ್ಯೆಯಿಂದ ಆರಂಭಗೊಂಡು ದೀಪಾವಳಿಯವರೆವಿಗೂ ಜನತೆಯಲ್ಲಿ ಸಡಗರ,ಸಂಭ್ರಮವನ್ನು ಕಾಪಿಡುತ್ತದೆ.

ಹಬ್ಬಗಳ ಆಚರಣೆಯಿಂದ ನಮ್ಮ ಪರಿಸರದ ಮೇಲಾಗುವ ಪರಿಣಾಮಗಳನ್ನು ಅರಿತು ನಮ್ಮ ನಡುವಳಿಕೆಗಳನ್ನು ತಿದ್ದಿಕೊಳ್ಳುವುದು ಈಗ ತೀರ ಅವಶ್ಯಕವಾಗಿದೆ. ಪರಿಸರ ಸ್ವಚ್ಛವಾಗಿದ್ದರೆ ನಾವು ಹಾಗು ನಮ್ಮ ಹಬ್ಬಗಳು ಅಲ್ಲವೇ?
ಪ್ರತಿನಿತ್ಯದಲ್ಲಿ ನಡೆಯುವ ವ್ಯವಹಾರಗಳಲ್ಲಿಯೂ ಹತ್ತು ಹಲವು ಬಗೆಯಲ್ಲಿ ಪರಿಸರ ನಮ್ಮ ನಿಮ್ಮಿಂದ ಹಾನಿಗೊಳಗಾಗುತ್ತಲೇಯಿದೆ, ಸಧ್ಯಕ್ಕೆ ಅದಕ್ಕೆ ಪರಿಹಾರವೆಂಬುದಿಲ್ಲವೆಂಬುದು ನಿಜವಾದರೂ ನಮ್ಮ ಪ್ರಯತ್ನ ನಿಲ್ಲಬಾರದು. ಇನ್ನು ಹಬ್ಬ-ಹರಿದಿನಗಳಂದೂ ನಮ್ಮ ಇತಿ-ಮಿತಿಗಳಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಕಡಿಮೆಮಾಡಬಹುದು.

ಈಗಾಗಲೇ ಗಣೇಶ ಚತುರ್ಥಿ ಹೊಸಲಲ್ಲಿ ನಿಂತಿದೆ, ಮಾರುಕಟ್ಟೆ,ಅಂಗಡಿ ಮುಂಗಟ್ಟುಗಳಲ್ಲಿ ಚಿಕ್ಕ ಪುಟ್ಟದಿಂದ ಹಿಡಿದು ಆಳೆತ್ತರದ ಬಣ್ಣ ಬಣ್ಣದ ಗಣೇಶ ವಿಗ್ರಹಗಳು ಗ್ರಾಹಕರಿಗಾಗಿ ಕಾಯುತ್ತಿದೆ. ಆಚರಣೆ ನಿಲ್ಲಬಾರದು ನಿಜ ಹಾಗಾದರೆ ನಾವು ಪರಿಸರದ ಸಂರಕ್ಷಣೆಗೆ ಏನು ಮಾಡಬಹುದು? ಈ ಕೆಳಗಿನ ಅಂಶಗಳನ್ನು ಚಾಚುತಪ್ಪದೆ ಮಾಡಿದರೆ ನಮ್ಮ ಕೈಲಾದ ಮಟ್ಟಿಗೆ ಪರಿಸರ ಸಂರಕ್ಷಣೆ ಮಾಡಬಹುದು.

೧. ಬಣ್ಣ ಬಣ್ಣದ ಗಣಪಗಳನ್ನು ಖರೀದಿ ಮಾಡಬೇಡಿ. ಬಣ್ಣಗಳು ರಾಸಾಯನಿಕಗಳಾದ್ದರಿಂದ ಅವು ನೀರು,ಮಣ್ಣನ್ನು ಮಾಲಿನ್ಯಮಾಡುತ್ತದೆ.
೨.ಪ್ಲಾಷ್ಟರ್ ಆಫ್ ಪ್ಯಾರಿಸಿನಿಂದ ಗಣಪಗಳನ್ನು ಖರೀದಿ ಮಾಡಬೇಡಿ.
೩. ಗಣಪಗಳ ವಿಸರ್ಜನೆಯನ್ನು ಪಾಲಿಕೆ/ನಗರ ಪಾಲಿಕೆ ನಿಗದಿಪಡಿಸಿದ ಸ್ಥಳಗಳಲ್ಲಿಯೇ ಮಾಡಿ.
೪. ಕಸ-ಕಡ್ಡಿಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ, ನಿಗದಿತ ಜಾಗಗಳಲ್ಲಿ ಶೇಖರಿಸಿ ಪಾಲಿಕೆಯವರು ತೆಗೆದೊಯ್ಯುವಂತೆ ವ್ಯವಸ್ಥೆಮಾಡಿ.
೫.ನೀರನ್ನು ಮಿತವಾಗಿ ಬಳಸಿ ಹಾಗು ಮಾಲಿನ್ಯಗೊಳ್ಳುವುದನ್ನು ತಡೆಯಿರಿ. ಮಳೆ ನೀರನ್ನು ಇತರೇ ಕೆಲಸಗಳಿಗೆ ಬಳಕೆ ಮಾಡುವುದನ್ನು ರೂಡಿಸಿಕೊಳ್ಳಿ.
೬. ಧ್ವನಿ ವರ್ಧಕಗಳನ್ನು ಸಾರ್ವಜನಿಕರ ಅವಶ್ಯತೆಗನುಗುಣವಾಗಿ ಬಳಸಿ. ಅತಿಯಾದ ಬಳಕೆ ಸಲ್ಲ.
ನಮ್ಮ ಪರಿಸರವನ್ನು ಸಂರಕ್ಷಿಸುವುದು ಮುಂದಿನ ಪೀಳಿಗೆಗೆ ಕೊಡುವ ಅತಿದೊಡ್ಡ ಉಡುಗೊರೆ.
ಆದ್ದರಿಂದ ಸ್ನೇಹಿತರೇ ಹಬ್ಬಗಳನ್ನು ಆಚರಿಸುವಾಗ ಪರಿಸರದ ಬಗ್ಗೆ ಗಮನವಿಟ್ಟು, ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಆಚರಿಸಿ. ನಿಮ್ಮ ಕೈಲಾದಷ್ಟು ಜನರಲ್ಲಿ ಪರಿಸರದ ಬಗ್ಗೆ ಖಾಳಜಿ, ಅರಿವು ಮೊಡಿಸಿ. ಮಕ್ಕಳಲ್ಲಿ ಪರಿಸರ ಪ್ರೀತಿಯನ್ನು ಬೆಳೆಸಿ.
ಎಲ್ಲರಿಗೂ ಗಣೇಶ ಹಬ್ಬದ ಶುಭಾಷಯಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ