ಸೋಮವಾರ, ಸೆಪ್ಟೆಂಬರ್ 20, 2010

-ನಮ್ಮ ಮೌಲ್ಯ-

ಒಬ್ಬ ಪ್ರಖ್ಯಾತ ಉಪನ್ಯಾಸಕರಿಂದ ಒಂದು ಸಂಜೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಉಪನ್ಯಾಸಕಾರು ತಮ್ಮ ಉಪನ್ಯಾಸವನ್ನು ಕೈಯಲ್ಲಿ ರೂ.೫೦೦ ರ ನೋಟನ್ನು ಹಿಡಿದು ಆರಂಭಿಸಿದರು. ಆ ಸಭಾಂಗಣದಲ್ಲಿ ಸುಮಾರು ೨೦೦ ಜನರಿಗೆ ಆ ನೋಟನ್ನು ತೋರಿಸುತ್ತಾ ಕೇಳಿದರು " ಯಾರಿಗೆ ಬೇಕು ಈ ರೂ. ೫೦೦ ರ ನೋಟು?" ಎಂದು. ಅವರು ಹಾಗೆ ಪ್ರಶ್ನಿಸುತ್ತಿದ್ದಂತೆ ಎಲ್ಲರ ಕೈಗಳು ಮೇಲೇರ ತೊಡಗಿತು ಅದಕ್ಕುತ್ತರವಾಗಿ ಅವರು " ನಿಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ನಾನು ಈ ನೋಟನ್ನು ಕೊಟ್ಟೇ ಕೊಡುತ್ತೇನೆ ಮೊದಲು ನಾನು ಮಾಡುವುದನ್ನು ನೀವು ನೋಡಿ". ಅವರು ತನ್ನ ಕೈಯಲ್ಲಿದ್ದ ನೋಟನ್ನು ಹಿಂಡಿ ಹಿಪ್ಪೆಮಾಡಿದರು ಹಾಗು ಅದನ್ನು ಕೈಗೆ ತೆಗೆದುಕೊಳ್ಳುತ್ತಾ " ಈಗ ಹೇಳಿ ಈ ನೋಟು ಯಾರಿಗೆ ಬೇಕು" ಎಂದರು. ಮತ್ತೆ ಎಲ್ಲರ ಕೈಗಳೂ ಮೇಲೇರತೊಡಗಿತು. " ಸಂತೋಷ " ಎಂದು ಹೇಳಿ " ಈಗ ಹೇಳಿ ಯಾರಿಗೆ ಬೇಕು ನಾನು ಹೀಗೆ ಮಾಡಿದರೆ" ಎಂದು ಹೇಳಿ ನೋಟನ್ನು ನೆಲಕೆ ಹಾಕಿ ಕಾಲಿನಿಂದ ಚೆನ್ನಾಗಿ ತುಳಿದು ತೊಪ್ಪೆಮಾಡಿ ಕೈಗೆತ್ತಿಕೊಂಡರು, ನೋಟು ಗಲೀಜಾಗಿ ನೋಡಲು ಅಸಹ್ಯವಾಗುತ್ತಿತು. "ಈಗ ಹೇಳಿ ಯಾರಿಗೆ ಬೇಕು" ಎಂದರು. ಮತ್ತೆ ಎಲ್ಲರ ಕೈ ಮೇಲೇರತೊಡಗಿತು. " ಆತ್ಮೀಯ ಗೆಳೆಯರೆ ಈಗ ತಾನೇ ನೀವೊಂದು ಜೀವನದ ಅಮೂಲ್ಯವಾದ ಪಾಠವನ್ನು ಕಲಿತಿರಿ, ನಾನು ಹಣಕ್ಕೆ ಏನೇ ಮಾಡಿದರೂ ನೀವು ಅದು ಬೇಕೆಂದೇ ಹೇಳಿದಿರಿ. ನಾನು ಹಣಕ್ಕೆ ಏನು ಮಾಡಿದರೂ ಹಣದ ಮೌಲ್ಯ ಮಾತ್ರ ಕಡಿಮೆಯಾಗಲಿಲ್ಲ, ಈಗಲೂ ಅದರ ಮೌಲ್ಯ ರೂ ೫೦೦ ರೇ ಆಗಿದೆ. ಕೆಲವು ಸಮಯದಲ್ಲಿ ನಮ್ಮ ಪರಿಸ್ಥಿತಿಗಳು, ನಾವು ತೆಗೆದುಕೊಳ್ಳುವ ತೀರ್ಮಾನಗಳು, ನಮ್ಮನ್ನು ಜೀವನದಲ್ಲಿ ಕುಗ್ಗಿ ಹೋಗುವಂತೆ, ಮತ್ತೆ ಏಳಲಾಗದಂತೆ ಮಾಡುತ್ತದೆ. ನಮಗೇ ನಾವೇ ಅಂದುಕೊಳ್ಳುತ್ತೇವೆ ನಾವು ನಿಷ್ಪ್ರಯೋಜಕರು, ಕಸಕ್ಕಿಂತ ಕಡೆ, ನಮಗೆ ಬೆಲೆಯಿಲ್ಲ" ಎಂದು " ಆದರೆ ನಾವು ಏನೇ ಆಗಿದ್ದರೂ ನಮ್ಮ ಬೆಲೆಯನ್ನು ಎಂದೂ ನಾವು ಕಳೆದುಕೊಳ್ಳುವುದಿಲ್ಲ". " ನಿಮ್ಮ ವ್ಯಕ್ತಿತ್ವ ಅನನ್ಯವಾದುದು, ನೀವು ಬೇರೆಯವರಿಗಿಂತ ಬಿನ್ನವೆಂಬುದನ್ನು ಮರೆಯ ಬೇಡಿ ‘ನಾಳೆಯ ಕನಸಿನ ಮೇಲೆ ಇಂದಿನ ನಿರಾಶೆಯ ಕರಿನೆರಳು ಬೀಳದಂತೆ ನೋಡಿಕೊಳ್ಳಿ’.ಹಳೆಯ ವರುಷದ ನೋವುಗಳನ್ನು ಇಂದಿಗೇ ಕೊನೆಗೊಳಿಸಿ ಮಧುರ ನೆನೆಹುಗಳನ್ನು ಬರುವ ವರುಷಕ್ಕೆ ಕೊಂಡೊಯ್ಯಿರಿ. ಹೊಸ ವರುಷವನ್ನು ಹೊಸ ಕನಸು ಹಾಗು ಆಕಾಂಕ್ಷೆಗಳೊಂದಿಗೆ ಆರಂಭಿಸಿ, ನಿಮಗೆಲ್ಲರಿಗೂ ಶುಭವಾಗಲಿ" ಎಂದು ತಮ್ಮ ಉಪನ್ಯಾಸವನ್ನು ಮುಗಿಸಿದರು.
ಇಷ್ಟೊಂದೆಲ್ಲಾ ಏಕೆ ಹೇಳಬೇಕಾಯಿತೆಂದರೆ,ಪ್ರಸ್ತುತ ಆರ್ಥಿಕ ಹಿಂಜರಿತದಿಂದ ನಾವು ಹಾಗು ನಮ್ಮನ್ನು ಸಲಹುತ್ತಿರುವ ಸಂಸ್ಥೆಗಳು ಕಂಗೆಡುತ್ತಿವೆ, ಎಲ್ಲೆಡೆಯಲ್ಲೂ ನಿರಾಶೆಯ ಕರಿನೆರಳು ಹಬ್ಬುತ್ತಿದೆ, ಜೀವನ ದುಸ್ತರವೆನಿಸುತ್ತಿದೆ. ಇಂತಹ ಪರಿಸ್ಥಿತಿ ಶಾಶ್ವತವಲ್ಲವೆಂಬುದು ತಿಳಿದಿರಲಿ. ಕಷ್ಟದ ಪರಿಸ್ಥಿತಿ ಹೊಸ ಹೊಸ ಅವಕಾಶಗಳ ಹೆದ್ದಾರಿಯನ್ನು ತೆರೆಯುತ್ತದೆ, ಮಾನಸಿಕ ಸಿದ್ದತೆಗೆ ಇದೇ ಪ್ರಶಸ್ತಕಾಲ ಬನ್ನಿ ಕಷ್ಟಕಾಲದಲ್ಲಿ ಬೆಂದು ಹದವಾಗಿ ಅನುಭವ ಅಮೃತವ ಸವಿಯೋಣ, ನಾಳೆಯೆಂಬ ಅಮೃತಗಳಿಗೆಯ ಸ್ವಾಗತಿಸಲು ಇಂದೇ ಸಿದ್ದರಾಗೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ