ನನಗಂತೂ ಭಾನುವಾರವೆಂದರೆ ರೋಮಾಂಚನವಾಗುತ್ತದೆ. ಭಾನುವಾರ ಯಾವಾಗ ಬರುವುದೋ! ಎಂದು ಮನಸ್ಸು ಕಾತರಿಸುತ್ತದೆ. ಭಾನುವಾರ ನನಗಂತೂ ಒಂದು ವಿಶೇಷ ದಿನವೆಂದೇ ಹೇಳಬೇಕು. ಪ್ರತಿದಿನ ಉದ್ಯೋಗ ನಿಮ್ಮಿತ್ತ ಬೆಳಿಗ್ಗೆ ಬೇಗ ಎದ್ದರೂ ಭಾನುವಾರವೂ ಸಹ ಖುಷಿಯಿಂದ ಬೆಳಿಗ್ಗೆ ಬೇಗ ಏಳಬೇಕೆನ್ನುವ ಹುಮ್ಮಸ್ಸು ನನ್ನಲ್ಲಿ ಈಗಲೂ ಉಳಿದಿದೆ. ಭಾನುವಾರವೆಂದರೆ ಮನೋಲ್ಲಾಸ, ಭಾನುವಾರನೆಂದರೆ ಆಹ್ಲಾದ. ಸಮರ್ಥವಾಗಿ ಗುಣಾತ್ಮಕವಾಗಿ ಬಳಸಿಕೊಳ್ಳಬೇಕೆನ್ನುವ ತವಕ.
"ಬೆಳಗಾಗೆದ್ದು ನಾನ್ಯಾರ ನೆನೆಯಾಲಿ" ಎಂಬ ಜನಪದರ ನುಡಿಯಂತೆ ಬೆಳಿಗ್ಗೆ ಐದು ಗಂಟೆಗೆಲ್ಲಾ ಎದ್ದು
ಹಲವರನ್ನು ನೆನೆಯುತ್ತಾ, ಶನಿವಾರವೇ ಸಿದ್ಧಪಡಿಸಿದ ಕೆಲಸದ ಪಟ್ಟಿಯಂತೆ ನನ್ನ ಭಾನುವಾರ ಆರಂಭವಾಗುತ್ತದೆ. ಅವೆಲ್ಲವುಗಳನ್ನು ಪೂರ್ಣಗೊಳಿಸುವುದೇ ನನ್ನ ಭಾನುವಾರದ ಗುರಿ. ಚುಮು ಚುಮು ಚಳಿಯಲ್ಲಿ ಕಾಫಿ ಹೀರುವುದೇ ಅಪ್ಯಾಯಮಾನ. ಚುಮು ಚುಮು ಚಳಿಯಲ್ಲಿ ಘಮ ಘಮ ಬಿಸಿ ಬಿಸಿ ಕಾಫಿ ಜೊತೆ ಮನಸ್ಸು ಹೇಳುತ್ತೆ "ಆಹಾ! ಭಾನುವಾರ".
ಕಾಫೀ ಹೀರುತ್ತಾ ತೇಲುವ ಮನಸ್ಸಿನ ಬೆಳಗಿನ ಆಹ್ಲಾದಕರ ವಾತಾವರಣದಲ್ಲಿ ಮನಃ ಪಟಿಲದ ಮೇಲೆ ಅನೇಕಾನೇಕ ಕವಿತಾಭಾವಗಳು ಪುಂಖಾನು ಪುಂಖವಾಗಿ ಹೊರಹೊಮ್ಮುತ್ತದೆ. ಇದೇ ಸಮಯದಲ್ಲಿ ಈ ಭಾವ ಬರೆದಿಡಲೇಬೇಕು ಇಲ್ಲವಾದಲ್ಲಿ ಮತ್ತೆ ಅವು ಎಂದೂ ಮನಸ್ಸಿಗೆ ಬಾರವು. ಹೀಗಾಗಿ ಈ ಸಮಯ ನನಗೆ ಬಹಳ ಮುಖ್ಯವಾದುದು. ಒಂದು, ಎರಡು ಅಥವಾ ಕೆಲವೊಮ್ಮೆ ಐದು, ಆರು ಕವಿತೆಗಳನ್ನು ಬರೆದಿರುವ ಉದಾಹರಣೆಗಳೂ ಇವೆ. "ಮಳೆ ನಿಂತ ಮೇಲೆ" ಅನ್ನೋಹಾಗೆ ಮನಸ್ಸು ನೆಮ್ಮದಿಯ ಭಾವ ತಾಳಿದ ಮೇಲೆ ಬೆಳಗಿನ ವಾಯುಸಂಚಾರಕ್ಕೆ ಹೊರಡುವ ಸಮಯವಾಗಿರುತ್ತದೆ. ಮನೆಯ ರೆಫ್ರಿಜಿರೇಟರ್ ನಲ್ಲಿ ಏನೇನು ತರಕಾರಿಗಳಿವೆ? ಏನಿಲ್ಲ? ಎಂದು ಇಣಿಕಿ
ನೋಡಿ ಏನು ತರಬೇಕೆಂದು ಗುರುತು
ಹಾಕಿಕೊಂಡು ಹೊರಡುತ್ತೇನೆ.
“ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ ದೇವರ ದಯಾ ಕಾಣೋ
ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ
ಸೂರ್ಯನು ಬರಿ ರವಿಯಲ್ಲವೋ ಆ ಭ್ರಾಂತಿಯ ಮಾಣೋ”
ಎಂಬ ಕವಿವಾಣಿಯಂತೆ ಬೆಳಗಿನ ವಿದ್ಯಮಾನ ವೀಕ್ಷಿಸಲು ಮುಕ್ತ ಮನಸ್ಸಿನಿಂದ ಹೊರಡುತ್ತೇನೆ. ಹಕ್ಕಿಗಳ ಕಲರವ, ಆಕಾಶದೆಲ್ಲೆಡೆ ಮೂಡಣ ದಿಕ್ಕಿನಲ್ಲಿ ಮೂಡುವ ಬೆಳಗಿನ ಚಿತ್ತಾರ ಅನುಭವಿಸುವುದು ಸಾರ್ಥಕ್ಯದ ಕ್ಷಣಗಳು.
ಮನದಾಳದಲ್ಲಿ ಹೊಸ ಚಿಂತನೆಗಳನ್ನು ಮೆಲುಕುಹಾಕುತ್ತಾ ಬೆಳಗಿನ ಜನಸಾಮಾನ್ಯರ ವಿದ್ಯಮಾನಗಳನ್ನು ಹೊಸ
ದೃಷ್ಟಿಕೋನದಿಂದ ನೋಡುತ್ತಾ ಸುಮಾರು ಒಂದೂವರೆ ಗಂಟೆಗಳ ಕಾಲದ ನನ್ನ ಬೆಳಗಿನ ವಾಯುಸಂಚಾರ ಮನೆ ತಲುಪುವುದರೊಂದಿಗೆ ಮುಗಿಯುತ್ತದೆ. ಬೆವೆತ ದೇಹ ತಣ್ಣೀರಿನಲ್ಲಿ ಮುಖತೊಳೆದುಕೊಂಡು ಎರಡೆನೆಯ ಬಿಸಿ ಬಿಸಿ ಕಾಫಿ ಹೀರೋದೇ ಭಾನುವಾರದ ಸ್ವರ್ಗ ಸುಖ.
ಭಾನುವಾರದ ಇತರ ವಿವರಗಳನ್ನು ಹೇಳಲು ಬೇಕಾದಷ್ಟಿದೆ ಸಧ್ಯಕ್ಕೆ ಇಷ್ಟು ಸಾಕು.