ಶನಿವಾರ, ಜೂನ್ 20, 2020

ಏಕಾಗ್ರತೆ ಶಕ್ತಿಯ ರಹಸ್ಯ

ಪ್ರೀತಿಯ ಮಿತ್ರ,
"ನಾವು ಭಾವಿಸುತ್ತೇವೆ ನಮ್ಮಲ್ಲಿ ಸಾಮರ್ಥ್ಯವಿದೆಯೆಂದು; ಇತರರು ನಾವು ಮಾಡುವ ಕೆಲಸದಿಂದ ನಮ್ಮ ಸಾಮರ್ಥ್ಯವನ್ನು ಅಳೆಯುತ್ತಾರೆ” ಈ ವಿವೇಕಯುತವಾದ ಮಾತು ಅಮೆರಿಕದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಎಚ್.ಡಬ್ಲ್ಯೂ. ಲಾಂಗ್‌ಫೆಲೋರವರದು. ಅವರು ನಾವು ಮಾಡುವ ತಪ್ಪನ್ನು ನೆನಪಿಸಲು ಬಯಸುತ್ತಾರೆ, ಕೆಲವು ಸಂದರ್ಭಗಳಲ್ಲಿ ನಮ್ಮ ಸಾಮರ್ಥ್ಯದ ಕುರಿತು ಅತಿಯಾದ ಅಂದಾಜು ಅಥವಾ ಕಡಿಮೆ ಅಂದಾಜು ನಮ್ಮ ಸ್ವಂತ ಆಲೋಚನೆಗಳಿಂದ ನಮ್ಮನ್ನು ದೂರ ಕರೆದೊಯ್ಯುತ್ತದೆ, ಅಂತಹ ಸಂದರ್ಭಗಳಲ್ಲಿ ನಾವು ವಸ್ತುನಿಷ್ಠವಾಗಿ ಯೋಚಿಸಿ ಸಂದರ್ಭಕ್ಕೆ ತಕ್ಕಂತೆ ವರ್ತಿಸಬೇಕಾಗಿರುತ್ತದೆ. ಉದಾಹರಣೆಗೆ, ಕೆಲವು ಸನ್ನಿವೇಶಗಳಲ್ಲಿ ನಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಹೇಳಬೇಕಾಗಿರುತ್ತದೆ ಆದರೆ ನಾವು ಭಾವಿಸುತ್ತೇವೆ ಬೇರೆಯವರು ನಮಗಿಂತಲೂ ಉತ್ತಮವಾಗಿ ಹೇಳಬಲ್ಲವರಾಗಿದ್ದಾರೆಂದು, ಅಂತಹ ಸನ್ನಿವೇಶಗಳಲ್ಲಿ ನಾವು ಗಲಿಬಿಲಿಗೊಳ್ಳುತ್ತೇವೆ ಹಾಗು ನಮ್ಮ ಭಾವನೆಗಳನ್ನು ಉತ್ತಮವಾಗಿ ಹೇಳಲಾರದೆ ಮುಗ್ಗರಿಸುತ್ತೇವೆ. ಇದು ಸ್ವಾಭಾವಿಕವೆಂದು ತೋರುತ್ತದೆ, ಆದರೆ ಇದನ್ನು ತಪ್ಪಿಸಬಹುದಾಗಿತ್ತು , ಏಕೆಂದರೆ ನಮ್ಮ ಆಲೋಚನೆಗಳು ಸ್ಪಷ್ಟವಾಗಿ ವ್ಯಕ್ತವಾಗಿದ್ದರೆ ಅದರಿಂದ ಅಪೇಕ್ಷಿತ ಯಶಸ್ಸು ನಮ್ಮದಾಗಿರುತಿತ್ತು. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ ಮತ್ತು ಕೆಲವರು ಇತರರಿಗಿಂತ ಉತ್ತಮವಾಗಿ ಹೇಳಬಲ್ಲವರಾಗಿರುತ್ತಾರೆ. ಆದರೆ ಅದರ ಅರ್ಥ ಅಂತಹವರೇ ಕೆಲಸ ಮಾಡಲು ಅರ್ಹರೆಂದಲ್ಲ. ಇತರ ವ್ಯಕ್ತಿಗಳಿಗಿಂತ ಉತ್ತಮ ರೀತಿಯಲ್ಲಿ ನೀವು ವ್ಯಕ್ತಪಡಿಸುವಲ್ಲಿ ತುಂಬಾ ಪ್ರವೀಣರಾಗಬಹುದು.ನಿಮಗೆ ಅಭ್ಯಾಸದಲ್ಲಿ ಪೂರ್ಣ ನಂಬಿಕೆಯಿದ್ದರೆ , ಎಲ್ಲಾ ಸಾಧ್ಯತೆಗಳಿವೆ , ನೀವು ವಿಜಯಶಾಲಿಯಾಗಿ ಹೊರಹೊಮ್ಮುವೆಯೆಂದು.

ನೀವು ಉತ್ತಮ ಸಂವಹನಕಾರನಾಗಲು ಬಯಸಿದರೆ, ಯಾವುದೇ ಅರ್ಥವಿಲ್ಲದ ವಾಕ್ಯಗಳನ್ನು ಎಂದಿಗೂ ಬಳಸಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಹೇಳುವ ಎಲ್ಲಕ್ಕೂ ಉದ್ದೇಶವಿರಬೇಕು , ಏಕೆಂದರೆ ಉದ್ದೇಶವಿಲ್ಲದ ಮಾತು ನಿಷ್ಫಲ. ನಿಮ್ಮ ಸಂವಹನವನ್ನು ಪರಿಣಾಮಕಾರಿಯಾಗಿಸಲು ಪದಗಳನ್ನು ಎಚ್ಚರಿಕೆಯಿಂದ ಆರಿಸಕೊಳ್ಳಬೇಕು. ಸರಳ ಮತ್ತು ಸಂಕ್ಷಿಪ್ತ ಪದಗಳು ಕೇಳುಗರನ್ನು ಆಕರ್ಷಿಸುತ್ತವೆ ಮತ್ತು ಗಮನವನ್ನು ನೀಡುವಂತೆ ಮಾಡುತ್ತವೆ ಹಾಗೂ ನಿಮ್ಮ ಮಾತು ಕೇಳಿಸಿಕೊಳ್ಳುವಂತೆ ಮಾಡುತ್ತದೆ. ಹೊಸ ಮತ್ತು ಹೊಂದಾಣಿಕೆಯಾಗದಂತಹ ಪದಗಳನ್ನು ಎಂದಿಗೂ ಬಳಸಬಾರದು. ಅವು ನೈಜವಾಗಿರಬೇಕು ಮತ್ತು ಮನಸ್ಸಿಗೆ ನಾಟುವಂತಿರಬೇಕು. ಒಂದು ಪ್ರಸಿದ್ಧ ಉಲ್ಲೇಖವಿದೆ- " ಯಾವುದೇ ಸ್ಥಾಪಿತ ಸತ್ಯಕ್ಕೆ ಸಾವಿರ ಅನುಪಯುಕ್ತ ವಾದಗಳಿಗಿಂತ ,ಎರಡು ಅಥವಾ ಮೂರು ಉತ್ತಮ ಸಾಕ್ಷ್ಯಗಳಿದ್ದರೆ ಸಾಕು," ಒಂದು ವೇಳೆ ನೀವು ಸಾರಾಂಶವನ್ನು ವಿವರಿಸಲು ಹೋಗಿ ಸಾರಾಂಶವನ್ನು ಬಿಟ್ಟು ಉತ್ತಮ ಸಂವಹನಕ್ಕಾಗಿ ಇಡೀ ಕಥೆಯನ್ನು ಹೇಳಲು ಪ್ರಯತ್ನಿಸಬೇಡಿ. ಸಂಕ್ಷಿಪ್ತವಾಗಿ ನೀವು ಅದನ್ನು ಅರ್ಥವಾಗುವಂತೆ ಹೇಳಿದರೆ ಸಾಕು, ಅದರಿಂದ ನೀವು ಹೇಳಬೇಕಾದಂತಹ ವಿಷಯ ತಲುಪೇ ತಲುಪುತ್ತದೆ. ಇಲ್ಲಿ ಉದ್ಭವಿಸಬಹುದಾದ ಪ್ರಶ್ನೆಯೆಂದರೆ- “ನೈಜ ಘಟನೆಯನ್ನು ಮನವರಿಕೆಯಾಗುವಂತೆ ಮಾಡುವುದು ಹೇಗೆ?” ಉತ್ತರ ತುಂಬಾ ಸರಳವಾಗಿದೆ. ಸರಳ ಹಾಗು ನೇರವಾದ ಅರ್ಥಕೊಡುವ ಪದಗಳಿಂದ ಹಾಗೂ ಮನಸ್ಸಿಗೆ ಹಿತವಾಗುವ ಪದಗಳಿಂದ ಮಾತ್ರ ಸಾಧ್ಯ. "ಸುರಕ್ಷಿತ ಪದಗಳು ಯಾವಾಗಲೂ ನಮ್ಮನ್ನು ನೇರವಾಗಿ ಸತ್ಯದ ಬಳಿ ಕರೆದೊಯ್ಯುವುದು ." ಪರಿಸ್ಥಿತಿಯ ಅಗತ್ಯಕ್ಕೆ ಅನುಗುಣವಾಗಿ ಯಾವಾಗಲೂ ನಿಮ್ಮ ಭಾಷೆಯನ್ನು ಆರಿಸಿ ಮತ್ತು ನಿಮ್ಮ ಪ್ರೇಕ್ಷಕರಿಗೆ ಹೊಂದಿಕೆಯಾಗುವ ಪದಗಳನ್ನು ಮಾತ್ರ ಬಳಸಿ. ನಿಮ್ಮ ಮಾತುಗಳನ್ನು ಎಂದಿಗೂ ವಿಸ್ತಾರವಾಗಿ ಹೇಳಬೇಡಿ, ಏಕೆಂದರೆ ಅದು ಕೇಳುಗರ ಆಸಕ್ತಿಯ ನಷ್ಟಕ್ಕೆ ಕಾರಣವಾಗುತ್ತದೆ. ಜನರು ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದು ನಿಮ್ಮ ಉದ್ದೇಶವಲ್ಲ, ಏಕೆಂದರೆ ಅಸ್ಪಷ್ಟತೆಯು ತಪ್ಪು ತಿಳುವಳಿಕೆ ಅಥವಾ ಗೊಂದಲಕ್ಕೆ ಕಾರಣವಾಗಬಹುದು. ವಿಸ್ತಾರವಾದ ಭಾಷೆಯನ್ನು ಬಳಸುವ ಪ್ರವೃತ್ತಿಯನ್ನು ನೀವು ಹೊಂದಿದ್ದರೆ, ಅದನ್ನು ಅಭ್ಯಾಸದಿಂದ ಜಯಿಸಲು ಪ್ರಯತ್ನಿಸಿ. ನಿಮ್ಮ ಪದಗಳನ್ನು ಗಟ್ಟಿಯಾಗಿ ಅಭ್ಯಾಸ ಮಾಡಿ ಮತ್ತು ಸ್ನೇಹಿತರೊಂದಿಗಿನ ನಿಮ್ಮ ಸಂಭಾಷಣೆಯಲ್ಲಿ ನೀವು ಬಳಸುವ ಪದಗಳೇ ಎಂದು ಕಂಡುಹಿಡಿಯಲು ಪ್ರಯತ್ನಿಸಿ. ನೀವು ಸಾಮಾನ್ಯವಾಗಿ ಬಳಸದ ಕೆಲವು ಪದಗಳನ್ನು ನೀವು ಬಳಸುತ್ತಿರುವಿರಿ ಎಂದು ನೀವು ಕಂಡುಕೊಂಡರೆ, ಅವುಗಳನ್ನು ತಪ್ಪಿಸಿ.

ಉತ್ತಮ ಸಂವಹನದ ರಹಸ್ಯವು ಸರಳತೆಯಲ್ಲಿದೆ. ಪ್ರಸಿದ್ಧ ಕವಿ ವಾಲ್ಟ್ ವಿಟ್ಮನ್ ಅವರ ಮಾತಿನಲ್ಲಿ- “ಸರಳತೆಯು ಅಭಿವ್ಯಕ್ತಿಯ ವೈಭವ.” ನೈಜ-ಪ್ರಪಂಚದ ಉದಾಹರಣೆಗಳ ಮೇಲೆ ನಿಮ್ಮ ಮಾತನ್ನು ಕೇಂದ್ರೀಕರಿಸಿ ಮತ್ತು ನಿಮ್ಮ ವಿಷಯವನ್ನು ಅತ್ಯಂತ ಸರಳ ಭಾಷೆಯಲ್ಲಿ ಹೇಳಲು ಪ್ರಯತ್ನಿಸಿ , ಯಾವಾಗ ನಿಮಗೆ ಅದು ನಿಮ್ಮಿಂದ ಸಾಧ್ಯ ಎಂದು ನೀವು ಭಾವಿಸುವಿರೋ , ಅಂದು ನೀವು ಯಶಸ್ಸಿಗೆ ಭಾಜನರಾಗುತ್ತೀರಿ. "ಏಕಾಗ್ರತೆಯು ಶಕ್ತಿಯ ರಹಸ್ಯವಾಗಿದೆ" ಎಂದು ಎಮರ್ಸನ್ ಸರಿಯಾಗಿ ಹೇಳಿದ್ದಾರೆ. 

ಪ್ರತಿಯೊಂದು ಪರಿಸ್ಥಿತಿಯಲ್ಲೂ ನಿಮ್ಮ ಯಶಸ್ಸನ್ನು ಎದುರು ನೋಡುತ್ತಿದ್ದೇನೆ, 

ನಿಮ್ಮ ವಿಶ್ವಾಸಿ, (ಸುರೇಂದ್ರ ಕುಮಾರ್ ಸಚ್‌ದೇವ)
 ಕನ್ನಡಕ್ಕೆ: (ನಾಗೇಂದ್ರ ಕುಮಾರ್ ಕೆ.ಎಸ್.)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ