ಭಾನುವಾರ, ಸೆಪ್ಟೆಂಬರ್ 19, 2010

ವಿಶ್ವ ಪರಿಸರ ದಿನ-೨೦೧೦

ಜೂನ್ ೫, ಮತ್ತೊಮ್ಮೆ ಬಂದಿದೆ!, ಏನು ವಿಶೇಷ? ಅಂತ ಯೋಚನೆ ಮಾಡ್ತಾಯಿದ್ದೀರ? ಜೂನ್ ೫ "ವಿಶ್ವ ಪರಿಸರ ದಿನ". ನಮ್ಮ ರಕ್ಷಣೆಗೆ, ಪಾಲನೆಗೆ,ಪೋಷಣೆಗೆ ತನ್ನದೆಲ್ಲವನ್ನೂ ಮುಕ್ತವಾಗಿ ನೀಡಿದ ಪರಿಸರ ಇಂದು ಬೆತ್ತಲಾಗಿದೆ. ನಮ್ಮನ್ನು ಸಲಹಿದ ಪರಿಣಾಮವಾಗಿ, ಇಂದು ತನಗೇ ನೆಲೆಯಿಲ್ಲದಂತಾಗಿದೆ ಹಾಗು ಪರಿಸ್ಥಿತಿ ಶೋಚನೀಯವಾಗಿದೆ. ನಮ್ಮ ಪರಿಸರದ ಪುನರುತ್ಥಾನಕ್ಕೆ ನಾವು ಏನು ಮಾಡಬೇಕೆಂಬುದರ ಬಗ್ಗೆ ಚಿಂತನ-ಮಂಥನ ನಡೆಸಿ ಸರಿದಾರಿಯಲ್ಲಿ ಪರಿಸರ ಸಂರಕ್ಷಿಸುವ ಕಾರ್ಯ ಈ ಕ್ಷಣದ ಅವಶ್ಯಕತೆಯಾಗಿದೆ.ಜಾಗತೀಕವಾಗಿ ಏರುತ್ತಿರುವ ತಾಪಮಾನ,ಇಳಿಮುಖವಾಗುತ್ತಿರುವ ಮಳೆ, ಏರುತ್ತಿರುವ ವಾಯು,ಜಲ, ನೆಲ ಮಾಲಿನ್ಯ ಮತ್ತು ಇಳಿಮುಖವಾಗುತ್ತಿರುವ ಶುದ್ಧ ನೀರು,ಗಾಳಿ, ಆಹಾರ ಪದಾರ್ಥಗಳು ಪ್ರತಿಯೊಂದು ದೇಶವನ್ನು ಚಿಂತೆಗೀಡು ಮಾಡಿದೆ. ಮಾನವ ತನ್ನ ನೆಲೆಯನ್ನು ತಾನೇ ನಾಶಮಾಡಿಕೊಳ್ಳುತ್ತಿದ್ದಾನೆ. ಅತಿಯಾದ ಕೈಗಾರೀಕರಣ, ನಗರೀಕರಣದ ಜೊತೆಗೆ ಮಾನವನ ಅತಿಯಾದ ಸ್ವಾರ್ಥ ಹಾಗು ಪರಿಸರದ ಬಗ್ಗೆ ತಳೆದಿರುವ ನಕಾರಾತ್ಮಕ ಧೋರಣೆ, ಇಂದು ಪ್ರಪಂಚಾದ್ಯಂತ ಎಲ್ಲಾ ದೇಶಗಳನ್ನು ಬಡಿದೆಬ್ಬಿಸಿದೆ. ನಾಗರೀಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೊಡಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಜನಸಾಮಾನ್ಯರಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸಿ ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯಗೊಳ್ಳುವುದನ್ನು ತಡೆಗಟ್ಟಿ, ಮುಂದಿನ ಪೀಳಿಗೆಗೆ ನೆಮ್ಮದಿಯ ಬದುಕು ಕಟ್ಟಿಕೊಡುವ ಪ್ರಯತ್ನದ ಸಾಂಕೇತಿಕವಾಗಿ ಪ್ರತಿವರ್ಷ ಜೂನ್ ೫ ರಂದು "ವಿಶ್ವ ಪರಿಸರ ದಿನ" ವೆಂದು ಪ್ರಪಂಚಾದ್ಯಂತ ಆಚರಿಸಲಾಗುವುದು (ವಿಶ್ವ ಪರಿಸರ ದಿನ ಮೊದಲ ಬಾರಿ ಜೂನ್ ೫, ೧೯೭೩ ರಂದು ಆಚರಿಸಲಾಯಿತು).
ಪರಿಸರದ ಮಡಿಲಲ್ಲಿ ನಾವು:
>ನಮ್ಮ ಪರಿಸರ ನಮಗೇನು ಕೊಟ್ಟಿಲ್ಲ ಹೇಳಿ! ಸುಂದರ ಬದುಕು,ಕನಸು,ಕಷ್ಟಗಳನ್ನು ಎದುರಿಸುವ ಶಕ್ತಿ,
ಬಂಧು-ಬಾಂಧವರು, ಕೋಟ್ಯಾಂತರ ಜೀವ-ವೈವಿಧ್ಯಗಳಿಗೆ ತವರುಮನೆ-ಭೂಮಿ, ಭೂಮಿ ನಮ್ಮೆಲ್ಲರ ತಾಯಿ.
>ಪ್ರಕೃತಿಯ ಸೌಂದರ್ಯ ಸವಿಯಲು ನೂರು ಜನ್ಮ ಸಾಲದು,ಕವಿಯಾಗಿ ಪ್ರಕೃತಿಯ ಗುಣಗಾನ ಮಾಡುವ ಕವಿಗಳಿದ್ದಾರೆ ಇಲ್ಲಿ.ಪ್ರಕೃತಿ ತನ್ನೊಳಡಗಿಸಿಕೊಂಡಿರುವ ಸಾವಿರಾರು ರಹಸ್ಯಗಳನ್ನು ಭೇದಿಸಲು ಸಾವಿರಾರು ವಿಜ್ನಾನಿಗಳು ಸಂಶೋಧನೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿದ್ದಾರೆ.
>ದಟ್ಟವಾದ ಕಾನನಗಳು,ಪಾತಾಳದ ಕಣಿವೆಗಳು,ಧೈರ್ಯವಿದ್ದರೆ ನನ್ನನ್ನೇರು ಎಂದು ಕೈಬೀಸಿ ಕರೆಯುವ ಪರ್ವತ ಶ್ರೇಣಿಗಳು,ರಸಿಕರಿಗೆ ಹಾಗು ಚಾರಣಿಗರಿಗೆ ಸವಾಲೆಸೆಯುತ್ತಿದೆ.
ನಮ್ಮ ಮುಡಿಲಲ್ಲಿ ಪರಿಸರ:
ನಮ್ಮನ್ನು ಸಲಹಿದ ಪರಿಸರದ ಬಗ್ಗೆ ನಮಗೂ ಕಾಳಜಿ ಇರಬೇಕಲ್ಲವೆ.ಬೇಕಾಬಿಟ್ಟಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಹಾಳುಮಾಡುತ್ತಿದ್ದೇವೆ.ಹಿತ-ಮಿತವಾಗಿ ಬಳಸುವುದನ್ನು ನಾವು ಕಲಿಯಬೇಕಿದೆ. ಸಂಪನ್ಮೂಲಗಳನ್ನು ಬಳಸುವಾಗಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳಿತು.
o ನೀರನ್ನು ಅವಶ್ಯಕತೆಗನುಗುಣವಾಗಿ ಬಳಸಿ.
o ಮಳೆ ನೀರನ್ನು ಸಾಧ್ಯವಾದಷ್ಟು ಬಳಸಿ ಹಾಗು ಅಂತರ್ಜಲದ ವೃದ್ಧಿಗೆ ಯೋಜನೆಗಳನ್ನು ರೂಪಿಸಿ.
o ನೀರಿನ ಮೊಲಗಳಾದ ಕೆರೆ,ಬಾವಿ,ಕೊಳ ಹಾಗು ನದಿಗಳ ಮಾಲಿನ್ಯವನ್ನು ತಡೆಯಿರಿ.

ವಿಧ್ಯುಚ್ಚಕ್ತಿಯನ್ನು ಮಿತವಾಗಿ ಬಳಸಿ,ಇತರೆ ಮೂಲಗಳಿಂದ ವಿಧ್ಯುಚ್ಚಕ್ತಿಯನ್ನು ತಯಾರಿಸಿ,ಬಳಸುವ ವಿಧಾನಗಳನ್ನು
ರೂಡಿಸಿಕೊಳ್ಳಿ.
o ಆಹಾರ ಪದಾರ್ಥಗಳನ್ನು ಅನಗತ್ಯವಾಗಿ ಚೆಲ್ಲಬೇಡಿ.
o ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಿ.
o ಮರ-ಗಿಡಗಳನ್ನು ಹೆಚ್ಚಾಗಿ ಬೆಳಸಿ.
o ಕಸವನ್ನು ವಿಂಗಡನೆ ಮಾಡಿ ವಿಲೇವಾರಿ ಮಾಡಿ.
o ಬೈಸಿಕಲ್ ಅಥವಾ ನಡೆಯುವ ಹವ್ಯಾಸದಿಂದ ಆರೋಗ್ಯವೂ ವೃದ್ಧಿಸುತ್ತದೆ ಹಾಗು ಪರಿಸರ ಮಾಲಿನ್ಯವೂ ತಪ್ಪುತ್ತದೆ.
o ವಾರದಲ್ಲಿ ಒಂದು ದಿನವಾದರೂ ಸಾರ್ವಜನಿಕ ವಾಹನ ಬಳಸಿ.
o ಜವಾಬ್ದಾರಿಯುತ ನಾಗರೀಕರಾಗಿ ನಿಮ್ಮ ಹಕ್ಕು ಹಾಗು ಜವಾಬ್ದಾರಿಯನ್ನು ಅರಿತುಕೊಳ್ಳಿ.
o ಹಸಿರೇ ಉಸಿರು ಎಂಬ ತತ್ವದಲ್ಲಿ ನಂಬಿಕೆಯಿಡಿ.
o ಜನ ಸಾಮಾನ್ಯರಲ್ಲಿಪರಿಸರದ ಕಾಳಜಿಯ ಬಗ್ಗೆಅರಿವು ಮೂಡಿಸಿ.
೨೦೧೦ ರ ವಿಶ್ವ ಪರಿಸರ ದಿನದ ಘೋಷ ವಾಕ್ಯ
" ಹಲವು ಜೀವ ಪ್ರಭೇದ- ಒಂದು ಭೂಮಿ, ಒಂದೇ ಭವಿಷ್ಯ"

1 ಕಾಮೆಂಟ್‌: