ಗುರುವಾರ, ಅಕ್ಟೋಬರ್ 29, 2020

ಗುರಿಯ ಸಂಕಲ್ಪ ಯಶಸ್ಸಿನ ಮೊದಲ ಹೆಜ್ಜೆ

 ಆತ್ಮೀಯ ಸ್ನೇಹಿತರೆ,

'ಪರಿಶ್ರಮ' ಎಂಬ ಗುಣ ನಿಮ್ಮಲ್ಲಿ ಇಲ್ಲವೆಂದಾದರೆ ನಿಮಗೆ ಯಶಸ್ಸು ಮರೀಚಿಕೆಯೇ ಸರಿ. ಅನೇಕ ಹಿನ್ನಡೆಗಳ ಹೊರತಾಗಿಯೂ ನಿಮ್ಮ ಗುರಿಯನ್ನು ಎಡೆಬಿಡದೆ ತಪಸ್ಸಿನಂತೆ ಮುಂದುವರಿಸುವ ಸಾಮರ್ಥ್ಯ ಇದು. ನಿಮಗೆ ನೆನಪಿರಲಿ ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ಎಲ್ಲವೂ ನಿಮ್ಮ ವಿರುದ್ಧವಾಗಿಯೇ ನಡೆಯುತ್ತಿದೆಯೆನಿಸಬಹುದು. ನಿಮ್ಮ ಜೊತೆಯಲ್ಲಿರುವರೂ ನೀವು ಪ್ರತಿ ಹೆಜ್ಜೆಯಲ್ಲಿಯೂ ಸೋಲುತ್ತಿರುವಿರಿ ಎಂದು ಖಚಿತಪಡಿಸುತ್ತಿರಬಹುದು. ಅಂತಹ ಸಂದರ್ಭಗಳಲ್ಲಿ ನೀವು ದುರ್ಬಲ ಮನಸ್ಸಿನವರಾಗಿದ್ದರೆ ಖಿನ್ನರಾಗಿ ಪ್ರಯತ್ನವನ್ನು ಬಿಟ್ಟು ಸೋಲನ್ನು ಸ್ವೀಕರಿಸಲು ಸಿದ್ಧರಾಗಿರುತ್ತಿದ್ದಿರಿ. ಆದರೆ ನೀವು ಸಾಧಿಸುವ ಛಲದವರಾಗಿದ್ದರೆ ಅನೇಕ ಹಿನ್ನಡೆಗಳ ನಡುವೆಯೂ ನೀವು ನಿಮ್ಮ ಗುರಿಯತ್ತ ಪಯಣವನ್ನು ಬಿಡುವುದಿಲ್ಲ.

 ನೆಟ್ಫ್ಲಿಕ್ಸ್ನಂತಹ ಓವರ್ದಿ ಟಾಪ್ (Over The Top- OTT) ಪ್ಲಾಟ್ಫಾರ್ಮ್ಗಳಲ್ಲಿ ಅತ್ಯುತ್ತಮ ಗುಣಮಟ್ಟದ ಹೊಸ ಚಲನಚಿತ್ರದ ಲಭ್ಯತೆಯಿದೆ. ಭಾರತದ ಧೈರ್ಯಶಾಲಿ ಹೆಣ್ಣು ಮಗಳ ಕಥೆಯನ್ನು ಅದು ಹೇಳುತ್ತದೆ.  ‘ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಹುಡುಗಿಚಲನಚಿತ್ರ ವೀಕ್ಷಿಸಿ ಮತ್ತು ಅವರ ಜೀವನದ ಕಥೆಯಿಂದ ಯಶಸ್ಸಿನ ಅಮೂಲ್ಯವಾದ ಪಾಠಗಳನ್ನು ಕಲಿಯಬೇಕೆಂದು ನಾನು ನಿಮ್ಮೆಲ್ಲರಲ್ಲಿ ಒತ್ತಾಯಪೂರ್ವಕವಾಗಿ ಕೋರುತ್ತೇನೆ. ಅವಳು ಚಿಕ್ಕ ಮಗುವಾಗಿದ್ದಾಗ ವಿಮಾನ ಚಾಲಕಳಾಗುವ ಬಯಕೆ ಹೊಂದಿದ್ದಳು. ಆಕೆ ಲಕ್ನೋದ ಮಾಧ್ಯಮ ವರ್ಗಕ್ಕೆ ಸೇರಿದವಳಾಗಿದ್ದಳು. ಭಾರತೀಯ ವಾಯುಪಡೆ ಮೊದಲ ಬಾರಿ ಶಾರ್ಟ್ ಸರ್ವಿಸ್ ಕಮಿಷನ್ (Short Service Commission-SSC) ನಲ್ಲಿ ಮಹಿಳೆಯರಿಗೆ ಹೆಲಿಕಾಪ್ಟರ್ ಪೈಲೆಟ್ ಆಗಲು ಅವಕಾಶ ಕಲ್ಪಿಸಿತು. ಆಗ ಆಕೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪೈಲೆಟ್ ಆಗಲು ನಿರ್ಧರಿಸಿದಳು.

 ಆಯ್ಕೆಯ ಹಂತದಿಂದಲೇ ಆಕೆ ಅನೇಕ ಅಡೆತಡೆಗಳನ್ನು ಎದುರಿಸಬೇಕಾಯಿತು, ಏಕೆಂದರೆ ಅವಳ ದೇಹದ ತೂಕ ಜಾಸ್ತಿಯಾಗಿತ್ತು. ಅವಳು ತಕ್ಷಣದಿಂದಲೇ ಕಠಿಣ ಕಟ್ಟುನಿಟ್ಟಿನ ಆಹಾರ ಕ್ರಮಗಳನ್ನು ಅನುಸರಿಸಿದಳು ವಾಯುಪಡೆಯ ಆಯ್ಕೆ ಪ್ರಕ್ರಿಯೆಯಲ್ಲಿ ತೇರ್ಗಡೆಯಾಗಲು. ಆಯ್ಕೆಯಾದ ನಂತರ, ಅವಳು ಪುರುಷ ಪ್ರಾಬಲ್ಯದ ಭದ್ರಕೋಟೆಯನ್ನು ಪ್ರವೇಶಿಸುತ್ತಿರುವುದನ್ನು ಮನಗೊಂಡಳು, ಅಲ್ಲಿ ಅನೇಕ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ತಮ್ಮ ಕೆಲಸದಲ್ಲಿ ಒಬ್ಬ ಮಹಿಳೆಯನ್ನು ಒಪ್ಪಿಕೊಳ್ಳುವುದು ಕಷ್ಟಕರವಾಗಿತ್ತು. ವಾಯುಪಡೆ ಇಲ್ಲಿಯವರೆಗೆ ಪುರುಷ ಪೈಲಟ್ಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿರುವುದರಿಂದ ಮಹಿಳೆಯರ ಕೊಠಡಿಗಳ ಕೊರತೆ ಅಥವಾ ಖಾಸಗಿ ಜಾಗದಂತಹ ಪ್ರಾಯೋಗಿಕ ಸಮಸ್ಯೆಗಳನ್ನು ಅವಳು ಎದುರಿಸಿದ್ದಳು. ವಾಯುಪಡೆಯ ನಿಲ್ದಾಣದಲ್ಲಿ ಅವಳ ಪುರುಷ ಮೇಲ್ವಿಚಾರಕರು ಮತ್ತು ಸಹೋದ್ಯೋಗಿಗಳು ಯುವತಿಯ ಪೈಲೆಟ್ ಜೀವನವನ್ನು ಕಷ್ಟಕರವಾಗಿಸಲು ಪ್ರಯತ್ನಿಸಿದ ಸಂದರ್ಭಗಳೂ ಇದ್ದವು. ಆದರೆ ಪ್ಲೈಟ್. ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಅವರು ಆಯ್ಕೆ ಮಾಡಿದ ವೃತ್ತಿಜೀವನದಲ್ಲಿ ಯಶಸ್ವಿಯಾಗದಂತೆ ತಡೆಯಲು ಯಾವುದೇ ಹಿನ್ನಡೆ ಅಥವಾ ಅವಮಾನಕ್ಕೆ ಆಸ್ಪದಕೊಡಲಿಲ್ಲ.

 ರಬ್ಬರ್ ಮೊದಲ ಬಾರಿ ರಸ್ತೆಯನ್ನು ಭೇಟಿಯಾದಾಗ ಟೈರ್ ಗುಣಮಟ್ಟದ ನಿಜವಾದ ಪರೀಕ್ಷೆ ಎಂದು ಹೇಳಲಾಗುತ್ತದೆ. ಅಂತೆಯೇ, ಮಿಲಿಟರಿ ಪೈಲೆಟ್ ಎಲ್ಲಾ ತರಬೇತಿ ಮತ್ತು ಸಾಮರ್ಥ್ಯವನ್ನು ಯುದ್ಧದ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕಾರ್ಗಿಲ್ನಲ್ಲಿನ ಒಳನುಗ್ಗುವಿಕೆಗಳೊಂದಿಗೆ ಭಾರತದ ಲಾಹೋರ್ ಬಸ್ ಶಾಂತಿ ಸ್ಥಾಪನೆಗೆ ಉತ್ತರವಾಗಿ ಪಾಕಿಸ್ತಾನವು ಭಾರತದ ಬೆನ್ನಿಗೆ ಚೂರಿ ಇರಿದಿತ್ತು. 1999 ರಲ್ಲಿ ಭಾರತೀಯ ಮಿಲಿಟರಿ ಒಳನುಗ್ಗುವವರನ್ನು ಹೊರಹಾಕಲೇ ಬೇಕಾಯಿತು ಮತ್ತು ಪರ್ವತಗಳಲ್ಲಿ ಸಂಘರ್ಷ ಉಂಟಾಯಿತು. ಒತ್ತಡದ ಪರಿಸ್ಥಿತಿಯಲ್ಲಿ, ಪ್ಲೈಟ್. ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಯುದ್ಧ ವಲಯದಲ್ಲಿ ಭಾಗಿಯಾದ ಮೊದಲ ಭಾರತೀಯ ಮಹಿಳೆ ಮಿಲಿಟರಿ ಪೈಲೆಟ್ ಎನಿಸಿಕೊಂಡರು. ಅವರು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದರು ಮತ್ತು ತನ್ನ ಕರ್ತವ್ಯಗಳನ್ನು ನಿರ್ಭಯವಾಗಿ ನಿರ್ವಹಿಸಿದರು. ಅವಳು ಯುದ್ಧದಲ್ಲಿ ಎಷ್ಟು ಪರಿಣಾಮಕಾರಿಯಾಗಿದ್ದಳೆಂದರೆ, ಅವಳ ಸಾಮರ್ಥ್ಯವನ್ನು ಮೊದಲೇ ಅನುಮಾನಿಸಿದ್ದ ಅವಳ ಪುರುಷ ಮೇಲ್ವಿಚಾರಕನೂ ಸಹ ಅವಳ ಧೈರ್ಯ ಮತ್ತು ವೃತ್ತಿಪರತೆಗೆ ಅಭಿನಂದನೆ ಸಲ್ಲಿಸಿದನು.

 ನನ್ನ ಪ್ರೀತಿಯ ಸ್ನೇಹಿತರೇ, ಚಲನಚಿತ್ರದಿಂದ ನಿಮಗೆ ಪಾಠವೆಂದರೆ, ನಿಮ್ಮ ವೃತ್ತಿಜೀವನದ ಗುರಿ ಸವಾಲಿನದ್ದಾಗಿದ್ದರೆ, ನೀವು ಸವಾಲುಗಳನ್ನು ಮತ್ತು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಸವಾಲುಗಳು ಆಂತರಿಕವಾಗಿರಬಹುದು (ಗುಂಜನ್ ಅಧಿಕ ದೇಹ ತೂಕ ಹೊಂದಿರುವುದು) ಅಥವಾ ಅವು ಬಾಹ್ಯವಾಗಿರಬಹುದು (ಅವಳ ಸಾಮರ್ಥ್ಯಗಳನ್ನು ನಂಬದ ಜನರಂತೆ).

ನೀವು ಎದುರಿಸುವ ಸವಾಲುಗಳ ಸ್ವರೂಪ ಏನೇ ಇರಲಿ, ದಯವಿಟ್ಟು ಯಶಸ್ವಿಯಾಗಲು ನೀವು ಪ್ರತಿ ಸವಾಲನ್ನು ಜಯಿಸಬೇಕು ಎಂದು ನೆನಪಿಡಿ ಪ್ಲೈಟ್. ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಕಾರ್ಗಿಲ್ನಲ್ಲಿ ಮಾಡಿ ತೋರಿಸಿದರು. ಅವಳು ವಾಯುಪಡೆಯ (IAF) ಧ್ಯೇಯವಾಕ್ಯನಭಮ್ ಸ್ಪರ್ಶಮ್ ದೀಪ್ತಮ್ಗೆ ತಕ್ಕಂತೆ ಬದುಕಿದ್ದಳು, ಇದರರ್ಥಆಕಾಶವನ್ನು ವೈಭವದಿಂದ ಸ್ಪರ್ಶಿಸಿ'.

 ನಿಮ್ಮ ಆಯ್ಕೆಯ ವೃತ್ತಿಜೀವನದಲ್ಲಿ ನಿಮ್ಮೆಲ್ಲರ ವೈಭವ ಮತ್ತು ಯಶಸ್ಸನ್ನು ನಾನು ಬಯಸುತ್ತೇನೆ.

 

ತಮ್ಮ ವಿಶ್ವಾಸಿ

ಸುರೇಂದ್ರ ಕುಮಾರ್ ಸಚ್ದೇವ

ಕನ್ನಡಕ್ಕೆ: ನಾಗೇಂದ್ರ ಕುಮಾರ್ ಕೆ ಎಸ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ