ಭಾನುವಾರ, ಮೇ 24, 2020

ನಿರ್ವಹಣೆ ಕಾರ್ಯದ ಬಗ್ಗೆ ತಾತ್ಸಾರವೇಕೆ?

ಆಧುನಿಕ ಕೈಗಾರಿಕಾ ಆರ್ಥಿಕತೆಯ ಸುಭದ್ರತೆಗೆ ತಾಂತ್ರಿಕವೃತ್ತಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಕೆಳಗಿನ ಮುಖ್ಯ ಅಂಶಗಳು ಆಧುನಿಕ ಕೈಗಾರಿಕಾ ಆರ್ಥಿಕತೆಗೆ ಅಭಯಂತರನ ತಾಂತ್ರಿಕ ಕೌಶಲತೆಯ ಕೊಡುಗೆಗಳಾಗಿವೆ. 1. ಸಾರ್ವಜನಿಕ ಸೇವಾ ವ್ಯವಸ್ಥೆಯ ರಚನೆ, ಮೂಲಭೂತ ಸೌಕರ್ಯಗಳ ರಚನೆ, ಪ್ರತಿಷ್ಟಾಪನೆ, ನಿರ್ಮಾಣ, ಕಾರ್ಯನಿರ್ವಹಣೆ, ಹಾಗು ಸೌಕರ್ಯಗಳ ಸೃಷ್ಟಿ. 2. ನಿರಂತರವಾಗಿ ಕೆಲಸ ಮುಂದುವರೆಯುವಿಕೆ, ನಿರ್ವಹಣೆ ಹಾಗೂ ದುರಸ್ತಿ. 3. ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದು, ರಚನೆ, ತಾಂತ್ರಿಕತೆ. 4. ಆಸ್ತಿಯ ಕ್ರೋಡೀಕರಣ, ಉತ್ಪಾದನೆ, ಉಪಾಯಗಳು. 5. ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವುದು, ಗುಣಮಟ್ಟ ಕಾದಿರಿಸುವಿಕೆ, ಗುಣಮಟ್ಟ ವರ್ದಿಸುವಿಕೆ. 6. ಹೊಸ ವಸ್ತುಗಳು, ತಾಂತ್ರಿಕತೆ, ಪ್ರಯೋಗ, ಸಂಶೋದನೆ ಹಾಗು ಅಭಿವೃದ್ದಿ. 7. ವ್ಯಾಪಾರೀಕರಣ ಹಾಗು ಕೈಗಾರಿಕಾ ವಸ್ತುಗಳ ಮಾರಾಟ ಪ್ರಕ್ರಿಯೆ. ಮೇಲಿನ ಅಂಶಗಳನ್ನು ಗಮನಿಸಿದರೆ ತಾಂತ್ರಿಕ ವೃತ್ತಿಯ ಬಾಹುಳ್ಯದ ಅಗಾಧತೆ ದೇಶದ ಆರ್ಥಿಕತೆಯ ಮೇಲಿನ ಸ್ವಾಮ್ಯದ ಅರಿವಾಗುತ್ತದೆ. ತಾಂತ್ರಿಕತೆಯ ವೈಶಿಷ್ಟ್ಯತೆ, ಬಳಕೆಯಲ್ಲಿರುವ ಸಂಪನ್ಮೂಲಗಳನ್ನು ಬಳಸಿ ಹೊಸ ಸಂಪನ್ಮೂಲಗಳನ್ನು ರಚಿಸುವುದು ಹಾಗೂ ಜನ ಜೀವನ ಶ್ರೀಮಂತ ಹಾಗೂ ಅರ್ಥಪೂರ್ಣವಾಗಿಸುವುದೇ ಆಗಿದೆ. ಕೈಗಾರಿಕಾ ತಾಂತ್ರಿಕತೆಯ ಬಾಹುಳ್ಯದಲ್ಲಿ ನಿರ್ವಹಣಾ ಕಾರ್ಯ ಅವಿಭಾಜ್ಯ ಅಂಗವಾಗಿದೆ.ಅತ್ಯಾಧುನಿಕ ತಾಂತ್ರಿಕತೆಯನ್ನು ಮೈಗೂಡಿಸಿಕೊಂಡಿರುವ ಆಧುನಿಕ ಕೈಗಾರಿಕಾ ಸಂಸ್ಥೆಗಳು ಯಂತ್ರಗಳ ಸುರಕ್ಷಿತ ನಿರಂತರ ಚಾಲನೆಯ ಮೇಲೆ ಬಹಳಷ್ಟು ಅವಲಂಬಿತವಾಗಿದೆ.ನಿರ್ವಹಣಾ ಕಾರ್ಯವು ತಾಂತ್ರಿಕ ವಿದ್ಯಾರ್ಹತೆಯುಳ್ಳ ಪದವೀಧರ ಅಭಯಂತರರಿಗೆ ಅನೇಕ ಉನ್ನತ ಅವಕಾಶಗಳನ್ನು ಕಲ್ಪಿಸಿದೆ. ವಿಧ್ಯುಚ್ಛಕ್ತಿ ಆಧುನಿಕ ಕೈಗಾರಿಕೆಯ ನಿರಂತರ ಚಲನೆಗೆ ಅತ್ಯವಶ್ಯವಾಗಿರುವುದರಿಂದ ವಿಧ್ಯುಚ್ಛಕ್ತಿ ಅಭಯಂತರರಿಗೆ ಬಹಳ ಬೇಡಿಕೆಯಿದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿರ್ವಹಣಾ ಕಾರ್ಯವು ಬಹುಬೇಡಿಕೆಯ ವೃತ್ತಿಯಾಗಿದೆ. ತುರ್ತುಪರಿಸ್ಥಿಗಳಲ್ಲಿ, ಯಂತ್ರದ ನಿಲುಗಡೆಯ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬ ಯಾವುದೇ ವೇಳೆಯಲ್ಲಿಯೂ ಅಭಾದಿತವಾಗಿ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ನಿರ್ವಹಣಾ ಕಾರ್ಯಕ್ಷೇತ್ರದ ಗಹನತೆಯನ್ನು ದೈಹಿಕವಾಗಿ ಹೆಚ್ಚಿಸಿದೆ. ಆದರೂ ಪಾಳಿಯಲ್ಲಿ ಕೆಲಸ ಮಾಡುವುದು ಕೆಲಸದ ಒಂದು ಅಂಗವಾಗಿದೆ. ಸಾಮಾನ್ಯ ಜನರ ವಾಸಸ್ಥಳಗಳಿಗಿಂತ ಬಹಳ ದೂರವಿರುವ ಕೈಗಾರಿಕಾ ವಸಾಹತುಗಳು,ಸಮುದ್ರದ ಮಧ್ಯದಲ್ಲಿ, ಮರುಭೂಮಿ, ಪರ್ವತ ಹಾಗೂ ಶಕ್ತಿ ಉತ್ಪಾದನಾ ಸ್ಥಳಗಳಲ್ಲಿ ಕೆಲಸ ಮಾಡುವ ನಿರ್ವಹಣಾ ಕೆಲಸಗಾರರಿಗೆ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಒತ್ತಡಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯದ ಅಗತ್ಯವಿರುತ್ತದೆ. ಪ್ರಾಯೋಗಿಕ ಪ್ರಯೋಗಗಳ ಬಗ್ಗೆ ಒಲವು ನಿರ್ವಹಣಾ ಕಾರ್ಯದ ಎರಡನೇ ಅತ್ಯುತ್ತಮ ಬೇಡಿಕೆಯಾಗಿದೆ. ನಿರ್ವಹಣಾ ಕೆಲಸವನ್ನು ವೃತ್ತಿಯನ್ನಾಗಿಸಿಕೊಳ್ಳುವರು ಕೈ ಕೆಸರು ಮಾಡಿಕೊಳ್ಳುವುದಕ್ಕೆ ಉತ್ಸುಕರಾಗಿರಬೇಕು. ಪ್ರಾಯೋಗಿಕತೆಯ ಅರಿವು ಅದರಲ್ಲೂ ಆಯಿಲ್(ಎಣ್ಣೆ)ಯನ್ನು ಬದಲಾವಣೆ ಮಾಡುವಾಗ , ಹಾಳಾದ ಬೇರಿಂಗ್ ಗಳನ್ನು ಬದಲಾವಣೆ ಮಾಡುವಾಗ, ಇನ್ನಿತರ ನೂರಾರು ಪ್ರಾಯೋಗಿಕ ಕೆಲಸಗಳನ್ನು ಮಾಡುವಾಗ ವೈಜ್ಣಾನಿಕ ಪ್ರಾಯೋಗಿಕತೆಯ ಅರಿವು ಇರಬೇಕಾದುದು ಅವಶ್ಯಕವಾಗಿದೆ. ನಿರ್ವಹಣಾಧಿಕಾರಿಯಿಂದ ಹಿಡಿದು ಸಹಾಯಕ ಕೆಲಸಗಾರರವರೆವಿಗೂ ಕೈ ತುಂಬಾ ಕೆಲಸವಿರುತ್ತದೆ. ಅಧಿಕಾರಶಾಹೀ ದರ್ಪ, ಅಹಂಕಾರಗಳು ನಿರ್ವಹಣಾ ಕಾರ್ಯದಲ್ಲಿ ಕೆಲಸ ಮಾಡಲಾರದು. ಆಧುನಿಕ ಕೈಗಾರಿಕೆಯು ಅನೇಕ ತಾಂತ್ರಿಕತೆಯ ಸಮ್ಮೇಳನತೆಯ ಸಹಾಯದಿಂದ ಕೆಲಸಕಾರ್ಯಗಳು ನಿರಂತರವಾಗಿ ಚಲನೆಯಲ್ಲಿರುತ್ತದೆ. ನಿರ್ವಹಣಾ ಅಭಯಂತರರು ಅಗಾಗ್ಗೆ ಅನೇಕ ಕಾರ್ಯಕ್ಷೇತ್ರಗಳಲ್ಲಿ ಕೆಲಸಮಾಡಬೇಕಾಗುತ್ತದೆ ಉದಾಹರಣೆ: ಸಿವಿಲ್,ಮೆಕ್ಯಾನಿಕಲ್, ವಿಧ್ಯುನ್ಮಾನ, ಇನ್ಸ್ಟುಮೆಂಟೇಷನ್, ಶೈತ್ಯೀಕರಣ.......ಇತ್ಯಾದಿ. ಹೀಗಾಗಿ ನಿರ್ವಹಣಾ ಅಭಯಂತರರು ಇತರೇ ವೈಜ್ಣಾನಿಕ, ತಾಂತ್ರಿಕ ವಿಷಯಗಳ ಅರಿವು ಹಾಗೂ ಪ್ರಾಯೋಗಿಕತೆಯ ಅವಶ್ಯಕತೆಯಿರುತ್ತದೆ. ಆದುದರಿಂದ ನಿರ್ವಹಣಾ ಅಭಯಂತರ "ಸಕಲ ಕಾರ್ಯಗಳ ಅರಿವು ಹಾಗೂ ಒಂದು ವಿಷಯದಲ್ಲಿ ಪಾಂಡಿತ್ಯ" ವನ್ನು ಪಡೆದಿರಬೇಕಾಗುತ್ತದೆ. ನಿರ್ವಹಣಾ ಕಾರ್ಯದ ಜೊತೆ ಅತಿ ಹತ್ತಿರದ ಸಂಭಂದವಿರುವುದು ಭದ್ರತೆಗೆ. ಯಂತ್ರಗಳನ್ನು ಸರಿಯಾಗಿ ನಿರ್ವಹಣೆಯ ಗಮನದಲ್ಲಿ ಇರಿಸದಿದ್ದರೆ ಅನೇಕ ಅಪಘಾತಗಳು/ಅವಘಡಗಳು ಸಂಭವಿಸಬಹುದು. ನಿರ್ವಹಣಾ ಅಭಯಂತರರು ದಿನಂಪ್ರತಿಯ ಸಣ್ಣಸಣ್ಣ ಕೆಲಸಗಳಿಗೆ ಅಚಲವಾದ ಗಮನವನ್ನು ಕೇಂದ್ರೀಕರಿಸಬೇಕು. ಬೇಜವಾಬ್ದಾರಿ ಹಾಗೂ ಕೆಲಸಕಾರ್ಯಗಳಲ್ಲಿ ವಾಮಮಾರ್ಗಗಳನ್ನು ಅನುಸರಿಸುವ ವ್ಯಕ್ತಿಯಿಂದ ನಿರ್ವಹಣಾ ಕೆಲಸಗಳಿಗೆ ಅಡಚಣೆಯುಂಟಾಗಿ ಜೀವ ಹಾಗೂ ಉತ್ಪಾದಕತೆಯಲ್ಲಿ ತೊಂದರೆಯುಂಟಾಗುತ್ತದೆ. ಆದುದರಿಂದ ನಿರ್ವಹಣಾ ಕೆಲಸವನ್ನು ವೃತ್ತಿಯನ್ನಾಗಿಸಿಕೊಳ್ಳುವ ವ್ಯಕ್ತಿಗಳಿಗೆ ಪ್ರಾಯೋಗಿಕತೆಯ ಅರಿವು, ವೃತ್ತಿಯ ಕಠಿಣತ್ವ ಹಾಗೂ ಇತರ ವಿಷಯಗಳನ್ನು ಮೈಗೂಡಿಸಿಕೊಳ್ಳುವ ನೈತಿಕತೆಯ ಜೊತೆಗೆ ಕೆಲಸ ಕಾರ್ಯಗಳಲ್ಲಿ ಶಿಸ್ತು ಹಾಗೂ ಸಂಯಮದ ಅವಶ್ಯಕತೆ ಹೆಚ್ಚಾಗಿರುತ್ತದೆ. ಮೇಲಿನ ಅಂಶಗಳು ಒಬ್ಬ ಉತ್ತಮ ನಿರ್ವಹಣಾ ಅಭಯಂತರನ ಮುಖ್ಯ ಲಕ್ಷಣಗಳಾಗಿವೆ. ನಿರ್ವಹಣಾ ವೃತ್ತಿಪರರಿಗೆ ತಮ್ಮ ಕೆಲಸ ಅನನ್ಯವಾದಂತಹ ಸ್ಥಾನವನ್ನು ಕೈಗಾರಿಕಾ ಸಂಸ್ಥೆಗಳಲ್ಲಿ ಒದಗಿಸಿಕೊಟ್ಟಿದೆ. ಬೇರೆ ವೃತ್ತಿಗಳಂತೆ ನಿರ್ವಹಣಾ ಅಭಯಂತರನ ಜ್ಞಾನ, ಪ್ರೌಡಿಮೆ ಒಂದು ಕೈಗಾರಿಕೆಗೆ ಮಾತ್ರ ಮೀಸಲಾಗಿರದೆ ಎಲ್ಲಾ ಕೈಗಾರಿಕಾ ಸಂಸ್ಥೆಗಳಲ್ಲೂ ಕೆಲಸ ಮಾಡುವ ನೈತಿಕತೆಯನ್ನು ಹೊಂದಿರುತ್ತಾರೆ. ಹೀಗಾಗಿ ನಿರ್ವಹಣಾ ಅಭಯಂತರರು ಒಂದು ಕೈಗಾರಿಕೆಯಿಂದ ಮತ್ತೊಂದು ಕೈಗಾರಿಕೆಗೆ ಬಹುಬೇಗನೆ ಹೊಂದಿಕೊಳ್ಳುವವರಾಗಿರುತ್ತಾರೆ. ನಿರ್ವಹಣಾ ಅಭಯಂತರರನ್ನು ಕೈಗಾರಿಕೆಗಳು ಬಹು ಬೇಗನೆ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ನಿರ್ವಹಣಾ ವೃತ್ತಿಯ ಬಾಗುವಿಕೆಯ ಲಕ್ಷಣ ಅನೇಕ ಇತರ ವೃತ್ತಿಪರರು ಮತ್ಸರ ಪಡುವಂತಾಗಿದೆ. ನಿರ್ವಹಣಾ ವೃತ್ತಿಯ ಕಾರ್ಯಕ್ಷೇತ್ರ ಕೆಲಸದ ಅವಕಾಶಗಳು ಈ ಕೆಳಗಿನ ಕ್ಷೇತ್ರಗಳಲ್ಲಿ ಹೆಚ್ಚಾಗಿವೆ. ತಾರೆಯರ ಉಪಹಾರ ಕೇಂದ್ರಗಳು, ವಾಣಿಜ್ಯ ಸಂಕೀರ್ಣಗಳು, ಶಕ್ತಿ ಉತ್ಪಾದನಾ ಸಂಸ್ಥೆಗಳು, ಪೆಟ್ರೋಲಿಯಮ್ ರಾಸಾಯನಿಕ ಉತ್ಪಾದನಾ ಸಂಸ್ಥೆಗಳು, ವಾಹನ ತಯಾರಿಕಾ ಘಟಕಗಳು ಹಾಗೂ ಸಾಮಾನ್ಯ ಕೈಗಾರಿಕಾ ಸಂಸ್ಥೆಗಳು. ಸಂಸ್ಥೆಯಲ್ಲಿ ಮುನ್ನಡೆ ಹಾಗೂ ಜೀವನದಲ್ಲಿ ಮುನ್ನಡೆ ವ್ಯಕ್ತಿಗತವಾದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಸಂಸ್ಥೆಯ ನೀತಿ-ನಿಯಮಗಳ ಮೇಲೂ ವ್ಯಕ್ತಿಯೋರ್ವನ ಮೇಲೋಭಿವೃದ್ದಿ ಅವಲಂಬಿತವಾಗಿದೆ. ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೋರ್ವನ ಸಾಮರ್ಥ್ಯ ಅಭಿವೃದ್ದಿಯ ಅಳತೆಗೋಲಾಗಿ ಸಂಸ್ಥೆಗಳು ಅಳವಡಿಸಿಕೊಂಡಿವೆ. ಹತ್ತು-ಹನ್ನೆರಡು ವರ್ಷಗಳ ಕಾರ್ಯಾನುಭವ ಸಂಸ್ಥೆಯೊಂದರಲ್ಲಿ ಉಚ್ಚಮಟ್ಟದ ಹುದ್ದೆ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸಬಹುದಾಗಿದೆ. ಔಷದ ಕಾರ್ಖಾನೆಗಳು ಅದರಲ್ಲೂ ಬಹುರಾಷ್ಟ್ರೀಯ ಸಂಸ್ಥೆಗಳು ವೇತನ ಕೊಡುವಿಕೆಯಲ್ಲಿ ಮೊದಲ ಸ್ಥಾನವನ್ನು ಪೆಟ್ರೋಲಿಯಮ್ ರಸಾಯನಿಕಗಳನ್ನು ತಯಾರಿಸುವವರು ಹಾಗೂ ಮೂರನೆಯ ಸ್ಥಾನದಲ್ಲಿ ರಸಾಯನಿಕಗಳನ್ನು ತಯಾರಿಸುವ ಸಂಸ್ಥೆಗಳಿವೆ. ಹೆಚ್ಚಿನ ಅವಕಾಶಗಳು ಅದರಲ್ಲೂ ಉತ್ತಮ ಪದವಿಯ ಜೊತೆಗೆ ಅನುಭವ ಹೊಂದಿದ ಅಭಯಂತರರಿಗೆ ಸಲಹಾಕೇಂದ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಅನೇಕ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ಸಲಹಾಕೇಂದ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ- ನಿರ್ವಹಣೆಯ ಬಗ್ಗೆ, ಹೊಸ ಬದಲಾವಣೆಗಳ ವಿಷಯಗಳಲ್ಲಿ ಸಲಹಾಕೇಂದ್ರಗಳ ಮೇಲೆ ಅವಲಂಬಿತರಾಗಿದ್ದಾರೆ. ಓಳ್ಳೆಯ ಜನರ ಪರಿಚಯದಿಂದ ನಿರ್ವಹಣಾ ಕಾರ್ಯ ಲಾಭದಾಯಕ ವೃತ್ತಿಯೆನಿಸಿದೆ. ಮತ್ತೊಂದು ವ್ಯಕ್ತಿಗತವಾದ ಸಂಸ್ಥೆಯೆಂದರೆ ಗುತ್ತಿಗೆ ಆಧಾರದ ಮೇಲೆ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು. ಅನೇಕ ಕಾರ್ಖಾನೆಗಳು, ಸಂಸ್ಥೆಗಳು ಅದರಲ್ಲೂ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ನಿರ್ವಹಣಾ ಕಾರ್ಯದ ಜವಾಬ್ದಾರಿಯನ್ನು ಖಾಸಗೀ ಸಂಸ್ಥೆಗಳಿಗೆ ವಹಿಸುತ್ತಿದೆ. ಮುಂದೆಯೂ ಈ ರೀತಿಯ ಒಲವು ಹೆಚ್ಚಾಗಲಿದೆ. ನಿರ್ವಹಣಾ ಕಾರ್ಯವು ಬಹುಮುಖ್ಯವಾದ ಕೆಲಸವಾದರೂ ಆಡಳಿತವರ್ಗದವರಿಂದ ತುಚ್ಛವಾಗಿ ಕಾಣಲ್ಪಟ್ಟಿದೆ. ನಿಜ ಹೇಳಬೇಕೆಂದರೆ ನಿರ್ವಹಣಾಕಾರ್ಯವು ಕಡೆಗಣಿಸಲ್ಪಟ್ಟ ಕಾಯಕವಾಗಿದೆ. ನಿರ್ವಹಣಾ ವೃತ್ತಿಪರರ ಪ್ರಾಮುಖ್ಯತೆಯನ್ನು ಪ್ರಖ್ಯಾತ ಸಂಸ್ಥೆಗಳೂ ಕಡೆಗಣಿಸಿವೆ. ಪ್ರಸ್ತುತ ಕಡೆಗಣಿಸಿದ ಭಾವನೆ ಕ್ಷೀಣಿಸುತ್ತಿದೆಯಾದರೂ ಒಂದು ಒಳ್ಳೆಯ ಸ್ಥಾನಮಾನ ಸಿಗಲು ಬಹಳ ಕಾಲದ ಅವಶ್ಯಕತೆ ಹಾಗೂ ಆಡಳಿತವರ್ಗಗಳ ದೃಷ್ಟಿಕೋನ ಬದಲಾಗ ಬೇಕು. ಗುಂಪಿನ ನಾಯಕತ್ವ ಬಯಸುವ ವ್ಯಕ್ತಿಯ ನಡುವಳಿಕೆ, ಗುಣ, ಜ್ಞಾನ, ಸರಿಯಾಗಿ ಸಲಹೆ, ಸಹಾಯ ಹಸ್ತ ಅದರ ಸದಸ್ಯರ ಮೇಲೆ ಅಪಾರ ಪರಿಣಾಮ ಬೀರಲಿದೆ. ಇತ್ತೀಚೆಗೆ ಯಾವ ಗುಣವೂ ಇಲ್ಲದ ಕೇವಲ ಸಂಬಾಳಿಸುವ ಸಾಮರ್ಥವಿರುವವರು ನಿರ್ವಹಣಾ ಗುಂಪಿನ ನಾಯಕರಾಗಿ ಅಧಿಕಾರವರ್ಗ ನೇಮಿಸುತ್ತಿರುವುದು ಅಪಾಯದ ಎಚ್ಚರಿಕೆ ಗಂಟೆಯಾಗಿದೆ. ಅಂತಹವರಿಂದ ತಂಡದ ಕೆಲಸಕ್ಕೆ ಹೊಡೆತಬೀಳಲಿದೆ ,ಸ್ವಾರ್ಥ ತಾಂಡವವಾಡಿ ತಂಡದಲ್ಲಿ ತಾಳಮೇಳ ತಪ್ಪಿ ಸಂಸ್ಥೆಗೆ ಹೊಡೆತಬೀಳಲಿದೆ . ನಿರ್ವಹಣಾ ವೃತ್ತಿಪರರು ಅಪಘಾತಗಳಿಗೆ ತೀರ ಹತ್ತಿರವಿರುತ್ತಾರೆ, ಹೀಗಾಗಿ ಸಣ್ಣ-ಪುಟ್ಟ ಅಪಘಾತಗಳು ಘಟಿಸುತ್ತಿರುತ್ತವೆ. ವಿಷಯುಕ್ತ ಅನಿಲ, ಬೆಂಕಿ, ಹಾಗೂ ಆಮ್ಲ.... ಇತ್ಯಾದಿ ಗಳನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕು. ಎಚ್ಚರ ತಪ್ಪಿದಲ್ಲಿ ಕರಾಳ ಅಪಘಾತಗಳು ಸಂಭವಿಸಿ ವ್ಯಕ್ತಿಯ ಜೀವಕ್ಕೆ ಅಪಾಯವುಂಟಾಗಬಹುದು ಹಾಗೂ ಆಸ್ತಿ-ಪಾಸ್ತಿಯ ನಷ್ಟವೂ ಸಂಭವಿಸಬಹುದು. ಕಾರ್ಖಾನೆಗಳಲ್ಲಿ ಯಂತ್ರಗಳು ಚಲಿಸುವಾಗ ಶಬ್ದವು ಉಂಟಾಗಿ ಶಬ್ದಮಾಲಿನ್ಯದಿಂದ ಕಿವುಡುತನ ಬರುವ ಸಂಭವವೂ ಹೆಚ್ಚು. ವಿಷಯುಕ್ತ ಅನಿಲ,ಧೂಳು ಹಾಗೂ ಪರಿಸರ ಮಾಲಿನ್ಯದಿಂದ ಶ್ವಾಸಕೋಶಕ್ಕೆ ಸಂಭಂದಿಸಿದ ಕಾಯಿಲೆಗಳು ಬರುವ ಸಂಭವಗಳು ಹೆಚ್ಚು. ನವನವೀನ ಕಾರ್ಯತಂತ್ರಗಳು, ತಾಂತ್ರಿಕತೆಯಿಂದ ಹಳೆಯ ಕಾರ್ಯತಂತ್ರಗಳು ಬೆಲೆಯನ್ನು ಕಳೆದುಕೊಂಡು ನಿರ್ವಹಣಾ ಕಾರ್ಯಕ್ಕೆ ಪ್ರಾಮುಖ್ಯತೆ ತಂದುಕೊಡುತ್ತಿದೆ. ಹೆಚ್ಚುತ್ತಿರುವ ತಾಂತ್ರಿಕತೆಯಿಂದಾಗಿ ಕಾರ್ಖಾನೆಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ನಿರ್ವಹಣಾ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರಸ್ತುತ ಜಾಗತೀಕರಣದಿಂದಾಗಿ ನಿರ್ವಹಣಾಕಾರ್ಯದ ಬಗ್ಗೆ ಇದ್ದ ಹಳೆಯ ಧೋರಣೆ ಆಡಳಿತವರ್ಗಗಳಲ್ಲಿ ಕಡಿಮೆಯಾಗುತ್ತಿದೆ. ನಿರ್ವಹಣಾ ವೃತ್ತಿಪರರು ಹೊಸ ಹೊಸ ಕಾರ್ಯತಂತ್ರಗಳನ್ನು, ವಿಧಾನಗಳನ್ನು ಕಲಿಯುವ ಹಂಬಲವುಳ್ಳವರಾಗಿರಬೇಕಾದುದು ಪ್ರಸ್ತುತ ಕಾಲದ ಬೇಡಿಕೆಯಾಗಿದೆ. ಹೊಸದಾಗಿ ನಿರ್ವಹಣಾ ಕಾರ್ಯವನ್ನು ವೃತ್ತಿಯನ್ನಾಗಿ ಸ್ಚೀಕರಿಸುವವರಿಗೆ ಇಂದು ಕಾಲಸೂಕ್ತವಾಗಿದೆ ಏಕೆಂದರೆ ಹೊಸ ಹೊಸ ಸಂಸ್ಥೆಗಳು ಭಾರತಕ್ಕೆ ಕಾಲಿಡುತ್ತಿದ್ದು ವಾಹನ ತಯಾರಿಕಾ ಘಟಕಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಸುರಕ್ಷಿತ ಸಾದನಗಳನ್ನು, ಕಾರ್ಯವಿದಾನಗಳನ್ನು ಅಳವಡಿಸಿಕೊಳ್ಳುವುದರಿಂದ ಅಪಘಾತಗಳು ಕಡಿಮೆಯಾಗಿ ವ್ಯಕ್ತಿ ಆರೋಗ್ಯದಲ್ಲೂ ಸುಧಾರಣೆಯನ್ನು ಕಾಣಬಹುದಾಗಿದೆ. ನವೀನ ತಾಂತ್ರಿಕತೆಯಲ್ಲಿ ಭದ್ರತೆಗೆ ಹೆಚ್ಚಿನ ಗಮನವನ್ನು ಕೊಡಲಾಗಿದೆ. ನವೀನ ಭದ್ರತಾ ತಾಂತ್ರಿಕತೆಯಿಂದಾಗಿ ಕಾರ್ಖಾನೆಗಳಲ್ಲಿ ಕೆಲಸಮಾಡುವವರಿಗೆ ನಿರಾಳತೆಯಿದೆ. ಹೊಸ ತಾಂತ್ರಿಕತೆ, ವಿಧಿ-ವಿಧಾನಗಳು ಸುರಕ್ಷಿತ ಕೆಲಸದ ಪರಿಸರವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುವತ್ತ ಧಾಪುಗಾಲಿಡುತ್ತಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ