ಭಾನುವಾರ, ಮೇ 12, 2013

ಮನಸ್ಸು ಭಾರವಾಯಿತು. ಕನ್ನಡನಾಡಿಗೆ ಇನ್ನೂ ಸಮಯ ಬಂದಿಲ್ಲವೆನಿಸಿತು......

 ಈ ಪತ್ರ ಸುಮಾರು ಹತ್ತು ವರ್ಷಗಳ ಹಿಂದೆ ಬರೆದದ್ದು. ಸಂದರ್ಭ ಹೇಗಿತ್ತೆಂದರೆ ಶ್ರೀಯುತ ಅಂಬರೀಷ್ ರವರು ಚಲನಚಿತ್ರರಂಗದಿಂದ ಹೆಸರುಗಳಿಸಿದ ನಂತರ ರಾಜಕೀಯ ಆಶ್ರಯ ಬಯಸಿ ಸೂಕ್ತ ರಾಜಕೀಯ ಪಕ್ಷಕ್ಕಾಗಿ ಹುಡುಕಾಟ ನಡೆಸಿದ್ದರು.ಜನತಾದಳದ ಶ್ರೀ ದೇವೇಗೌಡರ ಜೊತೆಗಿನ ಒಡನಾಟವೂ ಹೆಚ್ಚಿತ್ತು.ಎಲ್ಲರೂ ಅವರು ಜನತಾದಳ ಸೇರುತ್ತಾರೆಂದು ತಿಳಿದ್ದಿದ್ದರು ಆದರೆ ಆದದ್ದೇ ಬೇರೆ. ಆ ಸಂದರ್ಭದಲ್ಲಿ ಉದಯ ಟಿವಿಯಲ್ಲಿ ಒಂದು ಕಾರ್ಯಕ್ರಮಕ್ಕಾಗಿ ಈ ಪತ್ರ ಬರೆದೆ. ಆ ಕಾರ್ಯಕ್ರಮ ನಡೆಸಿಕೊಟ್ಟಿದ್ದು "ನಮ್ಮೂರ ಮಂದಾರ ಹೂವೇ" ಖ್ಯಾತಿಯ ವಿನಾಯಕ ಜೋಷಿ. ಈ ಪತ್ರದ ಸಾರಾಂಶವನ್ನು ಅಂಬರೀಷರ ಮುಂದೆ ವಿನಾಯಕ ಜೋಷಿ ಓದಿದ್ದರು. ಆ ಪತ್ರದ ಒಕ್ಕಣೆ ಹೀಗಿದೆ.

ಆತ್ಮೀಯ ನಾಯಕ ನಟ ಶ್ರೀ ಅಂಬರೀಷ್ ರವರಿಗೆ ಪ್ರೀತಿಯ ಅಭಿಮಾನಿಯ ಅನಂತ ನಮನಗಳು ಹಾಗು ಶುಭಾಷಯಗಳು.ತಮ್ಮ ಚಿತ್ರಗಳ ಅನೇಕ ಪಾತ್ರಗಳು ನನ್ನಂತಹ ಅನೇಕ ಕನ್ನಡ ಅಭಿಮಾನಿಗಳಿಗೆ ಆದರ್ಶಪ್ರಾಯವಾಗಿವೆ. ಮೂವತ್ತು ವರ್ಷಕ್ಕೂ ಹೆಚ್ಚು ಸುದೀರ್ಘ ಕನ್ನಡ ಕಲಾದೇವಿಯ ಸೇವೆಯಲ್ಲಿ ನಿರತರಾಗಿದ್ದೀರಿ. ಮುಂದೆಯೂ ಕನ್ನಡ ತಾಯಿಯ ಸೇವೆ ನಿರಂತರವಾಗಿ ನಡೆಯಲಿ. ತೆರೆಯ ಮೇಲೆ ನಿಮ್ಮನ್ನು ನೋಡುವುದಕ್ಕಿಂತ, ನವ ಪ್ರತಿಭೆಗಳನ್ನು ಶೋಧಿಸುವ, ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಚಟುವಟಿಕೆಗಳು ಹೆಚ್ಚಾಗಲಿ ಎಂದು ಬಯಸುತ್ತೇನೆ.

ರಾಜಕೀಯದಲ್ಲೂ ತಮ್ಮ ಹೆಸರು ಚಿರಪರಿಚಿತ.ಚಲನಚಿತ್ರದ ಮೂಲಕ ಗಳಿಸಿದ ಹೆಸರಿನಿಂದ ರಾಜಕೀಯದಲ್ಲೂ ಮೇಲೆ ಬರುವ ತಮ್ಮ ಉದ್ದೇಶ ಈಡೇರಿದೆ. ಕೇವಲ ತೆರೆಯಮೇಲೆ ನಾಯಕರಾಗಿದ್ದ ತಾವು ನಿಜ ಜೀವನದಲ್ಲೂ ನಾಯಕರಾಗುವ ಎಲ್ಲಾ ಲಕ್ಷಣಗಳು ತಮ್ಮಲ್ಲಿ ಅಗಾಧವಾಗಿದೆ. ಇಂದಿನ ಭ್ರಷ್ಟರಾಜಕಾರಣದಲ್ಲಿ ತಮ್ಮಂತಹ ಕಲಿಯುಗ ಕರ್ಣರ ಅವಶ್ಯಕತೆ ರಾಜ್ಯದ ಜನತೆಗೆ ಹೆಚ್ಚಾಗಿದೆ. ರಾಜ್ಯದ ಅಭಿವೃದ್ಧಿಯ ಕೆಲಸಗಳು ಲಂಚ,ಲಂಪಟತನಗಳಿಂದ ಕುಂಠಿತವಾಗಿವೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಕನಸುಗಳು ಕನಸಾಗಿಯೇ ಉಳಿಯುತ್ತಿದೆ. ಕಾವೇರಿ ನದಿ ಕರ್ನಾಟಕದ ಕಣ್ಣೀರ ಕಥೆಯಾಗದೆ ರಾಜ್ಯದ ಜೀವನಾಡಿಯಾಗಬೇಕಾಗಿದೆ. ಒಂದು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರದೆ, ನಾಡು,ನುಡಿ,ಜಲ,ಸಂಸ್ಕೃತಿ,ಅಭಿವೃದ್ಧಿ,ಮಾನವೀಯ ಮೌಲ್ಯಗಳ ಹರಿಕಾರರಾಗಬೇಕು- ಇದೇ ನನ್ನ ನಿಮ್ಮಲ್ಲಿಟ್ಟಿರುವ ಕನಸು. ಯುವ ಜನತೆ ನಿಮ್ಮ ಹಿಂದೆ ಅಪಾರವಾಗಿದ್ದಾರೆ. ಅಭಿವೃದ್ಧಿ,ಶಾಂತಿ,ನೆಮ್ಮದಿ,ಮಾನವೀಯ ಮೌಲ್ಯಗಳು ನಿಮ್ಮ ಉಸಿರಾಗಬೇಕು,ಆ ಉಸಿರು ಈ ನಾಡಿನ ಜೀವವಾಗಬೇಕು. ಇದುವೇ ನಾವು ನಿಮ್ಮಲ್ಲಿಟ್ಟಿರುವ ಭರವಸೆ,ನಾಡ ಜನತೆಯ ಕನಸು.

ನಾನು ಬಯಸಿದ್ದೇ ಅವರು ಯಾವುದೇ ಪಕ್ಷ ಸೇರದೆ ತಮ್ಮದೇ ಆದ ಪಕ್ಷವೊಂದನ್ನು ಸ್ಥಾಪಿಸಬೇಕು ಎಂದು. ಆದರೆ ಆದದ್ದೇ ಬೇರೆ. ಈಗ ಎಲ್ಲವೂ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಅವರು ರಾಷ್ಟ್ರೀಯ ಪಕ್ಷವನ್ನು ಸೇರಿದರು. ಇದೀಗ ಹತ್ತು ವರ್ಷಕ್ಕೂ ಹೆಚ್ಚು ಕಾಲ ಕಳೆದುಹೋಗಿದೆ. ಅವರ ರಾಜಕೀಯ ಭವಿಷ್ಯ ಹೇಗಿತ್ತು? ನಮ್ಮ ನಾಡು,ನುಡಿ,ಜಲ, ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಬದ್ಧತೆ ಎಲ್ಲವೂ ನಾಡನ ಜನತೆಗೆ ತಿಳಿದಿದೆ.

ಇಷ್ಟೆಲ್ಲಾ ಏಕೆ ನೆನಪಾಯಿತೆಂದರೆ ಇತ್ತೀಚೆಗಷ್ಟೇ ಮುಗಿದ ರಾಜ್ಯದ ಚುನಾವಣೆಗೆ ಮುನ್ನ  ಆದ ಅದರಲ್ಲೂ ಕಲಿಯುಗ ಕರ್ಣ ಅಂಬರೀಷ್ ರವರಿಗೆ ಸಂಬಂಧಿಸಿದ ಹಾಗೆ ನಡೆದ ಘಟನೆಗಳು ನನ್ನನ್ನು ಹತ್ತು ವರ್ಷಗಳ ಹಿಂದಕ್ಕೆ ಕರೆದೊಯ್ಯಿತು. ಅವರಿಗೆ ಬರೆದ ಪತ್ರವ ಜೋಪಾನವಾಗಿ ಎತ್ತಿಟ್ಟಿದ್ದೆ ಅದರ ನೆನಪಾಯಿತು. ಅವರು ಸ್ವಲ್ಪ ವ್ಯಕ್ತಿಗತ ಶಿಸ್ತು ಹಾಗು ರಾಜ್ಯದ ಜನತೆಯ ಆಶೋತ್ತರಗಳಿಗೆ ಸರಿಯಾಗಿ ಸ್ಪಂದಿಸಿದ್ದರೆ ಈ ಸಂದರ್ಭ ಸೃಷ್ಟಿಯಾಗುತ್ತಲೇ ಇರಲಿಲ್ಲವೆನಿಸಿತು. ಮನಸ್ಸು ಭಾರವಾಯಿತು. ಕನ್ನಡನಾಡಿಗೆ ಇನ್ನೂ ಸಮಯ ಬಂದಿಲ್ಲವೆನಿಸಿತು......


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ