ಬುಧವಾರ, ಅಕ್ಟೋಬರ್ 31, 2012

ಶಿಸ್ತು ಜೀವನದ ಬೆನ್ನುಮೂಳೆ


ಒಂದು ಒಳ್ಳೆಯ ಸ್ಥಾನ ಪಡೆಯಬೇಕಾದರೆ ನಾವು ಓಳ್ಳೆಯ ನಡತೆಯನ್ನು ಕಲಿಯಬೇಕು ಹಾಗು ದಿನನಿತ್ಯದ ವ್ಯವಹಾರಗಳಲ್ಲಿ ರೂಡಿಸಿಕೊಳ್ಳಬೇಕು.
ಕೆಲಸದ ಸ್ಥಳಕ್ಕೆ ತಡವಾಗಿ ಬರುವುದನ್ನು ಅಭ್ಯಾಸಮಾಡಿಕೊಳ್ಳಬೇಡಿ. ನೆನಪಿರಲಿ " ಶಿಸ್ತು ಜೀವನದ ಬೆನ್ನುಮೂಳೆ". ನಾವು ಸರಿಯಾದ ಸಮಯದಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳದೇ ಹೋದರೆ ನಮ್ಮ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಹಿಂದುಳಿಯಬೇಕಾಗುತ್ತದೆ.

ಒಬ್ಬ ಉದ್ಯೋಗಿಯಾಗಿ ಕೆಲಸದ ಸ್ಥಳದಲಿ ಸಮಯಕ್ಕೆ ಸರಿಯಾಗಿ ಇರಬೇಕಾದದ್ದು ಪ್ರತಿಯೊಬ್ಬನ/ಳ ಕರ್ತವ್ಯವಾಗಿದೆ.ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಕೆಲಸಕ್ಕೆ ವಿಳಂಭವಾಗುವುದು ನಮ್ಮ/ನಿಮ್ಮ ಹಿಡಿತದಿಂದ ಹೊರತಾಗಿರುತ್ತದೆ. ಹಾಗೆಂದರೆ ಪ್ರತಿದಿನವೂ ಕೆಲಸಕ್ಕೆ ತಡವಾಗಿ ಹೋಗಬಹುದು ಎಂದು ಅರ್ಥವಲ್ಲ ಹಾಗು ಅದು ಸಾಧುವೂ ಅಲ್ಲ.ಮೇಲೆ ಹೇಳಿದಂತೆ ನಾವು ಮೊದಲು ನಿಗಧಿಪಡಿಸಿದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪದೇ ಇದ್ದರೆ, ಜನರಿಗೆ ನಮ್ಮ ಬಗ್ಗೆ ನಂಬಿಕೆ ಹುಟ್ಟುವುದಿಲ್ಲ. ಎಲ್ಲರ ಮುಂದೆಯೂ " ಕ್ಷಮಿಸಿ ತಡವಾಯಿತು" ಎಂದು ಹಲ್ಲುಗಿಂಜಬೇಕಾಗುತ್ತದೆ. ಎಷ್ಟೋಂದು ಮುಜುಗರವಲ್ಲವೇ? ಆದಾಗ್ಯೂ ಜನರ ಮುಖಭಾವಗಳನ್ನು ನೀವು ಗಮನಿಸಿದರೆ ನೀವು ನಿಜವಾಗಿಲೂ ನೇಣುಹಾಕಿಕ್ಕೊಳ್ಳಬೇಕೆನಿಸದೆ ಇರಲಾರದು.ಇಂತಹ ನಡುವಳಿಕೆಗಳು ಮತ್ತೆ-ಮತ್ತೆ ಸಂಭವಿಸಿದರೆ ಮತ್ತೊಮ್ಮೆ ಯಾರೂ ನಮ್ಮನ್ನು ನಂಬಲಾರರು ಹಾಗು ಕರೆಯಲಾರರು.

ಪ್ರತಿಯೊಬ್ಬರಿಗೂ ತಮ್ಮದೇ ಆದ ತೊಂದರೆಗಳು ಇದ್ದೇ ಇರುತ್ತದೆ ಅದಕ್ಕೆ ಉದ್ಯೋಗದಾತರಲ್ಲಿ ತಡವಾಗಿ ಬರುವುದಕ್ಕೆ ಮತ್ತೆ-ಮತ್ತೆ ಅಪ್ಪಣೆಯನ್ನು ಕೇಳಬೇಡಿ.ತಡವಾಗಿ ಬರುವುದಕ್ಕೆ ಅಥವಾ ಬೇಗ ಹೋಗುವುದಕ್ಕೆ ಅಂತಹ ತೊಂದರೆ/ಕಾರಣಗಳು ಕಾರಣವಾಗಬಾರದು. ಕೆಲವೊಂದು ಸಂದರ್ಭಗಳಲ್ಲಿ ಬೇಗ ಅಥವಾ ತಡವಾಗಿ ಹೋಗಲೇಬೇಕಾದರೆ ಹೋಗಿ, ಆದರೆ ಅದನ್ನೇ ಬಂಡವಾಳವನ್ನಾಗಿಸಿಕೊಂಡು ಮತ್ತೆ-ಮತ್ತೆ ಅಂತಹುದನ್ನು ಅಭ್ಯಾಸ ಮಾಡಿಕೊಳ್ಳಬೇಡಿ. ಮುಂದೆ ಅಂತಹ ಅಭ್ಯಾಸ ನಿಮಗೆ ಕೆಟ್ಟ ಹೆಸರನ್ನು ತಂದೇ ತರುತ್ತದೆ.

ನೀವು ಸಮಯವನ್ನು ಕಾಯುವವರೇ ಅಥವಾ ಸಮಯವನ್ನು ಪಾಲನೆ ಮಾಡುವವರೇ? ಅವಶ್ಯಕತೆ ಇದ್ದಲ್ಲಿ ಹೆಚ್ಚು ಸಮಯ ಕೆಲಸಮಾಡುವ ಬದ್ದತೆ ನಿಮ್ಮಲ್ಲಿರಲಿ ಅದೂ ಹೃದಯಪೂರ್ವಕವಾಗಿ, ಬೇರೆಯವರ ಒತ್ತಾಯಪೂರ್ವಕವಾಗಿ ಅಲ್ಲ. ಅದರರ್ಥ ಪ್ರತಿದಿನವೂ ಹೆಚ್ಚು ಸಮಯ ಕೆಲಸಮಾಡಿ ಎಂದಲ್ಲ. ಅವಶ್ಯಕತೆಯಿದ್ದಾಗ ಮಾತ್ರ. ಯಾವುದಾದರೂ ಮುಖ್ಯವಾದ ಕೆಲಸ ಅಂದೇ ಪೂರ್ಣಗೊಳ್ಳಬೇಕಿರುತ್ತದೆ ಅಥವಾ ತುರ್ತಾಗಿ ಅಂದೇ ಮುಗಿಸುವ ಅವಶ್ಯಕತೆಯಿರುತ್ತದೆ. ಅಂತಹ ಸಂದರ್ಭಗಳಲ್ಲಿ ಹೃದಯಪೂರ್ವಕವಾಗಿ ನಿಮ್ಮ ಸಮಯವನ್ನು ಸಂಸ್ಥೆಗೆ ತ್ಯಾಗದ ಮನೋಭಾವದಿಂದ ಸಮರ್ಪಿಸಿ. ನಿಮ್ಮ ಈ ನೈತಿಕ ನಡುವಳಿಕೆಗೆ, ಕಾರ್ಯಕ್ಷಮತೆಗೆ ದಕ್ಕಬೇಕಾದಂತಹ ಗೌರವ,ಸ್ಥಾನಮಾನ ಮುಂದೆ ದೊರಕೇ ದೊರಕುತ್ತದೆ.

ಕೆಲಸಗಳನ್ನೆಂದೂ ಮುಂದಕ್ಕೆ ಹಾಕಬೇಡಿ. ಕೆಲಸಗಳನ್ನು ಒಂದೊಂದರಂತೆ ಮಾಡದೆ, ’ಅಂದು ಮಾಡುತ್ತೇನೆ,ಇಂದು ಮಾಡುತ್ತೇನೆ, ಅಗೋ ಆಯಿತು, ಇಗೋ ಆಯಿತು’ ಎನ್ನುವಂತಹ ಮನೋಭಾವವನ್ನು ಎಂದೆಂದಿಗೂ ಬೆಳಸಿಕೊಳ್ಳಬೇಡಿ.ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ. ಸಮಯವನ್ನು ಕಳೆಯದೆ, ನಿಮ್ಮ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿ ಎಲ್ಲರೂ ಮೆಚ್ಚುವಂತೆ!.
ಇಂದು ಮಾಡಬೇಕಾದುದನ್ನು ಈ ಕ್ಷಣವೇ ಆರಂಭಿಸಿ,ನಾಳೆಯೆನ್ನುವುದು ಬೇಡ. ನೆನಪಿರಲಿ ’ನಾಳೆ ಎಂದರೆ ಹಾಳು’ ಎಂಬ ಗಾದೆ.ನಾಳೆ...ನಾಳೆ ಎಂದು ಮುಂದೆ ಹಾಕಿದರೆ ಮನಸ್ಸಿನಲ್ಲಿ ಸೋಮಾರಿತನವುಂಟಾಗಿ ಯಾವ ಕೆಲಸವೂ ಪೂರ್ತಿಯಾಗದೆ ಕೊನೆಗೆ ಭೂತಾಕಾರವಾಗಿ ಬೆಳೆದು ನಿಮ್ಮನ್ನು ಕಾಡಬಹುದು.ಸಮಯವನ್ನು ಕಳೆಯುವುದು ಅಥವಾ ಕೊಲ್ಲುವುದೆಂದರೆ ಜೀವನದಲ್ಲಿ ಸೋಲು ಅಥವಾ ಅಧಃಪತನವೆಂಬುದನ್ನು ನೀವು ಮನಗಾಣಬೇಕು.

ಸಮಯ ಮೌಲ್ಯಯುತವಾದುದು ಎಂಬುದು ನಿಮಗೆ ತಿಳಿದಿದೆ, ಬರಿ ತಿಳಿದಿದ್ದರೆ ಸಾಲದು ಅದರ ಮಹತ್ವವನ್ನೂ ಅರಿತಿದ್ದರೆ ಒಳ್ಳೆಯದು.ಸಮಯವನ್ನು ಹಣವನ್ನಾಗಿ ಪರಿವರ್ತಿಸುವುದು ಕಾಯಕದಿಂದ ಮಾತ್ರ ಎಂಬುದು ನಿಮಗೆ ಗೊತ್ತಿರಲಿ. ಕೆಲಸವಿಲ್ಲದ ಸಮಯದಲ್ಲಿ ಬೇಡದ ವಿಷಯಗಳನ್ನು ಚರ್ಚಿಸಿ, ಗಾಳಿಮಾತು,ಊಹಾಪೋಹಗಳು ಹರಡದಂತೆ ಮಾಡಬೇಡಿ.ಕಳೆದುಹೋದ ಕಾಲ ಮತ್ತೆಂದೂಬಾರದು. ಕಾರ್ಯಕ್ಷೇತ್ರದಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ.ವಿಶ್ರಾಂತಿಯ ಸಮಯದಲ್ಲೂ ಕಾರ್ಯಗಳ ಬಗ್ಗೆ ಯೋಚಿಸಿ,ಕಾರ್ಯಗಳ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ.

ವ್ಯಕಿಗತ ದೂರವಾಣಿ ಕರೆಗಳಿಗೆ ಸಂಸ್ಥೆಯ ದೂರವಾಣಿಯನ್ನು ಉಪಯೋಗಿಸಬೇಡಿ. ಅವಶ್ಯಕತೆ ಅದೂ ತೀರ ತುರ್ತುಪರಿಸ್ಥಿಯಲ್ಲಿ ಮಾತ್ರ ದೂರವಾಣಿ ಕರೆಯನ್ನು ಉಪಯೋಗಿಸಿಕೊಳ್ಳಿ. ಅಗತ್ಯತೆ ಹಾಗೂ ಅನಗತ್ಯತೆಯ ನಡುವಿನ ಅಂತರ ತೀರ ಕಡಿಮೆಯಾದರೂ ಸಂಸ್ಥೆಯು ಕೊಟ್ಟ ಸ್ವಾತಂತ್ರವನ್ನು ದುರಪಯೋಗಪಡಿಸಿಕೊಳ್ಳುವುದು ಉಚಿತವಲ್ಲ. ಎಷ್ಟು ಅವಶ್ಯಕತೆಯೋ ಅಷ್ಟೇ ಮಾತನಾಡಿ ತುಂಬಾ ಹೊತ್ತು ಸಂಸ್ಥೆಯ ದೂರವಾಣಿಯನ್ನು ನೀವು ಉಪಯೋಗಿಸುತ್ತಿದ್ದರೆ ಒಳಬರುವ ಕರೆಗಳು ನಿಮ್ಮ ವ್ಯಕ್ತಿಗತ ಕರೆಯಿಂದ ತೊಂದರೆಯಾಗುತ್ತದೆ. ಇದರಿಂದ ಅಗತ್ಯ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದೆ ಸೊರಗುತ್ತದೆ. ಇದು ಸಂಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ. ಸಮಯ ಹಾಗು ಹಣ ಎರಡೂ ವ್ಯಯವಾಗುತ್ತದೆ.

ಒಳ್ಳೆಯವರಾಗಿರಿ ಹಾಗೂ ಒಳ್ಳೆಯದನ್ನೇ ಮಾಡಿರಿ. ಸಂಸ್ಥೆಯಲ್ಲಿ ಎಲ್ಲರಿಗೂ ಸಹಾಯ ಮಾಡಿ. ಸಹೋದ್ಯೋಗಿಗಳ ಕೆಲಸದಲ್ಲಿ ಸಹಾಯಮಾಡಿ. ಆಗಬೇಕಾದಂತಹ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವುದಕ್ಕೆ ಎಲ್ಲರೊಂದಿಗೂ ಸಹಕರಿಸಿ.
ಸಂಸ್ಥೆಗೆ ನಿಷ್ಠಾವಂತರಾಗಿರಿ,ಸಮಯಕ್ಕೆ ಬೇಕಾದಾಗ ಸಂಸ್ಥೆಯ ಕೆಲಸವನ್ನು ಹೆಚ್ಚುವರಿಯಾಗಿ ಮಾಡಿ.ಎಂದಿಗೂ ಜಾಣತನದಿಂದ ಜಾರಿಕೊಳ್ಳಲು ಪ್ರಯತ್ನಿಸಬೇಡಿ. ಸಂಸ್ಥೆ ನಿಮ್ಮನ್ನು ಹಾಗು ನಿಮ್ಮ ಕುಟುಂಬವನ್ನು ಪೋಷಿಸುತ್ತಿದೆ ಎನ್ನುವುದನ್ನು ಮರೆಯಬೇಡಿ.ಸಂಸ್ಥೆಯು ಕಾರ್ಯಕ್ಷೇತ್ರ-ನಮ್ಮ ಯೋಗ್ಯತೆಗೆ ತಕ್ಕಂತೆ ಕೆಲಸವನ್ನು ಕೊಟ್ಟ ಸಂಸ್ಥೆಗೆ ಚಿರಋಣಿಗಳಾಗಿರೋಣ. ನಿಮ್ಮ ಕೆಲಸವನ್ನು ಪ್ರೀತಿಸಿ.ನಮ್ಮ ಏಳಿಗೆ ಹಾಗೂ ಸಂಸ್ಥೆಯ ಏಳಿಗೆ ಎರಡೂ ನಮ್ಮ ಕೈಯಲ್ಲಿಯೇ ಇದೆ.

2 ಕಾಮೆಂಟ್‌ಗಳು:

  1. ಸಮಯದ ಮಹತ್ವವನ್ನು ಕರ್ತವ್ಯ ನಿಷ್ಟೆಯೊಡನೆ ಮೇಳೈಸಿ ಬರೆದ ನನು ಓದಿರುವ ಅತ್ಯುತ್ತಮ ಲೇಖನಗಳ ಸಾಲಿನಲ್ಲಿ ನಿಲ್ಲುವಂತಹ ಈ ನಿಮ್ಮ ಬರವಣಿಗೆ ಪ್ರತಿಯೊಬ್ಬರಿಗೂ ಮಾರ್ಗದರ್ಶಿ :o)

    ಪ್ರತ್ಯುತ್ತರಅಳಿಸಿ
  2. ಪ್ರಶಾಂತ್,
    ನಿಮ್ಮ ನುಡಿಗೆ ನಮನಗಳು. ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ.

    ಪ್ರತ್ಯುತ್ತರಅಳಿಸಿ