ಸೋಮವಾರ, ನವೆಂಬರ್ 18, 2013

ನಾವು ಹಾಗೂ ಕನ್ನಡದರಿಮೆ

ಮತ್ತೊಂದು ಕನ್ನಡ ರಾಜ್ಯೋತ್ಸವ ಮುಗಿದಿದೆ. ಅದು ಹತ್ತು ಹಲವು ಸವಾಲುಗಳನ್ನು ಜೊತೆ ಜೊತೆಗೆ ಹೊತ್ತು ತಂದಿದೆ. 2500 ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ಭಾಷೆ ಎಂಬ ಹೆಗ್ಗಳಿಕೆ ಒಂದಾದರೆ ಮತ್ತೊಂದೆಡೆ ಇಂದಿನ ಜಾಗತಿಕ ವಾಸ್ತವದ ನೆಲೆಗಟ್ಟಿನಲ್ಲಿ ಕನ್ನಡ ಭಾಷೆ ಎಲ್ಲೆಡೆಯಲ್ಲೂ ತೆರೆದುಕೊಳ್ಳದೆ ಬೆಳವಣಿಗೆ ಮರೀಚಿಕೆ ಎಂದೆನಿಸಿದೆ. ಭಾಷೆ ಉಳಿಯುವುದು ಹಾಗು ಬೆಳೆಯುವುದು ಆಯಾ ಭಾಷಾ ಜನರು / ಸಮುದಾಯದ ನಡುವಳಿಕೆಯ ಮೇಲೆ ನಿಂತಿದೆ. ಉದಾ: ಸಂಸ್ಕೃತ ತನ್ನ ಅಸ್ತಿತ್ವ ಕಳೆದುಕೊಳ್ಳುವುದಕ್ಕೆ ಇಂತಹುದೇ ಕಾರಣಗಳಿರಬಹುದು.  ಇಂದು ವಿಶ್ವವೇ ಒಂದು ಹಳ್ಳಿ - ಗ್ಲೋಬಲ್ ವಿಲೇಜ್ – "ವಸುದೈವ ಕುಟುಂಬ" ಎನ್ನುವ ಹಿರಿಯರ ದೃಷ್ಟಿಕೋನದ ಆದರ್ಶಚಿಂತನೆ ವಾಸ್ತವವಾಗಿದೆ. ಹೀಗಿರುವಾಗ ಒಂದು ಭಾಷೆ, ಒಂದು ಧರ್ಮ, ಒಂದು ಜನಾಂಗ ಎನ್ನುವ ಸಂಕೀರ್ಣ ಚಿಂತನೆಗೆ ಅವಕಾಶಗಳೇ ಇಲ್ಲದಂತಾಗಿದೆ. ಆದಿಕವಿ ಪಂಪನ "ಮನುಷ್ಯ ಕುಲಂ ತಾನೊಂದೆ ವಲಂ" ಎಂಬುದು ಸಹಜತೆಗೆ ಹತ್ತಿರವಾಗುತ್ತಿದೆ. ಹೊಸತನಗಳಿಗೆ ಪ್ರತಿಯೊಬ್ಬರೂ ತೆರೆದುಕೊಳ್ಳುವ ಇಂದಿನ ದಿನಗಳಲ್ಲಿ ವ್ಯಾಪಾರೀಕರಣದ ಭರಾಟೆಯಲ್ಲಿ ಭಾಷೆ ಮತ್ತೊಂದು ಭಾಷೆಯ ಮೇಲೆ ಪ್ರಭಾವ ಬೀರುತ್ತಿದೆ. ಹೊಸ ಹೊಸ ವೈಜ್ಞಾನಿಕ ಆವಿಷ್ಕಾರಗಳು ದಿನಕ್ಕೊಂದರಂತೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಅನ್ಯಭಾಷೆಗಳು ಹಾಗು ನಮ್ಮ ಭಾಷೆ ಈ ತೆರನಾದ ಪ್ರಕ್ರಿಯೆಗೆ ಹೇಗೆ ಒಡ್ಡಿಕೊಳ್ಳುತ್ತದೆ? ಹೇಗೆ ಬದಲಾವಣೆ ತಂದುಕೊಳ್ಳುತ್ತದೆ? ಎನ್ನುವುದರ ಮೇಲೆ ಭಾಷೆಯ ಬೆಳವಣಿಗೆ ಹಾಗು ಅವನತಿ ಅವಲಂಬಿತವಾಗಿದೆ. ವೈಜ್ಞಾನಿಕ ಆವಿಷ್ಕಾರಗಳೊಂದೇ ಅಲ್ಲ ಜಾಗತೀಕರಣ, ವಸಾಹತೀಕರಣಕ್ಕೆ ನಮ್ಮ ಭಾಷೆ ಹೇಗೆ ಬದಲಾಗಿದೆ ಅನ್ನುವುದೂ ಮುಖ್ಯ. ಜಾಗತೀಕರಣದಿಂದ ನಮ್ಮ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ ಆದರೆ ನಮ್ಮ ಭಾಷೆ ಹಾಗೆ ಬದಲಾಗಿದೆಯೇ? ಇಂದಿನ ಈ ದಿನಗಳಲ್ಲಿ ಒಂದು ಭಾಷೆ ಮತ್ತೊಂದು ಭಾಷೆಯ ಮೇಲೆ ಸವಾರಿ ಮಾಡಿ ಹೆಚ್ಚುಗಾರಿಕೆ ತೋರಿಸಿಕೊಳ್ಳುವ ಪ್ರಕ್ರಿಯೆ ಹೆಚ್ಚಾಗಿ ಕಾಣಸಿಗುತ್ತದೆ. ಅಂತಹುದರಲ್ಲಿ ಭಾಷಾ ಅಭಿಮಾನ, ವ್ಯಾಮೋಹಗಳಿಗಿಂತ ಜನತೆ ಸುಲಭ, ಚೆನ್ನಾಗಿದೆ, ಹೊಂದಿಕೆಯಾಗುತ್ತದೆ, ಸ್ಟೇಟಸ್‍ಗಾಗಿ, ಪ್ರಿಸ್ಟೀಜ್‍ಗಾಗಿ ಎನ್ನುವ ಕಾರಣಗಳಿಗಾಗಿ ತಮ್ಮತನ ಕಳೆದುಕೊಳ್ಳುವುದು ಎಷ್ಟು ಸಮಂಜಸ? ಜಾಗತೀಕ ಮಟ್ಟದಲ್ಲಿ ನಾವು ಬೆಳೆಯಬೇಕಾದರೆ ನಮ್ಮತನವನ್ನು ನಾವು ಕಳೆದುಕೊಳ್ಳಬೇಕೆ?

ಇನ್ನು ದಿನನಿತ್ಯದ ಕೆಲಸಕಾರ್ಯಗಳಲ್ಲಿ ನಾವು ನಮ್ಮ ಭಾಷೆಯನ್ನು ಎಷ್ಟು ಉಪಯೋಗಿಸುತ್ತೇವೆ? ನಾವೇ ಪ್ರಶ್ನಿಸಿಕೊಂಡರೆ - ತೀರ ಕಡಿಮೆ. ನಾವಿರುವ ವ್ಯವಸ್ಥೆ ನಮ್ಮ ಭಾಷೆಗೆ ಪೂರಕವಾಗಿದೆಯೇ? ಮೊಟ್ಟಮೊದಲು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಸೇರಿಸುವಾಗಲೇ ಅಡ್ಡಿ ಆತಂಕಗಳು ಸಾಲುಸಾಲಾಗಿಯೇ ಎದುರಾಗುತ್ತವೆ. ಪ್ರೀ-ನರ್ಸರಿ, ನರ್ಸರಿ, ಎಲ್‍ಕೆಜಿ, ಯುಕೆಜಿ ಶಾಲೆಗೆ ಸೇರಿಸುವಾಗಲೇ ತೊಂದರೆ ಅನುಭವಿಸುತ್ತೇವೆ.  ಕಾಲಕ್ಕೆ ತಕ್ಕ ಹಾಗೆ ಇರಬೇಕೆಂಬ ಮಾತಿನಂತೆ ಹೆಚ್ಚು ಮಾನ್ಯತೆ ಇರುವ ಸಿಬಿಎಸ್‍ ಸಿ ಅಥವಾ ಐಸಿಎಸ್‍ ಇ ಶಿಕ್ಷಣ ಪಠ್ಯ ವ್ಯವಸ್ಥೆಗೆ ಎಲ್ಲರೂ ಹಾತೊರೆಯುತ್ತಾರೆ. ಇಂದಿನ ವ್ಯಾಪಾರದ ಯುಗ ಲಾ ಆಫ್ ಡಿಮ್ಯಾಂಡ್ ಅಂಡ್ ಸಪ್ಲೈ ಗೆ ಬದ್ಧವಾಗಿವೆ. ಜನ ಏನನ್ನು ಬಯಸುತ್ತಾರೋ ಅದನ್ನೇ ಶಾಲೆ-ಕಾಲೇಜಿನವರು ಜನರ ಮುಂದಿಡುತ್ತಾರೆ, ಅದು ನಿಜವೂ ಹೌದು. ನಾವೇ ನಮ್ಮ ಪಠ್ಯ ವ್ಯವಸ್ಥೆ ಸರಿಯಿಲ್ಲ ಎನ್ನುತ್ತಿದ್ದೇವೆ. ಎಷ್ಟು ವಿಪರ್ಯಾಸವಲ್ಲವೆ! ಅಂದರೆ ನಮ್ಮ ಭಾಷೆ, ನಮ್ಮ ಪಠ್ಯ ನಮಗೇ ಸಹ್ಯವಿಲ್ಲ. ಏಕೆ ಹೀಗೆ? ಇದಕ್ಕೆ ಪರಿಹಾರವೇನು? ನಮ್ಮ ಭಾಷೆಗೆ ಅನ್ನಕೊಡುವ ಶಕ್ತಿ ಇಲ್ಲವೆ? ಹೊಟ್ಟೆಗೆ ಹಿಟ್ಟು ಕೊಡುವ ಭಾಷೆಯನ್ನಾಗಿ ನಮ್ಮ ಭಾಷೆಯನ್ನು ಬದಲಾಯಿಸುವುದಾದರೂ ಹೇಗೆ?

ಇದು ಒಂದು ಉದಾಹರಣೆಯಷ್ಟೆ. ನಮ್ಮ ದಿನನಿತ್ಯದಲ್ಲಿ ವ್ಯವಹರಿಸುವ ಪ್ರತಿಯೊಂದು ವ್ಯವಸ್ಥೆಯಲ್ಲೂ ಕನ್ನಡ ಇಂದು ಕಣ್ಮರೆಯಾಗಿದೆ. ನಿತ್ಯ ವ್ಯವಹರಿಸುವ ಬ್ಯಾಂಕ್, ಸಾರಿಗೆ, ಮಾಲ್‍ ಗಳಿಗೆ ಭೇಟಿನೀಡಿ ವ್ಯವಹರಿಸುವಾಗ, ಅವಶ್ಯಕ ಅರ್ಜಿಗಳನ್ನು ತುಂಬಿಸುವಾಗ ನಾವು ಬಳಸುವುದು ಇಂಗ್ಲೀಷ್ ಭಾಷೆಯನ್ನು. ಇಂಗ್ಲೀಷ್ ಭಾಷೆ ಗೊತ್ತಿಲ್ಲದಿದ್ದರೆ ಹಿಂದಿ ಭಾಷೆಯಾದರೂ ಗೊತ್ತಿರಬೇಕು ಇಲ್ಲದಿದ್ದಲ್ಲಿ ಅರ್ಜಿ ತುಂಬಿಸಲು ಆಗುವುದಿಲ್ಲ ಅಥವಾ ವ್ಯವಹರಿಸಲು ಸಾಧ್ಯವಾಗುವುದಿಲ್ಲ. ನಮ್ಮ ದಿನನಿತ್ಯದ ಆಡುಭಾಷೆ ಕನ್ನಡವನ್ನು ಬಳಸುವ ಅವಕಾಶಗಳನ್ನು ನಮ್ಮ ಇಂದಿನ ವ್ಯವಸ್ಥೆ ಕಿತ್ತುಕೊಳ್ಳುತ್ತಿದೆ. ವ್ಯವಸ್ಥಿತ ಸಂಸ್ಥೆಯಲ್ಲಿ ಈ ತರಹದ ತೊಂದರೆ ಇದ್ದರೆ ಇನ್ನು ಪ್ರತಿನಿತ್ಯ ವ್ಯವಹರಿಸುವ ಮನೆಕೆಲಸದವಳು, ತರಕಾರಿಯವನು, ಮನೆ ಕಟ್ಟುವವನು ಅನ್ಯಭಾಷೆಯವನಾಗಿರುತ್ತಾನೆ. ಅಲ್ಲಿಯೂ ಸಹ ನಮ್ಮ ಕನ್ನಡಕ್ಕೆ ಕತ್ತರಿ ಬಿದ್ದಂತಾಯಿತು. ಇನ್ನು ದೊಡ್ಡ ದೊಡ್ಡ ಮಾಲ್‍ ಗಳಿಗೆ ಹೋದರೆ ಎಲ್ಲವೂ ಹಿಂದಿಮಯ - ದಾಲ್, ಚಾವಲ್, ನಮಕ್, ನಮ್ಮ ಕನ್ನಡ ಪದಗಳಿಗೆ ಜಾಗವೇ ಇಲ್ಲ. ಹೀಗೆ ಕನ್ನಡ ಪದಗಳು ಕನ್ನಡಿಗರ ನಾಲಗೆಯಲ್ಲೇ ಹೊರಳಲಾರದ ಸ್ಥಿತಿಯಲ್ಲಿದೆ.

ಇನ್ನು ಸಾಹಿತ್ಯದ ವಿಷಯದಲ್ಲಿ ಎಂಟು ಜ್ಞಾನಪೀಠಗಳು ಕನ್ನಡಮ್ಮನ ಮುಡಿಗೇರಿದೆ. ಅದಕ್ಕೆ ಎಲ್ಲರೂ ಹೆಮ್ಮೆಪಡೋಣ. ಆದರೆ ಇಲ್ಲಿ ಭಾಷೆಯ ಬೆಳವಣಿಗೆಗೆ ಅವಕಾಶ ಕಡಿಮೆಯಾಗಿದೆ ಎನಿಸುತ್ತದೆ. ಹೊಸ ಪದಗಳ ಅನ್ವೇಷಣೆ ಇಲ್ಲಿ ಆಗುವುದೇ ಇಲ್ಲ. ವಿಜ್ಞಾನ, ಗಣಿತ, ತಂತ್ರಜ್ಞಾನ ವಿಷಯಗಳು ಕನ್ನಡಭಾಷೆಗೆ ದೂರ. ಇನ್ನು ಅವುಗಳ ಬಗ್ಗೆ ಪುಸ್ತಕಗಳು ಹೊರಬರುವುದು ಕನಸೇ ಸರಿ. ನಮ್ಮ ಆಡುಭಾಷೆ ಕೇವಲ ಮನೆಗಷ್ಟೇ, ಮಾತಿಗಷ್ಟೇ ಮೀಸಲಾಗಿದೆ ಎನ್ನದೆ ವಿಧಿಯಿಲ್ಲ.

ಕನ್ನಡಕ್ಕೆ ಕೇವಲ ಶಾಸ್ತ್ರೀಯ ಸ್ಥಾನಮಾನ ಒದಗಿಸಿಕೊಟ್ಟರಷ್ಟೇ ಸಾಲದು. ಭಾಷೆಯ ಅಭಿವೃದ್ಧಿಗೆ ಯೋಜನೆಗಳನ್ನು ಸಹ ರೂಪಿಸಬೇಕಿದೆ. ಚಿತ್ರರಂಗದಲ್ಲಿ ಕನ್ನಡ ನುಡಿಯ ಬಗ್ಗೆ ಯೋಚಿಸಿದರೆ ಬೇಸರವಾಗುತ್ತದೆ. ನಿಜ, ವರ್ಷಕ್ಕೆ ನೂರು-ಇನ್ನೂರು ಕನ್ನಡ ಭಾಷೆಯ ಚಿತ್ರಗಳು ಬಿಡುಗಡೆಯಾಗುತ್ತವೆ ಆದರೆ ಅವುಗಳ ಗುಣಮಟ್ಟದ ಬಗ್ಗೆ ಯೋಚಿಸಿದರೆ ಅವು ಬೇರೆ ಭಾಷೆಗಳಿಗೆ ಸಾಟಿಯಾಗಲಾರದೆನಿಸುತ್ತವೆ. ಕನ್ನಡಚಿತ್ರಗಳಲ್ಲಿ ಗುಣಮಟ್ಟ, ಹೊಸತನದ ಕೊರತೆಯಿದೆ. ಜಾಗತೀಕರಣದಿಂದ ಅನೇಕಾನೇಕ ಭಾಷೆಯ ಚಲನಚಿತ್ರಗಳು ವೀಕ್ಷಕರಿಗೆ ಲಭ್ಯವಿವೆ. ಕನ್ನಡಿಗರ ದೌರ್ಭಾಗ್ಯವೆಂದರೆ ನಮ್ಮ ಕನ್ನಡ ಚಿತ್ರರಂಗ ಡಬ್ಬಿಂಗ್‍ ಗೆ ತೆರೆದುಕೊಳ್ಳದೆ ಇರುವುದು, ಅನ್ಯಭಾಷೆಯ ಚಿತ್ರಗಳು ಕನ್ನಡದಲ್ಲಿ ಲಭ್ಯವಾಗದೆ ಮೂಲಭಾಷೆಯಲ್ಲೇ ನೋಡುವ, ಚಲನಚಿತ್ರದ ಉತ್ತಮ ಗುಣಮಟ್ಟವನ್ನು ಆಸ್ವಾದಿಸುವ ಭಾಗ್ಯ ನಮ್ಮ ಕನ್ನಡಿಗರಿಗಿಲ್ಲ. ನಮ್ಮ ಮಕ್ಕಳು ಪೋಗೊ, ಕಾರ್ಟುನ್ ನೆಟ್‍ ವರ್ಕ್, ಹಿಸ್ಟರಿ..... ಮುಂತಾದ ಉತ್ತಮ ಕಾರ್ಯಕ್ರಮಗಳನ್ನು ಕನ್ನಡ ಭಾಷೆಯ ಮೂಲಕ ಅರಿಯುವಂತೆ ಮಾಡಲು ನಾವು ಅಸಫಲರಾಗಿದ್ದೇವೆ. ನಮ್ಮ ಭಾವಿ ಕನ್ನಡಿಗರಿಗೆ ವಿಶ್ವವನ್ನು ಕನ್ನಡದ ಕಂಗಳಿಂದ ತೋರಿಸಲು ನಾವು ಅಸಮರ್ಥರಾಗಿದ್ದೇವೆ.

ಒಟ್ಟಾರೆ ಹೇಳಬೇಕೆಂದರೆ ನಮ್ಮ ಭಾಷೆ ನಮ್ಮ ಜೀವನದ ಅವಿಭಾಜ್ಯ ಅಂಗಗಳಲ್ಲಿ ಒಂದಾಗುವುದಕ್ಕೆ ಹೆಣಗಾಡುತ್ತಿರುವುದಂತೂ ನಿಜ. ನಮ್ಮ ಭಾಷೆಯಲ್ಲದೆ ಪರಕೀಯ ಭಾಷೆಯನ್ನೇ ಹೆಚ್ಚು ಬಳಸುವ ನಾವುಗಳು ನಮ್ಮ ಭಾಷೆಯ ಅವನತಿಗೆ ನೇರವಾಗಿ ಕಾರಣರಾಗುತ್ತಿದ್ದೇವೆ. ನಮ್ಮೊಳಗಿನ ಕನ್ನಡಪ್ರಜ್ಞೆ ಜಾಗೃತಗೊಳಿಸುವ ಕೆಲಸಗಳು ಅಗತ್ಯವಾಗಿ ಆಗಬೇಕಿದೆ. ಕುವೆಂಪುರವರು ಹೇಳಿದ "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎನ್ನುವ ಕನ್ನಡತನ, ಕನ್ನಡಪ್ರಜ್ಞೆಯ ಜಾಗೃತಿಯು ಈ ಕ್ಷಣದ ಅವಶ್ಯಕತೆಯಾಗಿದೆ. ಅದನ್ನು ಹೇಗೆ ಸಾಧಿಸಬೇಕು ಎನ್ನುವುದರ ಬಗ್ಗೆ ನಾವು ಚಿಂತನೆ ನಡೆಸಬೇಕಿದೆ.

ಈ ಲೇಖನ "ಕಹಳೆ" ಗಾಗಿ ಬರೆದದ್ದು.

www.kahale.gen.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ