ಸೋಮವಾರ, ಮೇ 13, 2013

ಒಂದು ದಿನದ ಕಥೆ-ಸಮಯ ಎಲ್ಲರ ದೊರೆ

ಮೊನ್ನೆ ತುಂಬಾ ದಿನಗಳ ನಂತರ ನಾನು ಎರಡನೇ ಪಾಳೀಯ ಕೆಲಸಕ್ಕೆ ಹೋಗಬೇಕಾಗಿತ್ತು. ಆದೊಂದೇ ದಿನ ನನ್ನ ಬಹುತೇಕ ಕೆಲಸಗಳನ್ನು ಅಂದರೆ ಬ್ಯಾಂಕ್,ವಿಮೆ,..ಇತ್ಯಾದಿಗಳು ಮುಗಿಸುವ ಅವಕಾಶ ಇರೋದು. ಹಿಂದಿನ ದಿನ ರಾತ್ರಿನೇ ನನ್ನ ಎಲ್ಲಾ ಕೆಲಸಗಳನ್ನು ಪಟ್ಟಿಮಾಡಿಕೊಂಡಿದ್ದೆ. ಕೆಲಸ ಒಂದು,ಎರಡಲ್ಲ, ನಾಲ್ಕಾರು ಅದು ಒಂದೇ ಕಡೆ ಮುಗಿಯುವ ಕೆಲಸಗಳಂತೂ ಅಲ್ಲ. ನಾಲ್ಕಾರು ದಿಕ್ಕುಗಳನ್ನು ಕ್ರಮಿಸಬೇಕು. ಹೀಗಾಗಿ ಮನದಲ್ಲೇ ಯಾವ ಕೆಲಸ ಮೊದಲು, ಅನಂತರ ಎನ್ನುವ ಒಂದು priority  ಪಟ್ಟಿ ಮನದಲ್ಲೇ ಮಲಗುವ ಮುಂಚೆಯೇ ಸಿದ್ಧವಾಗಿತ್ತು. ಬೆಳಿಗ್ಗೆ ೬.೦೦ ಗಂಟೆಗೆಲ್ಲಾ ಎದ್ದು ನನ್ನ ಮುಂಜಾನೆಯ ಘನಕಾರ್ಯಗಳನ್ನೆಲ್ಲಾ ಮುಗಿಸಿ ಸಿದ್ಧನಾಗಿದ್ದೆ. ಮನೆಯಲ್ಲಿ ಶ್ರೀಮತಿ ಹಾಗು ಮಗರಾಯ ಇಲ್ಲದ ಕಾರಣ ತಿಂಡಿ-ತೀರ್ಥ ಎಲ್ಲಾ ಮಾವನ ಅಂಗಡಿ (ದರ್ಶಿನಿ)ಯಲ್ಲೇ ಮುಗಿಸಬೇಕಾದ ಅನಿವಾರ್ಯತೆ ಇತ್ತು. ಬೆಂಗಳೂರಿಗರಿಗೆ ಇದು ಹೊಸದೇನೂ ಅಲ್ಲ.ಅದು ಜೀವನದ ಅವಿಭಾಜ್ಯ ಅಂಗ. ತಿಂಡಿ ಅಂದ್ರೆ ನನಗೆ ಬೆಳಿಗ್ಗೆ ಇಡ್ಲಿ ತುಂಬಾ ಇಷ್ಟವಾಗುತ್ತೆ ಜೊತೆಗೆ ಕಾಫಿ ಇದ್ದರಂತೂ ಆಹಾ! ಮಧುರ ಮಧುರ. ಆ ಆಸ್ವಾದನೆ ನಿಜವಾದ ಸ್ವರ್ಗ.ನನ್ನ ಗಾಡಿ ಏರಿ ಮೊದಲು ಹೊರಟಿದ್ದು SBI ಜೀವ ವಿಮೆ ಕಛೇರಿ,ಸೌಥ್ ಎಂಡ್ ವೃತ್ತದ ಬಳಿ. ಶ್ರೀನಿವಾಸ ನಗರ,ಹನುಮಂತನಗರ,ಬಸವನ ಗುಡಿಯನ್ನು ದಾಟಿ ಗಾಂಧಿ ಬಜಾರನ್ನು ಬಳಸುತ್ತಾ ಸೌಥ್ ಎಂಡ್ ವೃತ್ತದ ಬಳಿ ಸುರಾನಾ ಕಾಲೇಜಿನ ಹತ್ತಿರ ಬರುವ ವೇಳೆಗಾಗಲೇ ಸಮಯ ೯.೪೫ ಆಗಿತ್ತು. ಗಾಡಿಯನ್ನು ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಿ SBI  ಕಛೇರಿಯ ಕಡೆಗೆ ಹೆಜ್ಜೆ ಹಾಕಿದೆ. ಹೆಜ್ಜೆ ಹಾಕುತ್ತಾ ಕಛೇರಿಯ ಕೆಲಸದ ವೇಳೆಯನ್ನು ಗಮನಿಸಿದೆ ಬೆಳಿಗ್ಗೆ ೧೦.೦೦ ಕ್ಕೆ ಆರಂಭ ಎಂದಿತ್ತು.ಮನದಲೇ ಸರಿಯಾದ ಸಮಯಕ್ಕೆ ಬಂದಿದ್ದೀನಿ ನನ್ನ ಕೆಲಸ ಬೇಗ ಮುಗಿಯುತ್ತೆ ಎನಿಸಿತು. ಮೆಟ್ಟಿಲುಗಳನ್ನೇರುತ್ತಾ ಎರಡನೆಯ ಮಹಡಿಯ SBI ಕಛೇರಿಗೆ ಕಾಲಿಟ್ಟೆ. ಕಛೇರಿಯಲ್ಲಿ ನೀರವ ಮೌನ ತಾಂಡವವಾಡುತಿತ್ತು. ಬಾಗಿಲು ತೆರೆದಿದ್ದರೂ ಯಾವ ಸಿಬ್ಬಂದಿಯೂ ಬಂದಿಲ್ಲವೆನಿಸಿತು. ಕಛೇರಿಯ ಹಿರಿಯ ಪ್ರಬಂಧಕರು ಆಗಲೇ ಆಗಮಿಸಿ ಕೆಲಸ ಶುರುವಿಟ್ಟುಕೊಂಡಿದ್ದರು. ಬಿಳಿ ಬೋರ್ಡ್ ಮೇಲೆ ತಮ್ಮ ಯೋಜನೆಗಳನ್ನು ಬರೆದು ಅಳಿಸಿ,ಮತ್ತೆ ಬರೆದು ಅಳಿಸಿತ್ತಾ ಅಭ್ಯಾಸದಲ್ಲಿ ತೊಡಗಿದ್ದರು. ನನಗೆ ಕಛೇರಿಗೆ ರಜೆಯಿರಬೇಕು ಅದಕ್ಕೆ ಇನ್ನೂ ಸಿಬ್ಬಂದಿ ಬಂದಿಲ್ಲವೆನಿಸಿತು. SBI ನದೇ ಕ್ಯಾಲೆಂಡರನಲ್ಲಿ ಪರೀಕ್ಷಿಸಿ ನನ್ನ ಅನುಮಾನ "ಇಂದು ರಜೆ ಇಲ್ಲ" ಎಂದು ಖಾತರಿ ಪಡಿಸಿಕೊಂಡೆ. ಸಮಯ ಮಾತ್ರ ಜಾರುತ್ತಿತ್ತು. ೧೦.೦೫, ೧೦.೧೦ ನಾನು ನನ್ನ ಕೈಗಡಿಯಾರದಲ್ಲಿ ಅದೆಷ್ಟು ಬಾರಿ ಸಮಯ ನೋಡಿಕೊಂಡೆನೋ ತಿಳಿದಿಲ್ಲ. ಕಛೇರಿಯ ಯಾವ ಸಿಬ್ಬಂದಿಯೂ ಬರುವ ಮುನ್ಸೂಚನೆ ಮಾತ್ರ ಸಿಗಲಿಲ್ಲ. ಆದಾಗ್ಯೂ ಹಣ ತುಂಬುವ ಅರ್ಜಿ,cheque ಎಲ್ಲವನ್ನೂ ತುಂಬಿಸಿ ಸಿದ್ಧನಾಗಿದ್ದೆ. ಮನದಲ್ಲೇ ಸಮಯದ ಅರಿವಿಲ್ಲದ ಸಿಬ್ಬಂದಿ ಎಂದು ಜರಿದುಕೊಳ್ಳುತ್ತಾ ಕುಳಿತುಕೊಂಡೆ. ನನ್ನ ಮುಂದಿನ ಕಪಾಟಿನ ಮೇಲೆ ದೊಡ್ಡ ಅಕ್ಷರಗಳಲ್ಲಿ ಮಹಾತ್ಮ ಗಾಂಧಿ ಹೇಳಿದ ನುಡಿಮುತ್ತು .....
"A Customer is the most important
Visitor on our premise.
He is not dependent on us,
We are dependent on him.
He is not an interruption of our work,
He is the purpose of it.
He is not an outsider to our business,
He is a part of it.
We are not doing him a favor by serving him,
He is doing us a favor by giving us,
An opportunity to do so."
ಸಾಲುಗಳು ನನ್ನ ಗಮನ ಸೆಳೆದರೂ ಅದು ನನ್ನನ್ನು ಅಣಕಿಸುತ್ತಿರುವಂತೆ ಭಾಸವಾಯಿತು. ಹಾಗೆ ನನ್ನ ಮನದಲ್ಲಿ ಭಾರತೀಯರು ಏಕೆ ಸಮಯದ ಪರಿಪಾಲನೆ ಮಾಡುವುದಿಲ್ಲ? ಎನ್ನುವ ಯಕ್ಷಪ್ರಶ್ನೆ ಮೂಡಿತು. ಉತ್ತರ ಸಿಗದ ಪ್ರಶ್ನೆ ಅದು ಎಂದು ನನಗೆ ತಿಳಿದಿದೆ. ಇದೇ ಪ್ರಶ್ನೆಯನ್ನು ದ್ವಾಪರ ಯುಗದಲ್ಲಿ ಯಕ್ಷನೇನಾದರೂ ಧರ್ಮರಾಯನಿಗೆ  ಕೇಳಿದಿದ್ದರೆ ಧರ್ಮರಾಯ ತನ್ನ ತಮ್ಮಂದಿರನ್ನು ನಿಜವಾಗಿಲೂ ಉಳಿಸಿಕೊಳ್ಳಲಾಗುತ್ತಿರಲಿಲ್ಲವೆನಿಸಿತು. ಕಾಯುವುದು ತುಂಬಾ ಕಷ್ಟದ ಕೆಲಸ. ನಾನು ಸಮಯಕ್ಕೆ ಸರಿಯಾಗಿ ಬಂದರೂ ನನ್ನ ಕೆಲಸ ಸಮಯಕ್ಕೆ ಸರಿಯಾಗಿ ಆಗಲಿಲ್ಲ. ಕೊನೆಗೂ ಒಬ್ಬ ಸಿಬ್ಬಂದಿ ನನ್ನ ಕಂಡ ತಕ್ಷಣ ಸಾರ್! ಏನು ಕೆಲಸವಿದೆ? ಎಂದು ನನ್ನ ಕಡೆ ಗಮನಹರಿಸಿದ. ನಾನು "ಹಣ ಕಟ್ಟಬೇಕು" ಎಂದೆ. ಅದಕ್ಕೆ " ಕೊಡಿ ಸಾರ್ ಇನ್ನೂ ಸಿಬ್ಬಂದಿ ಬಂದಿಲ್ಲ ನಾನು ನಿಮಗೆ ರಸೀದಿಯನ್ನು ಮಿಂಚೆಯಲ್ಲಿ ಕಳುಹಿಸಿಕೊಡುತ್ತೇನೆಂದ". ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಅಲ್ಲಿಂದ ಹೊರಟೆ.
ಅಂತೂ ಇಂತೂ ಆದಿನ ಸುಗಮವಾಗಿ ಅಲ್ಲದಿದ್ದರೂ ಎಲ್ಲಾ ಕೆಲಸಗಳನ್ನೂ ಮಾಡಿ ಮುಗಿಸಿದ್ದೆ. ಆದರೂ ನಮ್ಮ ಜನ,ನಮ್ಮ ವ್ಯವಸ್ಥೆ ತುಂಬಾ, ತುಂಬಾ ಬದಲಾಗಬೇಕೆನಿಸಿತು. ಸಮಯ ಪರಿಪಾಲನೆ ಅದರಲ್ಲೋಂದಷ್ಟೆ. ಇಂತಹ ಸಣ್ಣ ಸಣ್ಣ ವಿಷಯಗಳು ನೂರಾರಿದೆ.ಸಣ್ಣ ವಿಷಯ (ಮಾತು,ಶುಚಿತ್ಚ,ಗೆಳೆತನ,ಬದ್ಧತೆ,ಪರಿಸರ,ನೀತಿ,ಸಮಾಜ,ಸಂಸ್ಕೃತಿ,ಭಾಷೆ.....ಇತ್ಯಾದಿಗಳು)  ಅಂತ ಗಮನಹರಿಸದೇ ಇರೋದೆ ನಮ್ಮ ಅನೇಕ ಸೋಲುಗಳಿಗೆ ಕಾರಣ. ಸಣ್ಣ ಸಣ್ಣ ವಿಚಾರಗಳೇ ನಮ್ಮೊಳಗಿನ ಶಿಸ್ತನ್ನು ನಿರ್ಧರಿಸುತ್ತದೆ. ಆ ಸಣ್ಣ ಶಿಸ್ತೇ ನಮ್ಮ ಜೀವನದಲ್ಲಿ ಬದಲಾವಣೆ ತರುವುದು ಅದರಲ್ಲಿ ಸಂದೇಹವಿಲ್ಲ. ನೀವೇನು ಹೇಳುವಿರಿ ನನ್ನ ಮಾತು ನಿಜವಲ್ಲವೇ?


ಭಾನುವಾರ, ಮೇ 12, 2013

ಮನಸ್ಸು ಭಾರವಾಯಿತು. ಕನ್ನಡನಾಡಿಗೆ ಇನ್ನೂ ಸಮಯ ಬಂದಿಲ್ಲವೆನಿಸಿತು......

 ಈ ಪತ್ರ ಸುಮಾರು ಹತ್ತು ವರ್ಷಗಳ ಹಿಂದೆ ಬರೆದದ್ದು. ಸಂದರ್ಭ ಹೇಗಿತ್ತೆಂದರೆ ಶ್ರೀಯುತ ಅಂಬರೀಷ್ ರವರು ಚಲನಚಿತ್ರರಂಗದಿಂದ ಹೆಸರುಗಳಿಸಿದ ನಂತರ ರಾಜಕೀಯ ಆಶ್ರಯ ಬಯಸಿ ಸೂಕ್ತ ರಾಜಕೀಯ ಪಕ್ಷಕ್ಕಾಗಿ ಹುಡುಕಾಟ ನಡೆಸಿದ್ದರು.ಜನತಾದಳದ ಶ್ರೀ ದೇವೇಗೌಡರ ಜೊತೆಗಿನ ಒಡನಾಟವೂ ಹೆಚ್ಚಿತ್ತು.ಎಲ್ಲರೂ ಅವರು ಜನತಾದಳ ಸೇರುತ್ತಾರೆಂದು ತಿಳಿದ್ದಿದ್ದರು ಆದರೆ ಆದದ್ದೇ ಬೇರೆ. ಆ ಸಂದರ್ಭದಲ್ಲಿ ಉದಯ ಟಿವಿಯಲ್ಲಿ ಒಂದು ಕಾರ್ಯಕ್ರಮಕ್ಕಾಗಿ ಈ ಪತ್ರ ಬರೆದೆ. ಆ ಕಾರ್ಯಕ್ರಮ ನಡೆಸಿಕೊಟ್ಟಿದ್ದು "ನಮ್ಮೂರ ಮಂದಾರ ಹೂವೇ" ಖ್ಯಾತಿಯ ವಿನಾಯಕ ಜೋಷಿ. ಈ ಪತ್ರದ ಸಾರಾಂಶವನ್ನು ಅಂಬರೀಷರ ಮುಂದೆ ವಿನಾಯಕ ಜೋಷಿ ಓದಿದ್ದರು. ಆ ಪತ್ರದ ಒಕ್ಕಣೆ ಹೀಗಿದೆ.

ಆತ್ಮೀಯ ನಾಯಕ ನಟ ಶ್ರೀ ಅಂಬರೀಷ್ ರವರಿಗೆ ಪ್ರೀತಿಯ ಅಭಿಮಾನಿಯ ಅನಂತ ನಮನಗಳು ಹಾಗು ಶುಭಾಷಯಗಳು.ತಮ್ಮ ಚಿತ್ರಗಳ ಅನೇಕ ಪಾತ್ರಗಳು ನನ್ನಂತಹ ಅನೇಕ ಕನ್ನಡ ಅಭಿಮಾನಿಗಳಿಗೆ ಆದರ್ಶಪ್ರಾಯವಾಗಿವೆ. ಮೂವತ್ತು ವರ್ಷಕ್ಕೂ ಹೆಚ್ಚು ಸುದೀರ್ಘ ಕನ್ನಡ ಕಲಾದೇವಿಯ ಸೇವೆಯಲ್ಲಿ ನಿರತರಾಗಿದ್ದೀರಿ. ಮುಂದೆಯೂ ಕನ್ನಡ ತಾಯಿಯ ಸೇವೆ ನಿರಂತರವಾಗಿ ನಡೆಯಲಿ. ತೆರೆಯ ಮೇಲೆ ನಿಮ್ಮನ್ನು ನೋಡುವುದಕ್ಕಿಂತ, ನವ ಪ್ರತಿಭೆಗಳನ್ನು ಶೋಧಿಸುವ, ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಚಟುವಟಿಕೆಗಳು ಹೆಚ್ಚಾಗಲಿ ಎಂದು ಬಯಸುತ್ತೇನೆ.

ರಾಜಕೀಯದಲ್ಲೂ ತಮ್ಮ ಹೆಸರು ಚಿರಪರಿಚಿತ.ಚಲನಚಿತ್ರದ ಮೂಲಕ ಗಳಿಸಿದ ಹೆಸರಿನಿಂದ ರಾಜಕೀಯದಲ್ಲೂ ಮೇಲೆ ಬರುವ ತಮ್ಮ ಉದ್ದೇಶ ಈಡೇರಿದೆ. ಕೇವಲ ತೆರೆಯಮೇಲೆ ನಾಯಕರಾಗಿದ್ದ ತಾವು ನಿಜ ಜೀವನದಲ್ಲೂ ನಾಯಕರಾಗುವ ಎಲ್ಲಾ ಲಕ್ಷಣಗಳು ತಮ್ಮಲ್ಲಿ ಅಗಾಧವಾಗಿದೆ. ಇಂದಿನ ಭ್ರಷ್ಟರಾಜಕಾರಣದಲ್ಲಿ ತಮ್ಮಂತಹ ಕಲಿಯುಗ ಕರ್ಣರ ಅವಶ್ಯಕತೆ ರಾಜ್ಯದ ಜನತೆಗೆ ಹೆಚ್ಚಾಗಿದೆ. ರಾಜ್ಯದ ಅಭಿವೃದ್ಧಿಯ ಕೆಲಸಗಳು ಲಂಚ,ಲಂಪಟತನಗಳಿಂದ ಕುಂಠಿತವಾಗಿವೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಕನಸುಗಳು ಕನಸಾಗಿಯೇ ಉಳಿಯುತ್ತಿದೆ. ಕಾವೇರಿ ನದಿ ಕರ್ನಾಟಕದ ಕಣ್ಣೀರ ಕಥೆಯಾಗದೆ ರಾಜ್ಯದ ಜೀವನಾಡಿಯಾಗಬೇಕಾಗಿದೆ. ಒಂದು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರದೆ, ನಾಡು,ನುಡಿ,ಜಲ,ಸಂಸ್ಕೃತಿ,ಅಭಿವೃದ್ಧಿ,ಮಾನವೀಯ ಮೌಲ್ಯಗಳ ಹರಿಕಾರರಾಗಬೇಕು- ಇದೇ ನನ್ನ ನಿಮ್ಮಲ್ಲಿಟ್ಟಿರುವ ಕನಸು. ಯುವ ಜನತೆ ನಿಮ್ಮ ಹಿಂದೆ ಅಪಾರವಾಗಿದ್ದಾರೆ. ಅಭಿವೃದ್ಧಿ,ಶಾಂತಿ,ನೆಮ್ಮದಿ,ಮಾನವೀಯ ಮೌಲ್ಯಗಳು ನಿಮ್ಮ ಉಸಿರಾಗಬೇಕು,ಆ ಉಸಿರು ಈ ನಾಡಿನ ಜೀವವಾಗಬೇಕು. ಇದುವೇ ನಾವು ನಿಮ್ಮಲ್ಲಿಟ್ಟಿರುವ ಭರವಸೆ,ನಾಡ ಜನತೆಯ ಕನಸು.

ನಾನು ಬಯಸಿದ್ದೇ ಅವರು ಯಾವುದೇ ಪಕ್ಷ ಸೇರದೆ ತಮ್ಮದೇ ಆದ ಪಕ್ಷವೊಂದನ್ನು ಸ್ಥಾಪಿಸಬೇಕು ಎಂದು. ಆದರೆ ಆದದ್ದೇ ಬೇರೆ. ಈಗ ಎಲ್ಲವೂ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಅವರು ರಾಷ್ಟ್ರೀಯ ಪಕ್ಷವನ್ನು ಸೇರಿದರು. ಇದೀಗ ಹತ್ತು ವರ್ಷಕ್ಕೂ ಹೆಚ್ಚು ಕಾಲ ಕಳೆದುಹೋಗಿದೆ. ಅವರ ರಾಜಕೀಯ ಭವಿಷ್ಯ ಹೇಗಿತ್ತು? ನಮ್ಮ ನಾಡು,ನುಡಿ,ಜಲ, ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಬದ್ಧತೆ ಎಲ್ಲವೂ ನಾಡನ ಜನತೆಗೆ ತಿಳಿದಿದೆ.

ಇಷ್ಟೆಲ್ಲಾ ಏಕೆ ನೆನಪಾಯಿತೆಂದರೆ ಇತ್ತೀಚೆಗಷ್ಟೇ ಮುಗಿದ ರಾಜ್ಯದ ಚುನಾವಣೆಗೆ ಮುನ್ನ  ಆದ ಅದರಲ್ಲೂ ಕಲಿಯುಗ ಕರ್ಣ ಅಂಬರೀಷ್ ರವರಿಗೆ ಸಂಬಂಧಿಸಿದ ಹಾಗೆ ನಡೆದ ಘಟನೆಗಳು ನನ್ನನ್ನು ಹತ್ತು ವರ್ಷಗಳ ಹಿಂದಕ್ಕೆ ಕರೆದೊಯ್ಯಿತು. ಅವರಿಗೆ ಬರೆದ ಪತ್ರವ ಜೋಪಾನವಾಗಿ ಎತ್ತಿಟ್ಟಿದ್ದೆ ಅದರ ನೆನಪಾಯಿತು. ಅವರು ಸ್ವಲ್ಪ ವ್ಯಕ್ತಿಗತ ಶಿಸ್ತು ಹಾಗು ರಾಜ್ಯದ ಜನತೆಯ ಆಶೋತ್ತರಗಳಿಗೆ ಸರಿಯಾಗಿ ಸ್ಪಂದಿಸಿದ್ದರೆ ಈ ಸಂದರ್ಭ ಸೃಷ್ಟಿಯಾಗುತ್ತಲೇ ಇರಲಿಲ್ಲವೆನಿಸಿತು. ಮನಸ್ಸು ಭಾರವಾಯಿತು. ಕನ್ನಡನಾಡಿಗೆ ಇನ್ನೂ ಸಮಯ ಬಂದಿಲ್ಲವೆನಿಸಿತು......