ಮಂಗಳವಾರ, ಡಿಸೆಂಬರ್ 25, 2012

ಕಲಿಕೆಯಿಂದ ಗಳಿಕೆ


ಒಂದು ಸಣ್ಣ ಉಪಾಯ ನಾವು ಜೀವನದಲ್ಲಿ ಮುಂದೆ ಸಾಗುವುದಕ್ಕೆ, ಅದೇನೆಂದರೆ ಹೆಚ್ಚು ಗಳಿಸಬೇಕಾದರೆ ನಾವು ಹೆಚ್ಚು,ಹೆಚ್ಚು ಕಲಿಯಬೇಕು. ನಮ್ಮ ಉಧ್ಯೋಗಸ್ಥನಿಂದ ನಾವು ಪಡೆಯಬಹುದಾದುದೇನೆಂದರೆ ನಾವು ಎಷ್ಟು ಮೌಲ್ಯವನ್ನು ನಮ್ಮ ಕೆಲಸ-ಕಾರ್ಯಗಳಲ್ಲಿ ಸೇರಿಸುತ್ತೇವೆ ಎನ್ನುವುದರ ಮೇಲಿದೆ. ನಮಗೆ ಹೆಚ್ಚು ತಿಳಿದಿದ್ದರೆ ನಾವು ಹೆಚ್ಚು ಮೌಲ್ಯರಾಗುತ್ತಾ ಸಾಗುತ್ತೇವೆ. ಹೆಚ್ಚು ಗಳಿಸಬೇಕಾದರೆ ಹೆಚ್ಚು ಕಲಿಯಬೇಕು. ಸ್ಪರ್ಧೆಯನ್ನು ಜಯಿಸಬೇಕು. ಎಲ್ಲಾ ಪರಿಣತಿಗಳ ಪರಿಧಿಯನ್ನು ಧಾಟಬೇಕು.
ತಿಳುವಳಿಕೆಯಿಂದ ಅವಕಾಶಗಳು ಹೆಚ್ಚುತ್ತವೆ. ಅವಕಾಶಗಳು ಫಲಿತಾಂಶಗಳನ್ನು ತೆರೆದಿಡುತ್ತವೆ.ಹೊಸ ಕಲಿಕೆಯಿಂದ ನಮ್ಮಲ್ಲಿ ಹೊಸ ಅರಿವಿನ ಅನಾವರಣವಾಗುತ್ತದೆ. ಉತ್ತಮ ತಿಳುವಳಿಕೆಯಿಂದ ನಾವು ಮಾಡುವ ಕೆಲಸಗಳಿಂದ ಉತ್ತಮ ಫಲಿತಾಂಶಗಳನ್ನು ತಂದುಕೊಡುತ್ತದೆ. ಕಲಿಕೆಗಾಗಿ ನಮ್ಮ ಹಣ,ಸಮಯವನ್ನು ವಿನಿಯೋಗಿಸುವುದು ಅಥವಾ ಹೂಡುವುದು ಒಂದು ಉತ್ತಮ ವಿಧಾನವಾಗಿದೆ. ಕಲಿಕೆಯಿಂದ ನಮ್ಮಲ್ಲಿರುವ ಕಲಾತ್ಮಕತೆ ಗರಿಗೆದರುತ್ತದೆ ಹಾಗು ನಮ್ಮನ್ನು ಮೌಲ್ಯವಂತರನ್ನಾಗಿಸುತ್ತದೆ. ಮೌಲ್ಯ,ಕೈಚಳಕವನ್ನು ಹೆಚ್ಚಿಸಿಕೊಂಡಂತೆ ಪ್ರಖ್ಯಾತಿಯೆಡೆಗಿನ ನಮ್ಮ/ನಿಮ್ಮ ದಾರಿ ಸುಗಮವಾದಂತೆಯೇ!.
ಪ್ರತಿದಿನ 60 ನಿಮಿಷ ಕಲಿಕೆಗಾಗಿ ಉಪಯೋಗಿಸಿ ಅದಕ್ಕಾಗಿ ಸಮಯವಿಲ್ಲವೆನ್ನುವವರನ್ನು ಎಂದೂ ನಂಬಬೇಡಿ. ಇಂದೇ ಮೊದಲ ಹೆಜ್ಜೆಯಿಡಿ ಕಲಿಕೆಗಾಗಿ. TV ವೀಕ್ಷಿಸುವ ಬದಲು ಯಾವುದಾದರೂ ಪುಸ್ತಕವನ್ನು ತೆರೆಯಿರಿ, ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ನಿಮ್ಮ ಕಣ್ಣ ಮುಂದಿರುವ ಹೀರೋಗಳನ್ನು ಗಮನಿಸಿ ಅವರಿಂದ ಕಲಿಯಿರಿ. ನಮ್ಮ ಜೀವನ ಸುಖವಾಗಿಸಿಕೊಳ್ಳುವುದು ಹೇಗೆಂದು ಕಲಿಯಿರಿ. ನಿಮ್ಮ ಸಮಯವನ್ನು ಮೌಲ್ಯವಾಗಿಸಿಕೊಳ್ಳುವುದು ಹೇಗೆಂದು ಕಲಿಯಿರಿ. ಅತ್ಯುತ್ತಮ ಜೀವನ ನಡೆಸುವುದು ಹೇಗೆಂದು ಕಲಿಯಿರಿ. ಕಲಿಕೆಗೆ ಮಿತಿಯಿಲ್ಲ ಹಾಗೆ ಕೊನೆಯೂಯಿಲ್ಲ.ವಯಸ್ಸಿನ ತಾರತಮ್ಯವೂ ಇಲ್ಲ. ಭವಿಷ್ಯತ್ತಿನ ಭದ್ರಬುನಾದಿಗೆ ಕಲಿಕೆಯೇ ಅಡಿಪಾಯ ತಿಳಿದಿರಲಿ.

ಪ್ರೇರಣೆ:  Learn more to Earn more- Greatness guide by Robin Sharma.

ಉಪವನದಲ್ಲಿ ಒಂದು ಮಧ್ಯಾಹ್ನ


ಒಬ್ಬ ಹುಡುಗನಿದ್ದ. ಅವನಿಗೆ ದೇವರನ್ನು ಭೇಟಿಮಾಡುವ ತವಕ ಉಂಟಾಯಿತು. ಅವನಿಗೆ ತಿಳಿದಿತ್ತು, ದೇವರನ್ನು ಕಾಣಬೇಕಾದರೆ ತುಂಬಾ ದೂರ ಪ್ರಯಾಣಿಸಬೇಕೆಂದು. ಹೀಗಾಗಿ ಒಂದು ದೊಡ್ಡ ಸೂಟ್ಕೇಸಿನಲ್ಲಿ popcorn ಹಾಗು pepsi ಗಳನ್ನು ತುಂಬಿಕೊಂಡು ತನ್ನ ಪ್ರವಾಸವನ್ನು ಪ್ರಾರಂಭಿಸಿದ. ಸ್ವಲ್ಪ ದೂರ ಸಾಗುತ್ತಿದ್ದಂತೆ ಅವನಿಗೆ ದಣಿವಾಯಿತು. ಅಲ್ಲೇ ಇದ್ದ ಉಪವನದಲ್ಲಿ ವಿಶ್ರಾಂತಿ ಪಡೆಯೋಣವೆಂದು ತೀರ್ಮಾನಿಸಿದ. ಅವನು ಅಲ್ಲಿ ಒಬ್ಬ ವಯಸ್ಸಾದ ಮಹಿಳೆಯನ್ನು ಕಂಡ. ಆಕೆ ಉಪವನದಲ್ಲಿ ಕುಳಿತು ಪಾರಿವಾಳಗಳ ಜೊತೆ ಆಡುತ್ತಿದ್ದಳು. ಆ ಹುಡುಗ ಅಕೆಯ ಬಳಿಯಲ್ಲೇ ಕುಳಿತ ಹಾಗು ತಾನು ತಂದ ಸೂಟ್ಕೇಸನ್ನು ತೆರೆದ. ಆಯಾಸ ಪರಿಹರಿಸಿಕೊಳ್ಳಲು pepsi ಯನ್ನು ತೆಗೆದು ಮೊದಲ ಗುಟುಕು ತೆಗೆದುಕೊಳ್ಳಬೇಕೆನ್ನುವಾಗ ಆಕೆಯನ್ನು ಗಮನಿಸಿದ, ಆಕೆಗೂ ಹಸಿವಾಗಿದೆ ಎನಿಸಿತು ಅವನಿಗೆ. ಆಕೆಗೂ ಒಂದು ಗುಟುಕು pepsi ಯನ್ನು ಹಾಗು popcorn ನ್ನು ಕೊಟ್ಟ. ಆಕೆಯೋ ಅವನು ಕೊಟ್ಟದ್ದನ್ನು ಸಂತೋಷದಿಂದ ಹಾಗು ಮುಗುಳ್ನಗುತ್ತಾ ಸ್ವೀಕರಿಸಿದಳು. ಆ ಹುಡುಗನು ಅದರಿಂದ ಸಂತೋಷಗೊಂಡ ಹಾಗು ಆಶ್ಚರ್ಯಗೊಂಡ.

ಅವರಿಬ್ಬರು ಆ ಮಧ್ಯಾಹ್ನ ಪೂರ್ತಿ ಉಪವನದಲ್ಲಿ ತಿನ್ನುತ್ತಾ, ನಗುತ್ತಾ ಒಂದೇ ಒಂದು ಮಾತೂ ಆಡದೆ ಸಂತೋಷದಿಂದ ಕಳೆದರು.

ಕತ್ತಲು ಹೆಜ್ಜೆ ಇಡುತ್ತಿದ್ದಂತೆ ಹುಡುಗನಿಗೆ ತುಂಬಾ ದಣಿವಾದದ್ದು ಅರ್ಥವಾಯಿತು ಹಾಗು ಮನೆಗೆ ಹಿಂತಿರುಗಲು ತಯಾರಿ ನಡೆಸಿದ. ಆಕೆಯ ಬಳಿಗೋಡಿದ ಹಾಗು ಆಕೆಯನ್ನು ಬಿಗಿದಪ್ಪಿದ. ಆಕೆಯೋ ಅವನಿಗೆ ಅಪೂರ್ವವಾದ ನಗೆಯ ಉಡುಗೊರೆಯನ್ನು ನೀಡಿದಳು.

ಆ ಹುಡುಗನು ಮನೆಯ ಕಡೆ ತೆರಳಿದ.ಸ್ವಲ್ಪ ಸಮಯದ ನಂತರ ಮನೆಯ ಬಾಗಿಲನ್ನು ತೆರೆಯುತ್ತಿದ್ದಂತೆ ಅವನ ತಾಯಿಗೆ ಅವನ ಮುಖದಲ್ಲಿ ಹೊಳೆಯುತ್ತಿದ್ದ ಸಂತೋಷದ ಹೊನಲನ್ನು ಕಂಡು ಆಶ್ಚರ್ಯವಾಯಿತು.
ಆಕೆ ಅವನನ್ನು ಕೇಳಿದಳು ’ ಮಗನೇ ಇಂದು ಏನು ಕೆಲಸ ಮಾಡಿದೆ ಹಾಗು ಏಕೆ ಇಷ್ಟೊಂದು ಸಂತೋಷವಾಗಿದ್ದೀಯ?"
ಅದಕ್ಕೆ ಉತ್ತರಿಸುತ್ತಾ " ಅಮ್ಮಾ ನಾನು ಇಂದು ಮಧ್ಯಾಹ್ನದ ಊಟವನ್ನು ದೇವರೊಂದಿಗೆ ಮಾಡಿದೆ ನಿನಗೆ ಗೊತ್ತಾ? ಅಕೆಯ ನಗು ಅದ್ಭುತವಾಗಿತ್ತು. ನಾನೆಂದೂ ಅಂತಹ ಮುಗುಳ್ನಗೆ ನೋಡೇಯಿಲ್ಲ!’

ಇತ್ತ ಆ ಮುದುಕಿಯೂ ಸಂತೋಷದಿಂದ ಹೊಸ ಹುಮ್ಮಸ್ಸಿನಿಂದ ಮನೆಗೆ ಹಿಂತಿರುಗಿದಳು.
ಆಕೆಯ ಮಗ ಆಶ್ಚರ್ಯಚಕಿತನಾದ ತಾಯಿಯ ಮುಖದಲ್ಲಿ ಪ್ರಶಾಂತತೆಯನ್ನು ಕಂಡು ಹಾಗು ಅವನು ತಾಯಿಯನ್ನು ಕೇಳಿದ " ಅಮ್ಮಾ ಇಂದೇಕೆ ತುಂಬಾ ಸಂತೋಷವಾಗಿರುವೆ? ಏನು ಮಾಡಿದೆ ಇಂದು?"
ಆಕೆ ಉತ್ತರಿಸುತ್ತಾ : ಮಗನೇ! ಇಂದು ನಾನು popcornನ್ನು ದೇವರ ಜೊತೆ ತಿಂದೆ. ನಿನಗೆ ಗೊತ್ತಾ!, ದೇವರು ನಿನಗಿಂತ ಚಿಕ್ಕವನಾಗಿದ್ದಾನೆ ನಾನು ಅಂದುಕೊಂಡಿದ್ದಕ್ಕಿಂತ".

ಹಲವು ಬಾರಿ ನಾವು ಆತ್ಮೀಯ ಸ್ಪರ್ಶ,ಮುಗುಳ್ನಗೆ, ಆತ್ಮೀಯ ಮಾತು, ಆತ್ಮೀಯ ಆರೈಕೆ,ಕಾಳಜಿಯುಕ್ತ ದೂರು, ಸತ್ಕಾರ,ಆತಿಥ್ಯ, ಸಹಾಯ ಎಲ್ಲವುಗಳಿಗೂ ಒಂದು ಶಕ್ತಿಯಿದೆ, ಜೀವನವನ್ನು ಬದಲಾಯಿಸುವ ಚೈತನ್ಯವಿದೆ ಎನ್ನುವುದನ್ನು ಮರೆತುಬಿಟ್ಟಿರುತ್ತೇವೆ. ಜನರು ನಮ್ಮ ಜೀವನದಲ್ಲಿ ಜೊತೆಯಾಗುತ್ತಾರೆ ಅದಕ್ಕೆ ಕೆಲವು ಕಾರಣಗಳಿರುತ್ತದೆ. ಹಲವು ಋತುಮಾನ ಅಥವಾ ಜೀವಮಾನದಲ್ಲೋಮ್ಮೆ ಅಂತಹ ಜೊತೆಗಾರ ನಮ್ಮ ಜೀವನದಲ್ಲಿ ಬರಬಹುದು. ಎಲ್ಲವನ್ನೂ ಅಪ್ಪಿಕೋ ಸಮಾನವಾಗಿ!.ಆಗಲೇ ನಮ್ಮ ಜೀವನ ಸಾರ್ಥಕವಾಗುತ್ತದೆ ಅಲ್ಲವೇ?.

ಪ್ರೇರಣೆ 'An Afternoon in the park' - Achieve Success & Happiness by A.P.Pereira.

ಶನಿವಾರ, ಡಿಸೆಂಬರ್ 8, 2012

ಹೊಸ ಚೆಕ್ ನ ವೈಶಿಷ್ಟ್ಯ ನಿಮಗೆ ಗೊತ್ತೆ?


ಏಪ್ರಿಲ್ ೧, ೨೦೧೩  ರಿಂದ ಹಳೆಯ ಚೆಕ್ ಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಹೊಸ ವರ್ಷದಿಂದ ಬ್ಯಾಂಕ್ ವ್ಯವಹಾರವು ಹೊಸ ಚೆಕ್ ಮಾದರಿಯಲ್ಲಿ ನಡೆಯುತ್ತದೆ. ಚೆಕ್ ಟ್ರಂಕೇಷನ್ ಸಿಸ್ಟಂ ಅಥವಾ CTS 2010 ಎಂದು ಕರೆಯಲ್ಪಡುವ ಹೊಸ ಮಾದರಿ ಚೆಕ್ ವ್ಯವಹಾರವನ್ನು ಎಲ್ಲಾ ಬ್ಯಾಂಕ್ ಗಳು ಪಾಲಿಸಲಿವೆ.






ಮುಖ್ಯವಾದ ಬದಲಾವಣೆಗಳು ನಿಮಗೆ ತಿಳಿದಿರಲಿ.
. IFSC (Indian Financial System Code-ಭಾರತೀಯ ಹಣಕಾಸು ವ್ಯವಸ್ಥೆ ತಂತ್ರಲಿಪಿ -) ಹಾಗು MICR ( Magnetic Ink Character Recognition-ಆಯಸ್ಕಾಂತ ಶಾಯಿ ಅಕ್ಷರ ಗುರುತಿಸುವಿಕೆ) ಗಳು ಎಲ್ಲಾ ಚೆಕ್ ಗಳ ಮೇಲಿರುವುದು ಕಡ್ಡಾಯ.
.ಎಲ್ಲಾ ಚೆಕ್ ಗಳು Standardised Water mark ನ್ನು ಹೊಂದಿರಲಿದೆಚಕ್ಕನ್ನು ಬೆಳಕಿಗೆ ಹಿಡಿದಾಗ  CTS-India ಎನ್ನುವ water mark ಕಾಣುತ್ತದೆ.
. ಹೊಸ ಚೆಕ್ ನಲ್ಲಿ ಯಾವುದೇ ಬದಲಾವಣೆ,ತಿದ್ದುಪಡಿ ಮಾಡುವಂತಿಲ್ಲ. ತಿದ್ದುಪಡಿಗಳಿದ್ದರೆ  ಹೊಸ ಚೆಕ್ಕನ್ನೇ ಬಳಸಬೇಕು..

ಗುರುವಾರ, ನವೆಂಬರ್ 8, 2012

ಸಂತಸ ಹಾಗು ಸುರಕ್ಷಿತ ದೀಪಾವಳಿ

 ಕತ್ತಲ ಭೇದಿಸಿ ಆಕಾಶದಲ್ಲಿ ಬಣ್ಣ ಬಣ್ಣಗಳ ಬೆಳಕಿನ ಕಿರಣಗಳು ಅರಳುವುದು ಯಾರಿಗೆ ತಾನೆ ಸಂತಸತಾರದು ಹೇಳಿ? ಹೌದು ದೀಪಾವಳಿ ಬರುತ್ತಿದೆ ಎನ್ನುವ ಸೂಚನೆ ಈಗಾಗಲೇ ಅಂಗಡಿ-ಮುಂಗಟ್ಟುಗಳಲ್ಲಿ,ದೂರದರ್ಶನ,ವೃತ್ತಪತ್ರಿಕೆಗಳ ಜಾಹೀರಾತುಗಳಲ್ಲಿ ದೊರೆತಿದೆ. ಕೊಳ್ಳುವಿಕೆ,ರಿಯಾಯಿತಿ,ಬಹುಮಾನ,ಉಡುಗೊರೆಗಳ ಮಾತುಗಳು ಒಂದು ಕಡೆಯಾದರೆ ಶಬ್ದ,ವಾಯುಮಾಲಿನ್ಯ,ಅಪಘಾತ,ಅಂಗಹೀನತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಮತ್ತೊಂದು ಕಡೆ. ಎರಡೂ ಒಂದೇ ನಾಣ್ಯದ ಎರಡು ಮುಖ ಎಂಬುದು ನಮಗೆಲ್ಲಾ ತಿಳಿದಿದೆ. ಆದರೂ ಕ್ಷಣದ ಅಜಾಗರೂಕತೆ ಜೀವನವನ್ನು ಕತ್ತಲಾಗಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಬರುತ್ತಿರುವ ದೀಪಾವಳಿಗೆ ಖರೀದಿಗೆ ಎಲ್ಲರೂ ಸಿದ್ಧರಾಗಿರುವ ಜೊತೆಗೆ ಚರ್ಮದ ಮುಲಾಮು,ಕತ್ತರಿ.ಬ್ಯಾಂಡೇಜ್ ಗಳನ್ನೂ ಸಿದ್ಧಪಡಿಸಿಟ್ಟುಕೊಳ್ಳುವುದು ಅತ್ಯವಶ್ಯವಾಗಿದೆ. ಖರೀದಿಯ ಸಿದ್ಧತೆಗಿಂತ ಎರಡನೆಯ ಸಿದ್ಧತೆಗೆ ಪ್ರಾಮುಖ್ಯತೆ ಯಾರು ತಾನೆ ಕೊಡುತ್ತಾರೆ? ಅಪಘಾತಗಳಾಗದಂತೆ ಮುಂಜಾಗರೂಕತೆ ವಹಿಸುವುದೇ ಜಾಣ್ಮೆ. ಈ ದೀಪಾವಳಿಗೆ ವೈದ್ಯರ ಸಲಹೆ-ಸೂಚನೆಗಳತ್ತ ಗಮನಹರಿಸಿ ಪಾಲಿಸಿದರೆ ಅವಘಡ ಹಾಗು ಅವಘಡಗಳಿಂದಾಗುವ ಪರಿಣಾಮಗಳನ್ನು ಕಡಿಮೆ ಮಾಡಬಹುದು.
ಈ ದೀಪಾವಳಿಗೆ ಪಟಾಕಿ,ಮತಾಪುಗಳನ್ನು ಬಳಸುವಾಗ ಕೆಳಗಿನ ಸಲಹೆಗಳನ್ನು ಅನುಸರಿಸಿ ಸಂತೋಷ ಇಮ್ಮಡಿಗೊಳಿಸಿಕೊಳ್ಳಬಹುದು.

ಪಟಾಕಿಗಳನ್ನು ಸಿಡಿಸಲು ಮೈದಾನವನ್ನು ಆರಿಸಿಕೊಳ್ಳಿ.
ತುಂಬಾ ಶಬ್ದ ಹಾಗು ವಾಯುಮಾಲಿನ್ಯಗೊಳಿಸುವ ಸಿಡಿಮದ್ದುಗಳ ಬಳಸುವುದನ್ನು ಕಡಿಮೆಮಾಡಿ.
ಉದ್ದದ ಕಡ್ಡಿಗಳನ್ನು ಬಳಸಿ ಪಟಾಕಿ,ಮತಾಪುಗಳನ್ನು ಹೊತ್ತಿಸಿ.
ಪಟಾಕಿಗಳನ್ನು ಸ್ವಚ್ಛ ಹಾಗು ತಣ್ಣನೆಯ ಜಾಗದಲ್ಲಿ ಶೇಖರಿಸಿಡಿ.
ಚಿಕ್ಕ ಮಕ್ಕಳ ಕೈಗೆ ಪಟಾಕಿ,ಮತಾಪುಗಳು ಸಿಗದಂತೆ ಎಚ್ಚರವಹಿಸಿ.
ಹೂವಿನ ಕುಂಡಗಳಿಂದಲೇ ಹೆಚ್ಚಾಗಿ ಅಪಘಾತಗಳು ಸಂಭವಸಾಧ್ಯತೆ ಇರುವುದರಿಂದ ಮಕ್ಕಳ ಅವುಗಳನ್ನು ಬಳಸುವಾಗ ದೊಡ್ಡವರು ಮಕ್ಕಳ ನೆರವಿಗೆ ಬರುವುದು ಒಳಿತು.
ಪಟಾಕಿಗಳನ್ನು ಹೊತ್ತಿಸಿದ ನಂತರ ಹಲವು ಬಾರಿ ಅವು ಸಿಡಿಯಲು ಸಮಯ ತೆಗೆದುಕೊಳ್ಳುತ್ತದೆ ಅವು ಸಿಡಿಯುವ ಮೊದಲೇ ಮಕ್ಕಳು ಅದನ್ನು ಕೈಯಲ್ಲಿ ಹಿಡಿಯುವ ಆತುರ ತೋರುತ್ತಾರೆ ಅಂತಹ ಸಂದರ್ಭಗಳಲ್ಲಿಯೇ ಹೆಚ್ಚಿನ ಅಪಾಯವಾಗುವ ಸಾಧ್ಯತೆಯಿದೆ.
ಮಕ್ಕಳಿಗೆ ಸುರಕ್ಷತೆಯ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಕೊಡಿ.
ಶಾಲಾ-ಕಾಲೇಜುಗಳಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯದು.
ಮನೆಯ ಒಳಗೆ ಪಟಾಕಿ,ಮತಾಪುಗಳನ್ನು ಸಿಡಿಸಬೇಡಿ.ಶುದ್ಧ ಗಾಳಿಯು ಸಿಗದೆ ಉಸಿರಾಟದ ತೊಂದರೆಯುಂಟಾಗಬಹುದು.
ಪಟಾಕಿ,ಮತಾಪುಗಳನ್ನು ಸಿಡಿಸುವ ವೇಳೆಯಲ್ಲಿ ಚಪ್ಪಲಿ ಧರಿಸುವ ಬದಲು ಶೂಗಳನ್ನು ಧರಿಸುವುದು ಒಳ್ಳೆಯದು.
ಮಕ್ಕಳು ಹುಡುಕಾಟಕ್ಕಾಗಿ ಕೈಯಲ್ಲೇ ಪಟಾಕಿ,ಮತಾಪುಗಳನ್ನು ಸಿಡಿಸುವುದನ್ನು ಧೈರ್ಯ ಹಾಗು ಪ್ರತಿಷ್ಟೆಯೆಂದು ಭಾವಿಸಿರುತ್ತಾರೆ. ಅವರಿಗೆ ತಿಳುವಳಿಕೆ ಕೊಟ್ಟು ನಡುವಳಿಕೆಯನ್ನು ತಿದ್ದುವುದರಿಂದ ಅಪಘಾತಗಳನ್ನು ತಡೆಯಬಹುದು.
ಪಟಾಕಿ ಸಿಡಿಸುವಾಗ ನಾವು ಧರಿಸುವ ಉಡುಪುಗಳನ್ನು ಜೋಪಾನವಾಗಿ ಆಯ್ಕೆಮಾಡಿಕೊಳ್ಳುವುದರಲ್ಲಿ ನಮ್ಮ ಜಾಣ್ಮೆ ಅಡಗಿದೆ. ಸೀರೆ,ದೊಗಲೆ ಉಡುಪುಗಳನ್ನು ಧರಿಸಿ ಪಟಾಕಿ,ಮತಾಪುಗಳನ್ನು ಸಿಡಿಸಬೇಡಿ.
ಬೆಂಕಿಯಿಂದ ಗಾಯಗಳು ಸಂಭವಿಸಿದಲ್ಲಿ ಹರಿಯುವ ನೀರಿನಿಂದ ಗಾಯವನ್ನು ಸ್ವಚ್ಛಗೊಳಿಸಿ ನಂತರ ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯುವುದು ಉಚಿತ.
ಅಪಘಾತವೆನಾದರೂ ಸಂಭವಿಸಿದಲ್ಲಿ ಗಾಬರಿಗೊಳ್ಳದೆ ತಾಳ್ಮೆಯಿಂದ ವರ್ತಿಸಿ.
ರೋಗಿಗಳ,ಮಕ್ಕಳ,ವಯೋವೃದ್ಧರನ್ನು ಶಬ್ದ ಹಾಗೂ ವಾಯುಮಾಲಿನ್ಯದಿಂದ ದೂರವಿರಿಸಿ.

ಒಟ್ಟಾರೆ ಹಬ್ಬಗಳು ಸಂತಸವನ್ನು ಇಮ್ಮಡಿಗೊಳಿಸಬೇಕಾದರೆ ಅಪಘಾತಗಳು ಸಂಭವಿಸದಂತೆ ಮುಂಜಾಗರೂಕತೆಯಿಂದ ಅವುಗಳನ್ನು ತಡೆಗಟ್ಟುವುದೇ ಆಗಿದೆ.
ಎಲ್ಲರಿಗೂ ಸಂತಸ ಹಾಗು ಸುರಕ್ಷಿತ ದೀಪಾವಳಿಯ ಶುಭಾಷಯಗಳು.
Happay & Safe Deepavali.


ಮಂಗಳವಾರ, ನವೆಂಬರ್ 6, 2012

ಕವಿ ಮನೋವ್ಯಾಪಾರ


ಕವಿಯ ಮನೋವ್ಯಾಪಾರ ಹೀಗೇ ಎಂದು ಹೇಳಲು ಬಾರದು. ಎಲ್ಲರದೂ ಒಂದು ದಿಕ್ಕಾದರೆ ಕವಿಯದೇ ಬೇರೊಂದು ದಿಕ್ಕು. ಅದೇ ಸಾಮಾನ್ಯರಿಗೂ ಹಾಗು ಕವಿ ಹೃದಯಕ್ಕೂ ಇರುವ ವ್ಯತ್ಯಾಸ. ಒಂದೇ ಗಾಳಿ,ನೀರು,ಭೂಮಿ,ರಕ್ತದ ಬಣ್ಣವೊಂದೇ ಆದರೂ ಮನಸ್ಸಿನ ವ್ಯಾಪಾರ ಮಾತ್ರ ಬೇರೆಬೇರೆ.ಅದನ್ನು ಪ್ರತಿಭೆ ಎನ್ನುವುದೋ ಅಥವಾ ಮತ್ತೇನೆನ್ನುವುದೋ ಹೇಳಲು ಬಾರದು. ಎಲ್ಲರೂ ನೋಡುವುದು ತಮ್ಮ ಮೂಗಿನ ನೇರಕ್ಕೇ ಆದರೂ ನೋಡುಗನ ಗಮನ ಎಲ್ಲಿ ಕೇಂದ್ರಿತವಾಗಿದೆ ಎನ್ನುವುದೇ ಮುಖ್ಯ. ಕವಿ ಹೇಳುತ್ತಾನೆ.

                                ಯಾವಾಗಲೂ ಅಷ್ಟೇ ಗುರುವೇ! ನಮ್ಮ ಮೂಗಿನ ನೇರಕ್ಕೇ
                                ನಾವು ಹೆರವರನ್ನೋದುವುದು.
                                ತಕ ಪಕ ಕುಣಿದ ನವಿಲ ನೋಡೀ ನೋಡಿ ನಿಶ್ಚಿತ ಗಟ್ಟಿ
   ದನಿಯಲ್ಲಿ ಹದ್ದೇ ಎನ್ನುವುದು||
                                                                      -ಎಚ್ಚೆಸ್ವಿ  ’ಪ್ರಾಪ್ತಿ’- ವೈದೇಹಿ ಮತ್ತು ಇತರ ಕವಿತೆಗಳು.

ಮನದಲ್ಲಿ ಅನೇಕಾನೇಕ ವಿಚಾರ ವಿನಿಮಯ,ಮಂಥನ ಎಲ್ಲರಲ್ಲಿಯೂ ನಡೆಯುವುದು ಸರ್ವೇಸಾಮಾನ್ಯ. ಸಾಮಾನ್ಯ ವಿಚಾರಗಳೂ ಕವಿ ಮನದಲ್ಲಿ ಹೆಚ್ಚು ಪ್ರಶ್ನೆಗಳ ಬಿರುಗಾಳಿ ಬೀಸಿ ಅದು ಚಂಡಮಾರುತವಾಗಿ ಮಳೆ ಧರೆಗಿಳಿಯುವಂತೆ ಭಾವನೆಗಳ ಘರ್ಷಣೆಯಿಂದ ಕವಿತೆಗಳ ಸೃಷ್ಟಿ ಕವಿ ಹೃದಯದಲ್ಲಿ ಆಗುವುದು. ಅದೇ ಜನ ಸಾಮಾನ್ಯರಲ್ಲಿ ಕಾಡು ಹರಟೆಗೆ ದಾರಿ ಮಾಡಿಕೊಡುತ್ತದೆ ಅಷ್ಟೇ!.
ಕವಿ ತನ್ನೊಳಗಿನ ಆ ಮನೋವ್ಯಾಪಾರವನ್ನೇ ಪ್ರಶ್ನಿಸಿಕೊಳ್ಳುತ್ತಾನೆ, ಆದರೆ ಜನಸಾಮಾನ್ಯರು ಹಾಗೇ ಮಾಡಿಯಾರೇ?

                                 ಹೇಗೆ ಬರುವುದೀ ಮನಕೆ
   ಒಂದು ವಿಚಾರ ಕಲ್ಪನೆ ಪ್ರೇರಣೆ?
   ಯಾರು ಕಳಿಸುವರು ಅದನು-ಅದಕ್ಕೆ
   ಕಾರಣ ನ್ಯಾಯ ಏನಿದೆ?

ಕವಿ ಮುಂದೆ ಅದನ್ನೇ ಹೇಳುತ್ತಾ

                                ಕಪಿಯೋ ಕುದುರೆಯೋ ಜಿಂಕೆಯೋ ಮನದೊಳು
                               ನುಗ್ಗುವ ಅತಿಥಿ ಅದಾರೋ!
 ಬಂತೋ ಒಳಗೆ ಅದೇ ಸಾರಥಿ
                               ಎಲ್ಲಿಗೊಯ್ಯುವುದೋ ಏನೋ?
                              -ಎಲ್ ಎಸ್ ಎಲ್ ’ಹೇಗೆ ಬರುವುದೀ ಮನಕೆ?’-ಸಂವೇದನೆ

ಪಕ್ಕದ ಮನೆಯಲ್ಲೋ ಅಥವಾ ಇನ್ನೆಲ್ಲೋ ಯಾರಾದಾರೂ ಅಳುವ ಸದ್ದು ನಿಮ್ಮ / ನಮ್ಮ ಕಿವಿಗೆ ಬಿದ್ದರೆ ತುಂಬಾ ಕಿರಿಕಿರಿಯಾಗುವುದು ಮನಕ್ಕೆ ಅದಕ್ಕೆ ಹೇಗೆ ಸ್ಪಂದಿಸ ಬೇಕು ಎಂದು ತಿಳಿಯಲಾರದೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವುದಕ್ಕೆ ಮೊದಲ ಆಧ್ಯತೆ,ಮೊದಲ ಮಂತ್ರ ಅದಕ್ಕೆ ಹೂಡುವೆವು ಕಾರ್ಯತಂತ್ರ. ಆದರೆ ಕವಿಗೆ ಅದೇ ಒಳಗಿನ ಪ್ರೇರಣೆ ಒಂದು ಕವಿತೆಗೆ. ಕವಿಯ ಹೃದಯ ನೋವೋ! ನಲಿವೋ! ಎಲ್ಲಕ್ಕೂ ಸ್ಪಂದಿಸುವುದು ವಿಶೇಷವಾಗಿ ಹಾಗು ಅದಕ್ಕೆ ಸಂವಾದಿಯಾಗಿ ಮನವು ತೊಳಲಾಡಿ ಭಾವನೆಯೇ ಹೊರಹೊಮ್ಮಿ ಕವಿತೆಯಾಗಿ ಹೊರಬರುವುದು ಒಂದು ವಿಶೇಷ ಪ್ರಕ್ರಿಯೆ. ಆದರೆ ಜನಸಾಮಾನ್ಯರ ಮನೋವ್ಯಾಪಾರ ಇಂತಹ ಸನ್ನಿವೇಷಗಳಲ್ಲಿ ಹೀಗೆ ಎಂದು ಹೇಳಿಬಿಡಬಹುದು. ಒಂದೋ ಅಲ್ಲಿಂದ ಕಾಲುಕೀಳುವುದು ಇಲ್ಲ ಹೆಂಗರುಳ್ಳುಳವರು ಕೊಂಚ ಸಮಾಧಾನದ ಮಾತುಗಳನಾಡಿ ಹೊರಡಬಹುದು. ಇವೆಲ್ಲಾ ಸಾಮಾನ್ಯರ ಗುಣಲಕ್ಷಣಗಳೇ ಆದರೆ ಕವಿಯ ಮನಸ್ಥಿತಿ ಆ ಕ್ಷಣದಲ್ಲಿ ಜನಸಾಮಾನ್ಯರಂತೆ ವರ್ತಿಸಿದರೂ ಆಂತರ್ಯದಲ್ಲಿ ಆಗುವ ಪ್ರಕ್ರಿಯೇ ಬೇರೆ ರೀತಿಯದು.ಕವಿಯ ಕವಿತೆಗಳ ಒಳಹೊಕ್ಕು ನೋಡಿದಾಗ ಅವರ ಮನೋವ್ಯಾಪಾರದ ವ್ಯಾಪ್ತಿಯ ಅರಿವಾಗುತ್ತದೆ.

ಒಬ್ಬ ಹುಡುಗ ತನ್ನ ಜೀವನ ಸಂಗಾತಿಯನ್ನು ಹುಡುಕಲೋಸುಗ ತನ್ನ ಮನದಲ್ಲಿ ಮನದನ್ನೆಯ ಬಗ್ಗೆ ಅನೇಕಾನೇಕ ಲೆಕ್ಕಾಚಾರಗಳನ್ನು ಹಾಕಿಕೊಂಡಿರುತ್ತಾನೆ. ಹತ್ತು-ಹಲವು ಹುಡುಗಿಯರ ದರ್ಶನ ಪಡೆದ ನಂತರವೂ ತನ್ನ ಮನದಲ್ಲಿ ಭಾವನೆಗಳು ಗರಿಗೆದರಲಿಲ್ಲವೆಂದರೆ ಆ ಹುಡುಗಿ ತನ್ನ ಜೀವನ ಸಂಗಾತಿಯಾಗಲಾರಳು ಎಂಬ ನಿರ್ಧಾರಕ್ಕೆ ಅವನು ಬಂದಿರುತ್ತಾನೆ. ಮನಕೊಪ್ಪಿದರೆ ಮನದನ್ನೆಯನ್ನಾಗಿ ಸ್ವೀಕರಿಸಿ ದಾಂಪತ್ಯ ಜೀವನ ಸಡೆಸುತ್ತಾನೆ. ಪ್ರಥಮ ನೋಟದಲ್ಲಿ ಪ್ರೀತಿಯು ಅಂಕುರಿಸುತ್ತೆ ಅನ್ನುವ ನಂಬಿಕೆ ಕೆಲವರದು ಅದು ಎಷ್ಟು ನಿಜವೋ? ಅಥವಾ ಸುಳ್ಳೋ? ತಿಳಿದಿಲ್ಲ. ಆದರೆ ಕವಿಯ ಮನೋವ್ಯಾಪಾರ ಬೇರೆಯದೇ ರೀತಿಯಲ್ಲಿ ವ್ಯವಹರಿಸುತ್ತದೆ. ಕವಿಯು ತನ್ನ ಮನದನ್ನೆಯ ಪ್ರಥಮನೋಟದಲ್ಲಿ ಆದ ಮನೋಚಿಂತನೆಯನ್ನು ಹೀಗೆ ಚಿತ್ರಿಸಿದ್ದಾನೆ.

                             ಅಂದು ತನಕ ಬಂಧಿಸಿದ್ದ
ನನ್ನ ಮನದ ಬಾಗಿಲು
ಒಂದೇ ಸಲಕೆ ತೆರೆದುಹೋಯ್ತು
        ಅವಳು ಒಳಗೆ ಹೊಕ್ಕಳು||

ಎಷ್ಟು ಮಂದಿ ಕನ್ಯೆಯರನು
ಹಿಂದೆ ನೋಡಲಿಲ್ಲವು
ಇಷ್ಟು ಬೇಗ ನಿಲ್ಲಿ ಮನಸು
ಹಿತವನೆಂದು ಪಡೆಯಿತು?
      -ಪ್ರೊ.ತಿ.ನಂ.ಶ್ರಿ ’ ಪ್ರಥಮ ದರ್ಶನ’-ಒಲುಮೆ

ಮಿನುಗುವ ನಕ್ಷತ್ರ,ನಗುವ ಹೂ,ಚೆಲುವೆ,ಮಳೆ,ತೊರೆ,ನದಿ,ತಂಗಾಳಿ,ಬಿಸಿಲು,ನೋವು,ನಲಿವು,ಕಷ್ಟ,ನಷ್ಟ,ಚಿತ್ರ,ಶಿಲ್ಪ.......ಇತ್ಯಾದಿ. ಎಲ್ಲವೂ ಜೀವನ ವ್ಯಾಪಾರದ ವಸ್ತುಗಳೇ. ಸಾಮಾನ್ಯ ಜನರ ಮನೋವ್ಯಾಪಾರ ಒಂದು ರೀತಿಯದ್ದಾದರೆ ಕವಿಯ ಮನೋವ್ಯಾಪಾರವೇ ಒಂದು ವಿಭಿನ್ನ ರೀತಿ.

ಹೀಗೆ ಒಮ್ಮೆ ಚಿತ್ರಕಾರನ ವರ್ಣಚಿತ್ರ ಪ್ರದರ್ಶನ ನೋಡಲು ಹೋಗಿದ್ದೆ. ಅವರ ಕೃತಿಗಳೋ ಅದ್ಭುತ.ಅವು ಎಷ್ಟು ಅರ್ಥವಾಯಿತೋ ನನ್ನ ಮನಕ್ಕೆ ನಾನರಿಯೇ! ಜನ ಸಾಮಾನ್ಯರ ಸ್ಥಿತಿಯೇ ಹಾಗೆ. ಅದೊಂದು ಅದ್ಭುತ ವರ್ಣಚಿತ್ರ ಬರೆದವನು ಪ್ರಖ್ಯಾತ ಕಲಾವಿಧ ಲಿಯನಾರ್ಡೋ ಡ ವಿಂಚಿ. ಸ್ತ್ರೀಯೋರ್ವಳು ಕುರಿಮರಿಯನ್ನು ಎದೆಗೊತ್ತಿ ಹಿಡಿದು ಮತ್ತೆಲ್ಲೋ ನೋಡುತ್ತಿರುವ ವರ್ಣಚಿತ್ರವದು.ನಮ್ಮಂತಹ ಸಾಮಾನ್ಯರಿಗೆ ಅದು ಬಣ್ಣಗಳನ್ನು ತುಂಬಿದ ಒಂದು ಚಿತ್ರವಾದರೆ ಕವಿಗೆ ಅದೇ ಒಂದು ಕಾವ್ಯದ ವಸ್ತುವಾಗುತ್ತದೆ. ಕವಿ ಅದನ್ನು ಹೀಗೆ ಹೇಳುತ್ತಾನೆ.

ನೋಡುತ್ತಿದ್ದೇನೆ ಹೆಣ್ಣೇ ಕಣ್ಣಲ್ಲಿ ಕಣ್ಣಿಟ್ಟು ನಿನ್ನೇ.
ಎನ್ನುವಂತೆ ನಿನ್ನ ಹೊರತು ಜಗತ್ತೇ ಒಂದು ಸೊನ್ನೆ.
ನೀನೂ ಅಷ್ಟೆ ಎಷ್ಟು ಹಚ್ಚಿಕೊಂಡು ನೋಡು
  ತ್ತಿದ್ದೀ ನೋಡುತ್ತಿರೋದನ್ನ. ನೋಡುತ್ತಾ ಇದೆ ನಿನ್ನ

ಬೆಚ್ಚನೆ ಮೊಲೆಗೆ ಮೈ ಒತ್ತಿಕೊಂಡ ಮರಿಯೂ.
ನಿಮ್ಮನ್ನೇ ನೋಡುತ್ತಿರೋ ನನ್ನ ಪರಿವೆಯೇ ಇಲ್ಲ
ನಿಮಗೆ. ನೋಡುತ್ತಿರುವಿರಿ ನನ್ನನ್ನು ಕಃಪದಾರ್ಥ
ಮಾಡಿ ಮತ್ತೇನನ್ನೋ.......
-ಎಚ್ಚೆಸ್ವಿ
ಕವಿಯ ಮನಸ್ಸು ಹೀಗೇ ಎನ್ನಲು ಬಾರದು. ಮನೋವ್ಯಾಪಾರ ಎಲ್ಲರಲ್ಲಿಯೂ ನಡೆದರೂ ಕವಿ/ಕಲಾವಿಧರಲ್ಲಿಯ ಮನೋವ್ಯಾಪಾರ ಅನನ್ಯವಾದುದು. ಅದನ್ನೇ ’ರವಿ ಕಾಣದನ್ನು ಕವಿ ಕಂಡ’ ಎನ್ನುವುದು.
ಅಂತಹ ಅಂತಃದೃಷ್ಟಿ ನಮ್ಮಲ್ಲಿಯೂ ಬರಲಿ.ನಮ್ಮಲ್ಲಿ ನಡೆಯುವ ಮನೋವ್ಯಾಪಾರವೂ ಅನನ್ಯವಾಗಲಿ ಎಂಬ ಆಶಯದೊಂದಿಗೆ........ಕನ್ನಡ ರಾಜ್ಯೋತ್ಸವವನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ಆಚರಿಸೋಣ.
                   -ಕನ್ನಡ ರಾಜ್ಯೋತ್ಸವದ ಶುಭಾಷಯಗಳು-.


ಸೂಚನೆ: ಈ ಲೇಖನ ’ಕಹಳೆ’ಕನ್ನಡ ಬ್ಲಾಗ್ ಗೆ ಬರೆದದ್ದು
www.kahale.gen.in


ಬುಧವಾರ, ಅಕ್ಟೋಬರ್ 31, 2012

ಶಿಸ್ತು ಜೀವನದ ಬೆನ್ನುಮೂಳೆ


ಒಂದು ಒಳ್ಳೆಯ ಸ್ಥಾನ ಪಡೆಯಬೇಕಾದರೆ ನಾವು ಓಳ್ಳೆಯ ನಡತೆಯನ್ನು ಕಲಿಯಬೇಕು ಹಾಗು ದಿನನಿತ್ಯದ ವ್ಯವಹಾರಗಳಲ್ಲಿ ರೂಡಿಸಿಕೊಳ್ಳಬೇಕು.
ಕೆಲಸದ ಸ್ಥಳಕ್ಕೆ ತಡವಾಗಿ ಬರುವುದನ್ನು ಅಭ್ಯಾಸಮಾಡಿಕೊಳ್ಳಬೇಡಿ. ನೆನಪಿರಲಿ " ಶಿಸ್ತು ಜೀವನದ ಬೆನ್ನುಮೂಳೆ". ನಾವು ಸರಿಯಾದ ಸಮಯದಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳದೇ ಹೋದರೆ ನಮ್ಮ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಹಿಂದುಳಿಯಬೇಕಾಗುತ್ತದೆ.

ಒಬ್ಬ ಉದ್ಯೋಗಿಯಾಗಿ ಕೆಲಸದ ಸ್ಥಳದಲಿ ಸಮಯಕ್ಕೆ ಸರಿಯಾಗಿ ಇರಬೇಕಾದದ್ದು ಪ್ರತಿಯೊಬ್ಬನ/ಳ ಕರ್ತವ್ಯವಾಗಿದೆ.ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಕೆಲಸಕ್ಕೆ ವಿಳಂಭವಾಗುವುದು ನಮ್ಮ/ನಿಮ್ಮ ಹಿಡಿತದಿಂದ ಹೊರತಾಗಿರುತ್ತದೆ. ಹಾಗೆಂದರೆ ಪ್ರತಿದಿನವೂ ಕೆಲಸಕ್ಕೆ ತಡವಾಗಿ ಹೋಗಬಹುದು ಎಂದು ಅರ್ಥವಲ್ಲ ಹಾಗು ಅದು ಸಾಧುವೂ ಅಲ್ಲ.ಮೇಲೆ ಹೇಳಿದಂತೆ ನಾವು ಮೊದಲು ನಿಗಧಿಪಡಿಸಿದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪದೇ ಇದ್ದರೆ, ಜನರಿಗೆ ನಮ್ಮ ಬಗ್ಗೆ ನಂಬಿಕೆ ಹುಟ್ಟುವುದಿಲ್ಲ. ಎಲ್ಲರ ಮುಂದೆಯೂ " ಕ್ಷಮಿಸಿ ತಡವಾಯಿತು" ಎಂದು ಹಲ್ಲುಗಿಂಜಬೇಕಾಗುತ್ತದೆ. ಎಷ್ಟೋಂದು ಮುಜುಗರವಲ್ಲವೇ? ಆದಾಗ್ಯೂ ಜನರ ಮುಖಭಾವಗಳನ್ನು ನೀವು ಗಮನಿಸಿದರೆ ನೀವು ನಿಜವಾಗಿಲೂ ನೇಣುಹಾಕಿಕ್ಕೊಳ್ಳಬೇಕೆನಿಸದೆ ಇರಲಾರದು.ಇಂತಹ ನಡುವಳಿಕೆಗಳು ಮತ್ತೆ-ಮತ್ತೆ ಸಂಭವಿಸಿದರೆ ಮತ್ತೊಮ್ಮೆ ಯಾರೂ ನಮ್ಮನ್ನು ನಂಬಲಾರರು ಹಾಗು ಕರೆಯಲಾರರು.

ಪ್ರತಿಯೊಬ್ಬರಿಗೂ ತಮ್ಮದೇ ಆದ ತೊಂದರೆಗಳು ಇದ್ದೇ ಇರುತ್ತದೆ ಅದಕ್ಕೆ ಉದ್ಯೋಗದಾತರಲ್ಲಿ ತಡವಾಗಿ ಬರುವುದಕ್ಕೆ ಮತ್ತೆ-ಮತ್ತೆ ಅಪ್ಪಣೆಯನ್ನು ಕೇಳಬೇಡಿ.ತಡವಾಗಿ ಬರುವುದಕ್ಕೆ ಅಥವಾ ಬೇಗ ಹೋಗುವುದಕ್ಕೆ ಅಂತಹ ತೊಂದರೆ/ಕಾರಣಗಳು ಕಾರಣವಾಗಬಾರದು. ಕೆಲವೊಂದು ಸಂದರ್ಭಗಳಲ್ಲಿ ಬೇಗ ಅಥವಾ ತಡವಾಗಿ ಹೋಗಲೇಬೇಕಾದರೆ ಹೋಗಿ, ಆದರೆ ಅದನ್ನೇ ಬಂಡವಾಳವನ್ನಾಗಿಸಿಕೊಂಡು ಮತ್ತೆ-ಮತ್ತೆ ಅಂತಹುದನ್ನು ಅಭ್ಯಾಸ ಮಾಡಿಕೊಳ್ಳಬೇಡಿ. ಮುಂದೆ ಅಂತಹ ಅಭ್ಯಾಸ ನಿಮಗೆ ಕೆಟ್ಟ ಹೆಸರನ್ನು ತಂದೇ ತರುತ್ತದೆ.

ನೀವು ಸಮಯವನ್ನು ಕಾಯುವವರೇ ಅಥವಾ ಸಮಯವನ್ನು ಪಾಲನೆ ಮಾಡುವವರೇ? ಅವಶ್ಯಕತೆ ಇದ್ದಲ್ಲಿ ಹೆಚ್ಚು ಸಮಯ ಕೆಲಸಮಾಡುವ ಬದ್ದತೆ ನಿಮ್ಮಲ್ಲಿರಲಿ ಅದೂ ಹೃದಯಪೂರ್ವಕವಾಗಿ, ಬೇರೆಯವರ ಒತ್ತಾಯಪೂರ್ವಕವಾಗಿ ಅಲ್ಲ. ಅದರರ್ಥ ಪ್ರತಿದಿನವೂ ಹೆಚ್ಚು ಸಮಯ ಕೆಲಸಮಾಡಿ ಎಂದಲ್ಲ. ಅವಶ್ಯಕತೆಯಿದ್ದಾಗ ಮಾತ್ರ. ಯಾವುದಾದರೂ ಮುಖ್ಯವಾದ ಕೆಲಸ ಅಂದೇ ಪೂರ್ಣಗೊಳ್ಳಬೇಕಿರುತ್ತದೆ ಅಥವಾ ತುರ್ತಾಗಿ ಅಂದೇ ಮುಗಿಸುವ ಅವಶ್ಯಕತೆಯಿರುತ್ತದೆ. ಅಂತಹ ಸಂದರ್ಭಗಳಲ್ಲಿ ಹೃದಯಪೂರ್ವಕವಾಗಿ ನಿಮ್ಮ ಸಮಯವನ್ನು ಸಂಸ್ಥೆಗೆ ತ್ಯಾಗದ ಮನೋಭಾವದಿಂದ ಸಮರ್ಪಿಸಿ. ನಿಮ್ಮ ಈ ನೈತಿಕ ನಡುವಳಿಕೆಗೆ, ಕಾರ್ಯಕ್ಷಮತೆಗೆ ದಕ್ಕಬೇಕಾದಂತಹ ಗೌರವ,ಸ್ಥಾನಮಾನ ಮುಂದೆ ದೊರಕೇ ದೊರಕುತ್ತದೆ.

ಕೆಲಸಗಳನ್ನೆಂದೂ ಮುಂದಕ್ಕೆ ಹಾಕಬೇಡಿ. ಕೆಲಸಗಳನ್ನು ಒಂದೊಂದರಂತೆ ಮಾಡದೆ, ’ಅಂದು ಮಾಡುತ್ತೇನೆ,ಇಂದು ಮಾಡುತ್ತೇನೆ, ಅಗೋ ಆಯಿತು, ಇಗೋ ಆಯಿತು’ ಎನ್ನುವಂತಹ ಮನೋಭಾವವನ್ನು ಎಂದೆಂದಿಗೂ ಬೆಳಸಿಕೊಳ್ಳಬೇಡಿ.ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ. ಸಮಯವನ್ನು ಕಳೆಯದೆ, ನಿಮ್ಮ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿ ಎಲ್ಲರೂ ಮೆಚ್ಚುವಂತೆ!.
ಇಂದು ಮಾಡಬೇಕಾದುದನ್ನು ಈ ಕ್ಷಣವೇ ಆರಂಭಿಸಿ,ನಾಳೆಯೆನ್ನುವುದು ಬೇಡ. ನೆನಪಿರಲಿ ’ನಾಳೆ ಎಂದರೆ ಹಾಳು’ ಎಂಬ ಗಾದೆ.ನಾಳೆ...ನಾಳೆ ಎಂದು ಮುಂದೆ ಹಾಕಿದರೆ ಮನಸ್ಸಿನಲ್ಲಿ ಸೋಮಾರಿತನವುಂಟಾಗಿ ಯಾವ ಕೆಲಸವೂ ಪೂರ್ತಿಯಾಗದೆ ಕೊನೆಗೆ ಭೂತಾಕಾರವಾಗಿ ಬೆಳೆದು ನಿಮ್ಮನ್ನು ಕಾಡಬಹುದು.ಸಮಯವನ್ನು ಕಳೆಯುವುದು ಅಥವಾ ಕೊಲ್ಲುವುದೆಂದರೆ ಜೀವನದಲ್ಲಿ ಸೋಲು ಅಥವಾ ಅಧಃಪತನವೆಂಬುದನ್ನು ನೀವು ಮನಗಾಣಬೇಕು.

ಸಮಯ ಮೌಲ್ಯಯುತವಾದುದು ಎಂಬುದು ನಿಮಗೆ ತಿಳಿದಿದೆ, ಬರಿ ತಿಳಿದಿದ್ದರೆ ಸಾಲದು ಅದರ ಮಹತ್ವವನ್ನೂ ಅರಿತಿದ್ದರೆ ಒಳ್ಳೆಯದು.ಸಮಯವನ್ನು ಹಣವನ್ನಾಗಿ ಪರಿವರ್ತಿಸುವುದು ಕಾಯಕದಿಂದ ಮಾತ್ರ ಎಂಬುದು ನಿಮಗೆ ಗೊತ್ತಿರಲಿ. ಕೆಲಸವಿಲ್ಲದ ಸಮಯದಲ್ಲಿ ಬೇಡದ ವಿಷಯಗಳನ್ನು ಚರ್ಚಿಸಿ, ಗಾಳಿಮಾತು,ಊಹಾಪೋಹಗಳು ಹರಡದಂತೆ ಮಾಡಬೇಡಿ.ಕಳೆದುಹೋದ ಕಾಲ ಮತ್ತೆಂದೂಬಾರದು. ಕಾರ್ಯಕ್ಷೇತ್ರದಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ.ವಿಶ್ರಾಂತಿಯ ಸಮಯದಲ್ಲೂ ಕಾರ್ಯಗಳ ಬಗ್ಗೆ ಯೋಚಿಸಿ,ಕಾರ್ಯಗಳ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ.

ವ್ಯಕಿಗತ ದೂರವಾಣಿ ಕರೆಗಳಿಗೆ ಸಂಸ್ಥೆಯ ದೂರವಾಣಿಯನ್ನು ಉಪಯೋಗಿಸಬೇಡಿ. ಅವಶ್ಯಕತೆ ಅದೂ ತೀರ ತುರ್ತುಪರಿಸ್ಥಿಯಲ್ಲಿ ಮಾತ್ರ ದೂರವಾಣಿ ಕರೆಯನ್ನು ಉಪಯೋಗಿಸಿಕೊಳ್ಳಿ. ಅಗತ್ಯತೆ ಹಾಗೂ ಅನಗತ್ಯತೆಯ ನಡುವಿನ ಅಂತರ ತೀರ ಕಡಿಮೆಯಾದರೂ ಸಂಸ್ಥೆಯು ಕೊಟ್ಟ ಸ್ವಾತಂತ್ರವನ್ನು ದುರಪಯೋಗಪಡಿಸಿಕೊಳ್ಳುವುದು ಉಚಿತವಲ್ಲ. ಎಷ್ಟು ಅವಶ್ಯಕತೆಯೋ ಅಷ್ಟೇ ಮಾತನಾಡಿ ತುಂಬಾ ಹೊತ್ತು ಸಂಸ್ಥೆಯ ದೂರವಾಣಿಯನ್ನು ನೀವು ಉಪಯೋಗಿಸುತ್ತಿದ್ದರೆ ಒಳಬರುವ ಕರೆಗಳು ನಿಮ್ಮ ವ್ಯಕ್ತಿಗತ ಕರೆಯಿಂದ ತೊಂದರೆಯಾಗುತ್ತದೆ. ಇದರಿಂದ ಅಗತ್ಯ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದೆ ಸೊರಗುತ್ತದೆ. ಇದು ಸಂಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ. ಸಮಯ ಹಾಗು ಹಣ ಎರಡೂ ವ್ಯಯವಾಗುತ್ತದೆ.

ಒಳ್ಳೆಯವರಾಗಿರಿ ಹಾಗೂ ಒಳ್ಳೆಯದನ್ನೇ ಮಾಡಿರಿ. ಸಂಸ್ಥೆಯಲ್ಲಿ ಎಲ್ಲರಿಗೂ ಸಹಾಯ ಮಾಡಿ. ಸಹೋದ್ಯೋಗಿಗಳ ಕೆಲಸದಲ್ಲಿ ಸಹಾಯಮಾಡಿ. ಆಗಬೇಕಾದಂತಹ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವುದಕ್ಕೆ ಎಲ್ಲರೊಂದಿಗೂ ಸಹಕರಿಸಿ.
ಸಂಸ್ಥೆಗೆ ನಿಷ್ಠಾವಂತರಾಗಿರಿ,ಸಮಯಕ್ಕೆ ಬೇಕಾದಾಗ ಸಂಸ್ಥೆಯ ಕೆಲಸವನ್ನು ಹೆಚ್ಚುವರಿಯಾಗಿ ಮಾಡಿ.ಎಂದಿಗೂ ಜಾಣತನದಿಂದ ಜಾರಿಕೊಳ್ಳಲು ಪ್ರಯತ್ನಿಸಬೇಡಿ. ಸಂಸ್ಥೆ ನಿಮ್ಮನ್ನು ಹಾಗು ನಿಮ್ಮ ಕುಟುಂಬವನ್ನು ಪೋಷಿಸುತ್ತಿದೆ ಎನ್ನುವುದನ್ನು ಮರೆಯಬೇಡಿ.ಸಂಸ್ಥೆಯು ಕಾರ್ಯಕ್ಷೇತ್ರ-ನಮ್ಮ ಯೋಗ್ಯತೆಗೆ ತಕ್ಕಂತೆ ಕೆಲಸವನ್ನು ಕೊಟ್ಟ ಸಂಸ್ಥೆಗೆ ಚಿರಋಣಿಗಳಾಗಿರೋಣ. ನಿಮ್ಮ ಕೆಲಸವನ್ನು ಪ್ರೀತಿಸಿ.ನಮ್ಮ ಏಳಿಗೆ ಹಾಗೂ ಸಂಸ್ಥೆಯ ಏಳಿಗೆ ಎರಡೂ ನಮ್ಮ ಕೈಯಲ್ಲಿಯೇ ಇದೆ.

ಶುಕ್ರವಾರ, ಅಕ್ಟೋಬರ್ 5, 2012

ಮಿತಿಯ ಅಂಕೆ, ಸಾಮರ್ಥ್ಯದ ಶಂಕೆ...



ನನ್ನಿಂದ ಇದು ಸಾಧ್ಯವಿಲ್ಲ,ನನಗೆ ಅದು ಸಾಧ್ಯವಿಲ್ಲ. ಇಂತಹ ಮಾತುಗಳನ್ನು ನಾವು ಆಗಾಗ ಕೇಳಿಸಿಕೊಳ್ಳುತ್ತಿರುತ್ತೇವೆ.ಕೈ,ಕಾಲು,ಬುದ್ಧಿ ಎಲ್ಲವೂ ಸರಿಯಾಗಿ ಇರುವವರೇ ಇಂತಹ ಮಾತುಗಳನ್ನು ಆಡಿದರೆ ಆಶ್ಚರ್ಯಪಡಬೇಕಾಗುವುದಲ್ಲದೆ ಮತ್ತೇನೂ ಸಾಧ್ಯವಿಲ್ಲ.ಅದನ್ನು ಫಲಾಯನ ವಾದವೆನ್ನಬಹುದಲ್ಲವೇ? ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಇತಿ-ಮಿತಿಗಳನ್ನು ಅರಿಯುವ ಸಾಮರ್ಥ್ಯ ಇದ್ದೇ ಇರುತ್ತದೆ. ಆದರೂ ತನ್ನ ಮಿತಿಯನ್ನು ದಾಟಲಾರದಂತಹ ಕೋಟೆ-ಕಂದಕಗಳನ್ನು ನಮ್ಮ ಸುತ್ತಲೂ ನಾವೇ ನಿರ್ಮಿಸಿಕೊಂಡಿರುತ್ತೇವೆ ಹಾಗು ಅದನ್ನು ದಾಟಲಾರದ ಹೆಳವರಾಗಿರುತ್ತೇವೆ.

ವೇದಗಳು ಸಾರಿರುವಂತೆ ಪ್ರತಿಯೊಬ್ಬರೂ ’ಅಮೃತ ಪುತ್ರ’ರೇ, ಪಾಪದ ಪಿಂಡಗಳಂತೂ ಖಂಡಿತ ಅಲ್ಲ.ಹಾಗೆ ನಮ್ಮ ರಾಷ್ಟ್ರಕವಿ ಕುವೆಂಪುರವರು ಹೇಳಿರುವಂತೆ ಹುಟ್ಟಿನಿಂದ ಪ್ರತಿಯೊಬ್ಬರೂ ವಿಶ್ವಮಾನವರೇ, ಆದರೆ ಬೆಳೆ ಬೆಳೆಯುತ್ತಾ ನಮ್ಮ ತನವನ್ನು ಕಳೆದುಕೊಂಡು ಹೆಳವರಾಗುತ್ತಾ, ಬದುಕನ್ನು ನರಕವಾಗಿಸಿಕೊಳ್ಳುತ್ತಾ ಸಾಗುತ್ತೇವೆ.ಎಷ್ಟು ವಿಪರ್ಯಾಸವಲ್ಲವೇ? ಇದಕ್ಕೆ ಮುಲಕಾರಣ ನಮ್ಮನ್ನು ನಾವು ಅರಿಯದೇ ಇರುವುದೇ ಆಗಿದೆ. ನಮ್ಮ ಸಾಮರ್ಥ್ಯಗಳನ್ನು ಅರಿಯುವುದು ಕೂಡ ಬಹಳ ಕಠಿಣವಾದ ಕೆಲಸವೇ ಆಗಿದೆ. ಇದಕ್ಕೆ ಉತ್ತರವೆಂಬಂತೆ ಗೀತೆ ಹೇಳುತ್ತದೆ ನಮ್ಮ ಸಾಮರ್ಥ್ಯ ನಮ್ಮ ಮಿತಿಗಳನ್ನು ದಾಟುವಷ್ಟಿದೆ ಎಂದು. ನಮ್ಮ ಸ್ಥಿತಿ ಹೇಗಿದೆ ಎಂದರೆ ನಾವು ನಮ್ಮ ಮಿತಿಗಳಿಗೆ ಅಂಟಿಕೊಂಡು ಅದರಿಂದ ಹೊರಬರಲಾರದವರಾಗಿ ನರಳುತ್ತೇವೆ.ನಮ್ಮ ಮಿತಿ ದೈಹಿಕವಾಗಿರಬಹುದು,ಭಾವನಾತ್ಮಕವಾಗಿರಬಹುದು ಅಥವಾ ಮಾನಸಿಕವಾಗಿರಬಹುದು. ಅದು ಸಣ್ಣದಿದ್ದರೂ,ಬೆಟ್ಟದಷ್ಟದೆಂದು ಭ್ರಮಿಸಿ ಕಷ್ಟಪಡುವವರು ನಾವೇ!.ನಮ್ಮ ಸಾಮರ್ಥ್ಯ ನಮ್ಮ ಮಿತಿಗಳನ್ನು ಮೀರುವಷ್ಟಿದೆ ಎಂಬ ಸಾಕ್ಷಾತ್ಕಾರ ನಮಗಾದಲ್ಲಿ ಮಾತ್ರ ನಾವು ಮುಟ್ಟಿದ್ದೆಲ್ಲವೂ ಚಿನ್ನ ವಾಗುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದಲೇ ವೇದ ’ ಅಹಂ ಬ್ರಹ್ಮಾಂಸ್ಮಿ’ ’ ನಿಮಗೆ ಮಿತಿಗಳಿಲ್ಲ’ ಎಂದು ಸಾರಿವೆ.
ನಮ್ಮ ದೇಹಕ್ಕೆ, ಮನಸ್ಸಿಗೆ ಮಿತಿಗಳಿರಬಹುದಾದರೂ ನಮ್ಮ ಆತ್ಮ ಅಮಿತವಾದುದು.ಅದ್ದರಿಂದ ನಮ್ಮ ಜೀವನ ಈ ಮಿತಿ-ಅಮಿತಗಳ ಒಡನಾದಲ್ಲಿಯೇ ಅಡಕವಾಗಿದೆ. ಕೆಲವು ಮಹಾನ್ ವ್ಯಕ್ತಿಗಳು ತಮ್ಮ ಮಿತಿಗಳನ್ನು ದಾಟಿ ಏನೆಲ್ಲಾ ಸಾಧಿಸಿದರು ಎಂಬುದು ಅವರ ಸಾಹಸಗಾಥೆಯನ್ನು ಓದಿದರೆ ಸಾಕು ಮೈಯೆಲ್ಲಾ ಜುಮ್ಮೆನ್ನುವುದು. ನಿಮಗೆಲ್ಲಾ ಸ್ಟೀಫನ್ ಹಾಕಿಂಗ್ ಗೊತ್ತಿರಬಹುದು. ಅತನನ್ನು ನೋಡಿದರೆ ಇವನೇನೂ ಮಾಡಲಾರ? ಎಂಬ ಭಾವನೆ ನಮ್ಮಲ್ಲಿ ಮೊಡದೇ ಇರದು. ಆತನ ದೈಹಿಕ ಮೈಕಟ್ಟಿನಲ್ಲಿ ಅನೇಕ ಮಿತಿಗಳಿವೆ, ಆದರೆ ಅದಕ್ಕಿಂತಲೂ ಆತನ ಮನಸ್ಸು,ಬುದ್ಧಿ ಮಿತಿಗಳನ್ನು ದಾಟಿ ಎಲ್ಲಾ ಸಾಮರ್ಥ್ಯಗಳನ್ನು ಬಟ್ಟೀ ಇಳಿಸಿಕೊಂಡಿದೆ. ಹಾಗೇ ಬಿಥೋವನ್ ತನ್ನ ಅತ್ಯತ್ತಮ ಸಿಂಫನಿಯನ್ನು ರಚಿಸಿದಾಗ ಅವನು ಕಿವುಡನಾಗಿದ್ದ. ಹೆಲೆನ್ ಕೆಲ್ಲರ್ ಹೆಸರು ಯಾರು ಕೇಳಿಲ್ಲ? ಆಕೆಯೂ ದೈಹಿಕವಾಗಿ ಮಿತಿಗೊಳಪಟ್ಟಿದ್ದರೂ ಆಕೆ ಮಹಾನ್ ಮಹಿಳೆಯಾದಳು.

ಥಾಮಸ್ ಆಲ್ವ ಎಡಿಸನ್ ಪ್ರಪಂಚಕ್ಕೆ ಬೆಳಕು ನೀಡಿದಾತ ಕಿವುಡನಾದರೂ ಜಗತ್ತಿನ ಅತಿದೊಡ್ಡ ವಿಜ್ಯಾನಿಗಳಲ್ಲಿ ಒಬ್ಬನಾಗಿದ್ದಾನೆ.ಸಿಂಪ್ಸನ್ ಎಂಬಾತನಿಗೆ ಎಲುಬುಗಳ ರೋಗವಿತ್ತು. ಆದರೂ ಆತ ಅಮೇರಿಕಾದ ಅತಿಪ್ರಸಿದ್ಧ ಫುಟ್ ಬಾಲ್ ಆಟಗಾರನೆನಿಸಿದ. ಕ್ರಿಕೇಟ್ ಆಟದಲ್ಲಿ ಅತ್ಯುತ್ತಮ ಕ್ಷೇತ್ರರಕ್ಷಕ ಎನಿಸಿಕೊಂಡಿದ್ದ ದಕ್ಷಿಣ ಆಫ್ರೀಕಾದ ಆಟಗಾರ ಜಾಂಟಿ ರೋಡ್ಸ್ ಕೂಡ ಅಪಸ್ಮಾರ ( ಮೂರ್ಛೆರೋಗ)ದಿಂದ ಬಳಲುತ್ತಿದ್ದ. ಕನ್ನಡ ಚಿತ್ರರಂಗದ ಬಾಲಣ್ಣ ( ಬಾಲಕೃಷ್ಣ) ಯಾರಿಗೆ ತಾನೆ ಗೊತ್ತಿಲ್ಲ? ಅವರ ಅಭಿನಯಕ್ಕೆ ಮನಸೋಲದವರು ಯಾರಿಲ್ಲ ಹೇಳಿ!, ಆದರೆ ಅವರೂ ಕೂಡ ಕಿವುಡರಾಗಿದ್ದರೆಂದು ಎಷ್ಟು ಜನಕ್ಕೆ ತಿಳಿದಿದೆ? ಇವರೆಲ್ಲರಿಗೂ ಮಿತಿಗಳಿದ್ದವು, ಆ ಮಿತಿಗಳ ಜೊತೆಗೆ ಸಾಮರ್ಥ್ಯಗಳೂ ಮೇಳೈಸಿದ್ದವು ಎಂಬುದನ್ನು ನಾವು ಅರಿಯಬೇಕಿದೆ. ಇಷ್ಟೆಲ್ಲಾ ಹೇಳಬೇಕಾಗಿದ್ದು ಏಕೆಂದರೆ ನಾವು ನಮ್ಮ ಮಿತಿಗಳ ಅಡಿಯಾಳಾಗಿ ನಮ್ಮ ಸಾಮರ್ಥ್ಯಗಳನ್ನು ಅರಿಯದೆ ಜೀವನದಲ್ಲಿ ತೊಳಲಾಡುತ್ತೇವೆ. ಆ ಮಿತಿಯನ್ನು ದಾಟಿ ನಮ್ಮ ಸಾಮರ್ಥ್ಯದ ನಿಜವಾದ ಸ್ವರೂಪವನ್ನು ತೋರಿದಾಗಲೇ ನಾವು ಕೂಡ ಏನನ್ನಾದರೂ ಸಾಧಿಸಲು ಸಾಧ್ಯ. ಆ ಮಿತಿಯ ಪರಿಧಿಯ ದಾಟಿ ಸಾಮಾರ್ಥ್ಯದ ನಿಜರೂಪವನ್ನು ಎಚ್ಚರಿಸೋಣ ಬನ್ನಿ. ಜ್ಯಾನದ ಬೆಳಕಿನಲ್ಲಿ ಜೀವನ ಸಾರ್ಥಕಗೊಳಿಸಿಕೊಳ್ಳೋಣ.

ಶನಿವಾರ, ಸೆಪ್ಟೆಂಬರ್ 15, 2012

ಕಾಯಕಯೋಗಿ,ಯಂತ್ರ ಋಷಿ-ಸರ್. ಎಂ.ವಿಶ್ವೇಶ್ವರಯ್ಯ


ನಿನ್ನೆ ನಮ್ಮ ರಾಜ್ಯದ, ದೇಶದ ಅತ್ಯುತ್ತಮ ಇಂಜನಿಯರ್ ಆದ ಶ್ರೀಯುತ ಸರ್. ಎಂ.ವಿಶ್ವೇಶ್ವರಯ್ಯ ನವರ ಜನ್ಮದಿನ. ಕರ್ನಾಟದ ಜನತೆಯ ಹೆಮ್ಮೆ ಅಂದರೆ ವಿಶ್ವೇಶ್ವರಯ್ಯ ನವರು. ಅವರ ಜೀವಿತಾವಧಿಯಲ್ಲಿ ಮಾಡಿದಂತಹ ಅನೇಕ ಕೆಲಸ ಕಾರ್ಯಗಳು ಇಂದು ನಮ್ಮ ತಲೆಮಾರಿನ ಯಾರೂ ಕೂಡ ಅಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಒಬ್ಬ ಮನುಷ್ಯನಿಂದ ಇಷ್ಟೇಲ್ಲಾ ಮಾಡಲು ಸಾಧ್ಯವೇ ಅನ್ನುವ ಹಾಗೆ ಮಾಡಿ ತೋರಿಸಿದ ಮಹಾನ್ ಕಾಯಕಯೋಗಿ,ಯಂತ್ರ ಋಷಿ ನಮ್ಮ ವಿಶ್ವೇಶ್ವರಯ್ಯನವರು.ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತನ್ನು ಅಕ್ಷರಶಹ ಮಾಡಿತೋರಿಸಿದ ಸಾಧಕ ನಮ್ಮ ವಿಶ್ವೇಶ್ವರಯ್ಯ.

 ಅಂತಹವರ ಬಗ್ಗೆಯೂ ಕೂಡ ಇಲ್ಲಸಲ್ಲದ ಆರೋಪಗಳನ್ನು, ಅವರ ವ್ಯಕ್ತಿತ್ವಕ್ಕೆ ಮಸಿಬಳಿಯುವ ಕೆಲಸವನ್ನು ಕೆಲವು ಲದ್ದಿಜೀವಿಗಳು ಮಾಡಲು ಹೊರಟಿರುವುದು ಶೋಚನೀಯ. ಅಂತಹವರನು ವೈಚಾರಿಕ ಭಯೋತ್ಪಾದಕರೆನ್ನದೆ ಇನ್ನೇನೆನ್ನಲು ಸಾಧ್ಯವಿಲ್ಲ. ತಮ್ಮ ನಾಲಗೆಯಿಂದ ತಮ್ಮ ಯೋಗ್ಯತೆ ಏನು ಎಂದು ಕನ್ನಡದ ಜನತೆಗೆ ತೋರಿಸಿದ್ದಾರೆ. ಕೆಲಸ ಮಾಡಲು , ಅಂತಹ ವ್ಯಕ್ತಿಯ ಬಗ್ಗೆ ಮಾತನಾಡಲೂ ಯೋಗ್ಯತೆ ಇಲ್ಲದವರೂ ಕಾಲೆಳೆಯುವುದನ್ನು ಬಿಟ್ಟು ಇನ್ನೇನನ್ನೋ ಮಾಡುತ್ತಾರೆ ಎಂದು ಹೇಗೆ ನಿರೀಕ್ಷಿಸಲು ಸಾಧ್ಯ?

ಅದು ಏನೇ ಇರಲಿ ತಮ್ಮ ತೆವಲನ್ನು ತೀರಿಸಿಕೊಳ್ಳಲಿ ಬಿಡಿ. ನಾಯಿ ಬೊಗಳಿದರೆ ದೇವಲೋಕ ಹಾಳಾದೀತೇ?

ವಿಶ್ವೇಶ್ವರಯ್ಯನವರ ಬಗ್ಗೆ ಇಂದಾದರೂ ಸ್ವಲ್ಪ ತಿಳಿದುಕೊಳ್ಳುವ ಒಂದು ಸಣ್ಣ ಪ್ರಯತ್ನ ಇದು ಅಷ್ಟೇ!.


ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಾಚಲಮ್ಮ'. ವಿಶ್ವೇಶ್ವರಯ್ಯನವರು ಜನಿಸಿದ್ದು ಬೆಂಗಳೂರಿನಿಂದ ೪೦ ಮೈಲಿ ದೂರದಲ್ಲಿರುವ  ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ. ಅವರು ೧೫ ವರ್ಷದವರಿರುವಾಗಲೆ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಬಿಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

ವಿಶ್ವೇಶ್ವರಯ್ಯನವರ ಸಾಧನೆಗಳು:
೧. ಕನ್ನಂಬಾಡಿ ಕಟ್ಟೆ  ನಿರ್ಮಾತೃ
೨ ಹಿಂದೂಸ್ಥಾನ್ ಏರ್ ಕ್ರಾಫ್ಟ್ ಫ್ಯಾಕ್ಟರಿ ಈಗ HAL
೩. ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ
೪.ಸರಕಾರಿ ಸಾಬೂನು ಕಾರ್ಖಾನೆ
೫.ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
೬.ಕನ್ನಡ ಸಾಹಿತ್ಯ ಪರಿಷತ್,
೭. ಮೈಸೂರು ವಿಶ್ವವಿದ್ಯಾನಿಲಯ
೮ ಶಿವನ ಸಮುದ್ರ ಹಾಗು ಜೋಗ್ ಜಲ ವಿದ್ಯುತ್ ಯೋಜನೆ
೯ ಬ್ಲಾಕ್ ಸಿಸ್ಟಮ್  ನೀರಾವರಿ ಯೋಜನೆ
೧೦. ಪ್ಯಾರಾ ಸಿಟಾಯ್ಡ್ ಲ್ಯಾಬೋರೇಟರಿ
೧೧. ಮೈಸೂರು ಸಕ್ಕರೆ ಕಾರ್ಖಾನೆ
೧೨. ಮೈಸೂರು ಸ್ಯಾಂಡಲ್ ಸೋಪು
೧೩. ಭಟ್ಕಳ ಬಂದರು
೧೪. ಶ್ರೀಗಂಧ ಎಣ್ಣೆ ತಯಾರಿಕೆ
೧೫. ಹಿಂದೂ ಮಾರ್ಡನ್ ಹೋಟಲ್
೧೬. ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ
೧೭.ಬೆಂಗಳೂರು ವಿಶ್ವವಿದ್ಯಾನಿಲಯ
೧೮. ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ
೧೯. ಸೆಂಚುರಿ ಕ್ಲಬ್
೨೦. ಪೂನಾ ಡೆಕ್ಕನ್ ಕ್ಲಬ್
೨೧. ಹೆಬ್ಬಾಳದ ಗಾಂಧಿ ಕೃಷಿ ವಿಶ್ವವಿದ್ಯಾಲಯ
೨೨.ಗ್ವಾಲಿಯರ್ ಟೈಗರ್ ಡ್ಯಾಂ
೨೩. ಪೂನಾದ ಖಡಕವಾಸ್ಲಾ ಜಲಾಶಯ
೨೪.ಹೈದರಾಬಾದಿನ ಒಳಚರಂಡಿ ವ್ಯವಸ್ಥೆ
೨೫.ಹೈದರಾಬಾದಿನ ಮೂಸಿ ನದಿಯ ಯೋಜನೆ

ಪ್ರಶಸ್ತಿಗಳು:

೧೯೫೫ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ-ಭಾರತ ರತ್ನ
೧೯೧೫ ರಲ್ಲಿ ಬ್ರಿಟನ್ ಸರ್ಕಾರದ ನೈಟ್ ಹುಡ್

ಸೆಪ್ಟಂಬರ್ ೧೫ ಅವರ ಜನ್ಮದಿನ. ಈ ದಿನವನ್ನು "ಇಂಜನಿಯರ್ ದಿನ"ವನ್ನಾಗಿ ಆಚರಿಸುತ್ತೇವೆ.
ಮತ್ತೊಮ್ಮೆ ಕನ್ನಡನಾಡಿ ಹುಟ್ಟು ಬಾ ಚೇತನವೇ.......

ಗುರುವಾರ, ಮಾರ್ಚ್ 22, 2012

ಜಯತೆ, ಜಯತೆ,ಸತ್ಯಮೇವ ಜಯತೆ...


ಸತ್ಯ ಅಂದ ತಕ್ಷಣ ನಮಗೆ ಮೊದಲು ನೆನಪಾಗುವುದು ಸತ್ಯ ಹರಿಶ್ಚಂದ್ರ. ಸತ್ಯಕ್ಕಾಗಿ ಏನೆಲ್ಲಾ ಕಷ್ಟ-ನಷ್ಟ,ನೋವುಗಳನ್ನು ಪಡೆದನೆಂಬುದನ್ನು ನಾವು ಕೇಳಿದ್ದೇವೆ, ಚಲನಚಿತ್ರದಲ್ಲಿ ಅಣ್ಣಾವ್ರ ಪಾತ್ರ ಕಣ್ಣು ಮುಂದೆ ಬಂದರೂ ಅವರು ಅನುಭವಿಸುವ ಚಿತ್ರ-ವಿಚಿತ್ರ ಕಷ್ಟಗಳನ್ನು ನೋಡಿ ಕಣ್ಣಲ್ಲಿ ಕಾವೇರಿ ಹರಿಸದವರು ಯಾರಿದ್ದಾರೆ?. ಸತ್ಯ ಹರಿಶ್ಚಂದ್ರನ ಪರಿಸ್ಥಿತಿಗೆ ಮರುಕ ಪಟ್ಟಿದ್ದೇವೆ. ಸತ್ಯ ಹೇಳಿದ ಫಲವಾಗಿ ಅನೇಕ ಕಷ್ಟ-ನೋವುಗಳನ್ನು ಅನುಭವಿಸಿದ ಸತ್ಯ ಹರಿಶ್ಚಂದ್ರ ಎಲ್ಲರಿಗೂ ಪಾಠ ಕಲಿಸಿಹೋಗಿದ್ದಾನೆ. ಸತ್ಯ, ಸತ್ಯ ಅಂತೇನಾದರೂ ನೀವೂ ಆದರ್ಶಕ್ಕೆ ಬಲಿಬಿದ್ದರೆ ನನ್ನಂತೆಯೇ ಕಷ್ಟ ಅನುಭವಿಸಬೇಕಾಗುತ್ತದೆ.ಅದಕ್ಕಾಗಿಯೇ ಏನೋ ಇಂದು ಸತ್ಯ’’ಸತ್ಯವಂತ’’ಸತ್ಯವಂತರು ಎನ್ನುವ ಮಾತುಗಳು ಹಾಗು ಮನುಷ್ಯರೂ ತುಂಬಾ ಅಪರೂಪವಾಗಿಬಿಟ್ಟಿವೆ. ಸತ್ಯ, ಸತ್ಯ ಎಂದರೆ ಕಷ್ಟ, ಕಷ್ಟ ಎನ್ನುವಂತಾಗಿದೆ. ನಮ್ಮ ಪ್ರಾಚೀನರೋ ಸತ್ಯಂ ವದ , ಧರ್ಮಂ ಚರ" ಎಂದು ಹೇಳಿದ್ದಾರೆ ಆದರೆ ಈಗೇನಾಗಿದೆ ಸತ್ಯಂ ವಧ, ಧರ್ಮ ನಚರ ಆಗಿರೋದು ವಿಪರ್ಯಾಸ ಹಾಗು ಹಾಸ್ಯಾಸ್ಪದ.
 ಯಾವುದಾದರೂ ಸಂದರ್ಭಗಳಲ್ಲಿ ನಮ್ಮನ್ನು ನಾವು ಸಮರ್ಥಿಸಿಕೊಳ್ಳಬೇಕಾದರೆ ನಾನು ಹೇಳುತ್ತಿರುವುದು ಸತ್ಯ ಅಂದಾಗ ಧುತ್ತನೆ ಮೇಲೆರಗುವ ಪ್ರಶ್ನೆ ಎಂದರೆ ನೀನೇನು ಸತ್ಯ ಹರಿಶ್ಚಂದ್ರನ ಮೊಮ್ಮಗನಾ? ಅಥವಾ ಸತ್ಯ ಹರಿಶ್ಚಂದ್ರನ ತುಂಡಾ? ಅಂತ ಮೂದಲಿಸುವುದನ್ನು  ನಾವೆಲ್ಲಾ ಕಾಣಬಹುದು. ಇನ್ನು ನಮ್ಮ ನ್ಯಾಯಾಲಯಗಳಲ್ಲಿ ಸಾಕ್ಷಿಕಟ್ಟೆಯಲ್ಲಿ ನಾನು ಹೇಳುವುದೆಲ್ಲಾ ಸತ್ಯ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ನ್ಯಾಯಾಧೀಶರ ಮುಂದೆ ಪ್ರಮಾಣ ಮಾಡಿ ಹೇಳುವ ಮಾತುಗಳು ಎಷ್ಟು ಸತ್ಯದಿಂದ ಕೂಡಿರುತ್ತದೆ ಎನ್ನುವುದು ನಮಗೆಲ್ಲಾ ತಿಳಿದೇಯಿದೆ.ಅದು ಏನೇ ಆಗಿರಲಿ ಸತ್ಯ ವನ್ನು ನುಡಿಯುವುದು ,ಸತ್ಯವಂತನಾಗುವುದು ತುಂಬಾ ಕಠಿಣವಾದುದು ಹಾಗು ಅದಕ್ಕೆ ಸಾಧನೆಯ ಅಗತ್ಯವಿದೆ.

ಇನ್ನು ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಮಹಾತ್ಮ ಗಾಂಧಿಯವರ ಜೀವನ ಅನುಭವವನ್ನು ಓದಿದ ನೆನಪು. ತಾಯಿ ಪುತಲೀ ಬಾಯಿ ಹೇಳುತ್ತಿದ್ದ ಸತ್ಯ ಹರಿಶ್ಚಂದ್ರನ ಕಥೆಯನ್ನು ಕೇಳಿ ತುಂಬಾ ಪ್ರೇರಣೆಯನ್ನು ಅವರು ಪಡೆದಿದ್ದರೆಂದು ನಾವು ತಿಳಿದುಕೊಂಡಿದ್ದೇವೆ. ಅದರ ಉಲ್ಲೇಖವು ಗಾಂಧಿಜೀಯವರ ಜೀವನ ಚರಿತ್ರೆ "My Experiments with Truth" ನಲ್ಲಿ ಕಾಣಸಿಗುತ್ತದೆ.
ಹಾಗೆಯೇ ಪಂಡಿತ್ ಜವಾಹರಲಾಲ ನೆಹರು ರವರ ಪೆನ್ನಿನ ಕಳುವಿನ ಪ್ರಕರಣ, ಸತ್ಯ ಮುಚ್ಚಿಡುವುದು,ತಂದೆ ಮೋತಿಲಾಲ ನೆಹರು ಕೇಳುವುದು, ಅವರಿಂದ ಬಾಸುಂಡೆ ಬರುವ ಹಾಗೆ ಹೊಡೆಸಿಕೊಳ್ಳುವುದು ಅನಂತರ ಸತ್ಯ ಹೇಳುವುದು ಹಾಗು ಅದರಿಂದ ಅನುಭವಿಸುವ ಕಷ್ಟ ಕೇಳಿಯೇ ಮೈ ಜುಮ್ಮೆನ್ನುತ್ತದೆ ಇನ್ನು ಅನುಭವಿಸಿದವರ ಪಾಡು ದೇವರೇ ಬಲ್ಲ.
ಗೋವಿನ ಪದ್ಯ ಯಾರಿಗೆ ತಾನೆ ಗೊತ್ತಿಲ್ಲ! ಅದರಲ್ಲಿ
                 ಸತ್ಯವೇ ನಮ್ಮತಾಯಿ-ತಂದೆ ಸತ್ಯವೇ ನಮ್ಮ ಬಂಧು-ಬಳಗೆ
                 ಸತ್ಯವಾಕ್ಯಕೆ ತಪ್ಪಿನಡೆದರೆ ಮೆಚ್ಚನಾ ಪರಮಾತ್ಮನು
ಎಂಬ ಸಾಲುಗಳು ನಮ್ಮ ನಾಡಿನ,ಜನರ ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುತ್ತದೆ ಎಂದು ನಮ್ಮ ಅಚ್ಚುಮೆಚ್ಚಿನ ಕನ್ನಡದ ಗುರುಗಳಾದ ದಿ|| ಕೆ,ಎಸ್,ಗುರುರಾಜರಾವ್ ಹೇಳುತ್ತಿದ್ದ ರೀತಿ,ಗಾಂಭೀರ್ಯ ಶಾಲಾ ದಿನಗಳಲ್ಲಿ ನಮ್ಮನ್ನು ಅಕ್ಷರಶಹ ಸತ್ಯ ಹರಿಶ್ಚಂದ್ರನ ವಂಶದವರೇ ಎನ್ನುವಂತೆ ಮಾಡಿಬಿಟ್ಟಿದ್ದಂತೂ ದಿಟ.
ಮೊದಲನೇ ಪಾಳಿ ಮುಗಿಸಿ ಬಸ್ಸ್ ಏರುತ್ತಿದ್ದಂತೆ ಪ್ರೇಯಸಿ ನಿದಿರೆ ಕ್ಷಣಗಳಲ್ಲಿ ನಮ್ಮನು ಆವರಿಸಿಬಿಡುತ್ತಾಳೆ ಎಚ್ಚರವಾಗುವುದು ನಮ್ಮ Stop ನಲ್ಲೇ ಅದೂ ಗೆಳೆಯರು ಎಬ್ಬಿಸಿದರೆ ಉಂಟು ಅವರೂ ಮರೆತರೆ ಮುಂದಿನ stop ಇಲ್ಲವೇ ಕೊನೆಯ stop  ಇದ್ದೇಇರುತ್ತದಲ್ಲ. ಅವತ್ತು ಹಾಗಗಲಿಲ್ಲ ಬಿಡಿ ನನ್ನ stop  ಬರುವುದರೊಳಗಾಗಿ ನಾನು ನಿದ್ದೆಯಿಂದ ಎಚ್ಚರಗೊಂಡಿದ್ದೆ. ಮನದಲ್ಲಿ ನೂರು ಯೋಚನೆಗಳು ಮನೆಮಾಡಿತ್ತು. ಕತ್ರಿಗುಪ್ಪೆಯ HDFC ಬ್ಯಾಂಕಿನ ಸಿಗ್ನಲ್ ನಲ್ಲಿ ನಮ್ಮ ಕಾರ್ಖಾನೆಯ ಬಸ್ಸು ನಿಲ್ಲಿಸಿದಾಗ ಸಂಜೆಯ ಬಾಗಿಲು ತೆರೆದುಕೊಳ್ಳುವ ಸಮಯವಾಗಿತ್ತು.ಸಿಗ್ನಲ್ ದಾಟಿ ಮನೆಯ ಕಡೆ ಪಾದ ಬೆಳಸುವುದು ನಿತ್ಯಕಾಯಕ. ಮನೆಯಲ್ಲಿ ಶ್ರೀಮತಿ ಹಾಗೂ ಮಗ ಅನೀಶ್ ಇಲ್ಲದ ಕಾರಣ ಅನ್ನಕುಟೀರದಲ್ಲೇ ಕಾಫಿ ಹೀರಿ ಮನೆಯ ಕಡೆ ನಡೆದೆ. ಬರೆಯದೇ ಇರುವ,ಬರೆಯಬೇಕಾಗಿರುವ ಸಂಗತಿಗಳು,ಕಥೆ,ಕವನಗಳು ಬಹಳಷ್ಟಿದೆ ಎಲ್ಲವನ್ನೂ ನನ್ನ ಬ್ಲಾಂಗಣದಲ್ಲಿ ಟೈಪಿಸುವುದು ಯಾವಾಗ?, ಅದಕ್ಕೆ ಸಮಯ ಯಾವಾಗ ಸಿಗುತ್ತೋ? ಎಂದು ಯೋಚಿಸುತ್ತಾ ಮನೆಯ ಹಾದಿ ಹಿಡಿದೆ. ಕಂಬಾರರ ಮನೆ ಸಿರಿ ಸಂಪಿಗೆ ದಾಟಿ ನಟ ಲೋಕೇಶ್ ಮನೆಯಕಡೆ ಒಂದು ನೋಟ ಬಿಸಾಕಿ ಮನದಲ್ಲಿ ಪುಟಿದೇಳುವ ಭಾವ ಲಹರಿಗೆ ಹೆಜ್ಜೆ-ಹೆಜ್ಜೆಗಳು ಸಾಥ್ ನೀಡುತ್ತಾ ರಾಮ ದೇವರ ಗುಡಿ ರಸ್ತೆ ತಲುಪಿ, ಪಕ್ಕದಲ್ಲೇ ಬರ್ರ್ ಎಂದು ಹೋದ Yamaha  ಗಾಡಿಯವನ್ನು ಮನದಲ್ಲೇ ಬೈದುಕೊಳ್ಳುತ್ತಾ ಹನ್ನೆರಡು ನಿಮಿಷಗಳ ಕಾಲುನಡಿಗೆಯನ್ನು ಸವೆಸಿದ್ದೆ. ಮನೆ ತಲುಪಿದ ತಕ್ಷಣ ಮೊದಲು ಮಾಡುವ ಕೆಲಸವೆಂದರೆ ನನ್ನ ಗಣಕಯಂತ್ರವನ್ನು ಆನ್ ಮಾಡಿ ಬೆಳಗಿನಿಂದ ನನ್ನ ಕಾಲುಗಳನ್ನ ಹಿಡಿದು ಚಿತ್ರಹಿಂಸೆಕೊಡುವ ಶೂಗಳು,ಹಾಗು ಮೈತುಂಬಾ ಯಂತ್ರಗಳ ವಾಸನೆಯನ್ನು ತರೋ ಆಫೀಸ್ ಸಮವಸ್ತ್ರ ತೆಗೆದು ಬೇರೆ ಬಟ್ಟೆಗಳನ್ನು ಧರಿಸುವುದು.ಮುಖತೊಳೆದುಕೊಳ್ಳುವುದು ಪ್ರೆಶ್ ಆಗುವಷ್ಟರಲ್ಲಿ ನನ್ನಾಕೆ ಮನೆಯಲ್ಲಿದ್ದರೆ ಬಿಸಿಬಿಸಿ ತಿಂಡಿ ಬರುತ್ತದೆ ಆದರೆ ಇಂದಿನ ಪರಿಸ್ಥಿತಿ ಬೇರೇನೇ ಅಗಿದೆ ಮನದ ಕೋಣೆಯೊಂದರಲ್ಲಿ ಅವಳಿಲ್ಲ ಮನೆಯಲಿಲ್ಲ ಎನ್ನುವ ಕೊರತೆಯನ್ನು ಎತ್ತಿಹಿಡಿಯುತ್ತಿತ್ತು. ಹೊಟ್ಟೆ ಚುರು ಚುರು ಎನ್ನುವಂತೆ ಅವಳ ನೆನಪೂ ಹೃದಯದಲ್ಲಿ ಚುರುಗುಟ್ಟುವಂತೆ ಮಾಡಿತು.ಗಣಕಯಂತ್ರದ ಮುಂದೆ ಕುಳಿತು ಮೊದಲು ತೆರೆಯುವುದು ನನ್ನ ಬ್ಲಾಂಗಣ,ಸಂಪದ ತಾಣ,ವಿಸ್ಮಯ ನಗರಿ ತಾಣ. ನನ್ನ ಬರಹಗಳಿಗೆ,ಕವನಗಳಿಗೆ ಯಾರು ಯಾರು ಪ್ರತಿಕ್ರಿಯಿಸಿದ್ದಾರೆ ಅಂತ ನೋಡುವುದು, ಅವುಗಳಿಗೆ ಉತ್ತರಿಸುವುದು. ಬೇರೆ ಲೇಖನಗಳನ್ನು,ಕವನಗಳನ್ನು ಓದುವುದು ಹಾಗು ಅವುಗಳಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು . ಆಮೇಲೆ ನನ್ನ ಮೈಲ್ ಗೆ ಬಂದ ಮಿಂಚೆಗಳ ಮೇಲೆ ಕಣ್ಣಾಡಿಸುವುದು ನನ್ನ ಪ್ರತಿದಿನದ  ದಿನಚರಿಯ ಒಂದು ಭಾಗ . ಅರ್ಧ ಗಂಟೆಯಲ್ಲಿ ಎಲ್ಲವನ್ನೂ ಮುಗಿಸಿ ಸ್ವಲ್ಪ ಸಮಯ ನಿದ್ದೆಗೆ ಜಾರುವುದು ವಾಡಿಕೆ. ಸಂಜೆ ೫-೩೦ ಕ್ಕೆ ಮತ್ತೆ ಎದ್ದು ಸಂಜೆ ದೇವರಿಗೆ ನಮಿಸಿ,ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಸಂಜೆ ಆರಕ್ಕೆ ಮನೆಯಿಂದ ನನ್ನ  Hero honda ಗಾಡಿ ಮೇಲೇರಿ  ಸೀತಾ ಸರ್ಕಲ್ ಬಳಿಯಿರುವ ಆಹಾರ್ ಉತ್ಸವ್ ದರ್ಶಿನಿಗೆ  ಹೊರಟೆ. ಯಾವಾಗಲೂ ಗಾಡಿಯ ಮೇಲೇರಿದಾಗ ರಸ್ತೆಯ ನೀತಿ-ನಿಯಮಗಳನ್ನು ತಪ್ಪದೇ ಪಾಲಿಸುವುದು ನಾನು ಪಾಲಿಸಿಕೊಂಡು ಬರುತ್ತಿರುವ 'policy'. ಎಷ್ಟೇ ದೂರವಾದರೂ ತಲೆಗೆ ತಲೆಗಾಪು ( ಶಿರಸ್ತ್ರಾಣ-Helmet) ಧರಿಸಿಯೇ ಹೋಗುತ್ತೇನೆ.ನಾನು ತಲೆಗಾಪನ್ನು ಹಾಕುವುದನ್ನು ಮರೆತರೆ ನನ್ನ ೩ ವರ್ಷದ ಮಗ ಅನೀಶ್ ತಪ್ಪದೇ ಹೇಳುತ್ತಾನೆ " ಪಪ್ಪಾ ಹೆಲ್ಮೆಟ್ ಹಾಕಿಲ್ಲ" ಅಂತ. ಇನ್ನು ಗಾಡಿಯನ್ನು ಓಡಿಸುವ ವೇಗವೂ ಅಷ್ಟೆ ೩೦-೪೦ ಕಿ,ಮೀ ಎಂದೂ ದಾಟದು. ಚೌಡೇಶ್ವರಿ ಚಿತ್ರಮಂದಿರ ದಾಟಿ, ಶ್ರೀ ಮಂಜುನಾಥೇಶ್ವರ ದೇವಸ್ಥಾನ ದಾಟಿದರೆ ಶ್ರೀಮಾತಾ ಕಲ್ಯಾಣ ಮಂಟಪ ಸಿಗುತ್ತೆ. ಅಲ್ಲಿಂದ ಎಡಕ್ಕೆ ತಿರುಗಿದರೆ ಸೀತಾ ವೃತ್ತ ಸಿಗುತ್ತದೆ. ಇತ್ತೀಚೆಗಷ್ಟೇ ಇಲ್ಲಿ ಸೌರ ಚಾಲಿತ ಸಿಗ್ನಲ್ ದೀಪಗಳನ್ನು ಹಾಕಿದ್ದಾರೆ. ನಿಧಾನವಾಗಿ ಗಾಡಿ ಓಡಿಸುತ್ತಾ ಸಿಗ್ನಲ್ ದೀಪಗಳ ಮೇಲೆ ಕಣ್ಣಾಡಿಸಿದೆ ಎಡಗಡೆಗೆ ಚಲಿಸುವ ಹಸಿರು ದೀಪ-ಎಡಗಡೆಗೆ ಹೋಗಬಹುದು ಎಂದು ಹೇಳುವಂತೆ ಹೊತ್ತಿತ್ತು, ಹೀಗಾಗಿ ಗಾಡಿಯನ್ನು ನಿಧಾನವಾಗ ರಸ್ತೆಯಲ್ಲಿ ಚಲಿಸಿದೆ.ಸುಮಾರು ೧೦೦ ಮೀಟರ್ ದೂರದಲ್ಲಿ ಸಂಚಾರಿ ಪೋಲೀಸ್ ನನ್ನ ಗಾಡಿಗೆ ಕೈ ಅಡ್ಡ ಹಾಕಿ ನಿಲ್ಲಿಸಿದ. ನಾನು ಗಾಡಿಯನ್ನು ನಿಲ್ಲಿಸಿದೆ. ಆತನನ್ನು ಕೇಳಿದೆ "ಏಕೆ ನನ್ನನ್ನು ನಿಲ್ಲಿಸಿದಿರಿ?" ಅದಕ್ಕೆ ಅವನು " ನೀವು ಸಿಗ್ನಲ್ ದೀಪವನ್ನು ಜಂಪ್ ಮಾದಿದಿರಿ ಅದಕ್ಕೆ  ನಿಲ್ಲಿಸಿದೆ " ಎಂದ. " ಇನ್ಸ್ಪೆಕ್ಟರ್ ಬಳಿ ಹೋಗಿ ದಂಡ ಕಟ್ಟಿ" ಎಂದ.ನಾನು ಗಾಡಿಯನ್ನು ನಿಲ್ಲಿಸಿ  ಇನ್ಸ್ಪೆಕ್ಟರ್ ಬಳಿ ಹೋದೆ." ಸಾರ್ ನಾನು ಸರಿಯಾಗೇ ಬಂದಿದ್ದೀನಿ" ಎಂದೆ ಅದಕ್ಕೆ ಅವನು " ಇಲ್ಲ ನೀವು ಸಿಗ್ನಲ್ ಜಂಪ್ ಮಾಡಿದ್ದೀರ ದಂಡ ಕಟ್ಟಿ" ಎಂದ. ಅದಕ್ಕೆ ನಾನು " ನೋಡಿ ಸಾರ್ ನಾನು ಸರಿಯಾಗೇ ಬಂದಿದ್ದೀನಿ, ನೀವು ತಪ್ಪಾಗಿ ಹೇಳ್ತಾಯಿದ್ದೀರ" ಎಂದೆ. ಅದಕ್ಕೆ ಅವನು " ಎಲ್ಲಿ ತೋರಿಸು ನಡಿ ಅಲ್ಲಿ ಗ್ರೀನ್ ಸಿಗ್ನಲ್ ಬರೋದೇ ಇಲ್ಲ, ಸುಮ್ಮನೆ ದಂಡ ಕಟ್ಟಿ ಹೋಗಿ" ಎಂದ.ನನಗಂತೂ ತುಂಬಾ ಸಿಟ್ಟು ಬಂತು" ತಪ್ಪು ಮಾಡಿಲ್ಲದಿದ್ದರೂ ಏಕೆ ನಾನು ದಂಡ ಕಟ್ಟಬೇಕು? ಕಟ್ಟೋದಿಲ್ಲ" ವೆಂದೆ. ಅದಕ್ಕೆ ಅವನು " ಜಾಸ್ತಿ ಮಾತನಾಡಬೇಡಿ ಸುಮ್ಮನೆ ದಂಡ ಕಟ್ಟಿ" ಎಂದ." ನೋಡಿ ಸಾರ್ ನಾನು ತಪ್ಪು ಮಾಡಿಲ್ಲ ಅದಕ್ಕೆ ಮಾತನಾಡುತ್ತಿರುವುದು. ಬನ್ನಿ ಅಲ್ಲಿ ಗ್ರೀನ್ ಸಿಗ್ನಲ್ ಬರೋದಿಲ್ಲ ಅಂತ ಹೇಳಿದಿರಲ್ಲಾ ತೋರಿಸುತ್ತೇನೆ" ಎಂದೆ. " ಆಯಿತು ನೋಡೇ ಬಿಡಣ ನಡೀರಿ" ಎಂದು ಅವನೂ ನನ್ನ ಕೂಡ ನಡೆದ ಹಾಗು ಅಲ್ಲಿ ಗ್ರೀನ್ ದೀಪ ಉರಿಯುವುದನ್ನು ನೋಡಿದ. ಗ್ರೀನ್ ದೀಪ ಉರಿಯುತ್ತಿದ್ದಂತೆ ನಾನು ಆತನಿಗೆ ತೋರಿಸಿದೆ. ಅದಕ್ಕೆ ಅವನು "ಆಯಿತು ನೀನು ತಪ್ಪು ಮಾಡಿಲ್ಲವೆಂದರೆ ನಿನ್ನ ಆತ್ಮಸಾಕ್ಷಿಯಾಗಿ ನಿನ್ನ ಎದೆಯನ್ನು ಮುಟ್ಟಿಕೊಂಡು ಹೇಳು ನೀನು ತಪ್ಪು ಮಾಡಿಲ್ಲ" ಎಂದು. ಅದಕ್ಕೆ ನಾನು ಜೋರಾಗಿಯೇ ಹೇಳಿದೆ ನನ್ನ ಎದೆಯ ಮೇಲೆ ಕೈಯಿಟ್ಟು" ನಾನು ತಪ್ಪು ಮಾಡಿಲ್ಲ ಹಾಗು ನಾನು ಸಿಗ್ನಲ್ ಜಂಪ್ ಮಾಡಿಲ್ಲ" ವೆಂದು. ಅದಕ್ಕೆ ಅವನು " ಅಯಿತು ಹೋಗು ದೇವರಿದ್ದಾನೆ ನೋಡಿಕೊಳ್ಳುತ್ತಾನೆ" ಎಂದ." ನೋಡಿ ಸಾರ್, ದೇವರಿದ್ದಾನೆ ನಿಜ , ದೇವರು ನೋಡಿಕೊಳ್ಳುತ್ತಾನೆನಾನು ಸರಿಯಾಗಿರುವುದಕ್ಕೆ ಜೋರಾಗಿ ಮಾತನಾಡುತ್ತಿರುವುದು. ಮಾಡದ ತಪ್ಪಿಗೆ ನಾನೇಕೆ ದಂಡ ಕಟ್ಟಬೇಕು ಎಂದೆ. ಅದಕ್ಕೆ ಅವನು " ಆಯಿತು ಹೋಗಿ, ಹೋಗಿ" ಎಂದ. ಎಂದೂ ಅಷ್ಟೋಂದು ಆವೇಗಕೊಳಗಾಗಿ ಮಾತನಾಡಿದ್ದೇ ಇಲ್ಲ. ಯಾವ ಗಳಿಗೆಯಲ್ಲಿ ನಾನು ಮಾಡದ ತಪ್ಪಿಗೆ ದಂಡ ಕಟ್ಟು ಎಂದನೋ ತುಂಬಾ ಸಿಟ್ಟು ಬಂದಿತ್ತು. ನನ್ನನ್ನು ನಾನು ಸಮರ್ಥವಾಗಿ ಸಮರ್ಥಿಸಿಕೊಂಡೆ ಹಾಗು ಅದರಲ್ಲಿ ವಿಜಯಿಯಾದೆ.ನಿಜ ನಾವು ಸರಿಯಾಗಿದ್ದರೆ ನಮ್ಮಲ್ಲಿ ಅಪಾರವಾದ ಶಕ್ತಿ ಬಂದೇ ಬರುತ್ತದೆ. ಆ ಶಕ್ತಿ ಸತ್ಯದಲ್ಲಿರುವ ಅಂತಃಶಕ್ತಿ ಎಂದೇ ಭಾವಿಸಿದ್ದೇನೆ. ಅನ್ಯಾಯವನ್ನು ಎದುರಿಸುವ ಶಕ್ತಿ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಯಾವಾಗ ನಮ್ಮ ಬುಡಕ್ಕೆ ಕೊಡಲಿ ಪೆಟ್ಟು ಬೀಳುತ್ತೆ ಅಂತ ಗೊತ್ತಾಗುತ್ತೋ ಆವಾಗ ತಕ್ಷಣ ನಮ್ಮಲ್ಲಿರುವ ಮನಸಾಕ್ಷಿ ಎಚ್ಚೆತ್ತುಕೊಂಡು ಅಪಾರವಾದ ಶಕ್ತಿಯಾಗಿ ಪರಿವರ್ತಿತವಾಗುತ್ತದೆ. ಪ್ರತಿಭಟಿಸುವ ಚೇತನ ನಮ್ಮದಾಗುತ್ತದೆ. ಸತ್ಯ-ಪ್ರಾಮಾಣಿಕತೆ ಮಾತ್ರ ನಮ್ಮಲ್ಲಿ ಅಂತಹ ಶಕ್ತಿ ಪ್ರಕಟಗೊಳ್ಳಲು ಸಾಧ್ಯ ಎಂಬುದು ನನಗೆ ಮನವರಿಕೆಯಾಯಿತು. ಸತ್ಯದ ಬಗ್ಗೆ ಇಲ್ಲಸಲ್ಲದ ಭ್ರಮೆಯೆಲ್ಲಾ ಒಮ್ಮೆಲೆ ಹಾರಿಹೋಗಿತ್ತು. ಸತ್ಯ ಹರಿಶ್ಚಂದ್ರ,ಗಾಂಧಿ ನನ್ನೆದುರಿಗೆ ಪ್ರಜ್ವಲಿಸುವ ತಾರೆಗಳಾಗಿ ಗೋಚರಿಸುತ್ತಿದ್ದರು.ಮನದಲ್ಲಿ ಕು.ರಾ. ಸೀತಾರಾಮ ಶಾಸ್ರಿಗಳು ರಚಿಸಿದ,ಮನ್ನಾಡೆ ಹಾಡಿದ
ಜಯತೆ, ಜಯತೆ, ಜಯತೆ..
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...
ಜಯತೆ, ಜಯತೆ, ಜಯತೆ..
ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ...
ಜಯತೆ, ಜಯತೆ, ಜಯತೆ..
ಗೀತೆ ಮನದಲ್ಲಿ ಗುನುಗುತ್ತಾ ಹೋದೆ ನಾಳೆಯ ಹೊಸದಿನಕ್ಕೆ ಮುನ್ನುಡಿ ಬರೆಯುತ್ತಾ....