ಮಂಗಳವಾರ, ಅಕ್ಟೋಬರ್ 25, 2011

ಬೆಳಕಿನ ಹಬ್ಬ ದೀಪಾವಳಿ


ಇಂದು ಬೆಳಕಿನ ಹಬ್ಬ ದೀಪಾವಳಿ.ಬೆಳಕಿಗೆ ತನ್ನದೇ ಆದ ಪಾವಿತ್ರ್ಯತೆ ಪ್ರಪಂಚದೆಲ್ಲಡೆ ಇದೆ.ಜಗತ್ತು,ವ್ಯಕ್ತಿ ಹಾಗು ಸಮಾಜಕ್ಕೆ ಬೆಳಕಿನ ಅಗತ್ಯತೆ ಇದ್ದೇಯಿದೆ.

ಬೆಳಕೆಂದರೆ ಅರಿವು;
ಬೆಳಕೆಂದರೆ ಪ್ರಗತಿಯ ಸಂಕೇತ;
ಬೆಳಕೆಂದರೆ ಚೈತನ್ಯದ ಪ್ರತೀಕ;

ಅಂತಹ ಪವಿತ್ರವಾದ ಬೆಳಕನ್ನು ಅನುಸರಿಸಿ ನಮ್ಮ ಬದುಕಿನ ದಾರಿಯನ್ನು ಕಂಡುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.
ನಮ್ಮ ಪಯಣ ಹೇಗಿರಬೇಕೆಂದರೆ, ಪ್ರಾಚೀನರ ಪಯಣದ ಆದರ್ಶದಂತೆ ಇರಬೇಕು.

ಪ್ರಾಚೀನರ ಉಕ್ತಿ ಹೀಗೆ ಹೇಳುತ್ತೆ;

ಅಸತೋಮ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿಃ||

ನನ್ನ, ನಿನ್ನ ಹಾಗು ಸಮಾಜದ ನಡೆ
ಅಸತ್ಯದಿಂದ ಸತ್ಯದ ಕಡೆಗೆ
ಕತ್ತಲಿನಿಂದ ಬೆಳಕಿನೆಡೆಗೆ
ಜಡತ್ವದಿಂದ ಚೈತನ್ಯದೆಡೆಗೆ ಇರಬೇಕೆಂಬ ಅಪೇಕ್ಷೆ ಪ್ರಾಚೀನರ ಉಕ್ತಿಯಲ್ಲಿ ಅಡಗಿದೆ.

ನಮ್ಮ ಜೀವನವು ಕತ್ತಲು-ಬೆಳಕಿನ ತೋರಣದಿಂದ ಅಲಂಕರಿಸಲ್ಪಟ್ಟಿದೆ. ಅದೇ ಜಗದ ಜೀವಕೋಟಿಗೆ ಹಬ್ಬದ ಹೂರಣವನ್ನು ತೆರೆದಿಟ್ಟಿದೆ.
ಮನದ ಕತ್ತಲು;
ಜಗದ ಕತ್ತಲು;
ಹಬ್ಬುವುದು ಕ್ಷಣಮಾತ್ರದಲ್ಲೇ;
ಈ ಕತ್ತಲಿನ ಮಾಯೆ ಎಂತಹುದೆಂದರೆ ನೋವಿನ,ಸಂಕಷ್ಟದ,ಯಾತನೆಯ ಪರಿಸ್ಥಿತಿಯನ್ನು ಅದು ನಿರ್ಮಿಸುತ್ತದೆ.
ಜೀವನ ನರಕವೆನಿಸುತ್ತದೆ.
ಅದನ್ನು ತೊಲಗಿಸಲು,ಅಂಧಕಾರವ ಓಡಿಸಲು ಬೇಕು ಬೆಳಕಿನ ಕಿರಣ;
ಒಂದು ಸಣ್ಣ ದೀಪ ನಮ್ಮ ವಾಸ್ತವದ ಕತ್ತಲನ್ನು ಓಡಿಸಿದರೆ;
ಮನದ ಕತ್ತಲನ್ನು ಓಡಿಸಲು ಅರಿವಿನ ಶಲಾಕೆಯ ಅಗತ್ಯತೆ ಬೇಕು;
ಬರೀ ಬಾಹ್ಯ ಕತ್ತಲನ್ನು ಓಡಿಸಿದರೆ ಸಾಲದು,ಮನುಷ್ಯನ ಮನದ ಕತ್ತಲನ್ನು ಓಡಿಸುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ದೀಪ ಸಾಲದು,
ಸಾಧನೆಯ ಪರಿಶ್ರಮದ ಹಾದಿಯನ್ನು ದಾಟಿದರೆ ಮಾತ್ರ ಮನದ ಕತ್ತಲನ್ನು ಓಡಿಸಲು ಸಾಧ್ಯ.
ಕತ್ತಲಿದ್ದರೆ ಬೆಳಕಿರದು;
ಬೆಳಕಿದ್ದರೆ ಕತ್ತಲಿರದು;
ಕತ್ತಲು-ಬೆಳಕು ಒಂದೇ ನಾಣ್ಯದ ಎರಡು ಮುಖಗಳು;
ನಮ್ಮ ಮುಂದಿರುವುದ ತಾತ್ಕಾಲಿಕವಾಗಿ ಮರೆಮಾಡುವ ಶಕ್ತಿ ಕತ್ತಲಿಗಿದೆ,ಅಸತ್ಯದ ಭ್ರಮೆಯನ್ನು ಹುಟ್ಟಿಸುವ ಶಕ್ತಿ ಕತ್ತಲಿಗಿದೆ.ನಕಾರಾತ್ಮಕ ಧೋರಣೆಯನ್ನು ನಮ್ಮ ಮನದಲ್ಲಿ ಬಿತ್ತಿ ನಮ್ಮನ್ನು ಸೋಲಿಸುವ ಕತ್ತಲಿನ ಈ ಆಟ ತಾತ್ಕಾಲಿಕವೆಂಬುದನ್ನು ನಾವು ಅರಿಯಬೇಕು.
ಕತ್ತಲಿಗೆ ನೆಲೆಯಿಲ್ಲ;
ಕತ್ತಲು ವಾಸ್ತವವಲ್ಲ;
ಕತ್ತಲು ಸತ್ಯವಲ್ಲ;
ಕತ್ತಲಿನ ಈ ಸ್ವಾಭಾವಿಕ ನಿಯಮವನ್ನು ನಾವು ಅರಿತರೆ, ನಮ್ಮ ಬೆಳಕಿನೆಡೆಗಿನ ದಾರಿ ಸುಲಭವಾಗುತ್ತದೆ, ಕಷ್ಟ,ಸಂಕಷ್ಟಗಳನ್ನು ಎದುರಿಸುವ ನಮ್ಮ ಚೈತನ್ಯ ಇಮ್ಮಡಿಯಾಗುತ್ತದೆ.
ಜೀವನಕ್ಕೆ ಕತ್ತಲೂ ಬೇಕು;
ಬೆಳಕೂ ಬೇಕು;
ಕತ್ತಲು-ಬೆಳಕು ಎರಡೂ ಇದ್ದಾಗಲೇ ಜೀವನಕ್ಕೊಂದು ಅರ್ಥ;
ಪರಿಪೂರ್ಣ ಕತ್ತಲು;
ಪರಿಪೂರ್ಣ ಬೆಳಕು;
ಎಂಬ ಎರಡು ಸ್ತರಗಳಿವೆ. ಅಂತಹ ಸ್ತರಗಳಲ್ಲಿ ನಮ್ಮ ಸ್ಥಿತಿ ಒಂದೇ ಆಗಿರುತ್ತದೆ.
ಅದು ಹೇಗೆಂದರೆ ಪೂರ್ಣ ಕತ್ತಲಲ್ಲೂ ನಮಗೇನೂ ಕಾಣಿಸದು
ಹಾಗೆ ಪೂರ್ಣ ಬೆಳಕಿನಲ್ಲೂ ನಮಗೇನೂ ಕಾಣುವುದಿಲ್ಲ.
ನಮ್ಮ ಜೀವನಕ್ಕೆ ಬೇಕಾಗಿರುವುದು ಪೂರ್ಣ ಕತ್ತಲೂ ಅಲ್ಲ ಅಥವಾ ಪೂರ್ಣ ಬೆಳಕೂ ಅಲ್ಲ.
ಎರಡೂ ಕೂಡಿರುವ ಸಮಸ್ಥಿತಿ, ಆಗಲೇ ಜೀವನದ ಬಂಡಿ ಸಾಗಿಸಲು ಸಾಧ್ಯ. ಆಗ ಮಾತ್ರ ನಮ್ಮ ಮುಂದಿರುವ ಹಾದಿ ಸ್ಪಷ್ಟವಾಗಿ ಗೋಚರಿಸುತ್ತದೆ.
ನಮ್ಮ ಜೀವನದ ನಡಿಗೆಗೆ ದೀಪ ಕತ್ತಲೋಡಿಸುವ ಸಾಧನವಷ್ಟೆ. ಈ ದೀಪಾವಳಿ ಹಬ್ಬ ನನ್ನ,ನಿನ್ನ ಹಾಗು ಸಮಾಜದ ಕತ್ತಲನ್ನು ಓಡಿಸುವ ಸಾಂಕೇತಿಕ ಅಷ್ಟೆ.
ದೀಪವನ್ನು ಬೆಳಗಿದರೆ ಸಾಲದು;
ಬಾಹ್ಯ ಕತ್ತಲನ್ನು ತಳ್ಳಿದರೆ ಸಾಲದು;
ಮನುಕುಲದ ಉನ್ನತಿಗೆ ಶ್ರಮಿಸೋಣ
ಬನ್ನಿ ಶಾಂತಿ,ನೆಮ್ಮದಿ,ಪ್ರೀತಿ-ವಾತ್ಸಲ್ಯ,ಮಾನವೀಯತೆಯ ದೀವಿಗೆಯನ್ನು ಮನ ಮನಗಳಲ್ಲಿ,ಮನೆ ಮನೆಗಳಲ್ಲಿ ಹೊತ್ತಿಸೋಣ,
ಬಡತನ,ನೋವು,ದ್ವೇಷ,ಭ್ರಷ್ಟಾಚಾರದ ಅಂಧಕಾರವನ್ನು ಇಲ್ಲವಾಗಿಸೋಣ.

2 ಕಾಮೆಂಟ್‌ಗಳು: