ಮಂಗಳವಾರ, ಮೇ 3, 2011

ಸ್ನೇಹ ನಿವೇದನೆ

ಆತ್ಮೀಯ ಗೆಳೆಯರೇ!,

ನಮ್ಮ ಆಯಸ್ಸಿನ ಅರ್ಧಭಾಗವನ್ನು ನಾವೆಲ್ಲರೂ ಕಳೆದಿದ್ದೇವೆ. ಜೀವನದ ಯಾವುದೋ ಒಂದು ಘಟ್ಟದಲ್ಲಿ ನಾವೆಲ್ಲಾ ಒಂದೆಡೆ ಜೊತೆಯಾಗಿ ಜೀವನದ ಮಧುರ ಕ್ಷಣಗಳನ್ನು ಆಸ್ವಾದಿಸಿದ್ದೇವೆ.ಕಷ್ಟ,ಸಂಕಟ,ನೋವು,ವಿರಹ,ಸ್ನೇಹ,ಕೋಪ,ದ್ವೇಷದ ಹತ್ತು-ಹಲವು ಮಜಲುಗಳನ್ನು ದಾಟಿ ನಮ್ಮದೇ ಜೀವನವನ್ನು ಅನುಭವದ ಪಾತ್ರೆಯಲ್ಲಿಟ್ಟು ಆಸ್ವಾಧಿಸಿ ರಸಾನುಭವನ್ನೋ ಅಥವಾ ರಸಭಂಗವನ್ನೋ ನಮ್ಮದಾಗಿಸಿಕೊಂಡಿದ್ದೇವೆ. ನಮ್ಮ ನಮ್ಮ ಕಾಲಜ್ಯ್ಯಾನ,ಶಕ್ತಿ-ಯುಕ್ತಿ,ಅದೃಷ್ಟ,ಹಾರೈಕೆಗಳಿಗನುಗುಣವಾಗಿ ಇಂದಿನ ವ್ಯವಸ್ಥೆಯಲ್ಲಿ ನಮ್ಮದೇ ಪ್ರಯತ್ನದ ಫಲದಿಂದ ಸಮಾಜದಲ್ಲಿ ಒಂದು ಸ್ಥಾನವನ್ನು ಪಡೆದುಕೊಂಡಿದ್ದೇವೆ.ಜೀವನದಲ್ಲಿ ಸಾಕಷ್ಟುದೂರ ಬಂದಿದ್ದೇವೆ.ನಮ್ಮ ನಿನ್ನೆಗಳು ಏನನ್ನೋ ಹೇಳುತ್ತಿರುವುದನ್ನೂ ಕೇಳಿಸಿಕೊಳ್ಳದೆ ನಾಳೆಗಳ ಬೆನ್ನಟ್ಟಿ ಬಂದಿದ್ದೇವೆ. ನಮ್ಮದೇ,ನಮ್ಮವರೆನಿಸಿಕೊಂಡವರ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದೇವೆ. ಹಣ,ಪ್ರತಿಷ್ಟೆಗಳ ಹಿಂದೆ ಎಡಬಿಡದೆ ಓಡುತ್ತಲೇ ಇದ್ದೇವೆ. ಹತ್ತು-ಹಲವು ವ್ಯಾಮೋಹಗಳಿಗೆ ಬಲಿಬಿದ್ದಿದ್ದೇವೆ. ಸ್ನೇಹದ ಪರಿಧಿಯನ್ನು ಧಾಟಿ ಬಹುದೂರ ಸಾಗಿಬಂದಿದ್ದೇವೆ.ನಮ್ಮತನವನ್ನು ಕಳೆದುಕೊಂಡಿದ್ದೇವೆ, ನಮ್ಮದೇ ಲೋಕದಲ್ಲಿ ಬಾವಿಯೊಳಗಿನ ಕಪ್ಪೆಯಂತೆ ಜೀವನವನ್ನು ಸಾಗಿಸುತ್ತಿದ್ದೇವೆ.ಒಮ್ಮೆ ಹಿಂತಿರುಗಿ ನೋಡಿ, ನಮ್ಮ ಆ ದಿನಗಳು ಹೇಗಿದ್ದವು?ಸ್ನೇಹದ ಕಡಲಿನ ದೋಣಿಯಲ್ಲಿ ಒಂದೇ ದಿಕ್ಕಿನೆಡೆಗೆ ನಡೆಯುವ ಪಯಣಿಗರಾಗಿ,ಸ್ವಚ್ಛಂಧ ಹಕ್ಕಿಗಳಾಗಿ,ಚೈತನ್ಯದ ಚಿಲುಮೆಗಳಾಗಿದ್ದೆವು.ರುಚಿಯಿಲ್ಲದ ಆಹಾರ,ಶುಚಿಯಿಲ್ಲದ ಬಟ್ಟೆಯಲ್ಲಿಯೊ ಮನಸ್ಸು ಮಾತ್ರ ಅಪರಂಜಿಯಂತಿತ್ತಲ್ಲವೇ? ಆದರೆ ಇಂದೇನಾಗಿದೆ? ಬಗೆ ಬಗೆ ಭಕ್ಷ್ಯಭೋಜ್ಯಗಳೇ ನಮ್ಮ ದಿನನಿತ್ಯದ ಆಹಾರ, ಅದೂ ಪಂಚತಾರಾ ಹೋಟಲಿನಲ್ಲೇ ಅಲ್ಲವೇ!. ಓಡಾಟ ಕಾರು-ವಿಮಾನಗಳಲ್ಲೇ! ಅಪ್ಪಟ ಹಕ್ಕಿಗಳಾಗಿ ಹಾರಾಡುತ್ತಿದ್ದರೂ ಮನಸ್ಸು ಹಗುರವಾಗಿರದೆ ಹಲವಾರು ಒತ್ತಡಗಳಿಗೆ ಸಿಲುಕಿಕೊಂಡಿದೆ ಮತ್ತು ನಮ್ಮತನವನ್ನು ಕಳೆದುಕೊಂಡು ನರಳುತ್ತಿದೆ ನಿಮಗೆ ಇದು ಅರ್ಥವಾಗುತ್ತಿಲ್ಲವೇ?
’ವಿದ್ಯಾರ್ಥಿ ಜೀವನ, ಸುವರ್ಣ ಜೀವನ’ ಎನ್ನುವ ಮಾತಿದೆಯಲ್ಲವೇ ಅದೇ ರೀತಿ ಸ್ನೇಹ ಜೀವನ ನಿರಂತರವಾದುದು ಅದನ್ನು (ಸ್ನೇಹವನ್ನು) ನಾವು ಬರೀ ವಿದ್ಯಾರ್ಥಿ ಜೀವನಕ್ಕೆ ಸೀಮಿತಮಾಡಿ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿಲ್ಲವೇ?

ಕವಿಯೊಬ್ಬ ಸ್ನೇಹದ ಕುರಿತು ಈ ರೀತಿ ಬರೆದಿದ್ದಾನೆ
"ಬಾ ನಾವಿಕನೆ ಸ್ನೇಹದ ಒಡಲಿನ ಜೇನಿನ ಕಡಲಿದು ಇಂದು-ನಾಳೆಗೆ ಮುಗಿಯದು ನಿತ್ಯ ನಿರಂತರ ಅನಂತ ದೂರಕು ತೋರುವ ಕಡಲ ಒಡಲಿದು ಉಬ್ಬರದಿ ಅಬ್ಬರಿಸುವ ಕಡಲ ಆಳ ನೋಡಬೇಡ ಮೌನವನ್ನು ಮುರಿಯುವ ಭೋರ್ಗರೆತಕೆ ಅಂಜಬೇಡ ಸ್ನೇಹದ ಆಳವಿದು ಸವಿನೆನಪಿನ ಭೋರ್ಗರೆತವಿದು ಸ್ನೇಹ ಸಾಗರವೆಂಬುದು ನೆನಪಿನ ಬುತ್ತಿಯ ಮುತ್ತು ಪಚ್ಚೆಗಳ ಗೂಡು ಒಡಲಿನೊಂದಿಗೆ ಸುಳಿವ ಸವಿನೆನಪಿನ ಹಾಡು ಗೆಳೆತನದ ಸೆಲೆಗೆ ಮನಮಿಡಿಯುವ ತಾಳಕೆ ಪ್ರೀತಿ-ವಾತ್ಸಲ್ಯದ ಹಾಡು".

ನಮ್ಮ ಡಿ,ವಿ,ಜಿ ಯವರು ಮಂಕುತ್ತಿಮ್ಮನ ಕಗ್ಗದಲ್ಲಿ ಸ್ನೇಹದ ಬಗ್ಗೆ ಈ ರೀತಿ ಹೇಳಿದ್ದಾರೆ
"ಕಾರಿಳೊಳಾಗಸದಿ ತಾರೆ ನೂರಿದ್ದರೇನು?
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು
ದೂರದಾ ದೈವವಂತಿರಲಿ, ಮಾನುಷಸಖನ
ಕೋರುವುದು ಬಡಜೀವ – ಮಂಕುತಿಮ್ಮ"
ಎಷ್ಟು ಅದ್ಭುತವಾಗಿದೆಯಲ್ಲವೇ? ಕೇಳಲು ಇಷ್ಟೋಂದು ಮಧುರವಾಗಿದೆ ಇನ್ನು ಸ್ನೇಹದ ಮಧುರತೆಯನ್ನು ಅನುಭವಿಸಿರೋ ನಮಗೆ ಅದನ್ನು ಮತ್ತೆ ಜ್ನ್ಯಾಪಿಸುವ ಅಗತ್ಯತೆ ಇದೆ ಅದಕ್ಕೆ ಇಷ್ಟೋಂದು ಹರಿಕಥೆ. ಸ್ನೇಹದ ಕಡಲಿನಲ್ಲಿ ಮತ್ತೆ ಈಜೋಣ ಬನ್ನಿ.