ಗುರುವಾರ, ಡಿಸೆಂಬರ್ 9, 2010

ರಾತ್ರಿಯ ಕತ್ತಲಿನಲ್ಲಿ ಅಮ್ಮನ ಆಕ್ರಂದನ

ನಾನಾಗ ೮ನೇ ತರಗತಿಯಲ್ಲಿ ಓದುತ್ತಿದ್ದೆ, ನನ್ನ ಅಣ್ಣ ೧೦ನೇ ತರಗತಿ ಹಾಗು ನನ್ನ ಅಕ್ಕ ೯ನೇ ತರಗತಿಯಲ್ಲಿ ಇದ್ದರು.ನನ್ನ ಅಣ್ಣ ಓದಿನಲ್ಲಿ ಅಷ್ಟೇನೂ ಬುದ್ಧಿವಂತನಲ್ಲದಿದ್ದರೂ ಪೂರ್ತಿ ದಡ್ಡನಂತೂ ಆಗಿರಲಿಲ್ಲ. ಅವನಿಗೆ ಕಷ್ಟದ ವಿಷಯಗಳೆಂದರೆ ಗಣಿತ ಹಾಗು ಇಂಗ್ಲೀಷ್. ಕನ್ನಡದಲ್ಲಿ ವಾದ,ವಿತಂಡ ವಾದಗಳಲ್ಲಿ ಒಳ್ಳೆಯ ಜ್ಘ್ಯಾನವಿತೆಂಬುದು ನನ್ನ ಅಭಿಪ್ರಾಯ. ಅವನಿಗೆ ಮತ್ತೊಂದು ಇಷ್ಟವಾದುದೆಂದರೆ ಚೆನ್ನಾಗಿ ನಿದ್ದೆಮಾಡುವುದು. ಎಷ್ಟೇ ಸಮಯದಲ್ಲಿ ನಿದ್ದೆ ಮಾಡಬೇಕೆಂದರೂ ನಿದ್ದೆ ಮಾಡುವ ತಾಕತ್ತು ಅವನಿಗಿತ್ತು. ಅದು ಈಗಲೂ ಮುಂದುವರೆದಿದೆ. ಮೊದಲನೇ ಸಲವೇ ಪರೀಕ್ಷೆಯಲ್ಲಿ ಪಾಸಾಗಬೇಕೆಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿರುತ್ತದೆ. ಅದೇ ರೀತಿ ನನ್ನ ತಂದೆ-ತಾಯಿಯ ಕನಸೂ ನನ್ನ ಅಣ್ಣ ಪರೀಕ್ಷೆಯಲ್ಲಿ ಪಾಸಾಗುವುದೇ ಆಗಿತ್ತು.ಅದಕ್ಕಾಗಿಯೇ ಮನೆಪಾಠಕ್ಕೆ ಹಾಕಲಾಗಿತ್ತು.ತಂದೆ-ತಾಯಿಯ ಪ್ರಯತ್ನ ಎಷ್ಟಾದರೂ ಅವನ ಪ್ರಯತ್ನವಂತೂ ಇರಲಿಲ್ಲ. ಅವನಿಗೆ ಪರೀಕ್ಷೆಯೆಂದರೆ ಭಯಲಿರಲಿಲ್ಲ ನಿಜ ಆದರೆ ಓದಿನ ಬಗ್ಗೆ ಗಮನವಿರಲಿಲ್ಲ. ಅದನ್ನು ಮನದಟ್ಟು ಮಾಡಿಸುವ ಗುರು ತಾನೆ ಎಲ್ಲರೂ ಹುಡುಕುವುದು! ಆ ಸಮಯದಲ್ಲಿ ಅಂತಹ ಗುರು ಅವನಿಗೆ ಸಿಗಲೇಯಿಲ್ಲ. ಹೀಗಾಗಿ ಅವನಿಗೆ ಏನು ತೊಂದರೆಯಾಗುತ್ತಿದೆ ಅನ್ನುವುದು ಯಾರಿಗೂ ತಿಳಿಯಲಿಲ್ಲ ಅಥವಾ ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಯಾವುದೂ ಇರಲಿಲ್ಲವೆನ್ನಬೇಕು. ಹಾಗೆ ಅಜ್ಜ್ಯಾನದಿಂದ ಅವನ ಚರ್ಯೆಯಿಂದ ತಿಳಿಯುವ ವ್ಯವಧಾನವೂ ಯಾರಿಗೂ ಇರಲಿಲ್ಲವೋ ಏನೋ? ನನಗೆ ಅಷ್ಟಾಗಿ ಗೊತ್ತಿಲ್ಲ, ಆ ವಯಸಿನಲ್ಲಿ ಅದನ್ನು ಯೋಚಿಸುವ ಬುದ್ಧಿಯೊ ನನ್ನದಾಗಿರಲಿಲ್ಲ. ಆ ವಯಸ್ಸಿನಲ್ಲಿ ನಮ್ಮ ಬಗ್ಗೆ ಇರುವ ಖಾಳಜಿ ಬೇರೆಯವರ ಬಗ್ಗೆ ಇರೋದಿಲ್ಲ ಅಲ್ಲವೇ!. ಅವನು ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ, ಮನೆಯಿಂದ ಯಾವಾಗಲೂ ಹೊರಗೇ ಇರುತ್ತಿದ್ದ. ಅವನು ಯಾವಾಗ ಓದುತ್ತಿದ್ದ,ಬರೆಯುತ್ತಿದ್ದ ಅನ್ನೋದೇ ನನಗೆ ಗೊತ್ತೇ ಆಗ್ತಾ ಇರ್ಲಿಲ್ಲ.
ಪರೀಕ್ಷೆಯ ದಿನ ಬಂದೇ ಬಂತು, ಅವನಿಗಿಂತ ನನ್ನ ಅಮ್ಮನಿಗೇ ಆತಂಕ ಹೆಚ್ಚಾಗಿತ್ತು. ನನ್ನ ತಂದೆಗೆ ಪರೀಕ್ಷೆಯಲ್ಲಿ ಏನಾಗಬಹುದೆಂದು ಮೊದಲೇ ತಿಳಿದಿತ್ತು. ಪರೀಕ್ಷೆಯೆಲ್ಲಾ ಮುಗಿದ ಮೇಲೆ ಎಲ್ಲರಿಗೂ ಒಂದು ರಿತಿ ನಿರಾಳ. ಆದರೆ ಮುಂದೆ ಆಗಬಹುದಾದ್ದನ್ನು ಯಾರೂ ನಿರೀಕ್ಷಿಸಿರಲಿಲ್ಲ.
ಪರೀಕ್ಷೆಯಾದ ಮೇಲೆ ಫಲಿತಾಂಹದ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ ಹಾಗೇ ನನ್ನ ಮನೆಯಲ್ಲೂ ಅಣ್ಣನ ಫಲಿತಾಂಶದ ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು. ಅಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ಬೆಳಿಗ್ಗೆ ಅಣ್ಣನ ಮುಖ ನೋಡಿದ ನೆನಪು ನನಗಿಲ್ಲ, ಮಧ್ಯಾಹ್ನದವರೆಗೂ ಅವನ ಸುಳಿವು ಯಾರಿಗೂ ಇರಲಿಲ್ಲ. ನನ್ನ ತಂದೆ ಆಫೀಸಿನಿಂದ ಬೇಗನೆ ಅವನ ಫಲಿತಾಂಶದ ನಿರೀಕ್ಷೆಯಲ್ಲಿ ಕುತೂಹಲದಿಂದಲೇ ಬಂದಿದ್ದರು. ಅವನು ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಗಣಿತ ಹಾಗು ಇಂಗ್ಲೀಷ್ ವಿಷಯದಲ್ಲಿ ನಪಾಸಾಗಿದ್ದ. ನಮಗೆಲ್ಲಾ ಅವನು ನಪಾಸಾಗಿದ್ದು ಒಂದು ದುಃಖದ ವಿಷಯವಾದರೆ, ಅವನು ಮನೆಗೆ ಬಾರದೇ ಇದ್ದದ್ದು ಮತ್ತೊಂದು ಅಘಾತಕರ ವಿಷಯವೂ ಆಗಿತ್ತು. ಅವನು ತಂದೆ-ತಾಯಿಯಿಂದ ಬೈಗಳನ್ನು ತಪ್ಪಿಸಿಕೊಳ್ಳಲು ಮನೆ~ಊರನ್ನು ಬಿಟ್ಟು ಎಲ್ಲೋ ಹೋಗಿಬಿಟ್ಟಿದ್ದ. ತಂದೆ-ತಾಯಿಗಂತೂ ಯೋಚನೆ ಹತ್ತಿತು. ಎಲ್ಲಿ ಹೋದನೋ? ಎಲ್ಲಿ ಊಟ ಮಾಡ್ತಾನೋ? ಎಲ್ಲಿ ಮಲಗುವನೋ? ಎಂದು. ಜೊತೆಗೆ ಹುಡುಕುವ ಪ್ರಯತ್ನವನ್ನೂ ಮಾಡಬೇಕು.ಸುಳಿವು ಸಿಕ್ಕರೆ ಹುಡುಕುವುದು ಸುಲಭವಾಗುತ್ತಿತ್ತೇನೋ? ಅವನ ಗೆಳೆಯರಿಗೂ ಯಾವುದೇ ಸುಳಿವು ಇಲ್ಲದೇಯಿದ್ದದ್ದು ಹುಡುಕುವುದಕ್ಕೆ ಮತ್ತಷ್ಟು ಕಷ್ಟವಾಯಿತು.
೧೫ ದಿನಗಳು ಕಳೆದರೂ ಅವನ ಯಾವುದೇ ಸುಳಿವು ಇರಲಿಲ್ಲ. ಮನೆಯಲ್ಲಿ ತಂದೆ-ತಾಯಿ ಗೆ ಮನಸ್ಸಿಗೆ ನೆಮ್ಮದಿಯಿಲ್ಲದೇ ಕೊರಗಿ ಕೊರಗಿ ಸಣ್ಣಗಾಗಿದ್ದರು. ತಂದೆಯಂತೂ ಆಫೀಸಿನ ಕೆಲಸದ ಜೊತೆಗೆ ಅವನ ಹುಡುಕುವ ಪ್ರಯತ್ನವನ್ನೂ ಮಾಡುತ್ತಿದ್ದರು. ತಾಯಿಗಂತೂ ಯಾವಾಗಲೂ ಅವನದೇ ಚಿಂತೆ, ಊಟ,ನಿದ್ದೆ ಎಲ್ಲವೂ ಅವರಿಂದ ಮಾಯವಾಗಿತ್ತು. ಸದಾ ಅವನದೇ ಚಿಂತೆ, ರಾತ್ರಿ ಕತ್ತಲಿಲಲ್ಲಿ ಅವರ ನೋವು ಅಳುವಾಗಿ ಹೊರಬರುತ್ತಿತ್ತು. ಅಮ್ಮನ ಆ ಕನವರಿಕೆ, ಆಕ್ರಂದನ ಈಗಲೂ ನನಗೆ ಕಣ್ಣೀರು ತರಿಸುತ್ತದೆ. ಆ ಕತ್ತಲ ರಾತ್ರಿಯಲ್ಲಿ ನನಗೂ ನಿದ್ದೆ ಬಾರದೆ ದೇವರಲ್ಲಿ ಪ್ರಾರ್ಥಿಸಿತ್ತಿದ್ದೆ " ಓ! ದೇವರೆ, ನನ್ನ ಅಮ್ಮನ ನೋವನ್ನು ಪರಿಹರಿಸು. ಆ ನೋವನ್ನೆಲ್ಲಾ ನನಗೇ ಕೊಡು" ಎಂದು ಮತ್ತು ಹಾಗೇ ನಾನು ನಿರ್ದರಿಸಿದ್ದೆ ನನ್ನಿಂದ ಯಾವುದೇ ಕಾರಣಕ್ಕೂ ಅಮ್ಮನ ಕಣ್ಣಲ್ಲಿ ನೀರು ಬರುವುದಿಲ್ಲ, ಅಮ್ಮನನ್ನು ಸಂತೋಷದಿಂದ ನೋಡಿಕೊಳ್ಳುತ್ತೇನೆಂದು. ಆ ನಿಟ್ಟಿನಲ್ಲಿ ಈಗಲೂ ನನ್ನ ಪ್ರಯತ್ನ ಮುಂದುವರೆದಿದೆ.
ಕೊನೆಗೂ ಅವನ ಸುಳಿವು ಸಿಕ್ಕು ಅವನು ಮತ್ತೆ ಮನೆಗೆ ಬಂದ.ಅಮ್ಮ ಅಂದೇ ನಿರ್ಧರಿಸಿದ್ದರು ಪರೀಕ್ಷೆಯಲ್ಲಿ ತಾನೇ ಗುರುವಾಗಿ ದಡಮುಟ್ಟಿಸುವೆನೆಂದು. ಅದರಂತೆಯೇ ದಿನವೂ ಮನೆಯಲ್ಲೇ ಪಾಠ ಹೇಳಿದರು. ಅದೇ ವರ್ಷದಲ್ಲಿ ನನ್ನಣ್ಣ ಮತ್ತೆ ಪರೀಕ್ಷೆ ಬರೆದ. ಫಲಿತಾಂಶದ ದಿನಕ್ಕೆ ಒಂದೆರಡು ದಿನಗಳು ಮುಂಚೆಯೇ ಎಚ್ಚರಿಕೆ ವಹಿಸಿ ಅಣ್ಣನನ್ನು ಮನೆಯಿಂದ ಎಲ್ಲೂ ಹೊರಗೆ ಬಿಡುತ್ತಿರಲಿಲ್ಲ. ಫಲಿತಾಂಶದ ದಿನವಂತೂ ಅವನು ಅಕ್ಷರಹ ರೂಮಿನಲ್ಲಿ ಬಂಧಿಯಾಗಿದ್ದ. ಫಲಿತಾಂಶ " ಪಾಸಾಗಿದ್ದಾನೆ" ಎಂದು ತಿಳಿದಾಗ ಅಮ್ಮನ ಕಣ್ಣಲಿ ಆನಂದ ಭಾಷ್ಪ ಹರಿಯಿತು.
ಇವೆಲ್ಲಾ ನಡೆದು ಸುಮಾರು ೨೨ ವರ್ಷಗಳೆ ಕಳೆದರೂ ನನ್ನ ಮನದಲ್ಲಿ ಅಂದಿನ ಪ್ರತಿಯೊಂದು ಕ್ಷಣವೂ ಹಸಿರಾಗೇ ಇದೆ.ರಾತ್ರಿಯ ಕತ್ತಲಿನಲ್ಲಿ ಅಮ್ಮನ ಅಳು, ಆಕ್ರಂದನ ಇಂದಿಗೂ ನನ್ನನ್ನು ಹಿಂಸಿಸುತ್ತದೆ ,ಅಮ್ಮನಿಗಾಗಿ ಹಂಬಲಿಸುತ್ತದೆ.

2 ಕಾಮೆಂಟ್‌ಗಳು:

  1. ಜೀವನದ ಅನುಭವವನ್ನು ಉತ್ತಮವಾಗಿ ಮೆಲುಕು ಹಾಕಿದ್ದೀರಿ. ನಿಮ್ಮ ಬರವಣಿಗೆ ಹಾಗೂ ಚಿಂತನೆ ಆತ್ಮೀಯವೆನಿಸಿತು :o)

    ಪ್ರತ್ಯುತ್ತರಅಳಿಸಿ
  2. ಪ್ರಶಾಂತ್ ರವರೇ, ನಿಮ್ಮ ಆತ್ಮೀಯತೆಯ ಪ್ರೋತ್ಸಾಹಯುಕ್ತ ನುಡಿಗಳಿಗೆ ಆತ್ಮೀಯನ ಅಭಿನಂದನೆಗಳು. ನಿಮ್ಮ ಪ್ರೀತಿ-ವಿಶ್ವಾಸ ಸದಾ ಇರಲಿ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ