ಭಾನುವಾರ, ಸೆಪ್ಟೆಂಬರ್ 26, 2010

ಅಮರವಾದ ಕ್ರಾಂತಿಯ ಕಿಚ್ಚು-ಭಗತ್ ಸಿಂಗ್


ಇಂದು ೨೭ನೇ ಸೆಪ್ಟೆಂಬರ್ ೨೦೧೦. ಇವತ್ತು ನಿಜಕ್ಕೂ ತುಂಬಾ ಒಳ್ಳೆಯ ದಿನ, ಅದರಲ್ಲೂ ಭಾರತದ ಇತಿಹಾಸದಲ್ಲಿ ಮರೆಯಲಾರದ ಧೃವತಾರೆಯ ಜನ್ಮದಿನವೆಂದರೆ ತಪ್ಪಾಗಲಾರದು. ಇವತ್ತು ನಾವು ಮಾಹಿತಿ ತಂತ್ರಜ್ನಾನದ ಯುಗದಲ್ಲಿದ್ದೇವೆ, ನಮ್ಮ ದೇಶ ಅನೇಕ ಶತೃಗಳ ಕೈಯಲ್ಲಿ ಶತಶತಮಾನಗಳು ನಲುಗಿತ್ತು ಎಂಬುದು ಭಾರತೀಯ ಇತಿಹಾಸ ಓದಿದವರಿಗೆಲ್ಲಾ ತಿಳಿದಿದೆ.ಮುಸಲರು,ಗ್ರೀಕರು,ಡಚ್ಛರು,ಪೋರ್ಚಿಗೀಸರು ಹಾಗು ಆಂಗ್ಲರು ನಮ್ಮನ್ನು ಗುಲಾಮಗಿರಿಗೆ ತಳ್ಳಿ, ನಮ್ಮ ಜನರನ್ನು ಹಾಗು ಸಂಪನ್ಮೂಲಗಳನ್ನು ತಮ್ಮ ವೈಭೋಗಕ್ಕೆ ಬಳಸಿಕೊಂಡರು ಎಂದರೆ ತಪ್ಪಲ್ಲ. ಹಾಗೇ ನಮ್ಮ ಜನ,ಭಾಷೆ,ಸಂಸ್ಕೃತಿಯ ವೈವಿಧ್ಯತೆಯಲ್ಲಿರುವ ಭಿನ್ನತೆಯನ್ನು ನಮ್ಮ-ನಮ್ಮಲ್ಲೇ ವಿಷಬೀಜವನ್ನು ಬಿತ್ತಿ ಹೋದರು ಅವರೆಲ್ಲಾ. ಜನ-ಜನರನ್ನು ಒಡೆಯುವುದೇ ಅಲ್ಲದೆ, ಅಖಂಡ ಭಾರತ ಹೋಳಾಗುವುದಕ್ಕೋ ಅವರೇ ಕಾರಣವಲ್ಲವೇ? ( ಅವರ ಜೊತೆ ಅಧಿಕಾರ ಬಯಸುವ ನಮ್ಮವರು ಇದ್ದರೆನ್ನುವುದು ವಿಷಾದದ ಸಂಗತಿ) ಸ್ವಾತಂತ್ರ ಹೋರಾಟ ೧೮೫೭ ರಲ್ಲೇ ಮಂಗಲಪಾಂಡೆಯಿಂದ ಆರಂಭಗೊಂಡಿತ್ತಾದರೂ ನಮ್ಮಲ್ಲಿಯ ಒಡಕುಗಳ ಕಾರಣದಿಂದ ಸ್ವಾತಂತ್ರ ಬರುವುದು ೯೦ ವರ್ಷಗಳು ಮುಂದೆಹೋದದ್ದು ವಿಪರ್ಯಾಸ. ನಮ್ಮಲ್ಲಿ ಜಾಗೃತಿ ಮೂಡಿಸುವ ಕಾಯಕದ ಜೊತೆಗೆ ಭಾರತೀಯರಲ್ಲಿ ಸ್ವಾತಂತ್ರದ ಕಿಚ್ಚುಹೊತ್ತಿಸಿದ ಮಹನೀಯರು ಒಬ್ಬರೇ? ಇಬ್ಬರೇ?.. ಸಾವಿರಾರು,ಲಕ್ಷಾಂತರ ದೇಶಭಕ್ತರು. ಅಂತಹ ಅಸಂಖ್ಯಾತ ಪ್ರಾಥಃ ಸ್ಮರಣೀಯರನ್ನು ನೆನೆಸಿ ಗೌರವಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಅಂತಹ ಮಹನೀಯರಲ್ಲಿ ಭಗತ್ ಸಿಂಗ್ ಗೆ ತನ್ನದೇ ಆದ ಸ್ಥಾನವಿದೆ. ಇಂದು ಮಹಾತ್ಮ,ಹುತಾತ್ಮ ಭಗತ್ ಸಿಂಗ್ ನ ಜನ್ಮದಿನ.
ಭಗತ್ ಸಿಂಗ್ ಹುಟ್ಟಿದ್ದು ೧೯೦೭ ಸೆಪ್ಟೆಂಬರ್ ೨೭ ರಂದು ಬಾಂಗ ಎನ್ನುವ ಊರಿನಲ್ಲಿ ಅದು ಈಗಿನ ಪಾಕೀಸ್ಥಾನದಲ್ಲಿ.ತಂದೆ ಕಿಶನ್ ಸಿಂಗ್ ಹಾಗು ತಾಯಿ ವಿದ್ಯಾವತಿ. ಕುಟುಂಬದಿಂದ ಬಳುವಳಿಯೆಂದರೆ ಸ್ವಾತಂತ್ರದ ಕಿಚ್ಚು.ಭಗತ್ ಸಿಂಗ್ ಹುಟ್ಟಿದಾಗ ಅವನ ತಂದೆ ಕಿಶನ್ ಸಿಂಗ್ ಜೈಲಿನಲ್ಲಿದ್ದರು. ಅವನ ಬಂಧುವಾದ ಸರ್ದಾರ್ ಅಜಿತ್ ಸಿಂಗ್ ಒಬ್ಬ ಮಹಾನ್ ಸ್ವಾತಂತ್ರ ಹೋರಾಟಗಾರರಾಗಿದ್ದರು.ಇಂತಹ ಕುಟುಂಬದ ವಾತಾವರಣ ಭಗತ್ ಸಿಂಗ್ ಗೆ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಲು ಪ್ರೇರಣೆ ನೀಡಿತೆನ್ನೆಬಹುದು. ತನ್ನ ಶಾಲೆಯ ದಿನಗಳಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಬೆಂಬಲ ವ್ಯಕ್ತಪಡಿಸುತ್ತ ಆಂಗ್ಲ ಸರ್ಕಾರ ನೀಡಿದ್ದ ಪುಸ್ತಕಗಳನ್ನು ಬಹಿರಂಗವಾಗಿ ಸುಟ್ಟು ಪ್ರತಿಭಟಿಸಿದ್ದ.’ಚೌರಿ-ಚೌರಾ’ದ ಅಹಿತಕರ ಘಟನೆಗಳಿಂದ ಮನನೊಂದ ಗಾಂಧೀಜಿ ತಮ್ಮ ಅಸಹಕಾರ ಚಳುವಳಿಯನ್ನು ಕೈಬಿಟ್ಟರು. ಅದರಿಂದ ಭಗತ್ ಸಿಂಗ್ ಬಹುವಾಗಿ ನೊಂದು ಗಾಂಧೀಜಿ ತತ್ವಗಳಿಂದ ಭಾರತಕ್ಕೆ ಸ್ವಾತಂತ್ರ ಸಿಗುವುದಿಲ್ಲವೆಂದರಿತು ಕ್ರಾಂತಿಮಾರ್ಗವೇ ಸೂಕ್ತವೆಂದು ಕ್ರಾಂತಿಕಾರಿಯಾದ.ಅನೇಕ ಯುವ ಕ್ರಾಂತಿ ಸಂಘಟನೆಗಳೊಡನೆ ಭಗತ್ ಸಿಂಗ್ ಗುರುತಿಸಿಕೊಂಡ ಹಾಗು ಅಲ್ಲಿ ಸ್ವಾತಂತ್ರ ಹೋರಾಟ ಮುಂದುವರೆಸಿದ. ಆಂಗ್ಲರ ಲಾಠಿ ಏಟಿನಿಂದ ತೀವ್ರಗಾಯಗೊಂಡ ಲಾಲಾ ಲಜಪತರಾಯರು ಅಸುನೀಗಿದಬಳಿಕ ಅವರ ಸಾವಿಗೆ ಕಾರಣರಾದ ಆಂಗ್ಲ ಅಧಿಕಾರಿಯ ಕೊಲೆಗೆ ಭಗತ್ ಸಿಂಗ್ ಸಂಚು ರೂಪಿಸಿದ. ಆನಂತರ ಕ್ರಾಂತಿಕಾರಿಗಳು ದೇಶದ ಸ್ವಾತಂತ್ರ ಹೋರಾಟಗಾರರು ಎಂಬುದು ದೇಶದ ಜನತೆಗೆ ಹಾಗು ಕಾಂಗ್ರೆಸ್ಸಿಗೆ ಹೇಳಬೇಕಾಗಿತ್ತು. ಅದಕ್ಕಾಗಿ ಅಸೆಂಬ್ಲಿಯಲ್ಲಿ ಬಾಂಬ್ ಹಾಕಿದ. ಭಗತ್ ಸಿಂಗ್ ಹಾಗು ಅವನ ಗೆಳೆಯ ಭತುಕೇಶ್ವರ ದತ್ತ್ ನನ್ನು ಆಂಗ್ಲರು ಬಂಧಿಸಿದರು. ಕೊಲೆ, ಸಂಚು ಆರೋಪದಡಿಯಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಗೆ ಗಲ್ಲು ಶಿಕ್ಷೆ ವಿಧಿಸಿದರು.
’ಇಂಕಿಲಾಬ್ ಜಿಂದಾಬಾದ್’ ಅವರ ಅಂತಿಮ ಮಾತಾಯಿತು. ತಾಯ್ನಾಡಿನ ಬಿಡುಗಡೆಗೆ ತಮ್ಮ ಪ್ರಾಣವನ್ನು ತ್ಯಾಗಮಾಡಿದರು.
ಅವನ ಬಲಿದಾನ ಪ್ರತಿಯೊಬ್ಬ ಭಾರತೀಯನೂ ಸ್ಮರಿಸುವಂತಹುದು. ಇಂದು ನಮ್ಮ ನಡುವೆ ಇಲ್ಲವಾದರೂ ಅವನ ಸಾಹಸ,ಬಲಿದಾನಗಳು ಪ್ರತಿಯೊಬ್ಬ ಭಾರತೀಯನ ಹೃದಯಗಳಲ್ಲಿ ಅಜರಾಮರವಾಗಿವೆ.
" ಓ ಮಹಾನ್ ಚೇತನವೇ ನಿನಗಿದೋ ನಮ್ಮ ನಮನಗಳು,
ಹೃದಯ ನಿನ್ನ ಬಲಿದಾನಕ್ಕಾಗಿ ಕಂಬನಿ ಮಿಡಿಯುತ್ತಿದೆ,
ಮನದಲ್ಲಿ ವ್ಯಥೆಯಿದೆ ಮತ್ತೊಮ್ಮೆ ನೀ ಭಾರತದಲ್ಲಿ ಹುಟ್ಟಲಿಲ್ಲವೆಂದು,
ಬಾ ಧೃವತಾರೆಯೇ ಬಾ ನಮ್ಮ ಚೇತನವಾಗು ಬಾ"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ